/newsfirstlive-kannada/media/post_attachments/wp-content/uploads/2025/07/DELHI_CAB_1.jpg)
ನವದೆಹಲಿ: ಹಣದಾಸೆಗಾಗಿ ಕ್ಯಾಬ್ ಚಾಲಕರನ್ನು ಟಾರ್ಗೆಟ್ ಮಾಡಿ ಬೆಟ್ಟದ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಜೀವ ತೆಗೆಯುತ್ತಿದ್ದಂತ ಗ್ಯಾಂಗ್ವೊಂದನ್ನು ಬರೋಬ್ಬರಿ 24 ವರ್ಷಗಳ ಬಳಿಕ ದೆಹಲಿಯ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಒಬ್ಬ ಕ್ಯಾಬ್ ಚಾಲಕನ ಮೃತದೇಹ ಪತ್ತೆ ಆಗಿದ್ದು ಇನ್ನು ಮೂವರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.
ಆರೋಪಿಗಳಾದ ಅಜಯ್ ಲಂಬಾ ಹಾಗೂ ಧೀರೇಂದ್ರ ದಿಲೀಪ್ ಪಾಂಡೆಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ಲಂಬಾನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಗ್ಯಾಂಗ್ ಸದಸ್ಯ ಧೀರಜ್ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆದಿದೆ. ದಶಕದಿಂದ ತಲೆಮರೆಸಿಕೊಂಡಿದ್ದ ಗ್ಯಾಂಗ್ನ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಕಳೆದ 24 ವರ್ಷಗಳಿಂದ ಈ ಗ್ಯಾಂಗ್ ದೆಹಲಿ ಹಾಗೂ ಉತ್ತರಾಖಂಡದಲ್ಲಿ ಹಲವಾರು ಕ್ಯಾಬ್ ಚಾಲಕರ ಜೀವ ತೆಗೆದಿದ್ದಾರೆ ಎನ್ನಲಾಗಿದೆ. ಈ ಗ್ಯಾಂಗ್ನಲ್ಲಿ ಮೂವರು ಇದ್ದು ಅಜಯ್ ಲಂಬಾ ಗ್ಯಾಂಗ್ ಅನ್ನು ಮುನ್ನಡೆಸುತ್ತಿದ್ದನು. ಕ್ಯಾಬ್ ಚಾಲಕರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಮೂವರು ಗ್ರಾಹಕರ ರೀತಿಯಲ್ಲಿ ಪೋಸ್ ಕೊಟ್ಟು ಕ್ಯಾಬ್ಗಳನ್ನು ಬುಕ್ ಮಾಡುತ್ತಿದ್ದರು.
ಬಳಿಕ ಬುಕ್ ಮಾಡಿದ ಕಾರಿನಲ್ಲಿ ಮೂವರು ಉತ್ತರಾಖಂಡದ ಗುಡ್ಡಗಾಡಿನ ದೂರದ ಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಡ್ರೈವರ್ನ ಪ್ರಜ್ಞಾಹೀನ ಅಥವಾ ಪ್ರಜ್ಞೆ ತಪ್ಪಿಸಿ ಕತ್ತು ಹಿಸುಕಿದ ಮೇಲೆ ದೇಹಗಳನ್ನು ಆಳವಾದ ಕಂದಕಗಳಲ್ಲಿ ಆರೋಪಿಗಳು ಎಸೆಯುತ್ತಿದ್ದರು. ಡ್ರೈವರ್ ಬಳಿ ಇದ್ದ ಹಣ ಹಾಗೂ ಮೌಲ್ಯದ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು. ಬಳಿಕ ಕಾರನ್ನು ನೇಪಾಳಕ್ಕೆ ಕಳ್ಳ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಇಂಗ್ಲೆಂಡ್ ತಂಡದ ದೀಪ ಆರಿಸಿದ ಆಕಾಶ್ ದೀಪ್.. ಭಾರೀ ರನ್ಗಳ ಅಂತರದಿಂದ ಗಿಲ್ ಪಡೆಗೆ ಜಯ
ಅಧಿಕಾರಿಗಳು ತನಿಖೆ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಓರ್ವ ಕಾರು ಚಾಲಕನ ಮೃತದೇಹ ಪತ್ತೆ ಆಗಿದ್ದು ಇನ್ನು ಮೂವರ ಅವಶೇಷಗಳು ಈ ವರೆಗೂ ಸಿಕ್ಕಿಲ್ಲ. ಹಲವಾರು ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಡ್ರೈವರ್ಗಳ ಕಣ್ಮರೆಯಾಗಿರುವುದರ ಹಿಂದೆ ಈ ಗ್ಯಾಂಗ್ ಕೈವಾಡ ಇರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳಿಂದ ಲಂಬಾ ನೇಪಾಳದಲ್ಲಿ ತಲೆಮರೆಯಿಸಿಕೊಂಡಿದ್ದನು. ಕ್ಯಾಬ್ ಚಾಲಕರ ಜೀವ ತೆಗೆಯುವುದು ಅಲ್ಲದೇ ದೆಹಲಿ ಹಾಗೂ ಒಡಿಶಾದಲ್ಲಿ ಡ್ರಗ್ ಸಪ್ಲೇ ಹಾಗೂ ರಾಬರಿಗಳಂತ ಕೃತ್ಯಗಳನ್ನು ಈ ಮೊದಲು ಎಸಗಿರುವ ಪ್ರಕರಣಗಳು ಇವೆ. 2001ರಿಂದಲೂ ಲಂಬಾ ಕ್ರಿಮಿನಲ್ ಪ್ರಕರಣದಲ್ಲಿ ಸಕ್ರಿಯನಾಗಿದ್ದಾನೆ ಎಂದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ