/newsfirstlive-kannada/media/post_attachments/wp-content/uploads/2025/06/KL_RAHUL_KOHLI.jpg)
ಟೀಮ್ ಇಂಡಿಯಾ ಫೋಕಸ್​, ಈಗ ಇಂಗ್ಲೆಂಡ್ ಟೆಸ್ಟ್​ ಸಿರೀಸ್​ ಮೇಲೆ ನೆಟ್ಟಿದೆ. ಈಗಾಗಲೇ ಅಭ್ಯಾಸವನ್ನು ಆರಂಭಿಸಿರುವ ಟೀಮ್ ಇಂಡಿಯಾ, ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದೆ. ಆದ್ರೆ, ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ವಹಿಸಿಕೊಳ್ಳುವುದು ಯಾರು ಅನ್ನೋ ಪ್ರಶ್ನೆ ಕಾಡ್ತಿದೆ.
ಟೀಮ್ ಇಂಡಿಯಾವನ್ನ ಕಾಪಾಡೋದು ಯಾರು..?
ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರ ಫೋಕಸ್​​​​​, ಈಗ ಟೆಸ್ಟ್​ ಬ್ಯಾಟಲ್​ನತ್ತ ನೆಟ್ಟಿದೆ. ಇದಕ್ಕಾಗಿ ಸಮರಾಭ್ಯಾಸ ನಡೆಸ್ತಿರುವ ಯಂಗ್ ಇಂಡಿಯಾ, ಶುಭಾರಂಭದ ಕನಸು ಕಾಣ್ತಿದೆ. ಬಲಿಷ್ಠ ಟೀಮ್ ಇಂಡಿಯಾನೇ ಸ್ವದೇಶದಲ್ಲಿ ನ್ಯೂಜಿಲೆಂಡ್​ ಎದುರು ಮುಖಭಂಗ ಅನುಭವಿಸಿ, ಬಳಿಕ ಆಸ್ಟ್ರೇಲಿಯಾದಲ್ಲಿ ಮಕಾಡೆ ಮಲಗಿತ್ತು. ಇದೀಗ ಯಂಗ್ ಇಂಡಿಯಾ, ಟೆಸ್ಟ್​ ಸರಣಿಯಲ್ಲಿ ಎಷ್ಟರ ಮಟ್ಟಿಗೆ ಗೆದ್ದು ಬೀಗುತ್ತೆ ಎಂಬ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ತಂಡದ ಮಾನ ಉಳಿಸೋದು ಯಾರಪ್ಪ ಎಂಬ ಚರ್ಚೆಯೂ ನಡೀತಿದೆ.
ರೋಹಿತ್, ವಿರಾಟ್ ಅನುಪಸ್ಥಿತಿ ತುಂಬೋದ್ಯಾರು..?
ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಜೋಡೆತ್ತುಗಳು. ಈ ಜೋಡೆತ್ತುಗಳು ಈಗ ಟೆಸ್ಟ್​ ಕ್ರಿಕೆಟ್​ನಿಂದ ದೂರ ಸರಿದಿದ್ದಾರೆ. ಇವರಿಬ್ಬರ ಅಲಭ್ಯತೆಯಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್​ ಪ್ರವಾಸಕ್ಕೆ ಆಗಮಿಸಿದೆ. ಇದೀಗ ಇವರಿಬ್ಬರ ಸ್ಥಾನವನ್ನ ತುಂಬುವುದ್ಯಾರು ಎಂಬ ಚಿಂತೆ ಮ್ಯಾನೇಜ್​ಮೆಂಟ್​ಗೆ ಕಾಡ್ತಾನೇ ಇದೆ. ಅನುಭವಿಗಳ ಸ್ಥಾನದಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡೋದ್ಯಾರು ಎಂಬ ಪ್ರಶ್ನೆ ಕಾಡ್ತಿದ್ದು, ಅದಕ್ಕೆ ಕನ್ನಡಿಗ ಕೆ.ಎಲ್​ ರಾಹುಲ್​ ಉತ್ತರವಾಗಿ ಸಿಕ್ಕಿದ್ದಾರೆ.
ಕರುನಾಡ ಕಲಿ ಕೆ.ಎಲ್ ರಾಹುಲ್ ಇವರಿಬ್ಬರ ಅನುಸ್ಥಿತಿ ಕಾಡದಂತೆ ಮಾಡಬಲ್ಲ ಒನ್​ ಆ್ಯಂಡ್ ಒನ್ಲಿ ಆಟಗಾರ. ಕಿರಿಯ ಆಟಗಾರರಿಗೆ ನೆರವಾಗಬಲ್ಲ ಹಿರಿಯಣ್ಣ. ಕ್ಲಾಸಿ ಇನ್ನಿಂಗ್ಸ್​ಗಳನ್ನು ಕಟ್ಟಬಲ್ಲ ಕ್ಲಾಸಿಕ್​​ ಬ್ಯಾಟರ್. ಇದು ಸುಖಾಸುಮ್ಮನೆ ಹೇಳ್ತಿರುವ ಮಾತಲ್ಲ. ಈ ಹಿಂದೆ ರಾಹುಲ್​ ಮಾಡಿರುವ ಸಾಧನೆಗಳು ಇದನ್ನ ಹೇಳ್ತಿವೆ.
2018ರಿಂದ ಇಂಗ್ಲೆಂಡ್​​ನಲ್ಲಿ ಅತಿ ಹೆಚ್ಚು ರನ್ಸ್​
2018ರಿಂದ ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾ ಪರ 19 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ, 44.31ರ ಬ್ಯಾಟಿಂಗ್ ಅವರೇಜ್​ನಲ್ಲಿ 842 ರನ್ ಗಳಿಸಿದ್ದು, 2 ಶತಕ, 5 ಅರ್ಧಶತಕ ದಾಖಲಿಸಿದ್ದಾರೆ. ಕೆ.ಎಲ್.ರಾಹುಲ್, 18 ಇನ್ನಿಂಗ್ಸ್​ಗಳಿಂದ 34.11ರ ಬ್ಯಾಟಿಂಗ್ ಅವರೇಜ್​ನಲ್ಲಿ 614 ರನ್ ಗಳಿಸಿದ್ದಾರೆ. 2 ಶತಕ, 1 ಅರ್ಧಶತಕ ಹೊಂದಿರುವ ಕೆ.ಎಲ್.ರಾಹುಲ್, ಇಂಗ್ಲೆಂಡ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಪೂಜಾರ, 18 ಇನ್ನಿಂಗ್ಸ್​ಗಳಿಂದ 36.50ರ ಬ್ಯಾಟಿಂಗ್ ಅವರೇಜ್​ನಲ್ಲಿ 584 ರನ್ ಗಳಿಸಿದ್ದು, 1 ಶತಕ, 4 ಅರ್ಧಶತಕ ದಾಖಲಿಸಿದ್ದಾರೆ. ಪಂತ್ 15 ಇನ್ನಿಂಗ್ಸ್​ಗಳಿಂದ 34ರ ಬ್ಯಾಟಿಂಗ್ ಅವರೇಜ್​ನಲ್ಲಿ 511 ರನ್ ಗಳಿಸಿ, ತಲಾ 2 ಅರ್ಧಶತಕ, ಶತಕ ಸಿಡಿಸಿದ್ದಾರೆ.
ಕೆ.ಎಲ್.ರಾಹುಲ್​ಗೆ ಮುಂದಿದೆ ಅಸಲಿ ಚಾಲೆಂಜ್..!
ರಿಯಲ್ ಟೆಸ್ಟ್​ಗಳಲ್ಲೇ ಅಲ್ಲ, ಸದ್ಯ ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನವೂ ಭಾರತ ಎ ತಂಡದ ಪರ ರಾಹುಲ್​ ಅಬ್ಬರಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಕ್ಲಾಸಿಕ್ ಶತಕದೊಂದಿಗೆ ಮಿಂಚಿದ್ದ ಕನ್ನಡಿಗ ಕೆ.ಎಲ್.ರಾಹುಲ್, 2ನೇ ಇನ್ನಿಂಗ್ಸ್​ನಲ್ಲೂ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ರಿಯಲ್ ಟೆಸ್ಟ್​ಗೆ ರೆಡಿ ಎಂಬ ಸಂದೇಶ ನೀಡಿರುವ ಕೆ.ಎಲ್.ರಾಹುಲ್, ಭರವಸೆ ಹೆಚ್ಚಿಸಿದ್ದಾರೆ.
ಕೆ.ಎಲ್.ರಾಹುಲ್ ಮೇಲಿದೆ ಬಹುದೊಡ್ಡ ಜವಾಬ್ದಾರಿ..!
ಸದ್ಯ ಕೆ.ಎಲ್.ರಾಹುಲ್ ಮುಂದೆ ಅಗ್ನಿಪರೀಕ್ಷೆ ಇದೆ. ರನ್ ಮಷಿನ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ವಿಭಾಗದ ಹೊಣೆಗಾರಿಕೆ ಹೊರಬೇಕಿದೆ. ತಂಡದಲ್ಲಿನ ಅನುಭವಿಯಾಗಿ ಟೆಸ್ಟ್ ಸಿರೀಸ್​ನಲ್ಲಿ ರನ್ ಗಳಿಸಬೇಕಿದೆ. ರನ್ ಮಾತ್ರವಲ್ಲ, ತಂಡದಲ್ಲಿನ ಸಹ ಆಟಗಾರರಿಗೂ ಇನ್​ ಫುಟ್ಸ್​ ನೀಡ್ತಾ, ಹಿರಿಯಣ್ಣನಾಗಿ ತಂಡಕ್ಕೆ ನೆರವಾಗಬೇಕಿದೆ. ರೋಹಿತ್, ಕೊಹ್ಲಿ ಇಲ್ಲವೆಂಬ ಚಿಂತೆ ಕಾಡದಂತೆ ನೋಡಿಕೊಳ್ಳುವ ಚಾಲೆಂಜ್, ಕೆ.ಎಲ್.ರಾಹುಲ್​ ಮುಂದಿದ್ದು, ಅದು ಯಾವ ರೀತಿ ನಿಭಾಯಿಸ್ತಾರೆ ಅನ್ನೋದನ್ನ ಕಾದು ನೋಡೋಣ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ