/newsfirstlive-kannada/media/post_attachments/wp-content/uploads/2024/04/money6.jpg)
ಬೆಂಗಳೂರು: ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಎಲ್ಲೆಡೆ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡೋ ಮೂಲಕ ಮತಬೇಟೆಯಾಡ್ತಿದ್ದಾರೆ. ಮತ್ತೊಂದೆಡೆ ಚುನಾವಣಾಧಿಕಾರಿಗಳು ಕೂಡ ಭರ್ಜರಿಯಾಗೇ ಬೇಟೆಯಾಡ್ತಿದ್ದಾರೆ. ವಾಹನಗಳಲ್ಲಿ ಸಾಗಿಸುತ್ತಿರುವ ಕೋಟಿ ಕೋಟಿ ಹಣವನ್ನು ಸೀಜ್ ಮಾಡುತ್ತಿದ್ದಾರೆ. ಇದರ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.
ಕಾಟನ್‌ಪೇಟೆ ಠಾಣೆಯಲ್ಲಿ 2 ಕೋಟಿ ರೂ. ಹಣ ಸೀಜ್
ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊನ್ನೆ ಸಂಜೆ ಚುನಾವಣಾಧಿಕಾರಿಗಳು ವೋಕ್ಸ್ ವ್ಯಾಗನ್ ಕಾರೊಂದನ್ನು ತಪಾಸಣೆ ನಡೆಸಿದ್ರು. ಈ ವೇಳೆ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಹಣದ ಬಗ್ಗೆ ಕೇಳಿದಾಗ ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದೆಂದು ಕಾರಲ್ಲಿದ್ದವರು ದಾಖಲೆ ಒದಗಿಸಿದ್ದರು. ಅದರಂತೆ ಕಾಟನ್ ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2 ಕೋಟಿ ಹಣದ ರಹಸ್ಯ!
ಈ ಘಟನೆ ಸಂಬಂಧ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ವೆಂಕಟೇಶ್ಪ್ರಸಾದ್ ಹಾಗೂ ಗಂಗಾಧರ್ ಎಂಬ ಮೂವರ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಚುನಾವಣಾಧಿಕಾರಿ ರವಿ ಅಸೂತಿ ದೂರಿನ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಮಾತ್ರವಲ್ಲದೆ ಆದಾಯ ತೆರಿಗೆ ಇಲಾಖೆಗೂ ತಿಳಿಸಲಾಗಿದೆ. ಅಲ್ಲದೆ ಹಣದ ಬಗ್ಗೆ ಕಾರಲ್ಲಿದ್ದವರು ಚುನಾವಣಾಧಿಕಾರಿಗಳಿಗೆ ಬಿಜೆಪಿ ಪಕ್ಷದ ಒಂದು ಪತ್ರವನ್ನು ಕೂಡ ಹಾಜರುಪಡಿಸಿದ್ದರು. ಪತ್ರದಲ್ಲಿ ಬ್ಯಾಂಕ್ನಿಂದ 5 ಕೋಟಿ ಹಣ ಡ್ರಾ ಮಾಡಿರೋದಾಗಿ ನಮೂದಿಸಲಾಗಿತ್ತು. 5 ಕೋಟಿಯಲ್ಲಿ 2 ಕೋಟಿ ಮೈಸೂರು-ಕೊಡಗು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬೂತ್ ಕಾರ್ಯಕರ್ತರಿಗೆ ಹಂಚಲು ತೆಗೆದುಕೊಂಡು ಹೋಗ್ತಿರೋದಾಗಿ ವ್ಯಕ್ತಿಗಳು ಹೇಳಿದ್ದರು. ಈ ಹಣವನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿ ಕಾಟನ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದರು. ಇನ್ನು, ಕಾಟನ್ ಪೇಟೆಯಲ್ಲಿ 2 ಕೋಟಿ ಹಣ ಸೀಜ್ ಪ್ರಕರಣಕ್ಕೆ ಸಂಬಂಧಿಸಿ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಮಳೆಯಿಂದ ಭಾರೀ ಅವಾಂತರ; ಕಾರಿನ ಮೇಲೆ ತೆಂಗಿನ ಮರ, ವಿದ್ಯುತ್ ಕಂಬ ಬಿದ್ದು ವ್ಯಕ್ತಿ ಸಾವು
ಕಾಟನ್ ಪೇಟೆಯಲ್ಲಿ ಸೀಜ್ ಆಗಿದ್ದ ಹಣವನ್ನು ಎಲ್ಲ ಕಡೆ ಹಂಚಿದ್ದಾರೆ. ಚಿಕ್ಪೋಸ್ಟ್ಗಳಲ್ಲಿ ಬಿಜೆಪಿಯವರು ಸುಮಾರು ಹಣ ಸಾಗಣೆ ಮಾಡಿದ್ದಾರೆ. ಆಫೀಸರ್ ಕೈಯಲ್ಲಿ ಮುಚ್ಚಿ ಹಾಕೋಕೆ ನೋಡ್ತಿದ್ದಾರೆ. ನಾವು ಅದರ ತನಿಖೆ ಮಾಡಿದ್ದೇವೆ, ಪೊಲೀಸರು ಕ್ರಮ ಕೈಗೊಳ್ತಾರೆ.
- ಡಿಸಿಎಂ ಡಿಕೆ ಶಿವಕುಮಾರ್
ಆದ್ರೆ ಹಣದ ಬಗ್ಗೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ್‌ನಾರಾಯಣ್, ಎಲ್ಲವೂ ದಾಖಲೆಯ ಪ್ರಕಾರವಿದೆ. ಚಾಲಕನ ಮಾಹಿತಿಯೊಂದಿಗೆ ಎಲ್ಲವನ್ನೂ ಕೊಟ್ಟಿದ್ದೇವೆ. ನಮ್ಮ ಹಣವನ್ನು ಸೀಜ್ ಮಾಡೋ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತ ಕಿಡಿಕಾರಿದ್ದಾರೆ. ಒಟ್ಟಾರೆ ಏಪ್ರಿಲ್ 26ರಂದು ರಾಜ್ಯದಲ್ಲಿ ಚುನಾವಣೆ ಇದೆ. ಹೀಗಾಗಿ ನಾಯಕರು ಎಲ್ಲ ತಂತ್ರಗಳನ್ನು ಹೆಣೆದು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಆದ್ರೆ ಎಲ್ಲ ಕಡೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ