/newsfirstlive-kannada/media/post_attachments/wp-content/uploads/2025/06/HVR-contractor.jpg)
ಹಾವೇರಿ: ಶಿಗ್ಗಾಂವಿ ಪಟ್ಟಣದ ಶಿವಾನಂದ ಕುನ್ನೂರು ಎಂಬ ಗುತ್ತಿಗೆದಾರನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಗುತ್ತಿಗೆದಾರನ ಹತ್ಯೆ ಪ್ರಕರಣವು ಭಾರೀ ಸಂಚಲನ ಮೂಡಿಸಿದೆ.
ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿಗ್ಗಾಂವಿ ಪಟ್ಟಣದ ಗಂಗಿಬಾವಿ ಸರ್ಕಲ್ ಬಳಿ ನಾಲ್ವರಿದ್ದ ಹಂತಕರ ಗುಂಪು ಏಕಾಏಕಿ ದಾಳಿ ನಡೆಸಿ ಕೃತ್ಯ ನಡೆಸಿದೆ. ಸರ್ಕಲ್ ಸಮೀಪವಿರುವ ಮಹೇಶ್ ಡಾಬಾದಲ್ಲಿ ಶಿವಾನಂದ ಕುನ್ನೂರು ಊಟ ಮಾಡುತ್ತಿದ್ದರು. ಊಟ ಮುಗಿಸಿ ಹೊರಬರುತ್ತಿದ್ದಂತೆಯೇ ಮಾರಣಾಂತಿಕ ದಾಳಿಯಾಗಿದೆ. ಶಿವಾನಂದ ಕುನ್ನೂರು ಅವರ ಕತ್ತಿನ ಭಾಗ, ತಲೆ, ಎದೆಗೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಇದನ್ನು ಕಣ್ಣಾರೆ ಕಂಡ ಜಂಪನಗೌಡ ಅನ್ನೋರು ಶಿಗ್ಗಾಂವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಂಪನಗೌಡ, ಶಿವಾನಂದ ಜೊತೆ ಊಟಕ್ಕೆ ಬಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್; ಗಿಲ್ ಪಡೆಗೆ ಸೋಲು.. ಡಕೆಟ್ ಸೆಂಚುರಿ, ಕೊನೆ ದಿನದಲ್ಲಿ ಇಂಗ್ಲೆಂಡ್ಗೆ ಲಕ್!
ಕುಟುಂಬಸ್ಥರ ಆರೋಪವೇನು..?
ಹತ್ಯೆಯಾದ ಶಿವಾನಂದ ಕುನ್ನೂರಿಗೆ ಹಲವು ಹಣಕಾಸು ವ್ಯವಹಾರಗಳು ಇದ್ದವು. ಕೆಲ ವರ್ಷಗಳ ಹಿಂದೆ ಶಿಗ್ಗಾಂವಿ ಪಟ್ಟಣದಲ್ಲಿ 1 ಗುಂಟೆ ಜಾಗ ಖರೀದಿ ಮಾಡಿದ್ದರು. ಜಾಗ ಖರೀದಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದವು. ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಶಿವಾನಂದ ಕುನ್ನೂರು ಜಯಸಾಧಿಸಿದ್ದರು. ಆದರೆ ಇದೇ ವಿಚಾರದಲ್ಲಿ ಶಿವಾನಂದ ವಿರೋಧಿಗಳು ದ್ವೇಷ ಸಾಧಿಸಿದ್ದರು. ಹಾಗಾಗಿ ಶಿವಾನಂದ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ಇದು ಗೊತ್ತಾಗ್ತಿದ್ದಂತೆ ಶಿವಾನಂದ ಕುನ್ನೂರು ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ವಿರೋಧಿಗಳೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಅತಿಯಾಗಿ ಬಂದ ಸ್ನೇಹಿತರ ನಂಬಬೇಡಿ, ರಾಜಕೀಯ ವಿಚಾರದಲ್ಲಿ ಹಿನ್ನಡೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ
ಆರೋಪಿಗಳು ಯಾರು..?
ಮಾಹಿತಿಗಳ ಪ್ರಕಾರ, ನಾಗರಾಜ ಸವದತ್ತಿ ಮತ್ತು ಆತನ ಗ್ಯಾಂಗ್ನಲ್ಲಿರುವ ಹನುಮಂತ, ಅಶ್ರಫ್, ಸುದೀಪ್, ಸುರೇಶ್ ದಾಳಿಯ ಪ್ರಮುಖ ಆರೋಪಿಗಳು. ಹತ್ಯೆಯ ಸಂದರ್ಭದಲ್ಲಿ ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆ ವಿಡಿಯೋ ಆಧಾರದ ಮೇಲೆ ಆರೋಪಿಗಳ ಹೆಸರನ್ನು ಪತ್ತೆ ಮಾಡಲಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು 3 ತಂಡಗಳನ್ನು ರಚಿಸಿ ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿ ಮನೆಗೆ ಬೆಂಕಿ..
ಮತ್ತೊಂದು ಕಡೆ ರೊಚ್ಚಿಗೆದ್ದ ಶಿವಾನಂದ ಕುಟುಂಬಸ್ಥರು ಶಿಗ್ಗಾಂವಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯಿರುವ ಕೊಲೆ ಆರೋಪಿ ನಾಗರಾಜ್ ಸವದತ್ತಿ ಮನೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಆಗಿಲ್ಲ.
ಇದನ್ನೂ ಓದಿ: ವೇದಿಕೆ ಮೇಲೆ ತಲೆ ಸುತ್ತಿ ಬಿದ್ದಿದ್ದೆ ಆದ್ರೆ.. ಮಜಾಭಾರತ ಖ್ಯಾತಿಯ ಸುಶ್ಮಿತಾ ಜಗಪ್ಪ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ