/newsfirstlive-kannada/media/post_attachments/wp-content/uploads/2025/05/CM_SIDDARAMAIAH_SCHOOL.jpg)
ಬೆಂಗಳೂರು: ಶಾಲಾ ಮಕ್ಕಳಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಇದ್ದರೆ ಅಂತಹ ಮಗುವಿಗೆ ರಜೆ ಕೊಡಿ ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಕೋವಿಡ್ ಸಂಬಂಧ ಸದ್ಯದ ಪರಿಸ್ಥಿತಿ ಕುರಿತು ತಜ್ಞರಿಂದ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.
ಮಕ್ಕಳಿಗೆ ಜ್ವರ, ನೆಗಡಿ ಇದ್ದರೆ ಆ ಮಗುವಿಗೆ ರಜೆ ನೀಡಲು ಶಾಲೆಗಳಿಗೆ ಸೂಚನೆ ನೀಡಿ. ಪ್ರತಿ ವಾರ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಿ. ಕೋವಿಡ್ಗಾಗಿ ಒಂದು ಸಹಾಯವಾಣಿ ತೆರೆಯಿರಿ. ಕಳೆದ ಬಾರಿ ಕೋವಿಡ್ ಸಮಸ್ಯೆ ಆದ ರೀತಿ ಆಗಬಾರದು. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಲಸಿಕೆ ಲಭ್ಯತೆ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸಿಎಂ ಹೇಳಿದರು. ಇದಕ್ಕೆ ಉತ್ತರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಸದ್ಯಕ್ಕೆ ಲಸಿಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಇಲ್ಲ. ಲಸಿಕೆ ತಯಾರಿಕಾ ಕಂಪನಿಗಳ ಜತೆ ಲಸಿಕೆ ಲಭ್ಯತೆ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಿಎಂಗೆ ತಿಳಿಸಿದರು. ಇದಕ್ಕೆ ಲಸಿಕೆ ನೀಡುವ ಅಗತ್ಯವಿಲ್ಲದಿದ್ದರೂ ತಯಾರಿ ಮಾಡಿಕೊಳ್ಳುವಂತೆ ಸಿಎಂ ಸೂಚನೆ ನೀಡಿದರು.
ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷನ ಮೂತಿಗೆ ತಿವಿದ ಪತ್ನಿ.. ಲೈವ್‌ನಲ್ಲಿ ಭಾರೀ ಮುಜುಗರ; ವಿಡಿಯೋ ಫುಲ್ ವೈರಲ್!
ರಾಜ್ಯದಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಅಧಿಕಾರಿಗಳು ಕೈಗೊಳ್ಳಬೇಕು. ಮಕ್ಕಳಿಗೆ ಜ್ವರ ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದರೆ ಶಾಲೆಗೆ ಕಳಿಸದಂತೆ ಪೋಷಕರು ಕ್ರಮ ವಹಿಸಲು, ಜೊತೆಗೆ ಶಾಲಾ ಕಾಲೇಜು ಮಂಡಳಿಗಳು ಕೂಡ ನಿಗಾ ವಹಿಸಬೇಕೆಂದು ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಂತಹುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಬೇಕು. ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ವೆಂಟಿಲೇಟರ್ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಕಡ್ಡಾಯವಾಗಿರುವಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಶಾಲಾ ಮಕ್ಕಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಕೆಮ್ಮು, ಜ್ಚರ, ನೆಗಡಿ ಇರುವ ಮಕ್ಕಳನ್ನ ಶಾಲೆಗಳಿಗೆ ಪೋಷಕರು ಕಳುಹಿಸಬಾರದು. ಈ ವೇಳೆ ಮನೆಯಲ್ಲೇ ಮಕ್ಕಳನ್ನ ಉಳಿಸಿಕೊಳ್ಳಬೇಕು. ಜೊತೆಗೆ ವಿದ್ಯಾಸಂಸ್ಥೆಗಳು ಕೂಡ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ