/newsfirstlive-kannada/media/post_attachments/wp-content/uploads/2025/02/RAHUL_MODI.jpg)
ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಶುರುವಾಗಿದೆ. ಚಳಿಯ ನಡುವೆಯೇ ಜನರು ಮತಗಟ್ಟೆಗೆ ಹಕ್ಕು ಚಲಾಯಿಸಲು ಆಗಮಿಸುತ್ತಿದ್ದಾರೆ. ದೆಹಲಿಯ ಎಲ್ಲಾ 70 ಸ್ಥಾನಗಳಿಗೂ ಮತದಾನ ನಡೆಯುತ್ತಿದ್ದು, ಸುಮಾರು ಒಂದೂವರೆ ಕೋಟಿ ಮತದಾರರು ಮತ ಚಲಾಯಿಸಲು ಮುಂದಾಗಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬರಲಿದೆ.
ಹಿಂದೆಂದೂ ಕಾಣದ ಜಿದ್ದಾ ಜಿದ್ದಿನ ಕುರುಕ್ಷೇತ್ರವಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭೆಗೆ ಇವತ್ತು ಮತದಾನ ನಡೆಯುತ್ತಿದೆ. ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದ್ದು ಗೆಲುವು ತಮ್ಮದೇ ಅಂತ ರಣಕಲಿಗಳು ಅಖಾಡಕ್ಕಿಳಿದಿದ್ದಾರೆ. ಇವರೆಲ್ಲರ ರಾಜಕೀಯ ಭವಿಷ್ಯವನ್ನು ಇಂದು ಮತದಾರ ಬರೆಯಲಿದ್ದಾನೆ.
ಮತದಾರ ಪ್ರಭುಗಳ ಮಾರ್ಕ್ಸ್ ಯಾರಿಗೆ?
ದೆಹಲಿ ಗದ್ದುಗೆಗಾಗಿ ಮತ್ತೊಮ್ಮೆ ಮಹಾಯುದ್ಧ ನಡೆಯುತ್ತಿದೆ. ಅಧಿಕಾರ ಉಳಿಸಿಕೊಂಡು ಇತಿಹಾಸ ಸೃಷ್ಟಿಸಲು ಆಪ್ ರಣತಂತ್ರ ಹೆಣೆದಿದ್ರೆ 10 ವರ್ಷಗಳ ಬಳಿಕ ಮತ್ತೆ ಸಿಎಂ ಗಾದಿಗೇರಲು ಕೈ ಪಡೆ ಹವಣಿಸ್ತಿದೆ. ಇತ್ತ 30 ವರ್ಷಗಳ ಬಳಿಕ ದೆಹಲಿ ಚುಕ್ಕಾಣಿ ಹಿಡಿಯಲು ಕೇಸರಿ ಪಾಳಯ ಕಸರತ್ತು ನಡೆಸ್ತಿದೆ. ಈಗಾಗಲೇ ಮೂರು ಪಕ್ಷಗಳು ಎಲ್ಲಾ ರೀತಿಯ ಪ್ರಚಾರ ಮುಗಿಸಿದ್ದು ಇವರೆಲ್ಲರ ಸರ್ಕಸ್, ಪ್ರಯತ್ನಗಳಿಗೆ ಇಂದು ಮತದಾರ ಪ್ರಭು ಮಾರ್ಕ್ಸ್ ಕೊಡಲಿದ್ದಾನೆ.
ದೆಹಲಿ ಕಣದಲ್ಲಿ 70 ಕ್ಷೇತ್ರಗಳಲ್ಲಿ 699 ಅಭ್ಯರ್ಥಿಗಳು ಸ್ಪರ್ಧೆ
ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಶುರುವಾಗಿದೆ. ರಾಷ್ಟ್ರರಾಜಧಾನಿಯ ಮತದಾನ ಪ್ರಭುಗಳು ಬೆಳಗ್ಗೆ 6 ಗಂಟೆಯಿಂದಲೇ ಮತಗಟ್ಟೆಗಳತ್ತ ಮತ ಚಲಾಯಿಸೋದಕ್ಕೆ ಮುಖ ಮಾಡ್ತಿದ್ದಾರೆ. ದೆಹಲಿಯ ಎಲ್ಲಾ 70 ಸ್ಥಾನಗಳಿಗೂ ಬೆಳಿಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ದೆಹಲಿಯ 1 ಕೋಟಿ 55 ಲಕ್ಷ ಮತದಾರರು ಕಣದಲ್ಲಿರುವ 699 ಅಭ್ಯರ್ಥಿಗಳ ಹಣೆಬರಹ ಬರೆಯುತ್ತಿದ್ದಾರೆ.
ಭದ್ರತೆಗೆ 30 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ
ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಚುನಾವಣೆಯನ್ನ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಸಕಲ ರೀತಿಯಲ್ಲಿ ತಯಾರಿ ನಡೆಸಿದೆ. 13,766 ಮತಗಟ್ಟೆಗಳಲ್ಲಿ 83.76 ಲಕ್ಷ ಪುರುಷರು, 72.36 ಲಕ್ಷ ಮಹಿಳೆಯರು ಮತ್ತು 1,267 ತೃತೀಯ ಲಿಂಗ ಮತದಾರರು ಮತ ಚಲಾಯಿಸಲಿದ್ದಾರೆ. ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದ್ದು 150 ಪ್ಯಾರಾ ಮಿಲಿಟರಿ ಪಡೆ ಸೇರಿದಂತೆ, ದೆಹಲಿಯ ತುಂಬಾ 30 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:ಖಾಲಿ ಇರೋ 2.5 ಲಕ್ಷ ಹುದ್ದೆಗಳ ನೇಮಕಾತಿಗೆ ಸರ್ಕಾರ ನಿರ್ಧಾರ; ಪದವೀಧರರಿಗೆ ಭರ್ಜರಿ ಗುಡ್ನ್ಯೂಸ್
ದೆಹಲಿ ಸಿಎಂ ಹಾಗೂ ಮಾಜಿ ಸಿಎಂ ವಿರುದ್ಧ ಎಫ್‌ಐಆರ್
ಸೋಮವಾರ ಸಂಜೆ ನೀತಿ ಸಂಹಿತೆ ಅವಧಿ ಮೀರಿದರೂ ಗೋವಿಂದಪುರಿ ಪ್ರದೇಶದಲ್ಲಿ ಆತಿಷಿ ಬೆಂಬಲಿಗರು ಬಹಿರಂಗ ಪ್ರಚಾರದಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಆತಿಷಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ಹರಿಯಾಣವು ಯಮುನಾ ನದಿ ನೀರನ್ನು ವಿಷಪೂರಿತಗೊಳಿಸುತ್ತಿದೆ ಅಂತ ಆರೋಪಿಸಿದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
2015, 2020ರ ಬಳಿಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಆಪ್
ಎಎಪಿ 2015, 2020ರ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದೆ. ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸುವ ಉತ್ಸಾಹದಲ್ಲಿದೆ. ಆದರೆ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂದು ಬಿಜೆಪಿ, ಕಾಂಗ್ರೆಸ್ ಹೇಳುತ್ತಿದ್ದು, ಜನರು ತಮಗೆ ಬೆಂಬಲ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿವೆ. ಅದ್ಹೇನೆ ಇರಲಿ, ಅಂತಿಮವಾಗಿ ಮತದಾರರ ನಾಡಿಮಿಡಿತ ಏನೆಂಬುದು ಫೆಬ್ರವರಿ 8 ಅಂದ್ರೆ ಇದೇ ಶನಿವಾರ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ