/newsfirstlive-kannada/media/post_attachments/wp-content/uploads/2024/11/DKSHI-VS-HDD.jpg)
ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಮೈತ್ರಿ ಪಾಳಯ ಹಾಗೂ ಆಡಳಿತ ಪಕ್ಷದ ನಾಯಕರು ಸೇರಿಗೆ ಸವ್ವಾಸೇರು ಎನ್ನುವಂತೆ ವಾಗ್ಬಾಣಗಳನ್ನು ಬಿಡುತ್ತಿದ್ದಾರೆ. ಸ್ಪಷ್ಟವಾದ ಗುರಿಯೊಂದಿಗೆ ನುಗ್ಗಿ ಬರುತ್ತಿರುವ ಬಾಣಗಳು ಮಾಡಬೇಕಾದವರಿಗೆ ಮಾಡಬೇಕಾದ ಘಾಸಿಯನ್ನೇ ಮಾಡುತ್ತಿವೆ. ಅದರಲ್ಲೂ ದೊಡ್ಡ ಗೌಡರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದ ಮೇಲೆ ವಾಕ್ ಸಮರ ಜೋರಾಗಿಯೇ ಇದೆ. ಈಗ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ವಾಗ್ಯುದ್ಧ ಜೋರಾಗಿಯೇ ನಡೆಯುತ್ತಿದೆ.
ಈ ಸರ್ಕಾರವನ್ನು ಕಿತ್ತು ಹಾಕುವವರೆಗೂ ನಾನು ಮಲಗಲ್ಲ
ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಮತ್ತೆ ಶಪಥ ಮಾಡಿದ್ದಾರೆ. ಈ ಸರ್ಕಾರವನ್ನು ಕಿತ್ತು ಒಗೆಯುವವರೆಗೂ ನಾನು ವಿರಮಿಸುವುದಿಲ್ಲ. ನನ್ನ 62 ವರ್ಷ ರಾಜಕೀಯ ಜೀವನದಲ್ಲಿ ಇಂತಹದೊಂದು ಸರ್ಕಾರವನ್ನು ನಾನು ನೋಡಿಲ್ಲ. ನಿಖಿಲ್ ಕುಮಾರಸ್ವಾಮಿ ಗೆದ್ದ ತಕ್ಷಣ ದೇವೇಗೌಡ ಮಲಗುವುದಿಲ್ಲ. ಈ ಸರ್ಕಾರವನ್ನು ಕಿತ್ತೆಸೆಯುವವರೆಗೂ ನಾನು ಮಲಗುವುದಿಲ್ಲ ಎಂದು ಹೇಳಿದ್ದಾರೆ.
ಕಡ್ಲೆಕಾಯಿ ಗಿಡವಲ್ಲ, 136 ಶಾಸಕರ ಬಲಿಷ್ಠ ಸರ್ಕಾರ
ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಅವರ ಹೇಳಿಕೆಗೆ ಕೌಂಟರ್ ಕೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಹಾಗೆ ಕಿತ್ತು ಹಾಕಲು ಇದು ಕಡ್ಲೆಕಾಯಿ ಗಿಡವಲ್ಲ 136 ಜನ ಶಾಸಕರಿರುವ ಬಲಿಷ್ಠವಾದ ಸರ್ಕಾರ. 136 ಶಾಸಕರನ್ನು ಜನರೇ ಆಯ್ಕೆ ಮಾಡಿದ್ದಾರೆ. ಸುಮ್ಮನೆ ಕಿತ್ತು ಎಸೆಯುತ್ತೇನೆ ಎನ್ನಲು ಇದು ಕಡ್ಲೆಕಾಯಿ ಗಿಡವಲ್ಲ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/11/DKSHI-VS-HDD-1.jpg)
ಎಲ್ಲಿಯ ಕುಮಾರಣ್ಣ.. ಎಲ್ಲಿಯ ಡಿಕೆ?
ಇನ್ನೂ ಕುಮಾರಸ್ವಾಮಿ ಹಾಗು ಡಿಕೆ ಶಿವಕುಮಾರ್ ಹೋಲಿಕೆಗೆ ವ್ಯಂಗ್ಯವಾಡಿರುವ ದೊಡ್ಡ ಗೌಡರು. ಎಲ್ಲಿಯ ಕುಮಾರಣ್ಣ, ಎಲ್ಲಿಯ ಡಿ.ಕೆ.ಶಿವಕುಮಾರ್, ಎಲ್ಲಿಯ ಹೆಚ್​ಡಿಕೆ, ಎಲ್ಲಿಯ ಡಿಕೆ, ಹಿಮಾಲಯ ಪರ್ವತಕ್ಕೂ ಇಲ್ಲೆ ಎಲ್ಲಿಯೋ ಇರುವ ಪಕ್ಕದ ಗುಡ್ಡಕ್ಕೂ ಹೋಲಿಕೆ ಮಾಡಲು ಆಗುತ್ತದೆಯಾ ಅಂತ ಲೇವಡಿ ಮಾಡಿದ್ದಾರೆ.
ನಾನು ಬೆಟ್ಟನೂ ಅಲ್ಲ, ಸಣ್ಣ ಮಣ್ಣು ನಾನು
ದೇವೇಗೌಡರ ಲೇವಡಿಗೆ ಎದಿರೇಟು ಕೊಟ್ಟಿರುವ ಡಿ.ಕೆ.ಶಿವಕುಮಾರ್, ನಾನು ಬೆಟ್ಟನೂ ಅಲ್ಲ, ಸಣ್ಣ ಮಣ್ಣು ನಾನು, ಅವರು ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾದವರು. ನಾನೊಬ್ಬ ಮಿಡ್ಲಕ್ಲಾಸ್ ರೈತನ ಮಗ ಅವರಿಗೂ ನಮಗೂ ಹೋಲಿಕೆಯೇ ಸರಿಯಲ್ಲ. ಅವರು ತುಂಬಾ ದೊಡ್ಡವರು. ನಾನೊಬ್ಬ ಕಾರ್ಯಕರ್ತ, ಅವರು ಹಿಮಾಲಯ, ಆದ್ರೆ, ನಾನೊಬ್ಬ ಸೇವಕ, ಪ್ರಾಮಾಣಿಕವಾದ ಜನರ ಸೇವಕ ನಾನು ಎಂದು ಕುಟುಕಿದ್ದಾರೆ.
ನನ್ನ ನೀರು ನನ್ನ ಜನಕ್ಕೆ ಕುಡಿಸಿ ಕೊನೆಯುಸಿರು ಎಳೆಯುತ್ತೇನೆ
ನನ್ನ ಜನಕ್ಕೆ ಕೊಡುವ ನೀರು, ನನ್ನ ನೀರು, ಹೇಮಾವತಿ ಘಟ್ಟದಲ್ಲಿ ಇದೆ. ಹಾರಂಗಿ ಘಟ್ಟದಲ್ಲಿದೆ, ಕಬನಿ ಘಟ್ಟದಲ್ಲಿದೆ. ನನ್ನ ನೀರು, ನನ್ನ ಜನಕ್ಕೆ ಕುಡಿಸಬೇಕು ಎಂದು ದೇವೇಗೌಡರು ಪ್ರಚಾರದಲ್ಲಿ ಹೇಳಿದರು. ಅದರ ಜೊತೆಗೆ, ಈ ಉಸಿರು ನಿಲ್ಲಿಸೋದಕ್ಕೂ ಮುಂಚೆ ನರೇಂದ್ರ ಮೋದಿಯವರಿಂದ ಆ ಒಂದು ಮೇಕೆದಾಟು ತೀರ್ಪನ್ನ ಮಾಡಿಸಿ ಕೊನೆಯುಸಿರು ಎಳೆಯಲು ಎಂದು ತೀರ್ಮಾನಿಸಿದ್ದೇನೆ.ಇವತ್ತು ನಾನು ಇಲ್ಲಿಗೆ ಬಂದಿರೋದು ನಿಖಿಲ್ ಕುಮಾರಸ್ವಾಮಿಗೆ ವೋಟು ಹಾಕಿ ಅಂತ ಅಪೀಲ್ ಮಾಡಬೇಕಿಲ್ಲ ನಿಮಗೆ ಗೊತ್ತು ಅಂತ ಹೇಳಿದ್ರು.
/newsfirstlive-kannada/media/post_attachments/wp-content/uploads/2024/11/DKSHI-VS-HDD-2.jpg)
ಅವರು ಮಾಡಿಸಲಿ, ಮೂರೇ ವರ್ಷದಲ್ಲಿ ಅದನ್ನು ಕಟ್ಟಿಸುತ್ತೇನೆ
ದೊಡ್ಡಗೌಡರ ಈ ಮಾತಿಗೆ ಮತ್ತೆ ಕುಟುಕಿರುವ ಡಿ.ಕೆ.ಶಿವಕುಮಾರ್, ಹೆಚ್​ ಡಿ ಕುಮಾರಸ್ವಾಮಿ ನರೇಂದ್ರ ಮೋದಿಯವರ ಕೈಹಿಡಿದು ಬರಸ್ತೀನಿ ಅಂತ ಹೇಳಿದ್ರು. ಅದು ಹೇಳಿ ಎಷ್ಟು ವರ್ಷವಾಯ್ತು. ಈಗ ದೇವೇಗೌಡರು ಹೀಗೆ ಹೇಳುತ್ತಿದ್ದಾರೆ. ಅವರು ಅದನ್ನು ಮಾಡಿಸಲಿ, ನಾನು ಮೂರೇ ವರ್ಷದಲ್ಲಿ ಕಟ್ಟಿಸುತ್ತೇನೆ ಎಂದು ಗುಡುಗಿದ್ರು.
ಕಣ್ಣೀರು ಟೀಕೆಗೆ ದೇವೇಗೌಡರ ಕೌಂಟರ್
ಇನ್ನು ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಕಣ್ಣೀರು ಹಾಕಿದ್ದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಅದರಲ್ಲೂ ಡಿ.ಕೆ.ಶಿವಕುಮಾರ್​ ಲೇವಡಿ ಮಾಡಿದ್ದರು. ಅದಕ್ಕೆ ಕೌಂಟರ್ ಕೊಟ್ಟ ದೇವೇಗೌಡರು. ದೇವೇಗೌಡ ಅತ್ತು ಬಿಡ್ತಾರೆ. ಕುಮಾರಸ್ವಾಮಿ ಅತ್ತುಬಿಡ್ತಾರೆ. ನಿಖಿಲ್ ಕುಮಾರಸ್ವಾಮಿಯೂ ಅತ್ತು ಬಿಡ್ತಾರೆ. ಆದ್ರೆ ಕೊತ್ವಾಲ್ ರಾಮಚಂದ್ರನ ಬಳಿ ನೂರು ರೂಪಾಯಿಗೆ ಕೆಲಸ ಆರಂಭಿಸಿದ ಪಂಡಿತ್ ಜವಾಹರ್​​ಲಾಲ್ ನೆಹರು ಇದ್ದ ಇಂದಿರಾ ಗಾಂಧಿ ಇದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಕಣ್ಣಲ್ಲಿ ನೀರು ಬಂದಿದ್ದು ನೋಡಿದ್ದೀರಾ. ಆದರೆ ದೇಶಕ್ಕೆ ಅನ್ನ ಕೊಡುವ ರೈತರಿಗೆ ನೋವಾದಾಗ ನಮ್ಮಂತವರ ಹೃದಯ ಮರಗುತ್ತದೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ಅದು ನನ್ನಿಂದಲೇ ಬಂದಿದ್ದು, ನಮ್ಮ ತಂದೆಯಿಂದಲೇ ಬಂದಿರುವುದು. ನಾವು ಅಷ್ಟು ಬಡತನ ಅನುಭವಿಸಿದ್ದೀವಿ. ಬಡವರ ಬಗ್ಗೆ ನನಗೆ ಬೇಗೆಯಿದೆ. ನೋವಿದೆ ಹೀಗಾಗಿ ಕಣ್ಣೀರು ಬರುತ್ತೆ ಎಂದು ದೇವೇಗೌಡರು ಡಿ.ಕೆ.ಶಿವಕುಮಾರ್​ ಅವರಿಗೆ ಕೌಂಟರ್ ಕೊಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us