/newsfirstlive-kannada/media/post_attachments/wp-content/uploads/2025/07/dk-shivakumar.jpg)
ಬೆಂಗಳೂರಿನಲ್ಲಿದ್ದ ಬಿಬಿಎಂಪಿ ಈಗಾಗಲೇ ಇತಿಹಾಸದ ಪುಟ ಸೇರಿದೆ. ಬಿಬಿಎಂಪಿ ಜಾಗದಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಈಗ ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಐದು ಪಾಲಿಕೆಗಳನ್ನು ರಚಿಸಲು ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಐದು ಪಾಲಿಕೆಗಳನ್ನು ರಚಿಸಿದ ಬಳಿಕ, ಆ ಐದು ಪಾಲಿಕೆಗಳಿಗೂ ವಾರ್ಡ್ ವಾರು ಚುನಾವಣೆ ನಡೆಸಲಾಗುತ್ತೆ. ಜಿಬಿಎನಲ್ಲಿ ಐದು ಪಾಲಿಕೆಗಳನ್ನು ರಚಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಡನ್ ಯುವತಿಯರೇ ನಿಮಗಾಗಿಯೇ ಸುವರ್ಣಾವಕಾಶ.. ಈ ಶೋನಲ್ಲಿ ಭಾಗವಹಿಸುವುದು ಹೇಗೆ ಗೊತ್ತಾ?
ಕಳೆದ ಮೂರು ವರ್ಷದಿಂದ ಬೆಂಗಳೂರು ನಗರದಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವೇ ಇಲ್ಲ. ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ಇದೆ. ಈಗ ಗ್ರೇಟರ್ ಬೆಂಗಳೂರು ಅಥಾರಿಟಿ(ಜಿಬಿಎ) ರಚಿಸಿದ ಬಳಿಕ ಪ್ರಾರಂಭದಲ್ಲಿ ಮೂರು ಪಾಲಿಕೆಗಳನ್ನು ಮಾಡಲಾಗುತ್ತೆ ಎಂದು ಹೇಳಲಾಗಿತ್ತು. ಆದ್ರೆ, ಈಗ ಐದು ಹೊಸ ಪಾಲಿಕೆಗಳನ್ನು ರಚಿಸಲು ಇಂದು( ಜುಲೈ17) ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಗೆ ಬಿಬಿಎಂಪಿಗೆ ಇದ್ದ ಭೌಗೋಳಿಕ ವ್ಯಾಪ್ತಿಯನ್ನೇ ಉಳಿಸಿಕೊಳ್ಳುತ್ತೇವೆ. ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಲ್ಲ ಎಂದು ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಲ್ಲೇ ಐದು ಪಾಲಿಕೆಗಳು ರಚನೆಯಾಗಲಿವೆ. ಇನ್ನೂ ದೇಶದಲ್ಲಿ ಒಂದೇ ನಗರದಲ್ಲಿ ಒಂದಕ್ಕಿಂತ ಹೆಚ್ಚಿನ ಪಾಲಿಕೆಗಳು ಇರೋದು ಇದೇ ಮೊದಲೇನೂ ಅಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆಗಳಿವೆ. ಉತ್ತರ ದೆಹಲಿ, ದಕ್ಷಿಣ ದೆಹಲಿ ಹಾಗೂ ಪೂರ್ವ ದೆಹಲಿ ಪಾಲಿಕೆಗಳೆಂಬ ಮೂರು ಪಾಲಿಕೆಗಳಿದ್ದವು. 2011 ರಿಂದ 2022ರವರೆಗೆ ದೆಹಲಿಯಲ್ಲಿ ಮೂರು ಪಾಲಿಕೆಗಳಿದ್ದವು. ಇವುಗಳ ಜೊತೆಗೆ ಎನ್‌ಡಿಎಂಸಿ ಹಾಗೂ ದೆಹಲಿ ಕಂಟೋನ್ ಮೆಂಟ್ ಪ್ರದೇಶಗಳ ಮಂಡಳಿ ಕೂಡ ಇತ್ತು. ಆದರೇ, 2022ರಲ್ಲಿ ಮೂರು ಪಾಲಿಕೆಗಳನ್ನು ಪರಸ್ಪರ ವಿಲೀನಗೊಳಿಸಿ ಒಂದೇ ಪಾಲಿಕೆ ರಚಿಸಲಾಗಿದೆ.
ಇನ್ನೂ ಹಣಕಾಸಿನ ವಿಷಯದಲ್ಲಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್(ಬಿಎಂಸಿ) ಅತಿ ಹೆಚ್ಚಿನ ಬಂಡವಾಳ ಹಾಗೂ ಹೆಚ್ಚಿನ ಬಜೆಟ್ ಗಾತ್ರ ಹೊಂದಿರುವ ಪಾಲಿಕೆಯಾಗಿದೆ. ಬಿಎಂಸಿ 2025-26 ರಲ್ಲಿ 74,427 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದೆ. ಇದರ ಹಿಂದಿನ ವರ್ಷ 59,954 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿತ್ತು. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸುವ ಪ್ಲ್ಯಾನ್ ಅನ್ನು ಡಿಕೆಶಿ ಹಾಕಿಕೊಂಡಿದ್ದಾರೆ. ಜಿಬಿಎಗೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಜಿಬಿಎ ನಲ್ಲಿರುತ್ತಾರೆ. ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಜಿಬಿಎ ಅಗತ್ಯ ಎಂದು ತಜ್ಞರ ಸಮಿತಿ ವರದಿ ನೀಡಿತ್ತು. ಅದರ ಪ್ರಕಾರ ಈಗಾಗಲೇ ಜಿಬಿಎ ರಚನೆ ಮಾಡಲಾಗಿದೆ. ಜಿಬಿಎ ಕಾರ್ಯನಿರ್ವಹಣೆ ಹೇಗಿರುತ್ತೆ? ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗೆ ಪರಿಹಾರ ಸಿಗುತ್ತಾ? ರಸ್ತೆ, ಚರಂಡಿ, ಕಸ ನಿರ್ವಹಣೆ, ಒಳಚರಂಡಿ, ಕುಡಿಯುವ ನೀರಿನ ವಿಷಯ, ವಿದ್ಯುತ್ ಇವೆಲ್ಲವನ್ನೂ ಜಿಬಿಎ ಹೇಗೆ ನಿರ್ವಹಿಸುತ್ತೆ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ