/newsfirstlive-kannada/media/post_attachments/wp-content/uploads/2025/03/sunita-williams.jpg)
ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ವಾಸಕ್ಕೆ ಕೊನೆಗೂ ಮುಕ್ತಿ ಸಿಗ್ತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸ್ಸಾಗುತ್ತಿದ್ದಾರೆ. ಅಮೆರಿಕಕ್ಕೆ ಇಂದು ಬಂದು ಇಳಿದರೇ ಭಾರತ ಇದನ್ನು ಕಾಣಲು ನಾಳೆ ಬೆಳಗ್ಗೆವರೆಗೆ ಕಾಯಬೇಕಿದೆ. ಕ್ಷಣಗಣನೆ.. ಕೋಟಿ ಕೋಟಿ ಭಾರತೀಯರು ಮಾತ್ರವಲ್ಲದೆ ಇಡೀ ವಿಶ್ವವೇ ಈ ಕ್ಷಣಕ್ಕಾಗಿ ಕಾದು ಕುಳಿತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಲ್ಲೇ ಲಾಕ್ ಆಗಿರುವ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ಆಗಮಿಸುವ ಕ್ಷಣ ಸನ್ನಿಹಿತವಾಗಿದೆ.
ಇಂದು ಸಂಜೆ ಅಮೆರಿಕದಲ್ಲಿ ಸುನಿತಾ ವಿಲಿಯಮ್ಸ್ ಲ್ಯಾಂಡ್
ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ. ನಾಸಾ ಮಾಹಿತಿ ಪ್ರಕಾರ, ಅಮೆರಿಕದ ಫ್ಲೋರಿಡಾ ಕರಾವಳಿ ಬಳಿ ಅಲ್ಲಿಯ ಕಾಲಮಾನದಂತೆ ಇಂದು ಸಂಜೆ 5:57ಕ್ಕೆ ಭೂಮಿಗೆ ಲ್ಯಾಂಡ್ ಆಗಲಿದ್ದಾರೆ. ಭಾರತೀಯ ಕಾಲಮಾನಕ್ಕೆ ಹೋಲಿಸಿದ್ರೆ 9 ಗಂಟೆ ವ್ಯತ್ಯಾಸವಿದ್ದು ಬುಧವಾರ ಬೆಳಗಿನ ಜಾವ 3 ಗಂಟೆ 27 ನಿಮಿಷಕ್ಕೆ ಬಂದು ತಲುಪಲಿದ್ದಾರೆ. ನಾಸಾ ಇದರ ಲೈವ್ ಕವರೇಜ್ ನೀಡಲಿದೆ.
ಭೂಮಿಗೆ ಸುನಿತಾ ವಿಲಿಯಮ್ಸ್!
ಮೊನ್ನೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಮೊನ್ನೆ ನೌಕೆಯಲ್ಲಿ ಹೋಗಿರುವ ಅಮೆರಿಕನ್ ಗಗನಯಾತ್ರಿ ನಿಕ್ ಹೇಗ್, ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಜೊತೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಬುಧುವಾರ ಸಂಜೆ ಭೂಮಿಗೆ ಬಂದಿಳಿಯಲಿದ್ದಾರೆ. ಫ್ಲೋರಿಡಾ ಕರಾವಳಿಯಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆಯಲ್ಲಿ ಇಳಿಯಬಹುದು ಅಂತ ನಾಸಾ ತಿಳಿಸಿದೆ. ತಮ್ಮನ್ನು ಭೂಮಿಗೆ ವಾಪಸ್ ಕರೆಸಿಕೊಳ್ಳಲು ಶ್ರಮಿಸಿದ ಡೋನಾಲ್ಡ್ ಟ್ರಂಪ್, ಮಸ್ಕ್‌ಗೆ ಸುನಿತಾ ವಿಲಿಯಮ್ಸ್ ಧನ್ಯವಾದ ಹೇಳಿದ್ದಾರೆ.
ಇನ್ನು, ಗುಜರಾತ್ ಮೂಲದ ಸುನಿತಾ ವಿಲಿಯಮ್ಸ್, ಈ ಹಿಂದೆ ಗುಜರಾತ್ಗೆ ಭೇಟಿ ನೀಡಿದ್ದರು. ಒಟ್ಟಾರೆ ಬಾಹ್ಯಾಕಾಶ ಕೇಂದ್ರಕ್ಕೆ 8 ದಿನದ ಅಧ್ಯಯನಕ್ಕಾಗಿ ಹೋಗಿದ್ದ ವಿಜ್ಞಾನಿಗಳು 9 ತಿಂಗಳು ಸಿಲುಕಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ 6 ತಿಂಗಳವರೆಗೂ ಹೋಗ್ತಾರೆ. ಆದರೇ ಸುನಿತಾ ವಿಲಿಯಮ್ಸ್, ಬಚ್ ವಿಲ್ಮೋರ್ 9 ತಿಂಗಳಿನಿಂದ ಇದ್ದಾರೆ. ಹೀಗಾಗಿ ಇಬ್ಬರು ಭೂಮಿಗೆ ಬಂದ ಮೇಲೆ ಭೂಮಿಯ ವಾತಾವರಣಕ್ಕೆ ಒಡ್ಡಿಕೊಳ್ಳಲು ದೈಹಿಕ ತೊಂದರೆ ಅನುಭವಿಸಲಿದ್ದಾರೆ. ಸದ್ಯ ಆಗಸದಲ್ಲೇ ಅತಂತ್ರವಾಗಿದ್ದ ವಿಜ್ಞಾನಿಗಳು ಭೂಮಿಗೆ ಬರುತ್ತಿರುವುದನ್ನು ಕಾಣಲು ವಿಶ್ವವೇ ಕಾತರದಿಂದ ಕಾಯ್ತಿದೆ.
ಸುನಿತಾ ವಿಲಿಯಮ್ಸ್ ಅವರ ಸಾಧನೆಯ ಹಾದಿ ಹೇಗಿತ್ತು?
1998ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸುನಿತಾ ಆಯ್ಕೆಯಾಗಿದ್ದರು. ಎಕ್ಸ್ ಪೆಡಿಶನ್ ಸುನಿತಾ ವಿಲಿಯಮ್ಸ್ರ ಮೊದಲ ಬಾಹ್ಯಾಕಾಶ ಮಿಷನ್ ಆಗಿದೆ. 2006ರಲ್ಲಿ ಫ್ಲೈಟ್ ಇಂಜಿನಿಯರ್ ಆಗಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಸುನಿತಾ ಹಾರಿದ್ದರು. 2007ರ ಫೆಬ್ರವರಿ 5ರಂದು ಸುನಿತಾ ಬಾಹ್ಯಾಕಾಶದಲ್ಲಿ ಮೊದಲ ದಾಖಲೆ ಮಾಡಿದ್ದರು. ಮಹಿಳಾ ಗಗನಯಾತ್ರಿಯೋರ್ವರು ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚು ಕಾಲ ಉಳಿದ ದಾಖಲೆಯಾಗಿದೆ. 27 ಗಂಟೆ 17 ನಿಮಿಷಗಳಷ್ಟು ಬಾಹ್ಯಾಕಾಶದಲ್ಲಿ ನಡಿಗೆ ಮಾಡಿ ದಾಖಲೆ ನಿರ್ಮಿಸಿದ್ದರು. ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ದಿನ ತಂಗಿರುವ ರೆಕಾರ್ಡ್ ಕೂಡ ಸುನಿತಾ ಹೆಸರಲ್ಲಿದೆ. ಈ ಹಿಂದೆ 195 ದಿನ ತಂಗುವ ಮೂಲಕ ಶಾನನ್ ಲೂಸಿಡ್ ಅವರ 188 ದಿನಗಳ ದಾಖಲೆ ಬ್ರೇಕ್ ಮಾಡಿದ್ದರು. 2012 ಜುಲೈ 14ರಂದು ಸುನಿತಾ ಎರಡನೇ ಬಾರಿಗೆ ಬಾಹ್ಯಾಕಾಶ ಯಾನ ಮಾಡಿದ್ದರು. ಈ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ಇದ್ದರು. ಈ ವೇಳೆ 50 ಗಂಟೆ 40 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡುವ ಮೂಲಕ ತನ್ನದೇ ಹಳೆಯ ದಾಖಲೆಯನ್ನ ಅಳಿಸಿ ಹೊಸ ದಾಖಲೆ ನಿರ್ಮಿಸಿದ್ರು. ಸುನಿತಾ ಬಾಹ್ಯಾಕಾಶಕ್ಕೆ ಭಗವತ್ ಗೀತೆ ತೆಗೆದುಕೊಂಡು ಹೋಗಿದ್ದಾರೆಂದು ವರದಿಯಾಗಿತ್ತು. ಸುನಿತಾ ಅವರ 2ನೇ ಬಾಹ್ಯಾಕಾಶ ಕಾರ್ಯಾಚರಣೆ 2012, ನವೆಂಬರ್ 18ರಂದು ಕೊನೆಗೊಂಡಿತ್ತು.
ಸುನಿತಾ ವಿಲಿಯಮ್ಸ್ ಜೀವನ ಚರಿತ್ರೆ
ಇನ್ನೂ, ಸುನಿತಾ ವಿಲಿಯಮ್ಸ್ ಅವರು ಹುಟ್ಟಿದ್ದು ಸೆಫ್ಟೆಂಬರ್ 19,1965ರಲ್ಲಿ. ಸುನಿತಾ ವಿಲಿಯಮ್ಸ್ ಅವರ ಪೂರ್ಣ ಹೆಸರು ಸುನಿತಾ ಲಿನ್ ವಿಲಿಯಮ್ಸ್. ಅಮೆರಿಕದ ಓಹಿಯೋದ ಯೂಕ್ಲಿಡ್ ನಗರದಲ್ಲಿ ಜನಿಸಿದ್ದರು. ಸುನಿತಾ ವಿಲಿಯಮ್ಸ್ ಅವರು ಕುಟುಂಬ ಮೂಲ ಗುಜರಾತ್. ಸುನಿತಾ ವಿಲಿಯಮ್ಸ್ ತಂದೆಯ ಹೆಸರು ದೀಪಕ್ ಪಾಂಡ್ಯ. ಸುನಿತಾ ವಿಲಿಯಮ್ಸ್ ತಂದೆ ನರರೋಗಶಾಸ್ತ್ರಜ್ಞರು ಆಗಿದ್ದರು. ಸುನಿತಾರ ತಂದೆ ದೀಪಕ್‌ಪಾಂಡ್ಯ ಮೂಲತ: ಗುಜರಾತ್ನ ಜುಲಾಸನ್ನವರು. ಸುನಿತಾ ವಿಲಿಯಮ್ಸ್ ತಾಯಿಯ ಹೆಸರು ಬೋನಿ ಪಾಂಡ್ಯ. ಸುನಿತಾ ವಿಲಿಯಮ್ಸ್ ಅವರು 1983ರಲ್ಲಿ ನೀಧಮ್ ಹೈಸ್ಕೂಲ್‌ನಿಂದ ಪದವಿ ಪಡೆದರು. 1987ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಭೌತಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಮಾಡಿದ್ದರು. 1995ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಮಾಡಿದ್ದರು. ಇದೀಗ ನಾಸಾದಲ್ಲಿ ಗಗನಯಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ