/newsfirstlive-kannada/media/post_attachments/wp-content/uploads/2025/01/DK_SHIVAKUMAR-6.jpg)
ಕಾಂಗ್ರೆಸ್ನಲ್ಲಿ ಮುಗಿಯುತ್ತೆ ಅಂದ್ರೆ, ಇದು ಮುಗಿಯೋ ಹಾಗೇ ಕಾಣಿಸ್ತಿಲ್ಲ. ಬೆಂಗಳೂರಲ್ಲಿ ಪಾಲಿಟಿಕ್ಸ್ ಎಲ್ಲಾ ಕೂಲ್ ಕೂಲ್ ವಾತಾವರಣ. ಆದ್ರೆ, ಬೆಳಗಾವಿಯಲ್ಲಿ ಶೀತಲ ಸಮರ ಮತ್ತೊಂದು ಮಜಲು ತಲುಪುತ್ತಿದೆ. ಬೆಳಗಾವಿಯಲ್ಲಿ ಬೀಡುಬಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಜೊತೆಗೆ ಜಿದ್ದಿಗೆ ಬಿದ್ದಂತೆ ಕಾಣಿಸುತ್ತಿದೆ. ಇದರ ಮಧ್ಯೆ ಸತೀಶ್-ಡಿ.ಕೆ ಶಿವಕುಮಾರ್ ಜೊತೆಗೆ ಕಾಣಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ನಲ್ಲಿ ಆಂತರಿಕ ಬೇಗುದಿಗೆ ಮದ್ದೇ ಸಿಗುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಎಚ್ಚರಿಕೆ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರು, ತಾತ್ಕಾಲಿಕ ಮೌನಕ್ಕೆ ಜಾರಿದ್ದಾರೆ. ಹೈಕಮಾಂಡ್ ಎಚ್ಚರಿಕೆ ಕೊಟ್ಟು ತಿಕ್ಕಾಟ ಅಂತ್ಯಗೊಳಿಸಲು ಯತ್ನಿಸುತ್ತಿದ್ದರೂ, ಬೆಳಗಾವಿ ಬೆಂಕಿ ಆರುವ ಲಕ್ಷಣಗಳಿಲ್ಲ. ಇದರ ಮಧ್ಯೆ ಕುಂದಾನಗರಿಯಲ್ಲಿ ಎರಡು ದಿನದಿಂದ ಠಿಕಾಣಿ ಹೂಡಿರುವ ಡಿಸಿಎಂ ಡಿ.ಕೆ ಶಿವಕುಮಾರ್-ಸತೀಶ್ ಜಾರಕಿಹೊಳಿ ಮುಖಾಮುಖಿ ಆಗಿರೋದು ಕದನ ಕೌತುಕವನ್ನ ಹೆಚ್ಚು ಮಾಡಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಕರೆದ ಸಭೆಗೆ ಜಾರಕಿಹೊಳಿ ಗೈರು
ಡಿಸಿಎಂ ಡಿ.ಕೆ ಶಿವಕುಮಾರ್-ಸತೀಶ್ ಜಾರಕಿಹೊಳಿ ನಡುವೆ ಶೀತಲ ಸಮರ ನಡೀತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ರಿಂದ ಅಂತರ ಕಾಯ್ದುಕೊಂಡ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್, ಬೆಳಗಾವಿಯಲ್ಲಿದ್ರೂ ಮುಖಾಮುಖಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿತ್ತು. ಡಿ.ಕೆ ಶಿವಕುಮಾರ್ ಬೆಳಗಾವಿಗೆ ಬರ್ತಿದ್ದಂತೆ ಸತೀಶ್ ಗೋಕಾಕ್ನಗರಕ್ಕೆ ತೆರಳಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ, ಡಿಸಿಎಂ ಡಿ.ಕೆ ಶಿವಕುಮಾರ್ ಕರೆದ ಸಭೆಗೆ ಸತೀಶ್ ಜಾರಕಿಹೊಳಿ ಗೈರಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಸತೀಶ್ ಭಾಗಿ ಆಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಗಾಂಧಿ ಭಾರತ ಸಮಾವೇಶ ಸಿದ್ಧತೆ ಪರಿಶೀಲನೆ ವೇಳೆ ಇಬ್ಬರೂ ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅಕ್ಕಪಕ್ಕದಲ್ಲಿ ಕೂತಿದ್ದ ನಾಯಕರ ಮಧ್ಯೆ ಅಲ್ಪಮಾತು
ಜನವರಿ 21ರಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಗಾಂಧಿ ಭಾರತ ಸಮಾವೇಶ ನಡೆಯಲಿದೆ. ಇಲ್ಲಿ ನಿರ್ಮಿಸಲಾದ ಬೃಹತ್ ವೇದಿಕೆ ಅಂತಿಮ ಹಂತದ ಸಿದ್ಧತೆ ಪರಿಶೀಲನೆಗೆ ಕೈ ನಾಯಕರು ನಿನ್ನೆ ಆಗಮಿಸಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಜೊತೆ ಸಚಿವ ಸತೀಶ್ ಜಾರಕಿಹೊಳಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. 2 ದಿನಗಳ ಬಳಿಕ ಮೊದಲ ಬಾರಿಗೆ ಬೆಳಗಾವಿಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಿದ್ದರು. ಇದೇ ವೇಳೆ ಭಾರತ ಸಮಾವೇಶದ ಸಿದ್ಧತೆಯ ವಿಟಿಯನ್ನ ಇಬ್ಬರೂ ನಾಯಕರು ಅಕ್ಕಪಕ್ಕದಲ್ಲೇ ಕೂತು ವೀಕ್ಷಿಸಿದರು.
ಇದನ್ನೂ ಓದಿ:ರಾತ್ರಿ ನೆನೆಯಿಟ್ಟ ಅಜಿವಾನದ ನೀರು ಕುಡಿಯೋದರಿಂದ ಏನು ಪ್ರಯೋಜನ? ಚಳಿಗಾಲದಲ್ಲಿ ಇದು ತುಂಬಾ ಉಪಯೋಗ
ಕನಕಪುರ ಕಲಿತ-ಬೆಳಗಾವಿ ಸಾಹುಕಾರ್ ಮುಖದಲ್ಲಿ ಶೀತಲ ಸಮರದ ಛಾಯೆ ಎದ್ದು ಕಾಣುತ್ತಿತ್ತು. ಆದರೂ ಇಬ್ಬರೂ ಅಕ್ಕ ಪಕ್ಕದಲ್ಲಿ ಕೂತು ಒಂದೆರಡು ಮಾತುಗಳನ್ನ ಆಡಿದ್ದೂ ಸೋಜಿಗಕ್ಕೆ ಕಾರಣವಾಗಿತ್ತು. ಹಾಗಂತ ಶೀತಲಸಮರಕ್ಕೆ ಬ್ರೇಕ್ ಬಿತ್ತಾ ಅಂದ್ರೆ ಅದಂತೂ ಹೇಳಲು ಅಸಾಧ್ಯ. ಬೆಳಗಾವಿ ರಾಜಕೀಯದಲ್ಲಿ ಎತ್ತಿಕಟ್ಟಿ ಆಡುವ ಆಟಕ್ಕೆ ಡಿ.ಕೆ ಶಿವಕುಮಾರ್ ಮುನ್ನುಡಿ ಬರೆದಂತೆ ಕಾಣಿಸುತ್ತಿತ್ತು. ಆದ್ರೀಗ ಪಕ್ಷದ ಕಾರ್ಯಕ್ರಮಕ್ಕಾಗಿ 2 ಮದಗಜಗಳು ಒಂದಾದಂತೆ ಭಾಸವಾಯಿತು. ಆದರೂ ಇದು ಕಾರ್ಯಕ್ರಮಕಷ್ಟೇ ಅನ್ನೋದು ಅವರ ನಡವಳಿಕೆಯಲ್ಲೇ ಗೊತ್ತಾಗುತ್ತಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ