/newsfirstlive-kannada/media/post_attachments/wp-content/uploads/2025/01/gavisiddeshwara8.jpg)
ಕೊಪ್ಪಳದ ಆರಾಧ್ಯದೈವ ಹಾಗೂ ನಡೆದಾಡುವ ದೇವರು ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ಹಿನ್ನೆಲೆ ಮಹಾರಥೋತ್ಸವಕ್ಕೆ ಕ್ಷಣಗಣನೆ ಬಾಕಿ ಇದೆ. ಇಂದು ಬೆಳೆಗ್ಗೆಯಿಂದಲೇ ಭಕ್ತ ಸಾಗರವೇ ಮಠದತ್ತ ಹರಿದು ಬರುತ್ತಿದ್ದು, ಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದವನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಪಡೆಯುತ್ತಿದ್ದಾರೆ. ಶ್ರೀಗಳು ಬೆಳಿಗ್ಗೆಯಿಂದ ಬರುವ ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದು ಪ್ರಸಾದ ಮಾಡಿಕೊಂಡು ಹೋಗುವಂತೆ ಸೂಚಿಸುತ್ತಿದ್ದು, ಮಠದಲ್ಲಿ ಸಂಭ್ರಮ ವಾತಾವರಣ ನಿರ್ಮಾಣವಾಗಿದೆ.
ಕೊಪ್ಪಳದಲ್ಲಿ ಈಗ ಜಾತ್ರೆಯ ಸಂಭ್ರಮ ಜೋರಾಗಿದೆ. ಅಜ್ಜಯ್ಯನ ಜಾತ್ರಾ ಮಹೋತ್ಸವದ ಕಲರವ ಮೇಳೈಸಿದೆ. ದಕ್ಷಿಣ ಭಾರತದ ಕುಂಭ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ಗವಿಸಿದ್ದೇಶ್ವರರ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಲ್ಲಿನ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಾಮಾಜಿಕ ಜಾಗೃತಿಯ ಮಹತ್ವದ ವೇದಿಕೆ ಕೂಡ ಹೌದು.
ಇದನ್ನೂ ಓದಿ: ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಾಮಾಜಿಕ ಜಾಗೃತಿಯ ವೇದಿಕೆ..!
ಗವಿಮಠದ ಜಾತ್ರೆ ಕೇವಲ ಬೆಂಡು ಬೆತ್ತಾಸು ಕೊಳ್ಳುವ, ಉತ್ಸವ ಮೂರ್ತಿಗೆ ಹರಕೆ ತೀರಿಸುವ, ರಥೋತ್ಸವ ನಡೆಸುವ ಜಾತ್ರೆಯಲ್ಲ. ಬದಲಿಗೆ ಸಾಮಾಜಿಕ ಕ್ರಾಂತಿಯ ವೇದಿಕೆ ಈ ಗವಿ ಸಿದ್ದೇಶ್ವರ ಜಾತ್ರೆ. ಸಮಾಜದ ಜಾಡ್ಯ ಬಿಡಿಸುವ, ಮೌಢ್ಯಕ್ಕೆ ಸೆಡ್ಡು ಹೊಡೆಯುವ, ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮನುಕುಲದ ಉದ್ಧಾರಕ್ಕೆ ಪೂರಕವಾಗುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಜಾತ್ರೆ. ಅಂದರೆ ಪ್ರತಿ ವರ್ಷ ಜಾತ್ರೆಯಲ್ಲಿ ಮಠದ ಪ್ರಸ್ತುತ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಸಮಾಜೋದ್ಧಾರಕ್ಕಾಗಿ ಒಂದೊಂದು ಜಾಗೃತಾ ಯೋಜನೆ ರೂಪಿಸುತ್ತಾರೆ.
ಬರೀ ಭಕ್ತಿ ಪ್ರದರ್ಶನವಷ್ಟೇ ಜಾತ್ರೆಯ ಉದ್ದೇಶವಾಗಿರಬಾರದು, ಜಾತ್ರೆಯಿಂದ ಮನೆಗೆ ಹೋಗುವ ಪ್ರತಿ ವ್ಯಕ್ತಿಯೂ ಜಾಗೃತಗೊಂಡು ಹೋಗಲಿ ಅನ್ನೋದೇ ಈ ಜಾಗೃತ ಯೋಜನೆಗಳ ಉದ್ದೇಶ. ಶ್ರೀಗಳು ರೂಪಿಸಿರುವ ಜಾಗೃತಾ ಯೋಜನೆಗಳಿಗೆ ಭಕ್ತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತದೆ. 2015ರಿಂದ ಇಂಥಹದೊಂದು ಸಂಪ್ರದಾಯ ಆರಂಭಿಸಿರುವ ಶ್ರೀಗಳು ಜನರ ಪಾಲಿನ ನಿಜದೇವರೆನಿಸಿಕೊಂಡಿದ್ದಾರೆ.
- 2015 - ಮಹಾರಕ್ತದಾನ ಶಿಬಿರ
- 2016 - ಬಾಲ್ಯ ವಿವಾಹ ತಡೆ ಜಾಗೃತಿ
- 2017 - ಜನ ಸಂರಕ್ಷಣೆ ಜಾಗೃತಿ
- 2018 - ಸಶಕ್ತಮನ-ಸಂತೃಪ್ತ ಜೀವನ
- 2019 - ಕೃಪಾದೃಷ್ಠಿ
- 2020 - ಲಕ್ಷ ವೃಕ್ಷತೋತ್ಸವ
- 2021 – ಕೋವಿಡ್ ಹಿನ್ನಲೆ ಸರಳ ಜಾತ್ರೆ (ಕೋವಿಡ್ ಪೀಡಿತರ ಸಹಾಯಕ್ಕೆ ನಿಂತ ಮಠ)
- 2022 - ಕೋವಿಡ್ ಹಿನ್ನಲೆ ಸರಳ ಜಾತ್ರೆ ( ಕೋವಿಡ್ ಪೀಡಿತರ ಸಹಾಯದ ಜೊತೆ ಕೆರೆ ಅಭಿವೃದ್ಧಿ, ದತ್ತುಗ್ರಾಮಗಳ ಅಭಿವೃದ್ಧಿ ಕ್ಯಾನ್ಸರ್ ತಪಾಸಣೆ )
- 2023 – ಅಂಗಾಂಗ ದಾನ ಜಾಗೃತಿ ಅಭಿಯಾನ
- 2024 – ಕಾಯಕದೇವೋಭವ ಅಭಿಯಾನ (ಸ್ವ-ಉದ್ಯೋಗಕ್ಕೆ ಉತ್ತೇಜನ)
- 2025 - ವಿಕಲ ಚೇತನನ ನಡೆ ಸಕಲ ಚೇತನ ಕಡೆ
2015ರಿಂದ ಆರಂಭಗೊಂಡಿರುವ ಜಾಗೃತಿ ಅಭಿಯಾನ ಈ ವರ್ಷ ಸಕಲಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದೇ ರೀತಿಯಾಗಿ ಯುವಜನರಿಗೆ ವಿದ್ಯಾರ್ಥಿಗಾಳಿಗೆ ಸ್ಫೂರ್ತಿ ತುಂಬಲು ಹಲವು ಕಾರ್ಯಕ್ರಮಗಳನ್ನ ಶ್ರೀಗಳು ಹಮ್ಮಿಕೊಂಡಿದ್ದಾರೆ. ಯಾವುದೋ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳಿಗೆ ಉಚಿತವಾಗಿ ಕೃತಕ ಅಂಗಾಂಗ ಜೋಡಿಸುವ ಮೂಲಕ ವಿಕಲಚೇತನರನ್ನು ಸಕಲಚೇನರನ್ನಾಗಿರುವ ಕಾರ್ಯಕ್ರಮವೇ ಈ ಸಕಲಚೇತನ ಅಭಿಯಾನ. ಆ ಮೂಲಕ ವಿಕಲಚೇತನರು ಸಕಲಚೇತನರಾಗಿ ಸ್ವಾವಲಂಬಿಗಳಾಗಬೇಕು ಅನ್ನೋದು ಶ್ರೀಮಠದ ಸಂಕಲ್ಪ. ಶ್ರವಣ ಶಕ್ತಿ ಕುಂಠಿತ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಿರುವದನ್ನು ಗಮನಿಸಿರುವ ಶ್ರೀಗಳು ವಿದ್ಯಾರ್ಥಿಗಳಿಗೆ ಶ್ರವಣದೋಷ ನಿವಾರಣೆ ಮಾಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ಹೊಂದಿದ್ದಾರೆ. ಈ ಮಹಾಸಂಕಲ್ಪಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೈ ಜೋಡಿಸಿದೆ. ಇನ್ನೂ, ರಥೋತ್ಸವ ಕಣ್ತುಂಬಿಸಿಕೊಳ್ಳಲು ಸಮಯ ಕಳದಂತೆ ಲಕ್ಷಾಂತರ ಭಕ್ತರು ಈಗಾಗಲೇ ಆವರಣದಲ್ಲಿ ಸೇರುತ್ತಿದ್ದಾರೆ. ಸರಿಯಾಗಿ 5:30ಕ್ಕೆ ಈ ಬಾರಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ