/newsfirstlive-kannada/media/post_attachments/wp-content/uploads/2025/02/DK_SHIVAKUMAR-1.jpg)
ಕಾಂಗ್ರೆಸ್‌ನಲ್ಲಿ ಈಗ ಎರಡೇ ಚರ್ಚೆ ಒಂದು ಸಿಎಂ ಕುರ್ಚಿ, ಇನ್ನೊಂದು ಕೆಪಿಸಿಸಿ ಪಟ್ಟ. ಒಂದರ ಹಿಡಿತ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಸಿಕ್ಕಾಗಿದೆ. ಇನ್ನೊಂದರ ಮೇಲೆ ಕೂರಲು ಪೈಪೋಟಿ ನಡೆಸ್ತಿದ್ದಾರೆ. ಆದ್ರೆ, ಅಹಿಂದ ಬಣ ಇದಕ್ಕೆ ಬಿಡ್ತಾನೆ ಇಲ್ಲ. ಡಿ.ಕೆ ಶಿವಕುಮಾರ್ ಕಣ್ಣಿಟ್ಟಿರುವ ಪಟ್ಟಕ್ಕೆಲ್ಲಾ ಟವೆಲ್ ಹಾಕಿ ಅಡ್ಡಗಾಲು ಹಾಕುತ್ತಿವೆ. ಇದರ ಮಧ್ಯೆ 2028ರ ನಾಯಕತ್ವದ ಚರ್ಚೆ ಈಗಲೇ ಶುರುವಾಗಿದೆ. ಜೊತೆಗೆ ಡಿ.ಕೆ ಶಿವಕುಮಾರ್ ಇವತ್ತು ಡೆಲ್ಲಿ ಯಾತ್ರೆ ಮಾಡುತ್ತಿರೋದು ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಕರ್ನಾಟಕ ಕಾಂಗ್ರೆಸ್ ಭಿನ್ನಮತದ ಲೀಗ್ ಮುಗಿತಿಲ್ಲ. ಕಾಂಗ್ರೆಸ್ ಕ್ಯಾಪ್ಟನ್ಶಿಪ್ಗಾಗಿ ನಾನೊಂದು ತೀರ, ನೀನೊಂದು ತೀರ ಎನ್ನುವಂತಾಗಿದೆ. ಮಾತಿನ ಏಟುಗಳಿಗೆ ಮನಸ್ಸುಗಳಲ್ಲಿ ಬಿರುಕಿನ ಭಾರ ಕಾಣಿಸ್ತಿದೆ. ಸಿಎಂ ಕುರ್ಚಿ, ಕೆಪಿಸಿಸಿ ಕುಸ್ತಿಯಿಂದ ಎರಡು ಬಣಗಳ ನಡುವೆ ಜಟಾಪಟಿಗೆ ಕಾರಣ ಆಗಿದ್ದು, ಮುಸುಕಿನ ಗುದ್ದಾಟ ಮೋಡ ಕವಿಯುವಂತೆ ಮಾಡಿದೆ. ಇದೀಗ ಸಿಎಂ, ಕೆಪಿಸಿಸಿ ಅಧ್ಯಕ್ಷನ ಕುರ್ಚಿ ಜೊತೆ ನಾಯಕತ್ವದ ಕದನ ಏರ್ಪಟ್ಟಿದೆ.
ನಾಯಕತ್ವದ ಚರ್ಚೆ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಯೂಟರ್ನ್
ಮೊನ್ನೆಯಷ್ಟೆ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಲೀಡರ್‌ಶಿಪ್‌ನಲ್ಲೇ ಚುನಾವಣೆ ಎನ್ನುವ ದಾಟಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದರು. ಇನ್ನೂ ಎಂಟತ್ತು ವರ್ಷ ಎಲ್ಲೂ ಹೋಗಲ್ಲ ಅಂತ ಹೊಸ ಸಂದೇಶ ರವಾನಿಸಿದ್ರು. ಇದೀಗ ತಾವೇ ಆಡಿದ್ದ ಮಾತಿಗೆ ಉಲ್ಟಾ ಹೊಡೆದಿದ್ದಾರೆ. 2028ರ ಚುನಾವಣೆಯ ಸಮಯಕ್ಕೆ ನಾನು ಯಾವುದೇ ಹುದ್ದೆಯಲ್ಲಿದ್ದರೂ ನನ್ನ ಕರ್ತವ್ಯ ಪಕ್ಷವನ್ನ ಮುನ್ನಡೆಸುವುದು. ನಾನು ಏನೇ ಆಗಬಹುದು ಅದು ಮುಖ್ಯವಲ್ಲ, ಪಕ್ಷ ಶಕ್ತಿ ಕೊಟ್ಟಿದೆ ಎಂಬ ಮಾತನ್ನ ಡಿ.ಕೆ ಶಿವಕುಮಾರ್ ಆಡಿದ್ದಾರೆ.
ಪಕ್ಷ ನನಗೆ ಸಾಕಷ್ಟು ಶಕ್ತಿ ಕೊಟ್ಟಿದೆ
ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷ ಮುನ್ನಡೆಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಸ್ಥಾನ ಮಾನಗಳು ಪಕ್ಷ ಮುನ್ನಡೆಸಲು ಸಹಾಯ ಮಾಡುವುದಿಲ್ಲ. ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ಪಕ್ಷ ಮುನ್ನಡೆಸಲು ಮುಖ್ಯ. ಮುಂದೆ ಎಕ್ಸ್, ವೈ, ಝಡ್ ಯಾವುದೇ ಆಗಿರಲಿ ಅದು ಮುಖ್ಯ ಅಲ್ಲ. ಪಕ್ಷ ನನಗೆ ಸಾಕಷ್ಟು ಶಕ್ತಿ ಕೊಟ್ಟಿದೆ.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ರಾಜಕೀಯದಲ್ಲಿ 1 ರಾತ್ರಿಯಲ್ಲಿ ಏನಾದ್ರೂ ಆಗ್ಬಹುದು ಎಂದ ಡಿಕೆ
ನಾಯಕತ್ವದ ಬಗ್ಗೆ ಮಾತನಾಡುತ್ತಾ ಡಿ.ಕೆ. ಶಿವಕುಮಾರ್ ರಾಜಕೀಯದ ರಂಗಿನಾಟಗಳ ಬಗ್ಗೆ ವಿವರಿಸಿದ್ದಾರೆ. ರಾಜಕೀಯದಲ್ಲಿ ಒಂದು ರಾತ್ರಿಯಲ್ಲಿ ಏನ್ ಬೇಕಾದ್ರೂ ಆಗಬಹುದು ಎಂಬ ಮಾರ್ಮಿಕ ಮಾತುಗಳನ್ನ ಆಡಿ ಕೌತುಕ ಹುಟ್ಟಿಸಿದ್ದಾರೆ.
ಇದನ್ನೂ ಓದಿ:Maha Kumbh ಮುಕ್ತಾಯಕ್ಕೆ ಒಂದೇ ದಿನ ಬಾಕಿ, ಸೆಲೆಬ್ರಿಟಿಗಳ ಪುಣ್ಯಸ್ನಾನ.. ಶಿವರಾತ್ರಿಗೆ 2 ಕೋಟಿ ಜನ ಬರುವ ನಿರೀಕ್ಷೆ
ಇವತ್ತು ದೆಹಲಿಯಾತ್ರೆ ಮಾಡಲಿರೋ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುಸ್ತಿಯ ಮಧ್ಯೆ ಇವತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಾತ್ರೆ ಕೈಗೊಂಡಿದ್ದಾರೆ. ಇಂದು ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯೊಂದಿಗೆ ಡಿ.ಕೆ. ಶಿವಕುಮಾರ್ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ. ಪರಮೇಶ್ವರ್ ಅವಧಿಯಲ್ಲಿ ನೇಮಕವಾದ ಪದಾಧಿಕಾರಿಗಳಿಗೆ ಕೊಕ್ ಕೊಡಲು ಸಜ್ಜಾಗಿದ್ದಾರೆ. 300 ಮಂದಿ ಪಟ್ಟಿಯೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನ ಭೇಟಿ ಮಾಡಲಿದ್ದಾರೆ.
ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಆದ್ಯತೆ ನೀಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಕಾಂಗ್ರೆಸ್ನೊಳಗಿನ ಮುಸುಕಿನ ಗುದ್ದಾಟ ಮತ್ತಷ್ಟು ತೀವ್ರಗೊಳ್ಳೋದಂತೂ ಪಕ್ಕಾ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ