ಇಲ್ಲಿ ಉಸಿರಾಡುವ ಗಾಳಿಯೂ ವಿಷ; ಶಾಲೆಗಳಿಗಂತೂ ಬೀಗ; ಈ ಸೇವೆಗಳು ಕೂಡ ಬಂದ್​

author-image
Ganesh Nachikethu
Updated On
Air pollution: ಬೆಂಗಳೂರಲ್ಲಿ ಹೆಚ್ಚಾದ ಕಲುಷಿತ ಗಾಳಿ.. ಸಿಟಿಯ ಈ ಏರಿಯಾಗಳಲ್ಲಿ ಮಾಸ್ಕ್​ ಧರಿಸಲೇಬೇಕು
Advertisment
  • ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ದಿನೇ ದಿನೇ ವಿಷಮ
  • ಜನರ ಆಯುಷ್ಯದ ವ್ಯವಕಲನ ಮಾಡ್ತಿರುವ ಕಳಪೆ ವಾಯು
  • ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ 484 ದಾಖಲು

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ದಿನೇ ದಿನೇ ವಿಷಮಯವಾಗುತ್ತಿದೆ. ಕಳಪೆ ಗುಣಮಟ್ಟದ ವಾಯು ಜನರ ಆಯುಷ್ಯದ ವ್ಯವಕಲನ ಮಾಡ್ತಿದೆ. ಗೋಚರತೆಯ ಮಟ್ಟವೇ ಕುಸಿದಿದ್ದು ಜನಜೀವನದಲ್ಲಿ ವ್ಯತ್ಯವಾಗಿದೆ. ಕೆಲ ರೋಗಿಗಳ ಪಾಡಂತೂ ಚಿಂತಾಜನಕವಾಗಿದ್ದು ಬೇರೆ ಕಡೆ ವಲಸೆ ಹೋಗುವಂತೆ ಖುದ್ದು ವೈದ್ಯರೇ ಸಲಹೆ ನೀಡುತ್ತಿದ್ದಾರೆ.

ಪರಿಸ್ಥಿತಿ ಗ್ಯಾಸ್​ ಚೇಂಬರ್​ನಂತಾಗಿದೆ. ದೇವರು ಕೊಟ್ಟಿರುವ ಶುದ್ದ ಗಾಳಿ ಕೂಡ ಉಸಿರಾಡದಂತಾಗಿದೆ. ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹಾಗೂ ಕಪ್ಪುಹೊಗೆ ಆವರಿಸಿದ್ದು ಜನರನ್ನ ಆತಂಕಕ್ಕೆ ತಳ್ಳಿದೆ. ಹಗಲೊತ್ತು ಹೊರಬರೋಕೂ ಜನರು ಭಯಪಡುವಂತಾಗಿದೆ.

ಕುಸಿದ ಗೋಚರತೆಯ ಮಟ್ಟ, ವಿಮಾನ ಹಾರಾಟ ವ್ಯತ್ಯಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳಪೆ ಗುಣಮಟ್ಟದ ವಾಯು ಪರಿಸ್ಥಿತಿ ಮುಂದುವರಿದಿದೆ. ವಾಯು ಗುಣಮಟ್ಟ ಸೂಚ್ಯಂಕ 484 ದಾಖಲಾಗಿದೆ. ಗೋಚರತೆಯ ಮಟ್ಟ ಕುಸಿದ ಪರಿಣಾಮ ಭಾರೀ ಅವಘಡಗಳು ಸಂಭವಿಸುತ್ತಿವೆ. ಸ್ಮಾಗ್ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ್ದ ಮಟ್ಟಕ್ಕಿಂತ 60 ಪಟ್ಟು ಕಳಪೆಯಾಗಿದೆ. ಗೋಚರತೆಯ ಮಟ್ಟ ಕುಸಿದಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ.

160 ವಿಮಾನ ಸಂಚಾರದಲ್ಲಿ ಭಾರೀ ವಿಳಂಬ

ದೆಹಲಿ ಏರ್​ಪೋರ್ಟ್​ನಲ್ಲಿ 160 ವಿಮಾನಗಳ ಸಂಚಾರದಲ್ಲಿ ಭಾರಿ ವಿಳಂಬವಾಗಿದೆ. ಟೇಕಾಫ್ ಆಗುವ 118, ಆಗಮಿಸುವ 43 ವಿಮಾನಗಳ ಸಂಚಾರದಲ್ಲಿ ವ್ಯತ್ಯವಾಗಿದೆ. ಗೋಚರತೆಯ ಮಟ್ಟ 50 ಮೀಟರ್ ಗಿಂತ ಕಡಿಮೆ ಇರುವುದರಿಂದ ವಿಮಾನಗಳ ಲ್ಯಾಂಡಿಂಗ್, ಟೇಕಾಫ್‌ಗೆ ಸಮಸ್ಯೆಯಾಗಿದೆ. ಸೋಮವಾರ ಬೆಳಿಗ್ಗೆ 7 ವಿಮಾನಗಳ ಸಂಚಾರ ರದ್ದಾಗಿದ್ರೆ ನವದೆಹಲಿ, ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಬರುವ ರೈಲುಗಳ ಸಂಚಾರದಲ್ಲೂ ವಿಳಂಬವಾಗಿದೆ. 2 ರಿಂದ 9 ಗಂಟೆಯವರೆಗೂ ರೈಲು ಸಂಚಾರದಲ್ಲಿ ವಿಳಂಬವಾಗುತ್ತಿದೆ.

ವಿಷವಾಯವಾದ ವಾಯು!

ವಾಯುಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದಂತೆ ಆಪ್​ ಸರ್ಕಾರ ಹಲವು ಕ್ರಮ ಕೈಗೊಳ್ತಿದ್ದು ನಾಲ್ಕನೇ ಹಂತದ ರೆಸ್ಪಾನ್ಸ್ ಆಕ್ಷ್ಯನ್ ಪ್ಲ್ಯಾನ್ ಜಾರಿ ಮಾಡಿದೆ. ದೆಹಲಿಯ ಅನೇಕ ಪ್ರದೇಶಗಳಲ್ಲಿ 485ಕ್ಕೆ ವಾಯುವಿನ ಗುಣಮಟ್ಟ ಕುಸಿದಿದೆ. ಸ್ಮಾಗ್, ಗೋಚರತೆಯ ಮಟ್ಟ ಕುಸಿತದಿಂದ ಜನರಿಗೆ ಹತ್ತಾರು ಸಂಕಷ್ಟ ಶುರುವಾಗಿವೆ. ಕಳಪೆ ಗಾಳಿ ಸೇವನೆಯಿಂದ ಜನರ ಆಯುಷ್ಯ ಕುಸಿಯಲಿದೆ ಅನ್ನೋ ವಿಚಾರ ಈಗಾಗಲೇ ಜನರನ್ನು ಬೆಚ್ಚಿ ಬೀಳಿಸಿದೆ. ದೆಹಲಿಯ ಕಳಪೆ ಗಾಳಿ ಸೇವನೆಯಿಂದ ಜನರ ಆಯುಷ್ಯದಲ್ಲಿ 7-8 ವರ್ಷ ಕುಸಿತದ ಅಂದಾಜು ಮಾಡಲಾಗಿದೆ. ಉಸಿರಾಟದ ಸಮಸ್ಯೆ ಇರುವವರಿಗೆ ಉತ್ತಮ ಗಾಳಿ ಗುಣಮಟ್ಟ ಇರುವ ಪ್ರದೇಶಕ್ಕೆ ಹೋಗಲು ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ ಉಸಿರಾಟದ ಸಮಸ್ಯೆ ಇರುವ ಜನರು, ರೋಗಿಗಳು ಉತ್ತರಾಖಂಡ್, ಹಿಮಾಚಲ ಪ್ರದೇಶ, ಗೋವಾದ ಹಾದಿ ಹಿಡಿದಿದ್ದಾರೆ.

ಶಿಕ್ಷಣ ಸಂಸ್ಥೆಗಳು ಬಂದ್‌.. ಆನ್‌ಲೈನ್ ಕ್ಲಾಸ್ ಕಡ್ಡಾಯ!

ಎನ್‌ಸಿಆರ್‌ನಲ್ಲಿ ಮಾಲಿನ್ಯವು ತೀವ್ರ ಮಟ್ಟ ತಲುಪಿದ ಹಿನ್ನೆಲೆ ತುರ್ತು ಪರಿಸ್ಥಿತಿ ಹೊರಡಿಸಲಾಗಿದೆ. ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ 4ರ ನಿಬಂಧನೆಗಳು ಜಾರಿಗೆ ಬಂದಿವೆ. ಇನ್ನಷ್ಟು ಕಠಿಣ ನಿಯಮಗಳು ಜಾರಿಗೆ ಬಂದಿದ್ದು ದೆಹಲಿ ಎನ್‌ಸಿಆರ್‌ ಪ್ರದೇಶಕ್ಕೆ ಟ್ರಕ್‌ಗಳ ಪ್ರವೇಶ ನಿರ್ಬಂಧಿಸಲಾಗಿದೆ. 6 ರಿಂದ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯಲಿವೆ. ಕನಿಷ್ಠ 10-15 ದಿನಗಳ ಕಾಲ ಶಾಲೆಗಳು ಮುಚ್ಚಲಿವೆ. ಪರಿಸ್ಥಿತಿ ನೋಡಿಕೊಂಡು ಸಿಎಂ ಅತಿಶಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಒಟ್ಟಾರೆ ಮಿತಿ ಮೀರಿದ ವಾಯು ಮಾಲಿನ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಸಿರಾಡುವ ವಾಯುವೇ ವಿಷವಾಗಿ ಪರಿಣಮಿಸಿದೆ. ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳದಿದ್ರೂ ಯಾವುದೇ ಪ್ರಯೋಜನವಾಗ್ತಿಲ್ಲ. ಸ್ವಯಂ ಪ್ರೇರಿತವಾಗಿ ಜನರೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸುವ ಮೂಲಕ ಇದನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ.

ಇದನ್ನೂ ಓದಿ: IPL 2025: ಆರ್​​ಸಿಬಿ ತಂಡಕ್ಕೆ ಪವರ್​ ಹಿಟ್ಟರ್​ ಎಂಟ್ರಿ; ಬೆಂಗಳೂರಿಗೆ ಬಂತು ಆನೆಬಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment