/newsfirstlive-kannada/media/post_attachments/wp-content/uploads/2025/01/Maha-Kumba-Mela-7.jpg)
ಮಹಾ ಕುಂಭಮೇಳ. ಸದ್ಯ ಭಾರತದಲ್ಲಿ ನಡೆಯುತ್ತಿರುವ, ಭಾರತೀಯರೆಲ್ಲರೂ ಪಾಲ್ಗೊಳ್ಳುತ್ತಿರುವ, ನಾವೂ ಇದರ ಭಾಗಿ ಆಗಬೇಕು ಅಂತ ಹಪಹಪಿಸುತ್ತಿರುವ ಮಹಾ ಜಾತ್ರೆ. ಪುಣ್ಯ ಕುಂಭ ಸ್ನಾನವನ್ನ ಮಾಡಿ ಪಾವನರಾಗಬೇಕು ಅಂತ ಜನ ತುದಿಗಾಲಲ್ಲಿ ನಿಂತಿದ್ದಾರೆ. ಜನವರಿ 13, ಅಂದ್ರೆ ನಿನ್ನೆಯಿಂದಲೇ ಕುಂಭಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಪ್ರಯಾಗ್ ರಾಜ್ನ ಪವಿತ್ರ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ ಒಂದೂವರೆ ಕೋಟಿ ಜನ ಮಿಂದೆದ್ದಿದ್ದಾರೆ.
ಈ ಕುಂಭ ಮೇಳ ಅಂದ್ರೇನು ಅನ್ನೋದಕ್ಕೆ ಸಾಕಷ್ಟು ಕಥೆಗಳು, ನಂಬಿಕೆಗಳಿವೆ. ಅದರಲ್ಲೊಂದು ಸಮುದ್ರ ಮಥನದ ವೇಳೆ ಅಮೃತ ಕಳಶದಿಂದ 4 ಹನಿಗಳು 4 ಪವಿತ್ರ ಕ್ಷೇತ್ರಗಳಲ್ಲಿ ಚೆಲ್ಲಿದ್ದವು. ಅವು, ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ, ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮ, ಮಧ್ಯಪ್ರದೇಶದ ಉಜ್ಜೈನ್ನ ಕ್ಷಿಪ್ರ ನದಿ, ಮಹಾರಾಷ್ಟ್ರದ ನಾಸಿಕ್ನಲ್ಲಿ ಹರಿಯುವ ಗೋದಾವರಿ ನದಿ ಅನ್ನೋದು ಪ್ರತೀತಿ. ಈ ಪ್ರದೇಶಗಳಲ್ಲಿ ನಡೆಯುವ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರೆ ಪುಣ್ಯ ಲಭಿಸುತ್ತೆ ಅನ್ನೋ ನಂಬಿಕೆ ಜನರದ್ದು.
ಇದನ್ನೂ ಓದಿ: ಕನ್ನಡಿಗನ ಸಾರಥ್ಯದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳ; ವಿಜಯ ಕಿರಣ್ ಆನಂದ್ ಯಾರು?
ಭಾರತದಲ್ಲಿ 4 ರೀತಿಯ ಕುಂಭ ಮೇಳಗಳು ನಡೀತವೆ. 4 ವರ್ಷಗಳಿಗೊಮ್ಮೆ ತಲಾ ಒಂದೊಂದು ಕ್ಷೇತ್ರದಲ್ಲಿ ಕುಂಭ ಮೇಳ ನಡೆಯುತ್ತೆ. ಅಲ್ಲದೆ, ಪ್ರಯಾಗ್ ರಾಜ್ ಮತ್ತು ಹರಿದ್ವಾರದಲ್ಲಿ 6 ವರ್ಷಕ್ಕೊಮ್ಮೆ ನಡೆಯೋದು ಅರ್ಧ ಕುಂಭ ಮೇಳ, 12 ವರ್ಷಕ್ಕೊಮ್ಮೆ ಪ್ರಯಾಗ್ ರಾಜ್ನಲ್ಲೇ ಪೂರ್ಣ ಕುಂಭ ಮೇಳ ನಡೆಯುತ್ತದೆ. ಈ ರೀತಿ 12 ವರ್ಷಗಳಿಗೊಂದರಂತೆ 12 ಬಾರಿ ನಡೆದ ಬಳಿಕ 144 ವರ್ಷಕ್ಕೆ ಬರೋದು ಪ್ರಯಾಗ್ ರಾಜ್ನಲ್ಲೇ ನಡೆಯುವ ಮಹಾ ಕುಂಭ ಮೇಳ. ಸದ್ಯ ಪ್ರಯಾಗ್ ರಾಜ್ನಲ್ಲಿ ನಡೀತಿರುವ ಈ ಮಹಾ ಕುಂಭ ಮೇಳ ಮತ್ತೆ ಬರೋದು ಹೆಚ್ಚೂ ಕಮ್ಮಿ ಇನ್ನೊಂದೂವರೆ ಶತಮಾನದ ಬಳಿಕವೇ.
ಈ ಮಹಾ ಕುಂಭ ಮೇಳದಲ್ಲಿ ಈ ಬಾರಿ 45 ಕೋಟಿಗೂ ಹೆಚ್ಚು ಜನ ಭಾಗವಹಿಸುವ ಅಂದಾಜು ಇದೆ. ಮೊದಲ ದಿನವೇ ಒಂದೂವರೆ ಕೋಟಿ ಜನ ಪವಿತ್ರ ಸ್ನಾನ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಇದನ್ನ ನೋಡಿದ್ರೆ 45 ಕೋಟಿಯಲ್ಲ ಈ ಸಂಖ್ಯೆ 50 ಕೋಟಿ ದಾಟಿದ್ರೂ ಅಚ್ಚರಿ ಪಡೋ ಅವಶ್ಯಕತೆ ಇರಲ್ವೇನೋ? ಹಾಗಿದ್ರೆ ಈ ಮಹಾ ಕುಂಭ ಮೇಳದಿಂದ ಎಷ್ಟು ಹಣಕಾಸಿನ ವ್ಯವಹಾರ, ವಹಿವಾಟು ನಡೀಬಹುದು? ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತೆ. ಯಾವ್ಯಾವ ಉದ್ಯಮಗಳಿಗೆ ಲಾಭ ಅನ್ನೋದನ್ನೂ ನೋಡ್ತಾ ಹೋಗೋಣ.
ಇದನ್ನೂ ಓದಿ: ಮಹಾಕುಂಭದಲ್ಲಿ ಪಾರಿವಾಳ ಬಾಬಾ.. ಇವರ ತಲೆ ಬಿಟ್ಟು ಎಲ್ಲಿಯೂ ಹೋಗಲ್ಲ ಈ ಹಕ್ಕಿ..!
ಜನವರಿ 13ರಿಂದ ಫೆಬ್ರವರಿ 26ರವರೆಗೆ 45 ದಿನಗಳ ಕಾಲ ನಡೆಯೋ ಮಹಾ ಕುಂಭ ಮೇಳದಲ್ಲಿ ಒಂದು ಅಂದಾಜಿನ ಪ್ರಕಾರ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆಯುತ್ತೆ ಅಂತ ಹೇಳಲಾಗ್ತಿದೆ. ಕುಂಭ ಮೇಳದ ಆಯೋಜನೆ, ಮೇಳಕ್ಕೆ ಬಂದು ಹೋಗುವ ಜನರಿಗಾಗಿ ಮೂಲ ಸೌಕರ್ಯ ಒದಗಿಸಲು ಉತ್ತರಪ್ರದೇಶ ಸರ್ಕಾರವೇ ಬರೋಬ್ಬರಿ 7 ಸಾವಿರ ಕೋಟಿ ಮೌಲ್ಯದ ಯೋಜನೆಗಳನ್ನ ರೂಪಿಸಿದೆ. ಕುಂಭ ಮೇಳಕ್ಕಾಗಿಯೇ ತಾತ್ಕಾಲಿಕ ಊರನ್ನೇ ಸೃಷ್ಟಿಸಲಾಗಿದ್ದು, ಇದಕ್ಕೆ 76ನೇ ಡಿಸ್ಟ್ರಿಕ್ಟ್ ಅಂತ ನಾಮಕರಣ ಮಾಡಿದ್ದಾರೆ. ಈ 76ನೇ ಡಿಸ್ಟ್ರಿಕ್ಟ್ನಲ್ಲಿ ಕುಂಭ ಮೇಳಕ್ಕೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳೋದಕ್ಕೆ ತಾತ್ಕಾಲಿಕ ಟೆಂಟ್ ವ್ಯವಸ್ಥೆ, ಜನರ ಸುಲಭ ಸಂಚಾರಕ್ಕೆ ಅಗತ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ, ಊಟದ ವ್ಯವಸ್ಥೆ ಹೀಗೆ ಎಲ್ಲಾ ಮೂಲ ಸೌಕರ್ಯಗಳನ್ನ ಒದಗಿಸಲಾಗ್ತಿದೆ.
ಒಟ್ಟು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೆಂಟ್ ಸಿಟಿಯನ್ನ ನಿರ್ಮಿಸಲಾಗಿದ್ದು, 2,200 ಐಷಾರಾಮಿ ಟೆಂಟ್ಗಳೂ ಸೇರಿದಂತೆ 1 ಲಕ್ಷ 60 ಸಾವಿರ ಟೆಂಟ್ಗಳ ನಿರ್ಮಾಣವಾಗಿದೆ. ಭದ್ರತೆಗಾಗಿ 56 ಪೊಲೀಸ್ ಸ್ಟೇಷನ್, 133 ಪೊಲೀಸ್ ಪೋಸ್ಟ್, 329 ಎಐ ತಂತ್ರಜ್ಞಾನ ಇರುವ ಕ್ಯಾಮೆರಾಗಳೂ ಸೇರಿ 10 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. 67 ಸಾವಿರ ಬೀದಿ ದೀಪಗಳು, 1,249 ಕಿಲೋಮೀಟರ್ ಉದ್ದದ ವಾಟರ್ ಪೈಪ್ಲೈನ್, 12 ಕಿಲೋಮೀಟರ್ ಉದ್ದದ ವ್ಯಾಪ್ತಿಯಲ್ಲಿ ಪುಣ್ಯ ಸ್ನಾನಕ್ಕಾಗಿಯೇ 16 ಘಾಟ್ಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಯಾತ್ರಿಕರ ಓಡಾಟಕ್ಕೆಂದೇ 7 ಸಾವಿರ ಬಸ್ಗಳ ವ್ಯವಸ್ಥೆಯೂ ಇದೆ.
ಯಾತ್ರಿಕರಿಗೆ ಅಗತ್ಯ ವಸ್ತುಗಳ ಮಾರಾಟ ಮಾಡೋರು, ಬಾಡಿಗೆಗೆ ಕೊಡಲು ಟೆಂಟ್ಗಳನ್ನ ಹಾಕಿರುವ ಮಾಲೀಕರು, ಹೋಟೆಲ್, ರೆಸ್ಟೋರೆಂಟ್ ಓನರ್ಗಳು, ಡೈರಿ ಉತ್ಪನ್ನಗಳನ್ನ ಮಾರೋರು, ಕರ ಕುಶಲ ಕರ್ಮಿಗಳು, ಸಣ್ಣ ಪುಟ್ಟ ವ್ಯಾಪಾರಿಗಳು, ಸ್ಥಳೀಯ ವ್ಯಾಪಾರಿಗಳೂ ಸೇರಿದಂತೆ ವ್ಯಾಪಾರ ವ್ಯವಹಾರಕ್ಕಾಗಿಯೇ ಲಕ್ಷಾಂತರ ಜನರು ಪ್ರಯಾಗ್ ರಾಜ್ನಲ್ಲಿ ಬೀಡು ಬಿಟ್ಟಿದ್ದಾರೆ.
ಪ್ರಯಾಗ್ ರಾಜ್ಗೆ ಬರುವ ಯಾತ್ರಿಕರ ರೈಲು, ಬಸ್, ಫ್ಲೈಟ್ ಟಿಕೆಟ್ ವೆಚ್ಚದಿಂದಲೇ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಇದಲ್ಲದೆ, ಹೈ ಎಂಡ್ ಹೋಟೆಲ್ಗಳು, ಹೋಮ್ ಸ್ಟೇಗಳನ್ನ ನದಿ ತಟದಲ್ಲೇ ನಿರ್ಮಿಸಲಾಗಿದ್ದು, ಅಲ್ಲಿ ಒಂದು ದಿನದ ಬಾಡಿಗೆಯೇ ಸುಮಾರು 80 ಸಾವಿರ ರೂಪಾಯಿ. ಇದರಿಂದಲೂ ಸರ್ಕಾರ ಕೋಟಿಗಳಲ್ಲಿ ಆದಾಯ ಪಡೆಯುವ ನಿರೀಕ್ಷೆ ಇದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿರುವ ಪ್ರಕಾರ ಸುಮಾರು 2 ಲಕ್ಷ ಕೋಟಿ ರೂಪಾಯಿಯ ವ್ಯವಹಾರ, ವ್ಯಾಪಾರ ವಹಿವಾಟು ಈ 45 ದಿನಗಳಲ್ಲೇ ನಡೆಯುವ ಅಂದಾಜಿದ್ದು, ಸರ್ಕಾರದ ಬೊಕ್ಕಸಕ್ಕೆ ಕನಿಷ್ಠವೆಂದರೂ 25 ಸಾವಿರ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ.
ಸರ್ಕಾರ ಖಾಸಗಿಯವರಿಗೆ ಕುಂಭ ಮೇಳದಲ್ಲಿ ಸ್ಟಾಲ್ಗಳನ್ನ ಹಾಕೋದಕ್ಕೆ ಅವಕಾಶ ಕೊಟ್ಟಿದ್ದು, ಬಿಡ್ಡಿಂಗ್ನಲ್ಲಿ ಒಬ್ಬೊಬ್ಬರೂ 1 ರಿಂದ 2 ಕೋಟಿ ರೂಪಾಯಿ ಬಿಡ್ ಮಾಡಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇದೆಲ್ಲವೂ ಸದ್ಯಕ್ಕಿರುವ ಅಂದಾಜು. ಆದ್ರೆ ಈ ಬಾರಿಯ ಕುಂಭ ಮೇಳ 144 ವರ್ಷಕ್ಕೊಮ್ಮೆ ಅಂದ್ರೆ ಹೆಚ್ಚೂ ಕಡಿಮೆ ಒಂದೂವರೆ ಶತಮಾನಕ್ಕೆ ಒಮ್ಮೆ ಮಾತ್ರ ಬರುವ ಮಹಾ ಕುಂಭ ಮೇಳ. ಅಂದ್ರೆ ಮತ್ತೆ ಈ ಕುಂಭ ಮೇಳ ಕಣ್ತುಂಬಿಕೊಳ್ಳೋಕೆ, ಇದರ ಭಾಗವಾಗೋಕೆ ಈಗಿನ ತಲೆಮಾರಿನವರಿಗೆ ಸಾಧ್ಯವೇ ಇಲ್ಲವೇನೋ. ಅದ್ರಲ್ಲೂ ಭಾರತೀಯರು ಧಾರ್ಮಿಕ ನಂಬಿಕೆ ಇರುವಂಥವರು. ಹೀಗಾಗಿ ಸರ್ಕಾರ ಅಂದಾಜಿಸಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋಟಿ ಕೋಟಿ ಭಕ್ತರು ಮಹಾ ಕುಂಭ ಮೇಳಕ್ಕೆ ಬರುವ ನಿರೀಕ್ಷೆ ಇದೆ. ಅದೇ ರೀತಿ ಅಲ್ಲಿ ನಡೆಯುವ ವ್ಯಾಪಾರ, ವಹಿವಾಟು, ಅದರಿಂದ ಸರ್ಕಾರಕ್ಕೆ ಬರೋ ಆದಾಯವೂ ಅಂದಾಜಿಗಿಂತಲೂ ಹೆಚ್ಚೇ ಆಗಬಹುದು.
ವಿಶೇಷ ವರದಿ: ನವೀನ್ ಕುಮಾರ್. ಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ