/newsfirstlive-kannada/media/post_attachments/wp-content/uploads/2025/01/Cm-Siddaramaiah-on-Kannada.jpg)
ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕಹಳೆ ಮೊಳಗಿಸುವ ಮೂಲಕ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ.
ತಾಯಿ ಭುವನೇಶ್ವರಿಯ ವೈಭವದ ಪುತ್ಥಳಿಯನ್ನು ಅನಾವರಣಗೊಳಿಸಿದ ಕೂಡಲೇ ಸಿಎಂ ಸಿದ್ದರಾಮಯ್ಯ ಕನ್ನಡಪರ ಹೋರಾಟಗಾರರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಕನ್ನಡಪರ ಹೋರಾಟಗಾರರ ಮೇಲಿರುವ ಎಲ್ಲಾ ಕೇಸ್‌ಗಳನ್ನ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: VIDEO: ನಮ್ಮ ಕನ್ನಡಿಗರೇ ಕೊಡಿಸಿದಂತ ಪ್ರಶಸ್ತಿ.. ಪದ್ಮಭೂಷಣ ಅನಂತ್ ನಾಗ್ ಹೇಳಿದ್ದೇನು?
ಗೃಹ ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಮುಂದೆ ಇದು ಚರ್ಚೆಯಾಗಬೇಕಾಗುತ್ತೆ. ಕನ್ನಡಪರ ಸಂಘಟನೆಗಳು ಯಾರ್ ಯಾರು ಅತಾ ಅರ್ಜಿ ನೀಡಿದರೆ ಕೇಸ್ ವಾಪಸ್ ಪಡೆಯುತ್ತೇವೆ. ನಮ್ಮ ಸರ್ಕಾರ ಕನ್ನಡಕ್ಕೆ ಅಗ್ರ ಸ್ಥಾನ ನೀಡಲಿದೆ ಎಂದು ಸಿಎಂ ಘೋಷಿಸಿದ್ದಾರೆ.
ಇದೇ ವೇಳೆ ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಮಾತ್ರ ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಿದರು. 2023 ಕ್ಕೆ ಈ ನಾಮಕರಣ ಆಗಿ 50 ವರ್ಷ ತುಂಬಿದರೂ ಆಗಿನ ಬಿಜೆಪಿ ಸರ್ಕಾರ ಈ ಸುವರ್ಣೋತ್ಸವವನ್ನು ಬೇಕಂತಲೇ ಕೈಬಿಟ್ಟರು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಲೇಟಾದರೂ ಕರ್ನಾಟಕದ ಸುವರ್ಣೋತ್ಸವವನ್ನು ಆರಂಭಿಸಿ ಇಡೀ ವರ್ಷ ಆಚರಿಸಲು ನಿರ್ಧರಿಸಿದೆವು. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ ಎಂದು ಸ್ಪಷ್ಟಪಡಿಸಿದರು.
ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕರ್ನಾಟಕ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮಭಾಷೆಯಾಗುತ್ತದೆ. ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ನಾವು ನಮ್ಮ ಸಹೋದರ ಮತ್ತು ಇತರೆ ಭಾಷಿಕರ ಜೊತೆ ಕನ್ನಡದಲ್ಲಿ ಮಾತನಾಡುವ, ವ್ಯವಹರಿಸುವ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಇತರೆ ಭಾಷೆಯಲ್ಲಿ ತಪ್ಪು ತಪ್ಪಾಗಿ ಮಾತನಾಡುವುದಕ್ಕಿಂತ ನಮ್ಮದೇ ಭಾಷೆಯಲ್ಲಿ ಮಾತಾಡಬೇಕು. ಅಕ್ಕ ಪಕ್ಕದ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ಜನರಾಡುವ ಭಾಷೆಯೇ ಸಾರ್ವಭೌಮ. ನಮ್ಮಲ್ಲೂ ಇದನ್ನೇ ಆಚರಿಸಬೇಕು. ಒಂದು ಭಾಷೆ ಮಾತನಾಡುವ ಜನ ಒಂದು ಆಡಳಿತದ ಸೂರಿನಡಿ ಬರಬೇಕು ಎನ್ನುವುದು ಕನ್ನಡ ಏಕೀಕರಣ ಚಳವಳಿಯ ಆಶಯವಾಗಿತ್ತು. ಈ ಆಶಯ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕನ್ನಡ ಓದುವುದನ್ನು, ಬರೆಯುವುದನ್ನು ಹೆಚ್ಚೆಚ್ಚು ಕಲಿಯಬೇಕು, ಕಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಭುವನೇಶ್ವರಿ ಪ್ರತಿಮೆಯ ವೈಶಿಷ್ಟ್ಯ
- ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ನಿರ್ಮಿಸಿರುವ ಪ್ರತಿಮೆ
- ನೆಲಮಟ್ಟದಿಂದ 43.6 ಅಡಿ ಎತ್ತರ
- ಪ್ರತಿಮೆಯ ಲೋಹದ ಒಟ್ಟು ತೂಕ 31.50 ಟನ್
- ಭುವನೇಶ್ವರಿ ಪ್ರತಿಮೆ 20 ಟನ್
- ಕರ್ನಾಟಕ ನಕ್ಷೆ 11.50 ಟನ್
- ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ (ಉದ್ಯಾನವನ ಸೇರಿದಂತೆ) 4500 ಚ.ಮೀ
- ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಿಣ ಪಥದ ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿಯಿಂದ ನಿರ್ಮಾಣ
- ಕಾಮಗಾರಿಯ ಅಂದಾಜು ವೆಚ್ಚ 21.24 ಕೋಟಿ ರೂಪಾಯಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ