/newsfirstlive-kannada/media/post_attachments/wp-content/uploads/2025/02/Delhi-CM-Rekha-Gupta-2.jpg)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಮ್‌ಲೀಲಾ ಮೈದಾನದಲ್ಲಿ ಸಿಎಂ ರೇಖಾ ಗುಪ್ತ ಅವರ ಪದಗ್ರಹಣ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಸಿಎಂ ಜೊತೆ 6 ಹಿರಿಯ ಶಾಸಕರು ಇಂದೇ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ್ದಾರೆ.
ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ರೇಖಾ ಗುಪ್ತ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರೇಖಾ ಗುಪ್ತ ಅವರ ಪಟ್ಟಾಭಿಷೇಕದೊಂದಿಗೆ 27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿಯ ದರ್ಬಾರ್ ಆರಂಭವಾಗಿದೆ.
ನೂತನ ಸಿಎಂ ರೇಖಾ ಗುಪ್ತ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರ, ರಾಜಸ್ಥಾನ ಸಿಎಂಗಳು ಭಾಗಿಯಾಗಿದ್ದರು. NDA ಮಿತ್ರ ಪಕ್ಷಗಳ ಅತಿರಥ ನಾಯಕರು ಹಾಜರಿದ್ದರು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್, ಬಿಜೆಪಿಯ ದಿಗ್ಗಜ ನಾಯಕರು ನೂತನ ಸಿಎಂ ರೇಖಾ ಗುಪ್ತ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯಮಂತ್ರಿ ರೇಖಾ ಗುಪ್ತ ಅವರೊಂದಿಗೆ ಪರ್ವೇಶ್ ವರ್ಮಾ, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು.
ಇದನ್ನೂ ಓದಿ: ಬಿಜೆಪಿ ಮತ್ತೆ ಅಚ್ಚರಿ! ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಯಾರು?
ಬಿಜೆಪಿ ಹೈಕಮಾಂಡ್ ದೆಹಲಿ ಸಿಎಂ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಿದೆ. ಇದೇ ವೇಳೆ ಮಾತನಾಡಿರುವ ರೇಖಾ ಗುಪ್ತ ಅವರು ದೆಹಲಿ ಮಹಿಳಾ ಮತದಾರರಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಅಂದೇ ಮಹಿಳೆಯರಿಗೆ ಪ್ರತಿತಿಂಗಳು 2500 ರೂಪಾಯಿ ಧನಸಹಾಯ ನೀಡುವ ಯೋಜನೆಗೆ ಚಾಲನೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ