/newsfirstlive-kannada/media/post_attachments/wp-content/uploads/2024/01/Corona-Covid19.jpg)
ನವದೆಹಲಿ: 5 ವರ್ಷಗಳ ಹಿಂದೆ.. ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನ ಬಲಿ ಪಡೆದಿದ್ದ ರಣರಕ್ಕಸ ವೈರಸ್ ಈಗ ಮರುಜನ್ಮ ಪಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಕರ್ನಾಟಕ, ಕೇರಳದವರೆಗೂ ಮತ್ತೆ ಕೊರೊನಾ ತನ್ನ ರಣಕೇಕೆಯನ್ನ ಶುರು ಮಾಡಿದೆ.
ಇತ್ತೀಚಿನ ಕೊರೊನಾ ಪ್ರಕರಣಗಳಲ್ಲಿ, ದೆಹಲಿ ಕಡೆ ನೋಡಿದರೆ ಅಲ್ಲಿ ಕಳೆದ ವಾರ 99 ಕರೋನಾ ಕೇಸ್ಗಳು ವರದಿಯಾಗಿದ್ದವು. ಆದ್ರೆ ಆ ಕೇಸ್ಗಳ ಸಂಖ್ಯೆ ಇಂದಿಗೆ 100ರ ಗಡಿ ದಾಟಿದೆ. ಸದ್ಯಕ್ಕೆ ದೇಶ ರಾಜಧಾನಿ ದೆಹಲಿಯಲ್ಲಿ 104 ಕೊರೊನಾ ವೈರಸ್ ಪ್ರಕರಣಗಳಿವೆ. ದೇಶದಲ್ಲೇ ಈಗ ದೆಹಲಿ ಕೊರೊನಾ ಕೇಸ್ಗಳಲ್ಲಿ 3ನೇ ಸ್ಥಾನದಲ್ಲಿದೆ.
209 ಪ್ರಕರಣಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ 83, ಕರ್ನಾಟಕ 71, ಉತ್ತರ ಪ್ರದೇಶ 15 ಕೇಸ್ಗಳಿದ್ದರೆ, ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳಿವೆ. ಕೇರಳದಲ್ಲಿ ಈ ಬಾರಿಯೂ 430 ಪ್ರಕರಣಗಳು ದಾಖಲಾಗಿ ಅಗ್ರಸ್ಥಾನದಲ್ಲಿದೆ.
ಯಾವ ರಾಜ್ಯದಲ್ಲಿ ಎಷ್ಟು ಸಾವು?
ಮಹಾರಾಷ್ಟ್ರದಲ್ಲಿ ಕೋವಿಡ್-19 ಮಹಾಮಾರಿಗೆ ಕನಿಷ್ಠ ನಾಲ್ಕು ಮಂದಿ ಸಾವಾಗಿರೋ ವರದಿಯಾಗಿದೆ. ಕೇರಳದಲ್ಲಿ ಎರಡು ಸಾವುಗಳಾಗಿದ್ದರೆ, ಕರ್ನಾಟಕದಲ್ಲಿ ಒಂದು ಸಾವು ಆಗಿದೆ. ಮತ್ತೊಂದು ಆಘಾತದ ವರದಿ ಏನಂದರೆ ದೇಶಾದ್ಯಂತ ಒಟ್ಟು 1,009ರ ಗಡಿಯಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್-19 ಪೋರ್ಟಲ್ ಮಾಹಿತಿ ನೀಡಿದೆ.
ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಕಡೆ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ.
ಬೆಂಗಳೂರಲ್ಲಿ 71 ಪಾಸಿಟಿವ್!
ರಾಜ್ಯ ರಾಜಧಾನಿ ನಮ್ಮ ಬೆಂಗಳೂರಲ್ಲಿ ಇದುವರೆಗೂ 71 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಟೆಸ್ಟಿಂಗ್ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ರಾಜ್ಯದಲ್ಲಿ ದಿನನಿತ್ಯ 150 ರಿಂದ 200 ಪರೀಕ್ಷೆಗೆ ಆರೋಗ್ಯ ಇಲಾಖೆ ನಿಗದಿಪಡಿಸಿದೆ.
ಎಲ್ಲಾ SARI ಪ್ರಕರಣಗಳಲ್ಲಿ ಕೋವಿಡ್-19 ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆಯನ್ನು ನಿಗದಿ ಪಡಿಸಿರುವ ಪ್ರಯೋಗಾಲಯಗಳಿಗೆ ಸ್ಯಾಂಪಲ್ ಸಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸಬೇಕು ಎಂದು ಸೂಚಿಸಿದೆ.
ಕೋವಿಡ್ ಟೆಸ್ಟಿಂಗ್ ಈ ಮಾರ್ಗಸೂಚಿ ಕಡ್ಡಾಯ
1. ಎಲ್ಲಾ SARI ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು
2. ವಯೋವೃದ್ಧರಲ್ಲಿ ಮಕ್ಕಳಲ್ಲಿ ಗರ್ಭಿಣಿ ಸ್ತ್ರೀಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.
3. ಕೋವಿಡ್-19ರ ಪರೀಕ್ಷಾ ಮಾದರಿಯನ್ನು ಪ್ರಯೋಗಶಾಲೆಗಳಿಗೆ ಅದೇ ದಿನ ತಲುಪುವಂತೆ ಕ್ರಮವಹಿಸುವುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ