/newsfirstlive-kannada/media/post_attachments/wp-content/uploads/2025/07/SURJEWALA.jpg)
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬೆಂಗಳೂರಿಗೆ ಬಂದಿದ್ದಾರೆ. ಶಾಸಕರ ಆಕ್ರೋಶ ಜ್ವಾಲೆ ಭುಗಿಲೇಳ್ತಿದ್ದಂತೆ ಎಚ್ಚೆತ್ತ ಹೈಕಮಾಂಡ್, ಸುರ್ಜೇವಾಲರನ್ನ ತುರ್ತತಾಗಿ ರವಾನಿಸಿದೆ. ನಿನ್ನೆ ಸರಣಿ ಮೀಟಿಂಗ್ ನಡೆಸಿದ ಕಾಂಗ್ರೆಸ್ ಇನ್ಚಾರ್ಜ್, ಶಾಸಕರ ಸಮಸ್ಯೆಗಳಿಗೆ ಕಿವಿ ಆಗಿದ್ದಾರೆ. ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮುಂದೆ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ದಾರೆ. ಇವತ್ತೂ ಕೂಡಾ ಕೆಲ ಸಚಿವರನ್ನ ಕರೆಸಿಕೊಂಡು ಸುರ್ಜೇವಾಲಾ ಸಮಸ್ಯೆಗಳನ್ನ ಆಲಿಸಲಿದ್ದಾರೆ.
ಸುರ್ಜೇವಾಲಾ ಒನ್ ಟು ಒನ್ ಸಭೆ
ಬೆಂಗಳೂರಿಗೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಟ್ರಬಲ್ ಶೂಟರ್ ಹುದ್ದೆ ಹೊತ್ತು ಬಂದಿದ್ದಾರೆ. ಬೆಂಗಳೂರು ಹಾಗೂ ಮೈಸೂರು ಭಾಗದ ಶಾಸಕರ ಜೊತೆ ಸುರ್ಜೇವಾಲ ಸಮಾಲೋಚನೆ ನಡೆಸಿದ್ದಾರೆ. ಪಕ್ಷದ ಶಾಸಕರ ಜೊತೆಗೆ ಒನ್ ಟು ಒನ್ ಮಾತುಕತೆ ನಡೆಸಿ, ಅಸಮಾಧಾನಗೊಂಡಿರುವ ಶಾಸಕರನ್ನ ಸಿಟ್ಟು ಶಮನ ಮಾಡ್ತಿದ್ದಾರೆ. ಶಾಸಕರ ಅಭಿಪ್ರಾಯವನ್ನ ಆಲಿಸಿ ಲಿಖಿತವಾಗಿ ದಾಖಲಿಸಿದ್ದಾರೆ. 40 ಜನ ಶಾಸಕರಲ್ಲಿ ನಿನ್ನೆ ಏಳು ಶಾಸಕರ ಜೊತೆ ಒನ್ ಟು ಒನ್ ಸಭೆ ನಡೆಸಿದ್ದಾರೆ. ಇವತ್ತು ಉಳಿದ ಶಾಸಕರ ಜೊತೆ ಸಭೆ ಮಾಡಲಿರೋ ಸುರ್ಜೇವಾಲಾ, ಅಭಿಪ್ರಾಯ ಆಲಿಸಲಿದ್ದಾರೆ.
ಶಾಸಕರಿಗೆ ಪ್ರಶ್ನೆ!
1. ಎರಡೂವರೆ ವರ್ಷದಲ್ಲಿ ನಿಮ್ಮ ಸಾಧನೆ ಏನು ?
2. ಕ್ಷೇತ್ರದಲ್ಲಿ ಏನೆಲ್ಲಾ ಕೆಲಸಗಳನ್ನ ಮಾಡಿದ್ದೀರಿ?
3. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿದೆಯಾ?
4. ಜಿಲ್ಲಾ ಉಸ್ತುವಾರಿಗಳು ಸರಿಯಾಗಿ ನಡೆಸಿಕೊಳ್ತಿದ್ದಾರಾ?
5. ನಿಮ್ಮ ಕ್ಷೇತ್ರದಲ್ಲಿ ಪ್ರಮುಖವಾಗಿ ಏನು ಸಮಸ್ಯೆಗಳಿವೆ?
6. ಇಲಾಖಾವಾರು ಅನುದಾನ ತಾರತಮ್ಯ ಇದೆಯಾ?
7. ಗ್ಯಾರಂಟಿಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿದೆಯಾ?
8. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಅನುಕೂಲ ಆಗುತ್ತಿದೆಯಾ?
9. ಸಚಿವರಿಂದ ಇನ್ನೂ ಏನೇನು ಕೆಲಸಗಳನ್ನ ನಿರೀಕ್ಷಿಸುತ್ತೀರಿ?
10 ಸಚಿವರು ನಡವಳಿಕೆಗಳನ್ನ ಬದಲಿಸಿಕೊಳ್ಳಬೇಕಾ?
ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗಿನ ಒನ್ ಟು ಒನ್ ಸಭೆಯಲ್ಲಿ ಶಾಸಕರು, ಸಚಿವರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಸಚಿವರ ಧೋರಣೆ ವಿರುದ್ಧ ಶಾಸಕರು ಕೆಂಡ ಕಾರಿದ್ದಾರೆ.
ಶಾಸಕರ ದೂರುಗಳೇನು?
- ಸಚಿವರು ಕೈಗೆ ಸಿಗುತ್ತಿಲ್ಲ, ಸಿಕ್ರೂ ಮುಖ ಕೊಟ್ಟು ಮಾತನ್ನಾಡುತ್ತಿಲ್ಲ
- ನಮ್ಮನ್ನ ಕ್ಯಾರೆ ಎನ್ನುತ್ತಿಲ್ಲ, ನಮ್ಮ ಪತ್ರಗಳಿಗೆ ಕಿಮ್ಮತ್ತು ಸಿಗುತ್ತಿಲ್ಲ
- ಆಯಾ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ
- ತಮಗೆ ನೀಡಿರುವ ಇಲಾಖೆಯ ಜವಾಬ್ದಾರಿಯನ್ನ ನಿಭಾಯಿಸುತ್ತಿಲ್ಲ
- ಎಲ್ಲವನ್ನೂ ಸಿಎಂ ಸಿದ್ದರಾಮಯ್ಯ ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ
- ಸಚಿವರು ತಮ್ಮ ಕೆಲಸಗಳನ್ನ ಪರಿಣಾಮಕಾರಿಯಾಗಿ ಮಾಡಬೇಕು
- ಅದು ಬಿಟ್ಟು ಸಚಿವರು ಅಡ್ಜಸ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ
ಶಾಸಕರ ದೂರನ್ನ ಆಲಿಸಿದ ರಣದೀಪ್ ಸಿಂಗ್ ಸುರ್ಜೇವಾಲಾ , ಸಚಿವರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಶಾಸಕರ ಆರೋಪಗಳ ಸಂಬಂಧ ಸಚಿವರನ್ನ ಕರೆಸಿ ಕಿವಿಮಾತು ಹೇಳಿದ್ದಾರೆ.
ಸಚಿವರಿಗೆ ಸುರ್ಜೇವಾಲಾ ಸೂಚನೆ
- ಬಿ.ಆರ್.ಪಾಟೀಲ್ ಆರೋಪ ಸಂಬಂಧ ಸಚಿವರ ಜೊತೆ ಚರ್ಚೆ
- ಸಚಿವ ಜಮೀರ್ ಅಹಮ್ಮದ್ ಜೊತೆ ಸುರ್ಜೇವಾಲಾ ಮಾತುಕತೆ
- ವಸತಿ ಇಲಾಖೆಯಲ್ಲಿನ ಆರೋಪ ಸರಿಪಡಿಸಿಕೊಳ್ಳುವಂತೆ ಸೂಚನೆ
- ಕೋಲಾರ ಉಸ್ತುವಾರಿ ಸಚಿವ ಭೈರತಿ ಸುರೇಶ್ ಜೊತೆ ಮಾತುಕತೆ
- ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್‌ಗೂ ಸೂಚನೆ
- ಶಾಸಕರ ಅಸಮಾಧಾನ ಸಚಿವರ ಗಮನಕ್ಕೆ ತಂದಿರುವ ಸುರ್ಜೇವಾಲಾ
- ಮುಂದೆ ಹೀಗಾಗದಂತೆ ನೋಡಿಕೊಳ್ಳುವಂತೆ ಉಸ್ತುವಾರಿ ಸೂಚನೆ
ಇವತ್ತು ಕೆಪಿಸಿಸಿ ಕಚೇರಿಯಲ್ಲಿ ಮ್ಯಾರಾಥಾನ್ ಮೀಟಿಂಗ್ಗಳು ನಡೆಯಲಿವೆ.. ಸಚಿವರ ಧೋರಣೆ, ಅನುದಾನ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರಳಿದ ಶಾಸಕರು ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರ್ತಿದ್ದಾರೆ.. ಇದನ್ನೆಲ್ಲಾ ಕಡಿವಾಣ ಹಾಕಲು ಸುರ್ಜೇವಾಲಗೆ ಟಾಸ್ಕ್ ನೀಡಲಾಗಿದೆ.. ಶಾಸಕರಿಂದ ಪಡೆದ ಮಾಹಿತಿಯ ವರದಿ ಡೆಲ್ಲಿಯಲ್ಲಿ ಹೈಕಮಾಂಡ್ಗೆ ಒಪ್ಪಿಸಲಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗುಡ್ನ್ಯೂಸ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ