Advertisment

ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ! ಬೂರೆ ರೂಪದಲ್ಲಿ ಬರುವ ನಮ್ಮ ಬಲ್ಲಾಳ ಬಲೀಂದ್ರ..!

author-image
Ganesh
Updated On
ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ! ಬೂರೆ ರೂಪದಲ್ಲಿ ಬರುವ ನಮ್ಮ ಬಲ್ಲಾಳ ಬಲೀಂದ್ರ..!
Advertisment
  • ದೀಪಾವಳಿ ದಿನ ನಡೆಯುವ ಕಳ್ಳಾಟದ ಬಗ್ಗೆ ನಿಮಗೆ ಗೊತ್ತಾ?
  • ಅರಿಶಿಣ ಎಣ್ಣೆಯ ಜೊತೆ ಅಭ್ಯಂಜನ ಮಾಡುವುದು ಯಾವಾಗ?
  • ಸಿಂಗಾರ, ಹಣ್ಣು, ಅಡಿಕೆ, ಭತ್ತದ ಹೊಡೆ ಬಲೀಂದ್ರನಿಗೆ ಅಚ್ಚುಮೆಚ್ಚು

‘‘ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ, ಸುವ್ವಲಾಲೇ, ಭತ್ತುಟ್ಟಿ ಭತ್ತವೇ ಹೊಸ ಫಲ’’ಎಂಬ ದೀಪಾವಳಿ ಹಬ್ಬದ ಸಾಲುಗಳು ಮಲೆನಾಡಿನ ರೈತರ ಮನೆಗಳಲ್ಲಿ ಗುನುಗುತ್ತಿವೆ. ಹಬ್ಬ ಎಂದರೆ ದೊಡ್ಡ ಹಬ್ಬ. ಅದುವೇ ದೀಪಾವಳಿ! ಕರ್ನಾಟಕದ ಬಹುತೇಕ ಭಾಗಗಳಲ್ಲಿ ದೀಪಾವಳಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಮೂರನೇ ದಿನ ಬಲಿಪಾಡ್ಯಮಿ. ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವೇ ದೀಪಾವಳಿ!

Advertisment

ಇಂದು ಬೂರೆ

ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬದಲ್ಲಿ ಬೂರೆ ಪೂಜೆಗೆ ವಿಶೇಷ ಮಹತ್ವ ಇದೆ. ದೀಪಾವಳಿ ಅಂದರೆ ಗೋವಿನ ಹಬ್ಬ. ಸಂಭ್ರಮ ಶುರುವಾಗುವುದೇ ಗೋವುಗಳಿಗೆ ಗಂಟೆ ಕಟ್ಟುವ ಮೂಲಕ. ದೀಪಾವಳಿಗೆ 7 ದಿನ ಬಾಕಿ ಇರುವಾಗ ಮನೆಗೆ ಗಂಗೆಯನ್ನು ತರಲಾಗುತ್ತದೆ. ಮನೆಗೆ ಗಂಗಾ ಮಾತೆ ಬಂದ ನಂತರ ಗೋವುಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಕೊನೆಗೆ ಮನೆಯ ಅಟ್ಟದ ಮೇಲೆ ಇಟ್ಟಿರುವ ಹುರಿಗೆಜ್ಜೆ, ಗಂಟೆ, ಲೊಟಗಗಳನ್ನು ತೆಗೆದು ಅಲಂಕಾರಗಳೊಂದಿಗೆ ಗೋವುಗಳಿಗೆ ಕಟ್ಟಲಾಗುತ್ತದೆ. ಅಲ್ಲಿಂದ ದೀಪಾವಳಿಗೆ ನಾಂದಿ ಬೀಳುತ್ತದೆ.

ಇದನ್ನೂ ಓದಿ:ಶ್ರೀರಾಮನ ಊರಿನಲ್ಲಿ ದೀಪಾವಳಿ ಗತವೈಭವ! ಅಯೋಧ್ಯೆಯ ಅದ್ಭುತ ಕ್ಷಣಗಳ ಫೋಟೋಗಳು..!

publive-image

ಹುಲ್ಲು ಬೂರೆ

ಹೀಗೆ ಆರಂಭವಾಗುವ ದೀಪಾವಳಿ, ಪ್ರತಿ ನಿತ್ಯವೂ ಒಂದೊಂದು ಆಚರಣೆಯಲ್ಲಿ ಮುಳುಗಿರುತ್ತದೆ. ಗಂಗೆ ಪೂಜೆಯ ಮಾರನೆಯ ದಿನ ಹುಲ್ಲು ಬೂರೆ ಆಚರಿಸುತ್ತಾರೆ. ಸಾಮಾನ್ಯವಾಗಿ ದನ, ಕರುಗಳನ್ನು ಮೇಯಿಸಲು ಬೇಣ ಅಥವಾ ಗುಡ್ಡಗಳಿಗೆ ಬಿಡಲಾಗುತ್ತದೆ. ಅಲ್ಲಿ ಬೆಳೆದಿರುವ ಹುಲ್ಲುಗಳನ್ನು ಕತ್ತರಿಸಿ ಅವುಗಳಿಂದ ಚೌವ್ಲಗಳನ್ನು ಮಾಡಿ ಗೋವುಗಳಿಗೆ ಕಟ್ಟಿ ಬೆಚ್ಚುತ್ತಾರೆ.

Advertisment

ಮಣ್ಣು ಬೂರೆ..

ಮಣ್ಣು ಬೂರೆ. ಇಲ್ಲಿ ರೈತರು, ಭೂಮಿ ತಾಯಿಯನ್ನೂ ಪೂಜೆ ಮಾಡುತ್ತಾರೆ. ವಿಶೇಷ ಸೇಡಿ ಮಣ್ಣುನ್ನ ತನ್ನ ಹೊಲಗಳಿಗೆ ಸ್ಪರ್ಷಿಸಲಾಗುತ್ತದೆ. ಗೋವುಗಳನ್ನು ಕಟ್ಟಿಹಾಕುವ ಜಾಗ ಕೊಟ್ಟಿಗೆಯನ್ನು ಹೊಸ ಮಣ್ಣುಗಳಿಂದ ಅಲಂಕಾರ ಮಾಡಲಾಗುತ್ತದೆ. ಸಗಣಿ ತೆಗೆದು ಕೊಟ್ಟಿಗೆಗೆ ಹೊಸ ಮಣ್ಣುಗಳನ್ನು ಹಾಕುತ್ತ ಮಣ್ಣು ಬೂರ್ಯೋ.. ಎಂದು ಕೂಗುತ್ತಾರೆ. ಕೊಟ್ಟಿಗೆಗೆ ಹೊಸ ಮೆಟ್ಟಿಲು, ಬಾಗಿಲು ಮಾಡಿ ಸಿಂಗರಿಸುತ್ತಾರೆ. ನಂತರ ಸೇಡಿ ಮಣ್ಣು, ಕೆಮ್ಮಣ್ಣಿನಿಂದ ಕೊಟ್ಟಿಗೆ ಸುತ್ತ ಹಸೆಗಳನ್ನು ಬರೆಯುತ್ತಾರೆ. ಈ ಹಸೆಯಲ್ಲಿ ಗೋವುಗಳ ಹೆಜ್ಜೆಗೆ ವಿಶೇಷ ಮಹತ್ವ ಇದೆ.

publive-image

ಕಳ್ ಬೂರೆ..!

ನರಕಚತುರ್ದಶಿಯ ಹಿಂದಿನ ದಿನ ಈ ಆಚರಣೆ ನಡೆಯುತ್ತದೆ. ಹಬ್ಬದ ಸಂಭ್ರಮ, ಸಡಗರ, ಕೆಲಸಗಳಲ್ಲಿ ಮುಳುಗಿರುವ ಹೊತ್ತಿನಲ್ಲಿ ತಮಾಷೆ ಮಾಡುವ ಒಂದು ಸಂಪ್ರದಾಯ. ಅಕ್ಕ-ಪಕ್ಕದ ಮನೆಯ ತೋಟದಲ್ಲಿರುವ ಸಿಂಗಾರ, ತರಕಾರಿ, ಹೂವು, ಎಳೆನೀರನ್ನು ರಾತ್ರಿ ವೇಳೆ ಕದ್ದು ತರುವುದು. ಇನ್ನೊಬ್ಬರ ಮನೆಗೆ ಹೋಗಿ ಅಲ್ಲಿರುವ ವಸ್ತುಗಳನ್ನು ಬಚ್ಚಿಟ್ಟು ಬರುವುದು, ಇತ್ಯಾದಿ! ಅಂದರೆ ಕಳ್ಳತನ ಮಾಡಿ ತರಕಾರಿ, ಹಣ್ಣು, ಫಲಗಳನ್ನು ತಿನ್ನುವುದು ಇಲ್ಲಿ ಮೋಜಿಗೆ ಅಷ್ಟೇ. ಅಂದು ಕಳ್ಳತನ ಮಾಡಿದರೆ ಯಾವುದೇ ಶಾಪ ತಟ್ಟಲ್ಲ ಅನ್ನೋ ನಂಬಿಕೆ ಕೂಡ ಇದೆ. ಇದು ತಮಾಷೆಯಾಗಿ ನಡೆಯುತ್ತದೆ. ಆ ದಿನ ಹಣ್ಣು, ಹಂಪಲು, ತರಕಾರಿ ಕಾಣೆಯಾದರೆ ಬಾನಗಡಿ ಮಾಡಲ್ಲ. ಸುಮ್ಮನಾಗುತ್ತಾರೆ.

ಇದನ್ನೂ ಓದಿ:ದೀಪಾವಳಿ ಆಫರ್​; ಬರೀ 699 ರೂಪಾಯಿಗೆಗೆ ಸಿಗುತ್ತಿದೆ ಇವೆರಡು ಫೋನ್​!

publive-image

ಈ ರೀತಿಯ ಚಿಕ್ಕ ಚಿಕ್ಕ ಬೂರೆಗಳು ಮುಗಿದ ನಂತರ ಬುರುವುದೇ ದೊಡ್ಡ ಬೂರೆ. ಅದುವೇ ಬಲೀಂದ್ರ ಹಬ್ಬ. ಬಲೀಂದ್ರ ಬರುವುದಕ್ಕೂ ಮೊದಲು ನಿನ್ನೆಯ ದಿನ ಕೊಟ್ಟೆಗೆಯಲ್ಲಿರುವ ಹೆಣ್ಣು ಗೋವಿನ ಆರಾಧನೆ ನಡೆಯುತ್ತದೆ. ಗೋವುಗಳಿಗೆ ಹೊಸ ಪುಂಡಿ ನಾರುಗಳಿಂದ ಮಾಡಿದ ದಾಬುಗಳನ್ನು ಹಾಕಲಾಗುತ್ತದೆ. ಮಧ್ಯರಾತ್ರಿ ಎದ್ದು, ಗೋವುಗಳಿಗೆ ಅರಿಶಿಣ-ಕುಂಕುಮ ಹಚ್ಚಿ ಆರತಿ ಬೆಳಗಿ ಹೊಸ ದಾಬುಗಳನ್ನ ಹಾಕಲಾಗುತ್ತದೆ.

Advertisment

ಅರಿಶಿಣ ಎಣ್ಣೆಯ ಸ್ನಾನ

ನಂತರ ಬಲೀಂದ್ರನ ತರುವ ಸಡಗರ ಮೇಳೈಯಿಸುತ್ತದೆ. ಬೂರೆ ನೀರು ತುಂಬುವ ಶಾಸ್ತ್ರ. ಬೂರೆ ನೀರಿನ ಮೂಲಕ ಬಲೀಂದ್ರ ಬರುತ್ತಾನೆ ಅನ್ನೋದು ನಂಬಿಕೆ. ಈ ಬೂರೆಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಕೆಲವು ಕಡೆಗಳಲ್ಲಿ ಊರವರೆಲ್ಲ ಒಟ್ಟಿಗೆ ಸೇರಿ ನೀರು ತುಂಬಿದರೆ, ಇನ್ನು ಕೆಲವು ಭಾಗದಲ್ಲಿ ಪ್ರತ್ಯೇಕವಾಗಿ ನೀರಿನ ಮೂಲಗಳಿಗೆ ಹೋಗಿ ತರುತ್ತಾರೆ. ಈ ಬಲೀಂದ್ರನ ಜೊತೆಗೆ ಪವಿತ್ರವಾದ ನೀರು ಕೂಡ ಮನೆಯನ್ನು ಪ್ರವೇಶಿಸುತ್ತದೆ. ಆ ಬೆನ್ನಲ್ಲೇ ಪುರುಷರು ಅರಿಶಿಣ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಅಭ್ಯಂಜನ (ಸ್ನಾನ) ಮಾಡುತ್ತಾರೆ.

publive-image

ಜಲಮೂಲದಿಂದ ಬಂದ ಬಲೀಂದ್ರ ನೇರವಾಗಿ ತುಳಸಿಕಟ್ಟೆಗೆ ಹೋಗುತ್ತಾನೆ. ಅಲ್ಲಿ ಆತನ ಆರಾಧಾನೆ ನಡೆಯುತ್ತದೆ. ನಂತರ ಮನೆಯೊಳಗೆ ಪ್ರವೇಶ ಮಾಡುತ್ತಾನೆ. ಮನೆಯೊಳಗೆ ಬಂದ ಬಲೀಂದ್ರ ಮೂರು ದಿನಗಳ ಅಲ್ಲೇ ಇರುತ್ತಾನೆ. ಬಲಿಪಾಡ್ಯದ ದಿನ ಗೋಪೂಜೆಯಲ್ಲಿ ಆತನ ವಿಸರ್ಜನೆ ಮಾಡಲಾಗುತ್ತದೆ. ವಿಶೇಷ ಅಂದರೆ ಮೂರು ದಿನಗಳ ಕಾಲ ಮನೆಯಲ್ಲಿರುವ ಬಲೀಂದ್ರನಿಗೆ ಮೂರು ಹೊತ್ತು ಹೊಸ ಹೊಸ ಅಡುಗೆ ಖಾದ್ಯಗಳನ್ನು ಮಾಡಿ ಎಡೆಗೆ ಬಡಿಸಲಾಗುತ್ತದೆ.

ಇದನ್ನೂ ಓದಿ:VIDEO: ಚಹಾ ಮಾಡುತ್ತಿದ್ದ ಮಾವನಿಗೆ ದೈಹಿಕವಾಗಿ ಹಲ್ಲೆ ಮಾಡಿದ ಬಿಜೆಪಿ ಮಹಿಳಾ ನಾಯಕಿ

Advertisment

ಇನ್ನು, ಮನೆಗೆ ಬಲೀಂದ್ರ ಬರುವುದರ ಹಿಂದೆ ಪುರಾಣ ಕತೆ ಇದೆ. ಅದರಂತೆ ನಡೆಯುವ ಆಚರಣೆಯು ದೀಪಾವಳಿ ಹಬ್ಬದ ಸಂಭ್ರಮವನ್ನು ನೂರು ಪಟ್ಟು ಇಮ್ಮಡಿಗೊಳಿಸುತ್ತದೆ. ಬಲೀಂದ್ರ ನಾಡಿಗೆ ಬಂದಾಗ ಎಲ್ಲವೂ ಹೊಸ ಫಲ ಆಗಿರುತ್ತದೆ. ಬಲೀಂದ್ರನಿಗೆ ಹಣ್ಣು ಅಡಿಕೆ, ಸೌತೆಕಾಯಿ ಕಡುಬು, ಭತ್ತ, ಅಡಿಕೆ ಸಿಂಗಾರ, ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ. ಅಂದರೆ ಅವೆಲ್ಲವೂ ಕೂಡ ಹೊಸ ಫಲವೇ. ಈಗಷ್ಟೇ ಫಸಲಿಗೆ ಬಂದಿರುವ ಫಲವನ್ನು ಬಲೀಂದ್ರನಿಗೆ ಮೊದಲು ನೀಡಿ ನಂತರ ರೈತರು ಬಳಸಿಕೊಳ್ಳುತ್ತಾರೆ. ಅದೆಷ್ಟೋ ಮಲೆನಾಡಿನ ರೈತರು ಹಬ್ಬಕ್ಕೂ ಮೊದಲೇ ಫಸಲು ಬಂದರೆ ಅವುಗಳನ್ನ ಜೋಪಾನ ಮಾಡಿ ಬಲೀಂದ್ರನಿಗಾಗಿ ಕಾದಿಟ್ಟು, ಆತನಿಗೆ ಅರ್ಪಣೆ ಮಾಡಿದ ಮೇಲಷ್ಟೇ ತಾವು ಸ್ವೀಕರಿಸುವ ವಾಡಿಕೆ ಇಂದಿಗೂ ಇದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment