/newsfirstlive-kannada/media/post_attachments/wp-content/uploads/2025/06/Dharakote.jpg)
ಒರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ದನಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆಂದು ಆರೋಪದ ಮೇಲೆ ದಲಿತ ಸಮುದಾಯದ ಇಬ್ಬರಿಗೆ ಭಾರೀ ಅವಮಾನ ಮಾಡಲಾಗಿದೆ.
ದಲಿತ ಸಮುದಾಯದ ಇಬ್ಬರು ವ್ಯಕ್ತಿಗಳಿಗೆ ತಲೆಯ ಅರ್ಧ ಕೂದಲು ಬೋಳಿಸಿ, ಹಸಿ ಹುಲ್ಲು ತಿನ್ನುವಂತೆ ಒತ್ತಾಯ ಮಾಡಿ, ಹಸಿ ಹುಲ್ಲು ತಿನ್ನಿಸಲಾಗಿದೆ. ಜೊತೆಗೆ ಮಂಡಿಯೂರಿಕೊಂಡು ನಡೆಯುವ ಚಿತ್ರಹಿಂಸೆ ನೀಡಲಾಗಿದೆ. ಚರಂಡಿಯ ನೀರು ಕುಡಿಯುವಂತೆ ಒತ್ತಾಯಿಸಲಾಗಿದೆ. ಇಬ್ಬರಿಗೂ ಕ್ರೂರವಾಗಿ ಹಿಂಸೆ ನೀಡಲಾಗಿದ್ದು ಈ ಸಂಬಂಧ ಪೋಟೋ, ವಿಡಿಯೋ ವೈರಲ್ ಆದ ಕಾರಣ ಪೊಲೀಸರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.
ಹಸು ಖರೀದಿಸಿ ತರುತ್ತಿದ್ದರು
ಒರಿಸ್ಸಾದ ಗಂಜಾಂ ಜಿಲ್ಲೆಯ ಧಾರಕೋಟೆ ಬ್ಲಾಕ್‌ನ ಖರಿಗುಮ್ಮ ಗ್ರಾಮದಲ್ಲಿ ಹಾಡಹಗಲೇ ಈ ಆಘಾತಕಾರಿ ಘಟನೆ ನಡೆದಿದೆ. ಸಿಂಗಿಪುರದ ಬುಲು ನಾಯಕ್ (52) ಮತ್ತು ಬಾಬುಲ್ ನಾಯಕ್ (43) ಕುಟುಂಬವೊಂದರ ವಿವಾಹ ಸಮಾರಂಭದ ವರದಕ್ಷಿಣೆಯಾಗಿ ಹರಿಪುರದಿಂದ 1 ಹಸು ಮತ್ತು 2 ಕರುಗಳನ್ನು ಖರೀದಿಸಿ, ಕಾರ್ಗೋ ಆಟೋರಿಕ್ಷಾದಲ್ಲಿ ತಮ್ಮ ಗ್ರಾಮಕ್ಕೆ ತರುತ್ತಿದ್ದರು. ಸ್ಥಳೀಯರ ಗುಂಪೊಂದು ಖರಿಗುಮ್ಮದಲ್ಲಿ ಅವರನ್ನು ತಡೆದು, ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ದಾಳಿ ನಡೆಸಿತು. ಅವರ ಮೊಬೈಲ್ ಫೋನ್‌ಗಳು ಮತ್ತು ಹಣವನ್ನು ಕಸಿದುಕೊಂಡು, ದನಗಳನ್ನು ಬಿಡುಗಡೆ ಮಾಡಲು 30,000 ರೂ.ಗಳನ್ನು ಕೇಳಿತು. ಇಬ್ಬರೂ ನಿರಾಕರಿಸಿದಾಗ, ದುಷ್ಕರ್ಮಿಗಳು ಅವರ ಕೈಕಾಲುಗಳನ್ನು ಕಟ್ಟಿ, ಥಳಿಸಿ, ಸ್ಥಳೀಯ ಸಲೂನ್‌ನಲ್ಲಿ ತಲೆಯನ್ನು ಭಾಗಶಃ ಬೋಳಿಸಿ, 2 ಕಿ.ಮೀ. ದೂರದಲ್ಲಿರುವ ಜಹಾದಾ ಗ್ರಾಮಕ್ಕೆ ಮಂಡಿಯೂರಿಕೊಂಡು ತೆವಳುವಂತೆ ಒತ್ತಾಯಿಸಿದರು.
ಇದಾದ ಮೇಲೆ ಜಹಾದಾ ಗ್ರಾಮ ಚೌಕ್‌ನಲ್ಲಿ ಇಬ್ಬರಿಗೂ ಹಸಿ ಹುಲ್ಲು ತಿನ್ನಲು ಮತ್ತು ಕೊಳಚೆ ನೀರು ಕುಡಿಯುವಂತೆ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಗ್ರಾಮಸ್ಥರೊಬ್ಬರು ಸ್ಥಳೀಯ ನಾಯಕರಿಗೆ ತಿಳಿಸಿದ್ದಾರೆ. ಸ್ಥಳೀಯ ನಾಯಕರೊಬ್ಬರು ಸ್ಥಳಕ್ಕೆ ಬಂದಾಗ, ಇಬ್ಬರನ್ನು ಬಿಡುಗಡೆ ಮಾಡಲು 30 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ ಸಂತ್ರಸ್ತರು
ಹಲ್ಲೆಯಿಂದಾಗಿ ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದ್ದರೂ, ಇಬ್ಬರು ಸಂತ್ರಸ್ತರು ಸ್ಥಳದಿಂದ ತಪ್ಪಿಸಿಕೊಂಡು ತಮ್ಮ ಗ್ರಾಮವನ್ನು ತಲುಪಿದರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ಅವರು ಧರಕೋಟೆ ಪೊಲೀಸರಿಗೆ ದೂರು ನೀಡಿದರು. ಆದಾಗ್ಯೂ, ಭಾನುವಾರ ಪೊಲೀಸರು ವಿವಿಐಪಿ ಕರ್ತವ್ಯದಲ್ಲಿ ನಿರತರಾಗಿದ್ದರು. ತಡರಾತ್ರಿ ಈ ಹಲ್ಲೆ, ಅಪಮಾನದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ
ಅಮಾನವೀಯ ಘಟನೆಯ ಸುದ್ದಿ ಹರಡುತ್ತಿದ್ದಂತೆ, ದಲಿತ ಮಹಾಸಭಾದ ಗಂಜಾಂ ಘಟಕದ ನಾಯಕರು ಸಿಂಗಾಪುರಕ್ಕೆ ತಲುಪಿ ಸೋಮವಾರ ಪ್ರತಿಭಟನಾ ಸಭೆ ನಡೆಸಿದರು. ರಾಜ್ಯದಲ್ಲಿ ಬಿಜೆಪಿಯ ಒಂದು ವರ್ಷದ ಆಳ್ವಿಕೆಯಲ್ಲಿ ದಲಿತರ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಗಂಜಾಂನಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಹಿಂಸೆ, ದೌರ್ಜನ್ಯ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ದಲಿತರ ಮೇಲೆ ನಡೆದ ಈ ಹಲ್ಲೆ, ಅಪಮಾನ, ಅಮಾನವೀಯ ಘಟನೆಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟ್ವೀಟರ್ನಲ್ಲಿ ಖಂಡಿಸಿದ್ದಾರೆ. ಈ ಹಲ್ಲೆ, ಅಪಮಾನಕ್ಕೆ ಘಟನೆಗೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗಂಜಾಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಟ್ವೀಟರ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ವಿಶೇಷ ವರದಿ;ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ