/newsfirstlive-kannada/media/post_attachments/wp-content/uploads/2024/11/KWR-vulture.jpg)
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ರಣಹದ್ದು ಒಂದು ಬೆಚ್ಚಿಬೀಳಿಸಿತ್ತು. ಕಾಲಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಹೊಂದಿದ್ದ ದೈತ್ಯ ರಣಹದ್ದು ನೋಡಿದ ಸ್ಥಳೀಯರು ಹಾಗೂ ಅಲ್ಲಿನ ಭದ್ರತಾ ಸಿಬ್ಬಂದಿ ಗಾಬರಿಯಾಗಿದ್ದರು.
ಕಳೆದ ಮೂರು ದಿನಗಳಿಂದ ಕೋಡಿಭಾಗದ ನದಿಭಾಗದ ಸುತ್ತಲು ಹಾರಾಟ ನಡೆಸುತ್ತಿತ್ತು. ಇದನ್ನು ನೋಡಿದ ಜನ, ಗೂಢಚಾರಿಕೆ ನಡೆಸಲು ಶತ್ರುಗಳು ಬಿಟ್ಟಿದ್ದಾರೆ ಎಂಬ ಅನುಮಾನ ಶುರುವಾಗಿತ್ತು. ಆತಂಕ ಬೆನ್ನಲ್ಲೇ ತನಿಖೆ ನಡೆಸಿದ ಅಧಿಕಾರಿಗಳಿಂದ ಸಮಾಧಾನಕರ ಸುದ್ದಿ ಸಿಕ್ಕಿದೆ.
ಯಾಕೆ ಈ ಅನುಮಾನ..?
ಹದ್ದಿನ ಕಾಲಿಗೆ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿತ್ತು. ಪಕ್ಷಿಯ ಎರಡೂ ಕಾಲುಗಳಿಗೆ ಬಿಳಿಬಣ್ಣದ ಸ್ಟಿಕರ್ ಅಳವಡಿಸಲಾಗಿತ್ತು. ಇಂಗ್ಲಿಷನ್ನಲ್ಲಿ ಅಕ್ಷರಗಳನ್ನು ಬರೆಯಲಾಗಿತ್ತು. ಕೆಲವು ಸಂಖ್ಯೆಗಳು ಕೂಡ ಅದರ ಕಾಲಿನಲ್ಲಿ ಗೋಚರಿಸುತ್ತಿದ್ದವು. ಇನ್ನು ಪಕ್ಷಿಯ ಬೆನ್ನಮೇಲೆ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಇರೋದು ಕಂಡು ಬಂದಿತ್ತು. ಇದೆಲ್ಲ ನೋಡಿದ ಜನರಿಗೆ ಅನುಮಾನ ಸಹಜವಾಗಿ ಬಂದಿತ್ತು.
ಯಾಕೆಂದರೆ ಈ ಭಾಗದಲ್ಲಿ, ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ ಸೇರಿ ಹಲವು ಪ್ರಾಜೆಕ್ಟ್ಗಳಿವೆ. ಇವುಗಳ ಮೇಲೆ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಅನುಮಾನ ಮೂಡಿತ್ತು. ವಿಚಾರ ಗೊತ್ತಾಗುತ್ತಿದ್ದಂತೆಯೇ ಪಕ್ಷಿಯ ಮೇಲೆ ಅಧಿಕಾರಿಗಳು ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತೆಗೆದಿದ್ದಾರೆ.
ಇದನ್ನೂ ಓದಿ:ಚಳಿಗಾಲದಲ್ಲಿ ಈ 6 ಬಗೆಯ ಯೋಗಾಸನಗಳನ್ನು ಮಾಡುವುದರಿಂದ ಆಗುವ ಲಾಭಗಳೇನು ಗೊತ್ತಾ?
ಪೊಲೀಸ್ ಇಲಾಖೆಯ ಮಾಹಿತಿ ಏನು?
ಗೂಢಚಾರಿ ಭಯ ಶುರುವಾಗ್ತಿದ್ದಂತೆಯೇ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದೆ. ದಿನಾಂಕ 10-11-2024 ರಂದು ಬೆಳಿಗ್ಗೆ ಸುಮಾರು 09-30 ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಕಾರವಾರ ನಗರದ ನದಿವಾಡದಲ್ಲಿರುವ ಶ್ರೀ ವಾಸುದೇವ ಡೊಕುಳೆರವರ, ಹೊಸಮನೆ ಮೇಲೆ, ಕಾಲಿಗೆ ಪಟ್ಟಿಗಳು ಹಾಗೂ ಡುಬ್ಬದ ಮೇಲೆ ಟ್ಯಾಗ್ ಕಟ್ಟಿರುವ ಮತ್ತು ಡುಬ್ಬದ ಮೇಲೆ ಒಂದು ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ರಣಹದ್ದು ಕಂಡುಬಂದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಿದಾಡಿರುತ್ತದೆ.
ಈ ಕುರಿತು ಅರಣ್ಯ ಇಲಾಖೆಯವರೊಂದಿಗೆ ಸ್ಥಳಕ್ಕೆ ಹೋಗಿ ಬೈನಾಕ್ಯುಲರ್ ಮತ್ತು ಪೋಟೋಗ್ರಾಪಿ ಮುಖಾಂತರ ಹದ್ದನ್ನು ಪರಿಶೀಲಿಸಲಾಗಿದೆ. ಹದ್ದಿಗೆ ಒಂದು ಲೇಬಲ್ ಅಂಟಿಸಲಾಗಿದ್ದು ಅದರಲ್ಲಿ ಇಂಗ್ಲಿಷನಲ್ಲಿ ‘If Found please contact [email protected] OT10-4G s/n:245671 5033 2 ಎಂದು ಬರೆದಿರುತ್ತದೆ. ಇದು Himalayan Griffon Vulture ಜಾತಿಯ ದೊಡ್ಡ ರಣಹದ್ದಾಗಿದೆ. ಅಳಿವಿನಂಚಿನಲ್ಲಿರುವ ವಲಸೆ ಹಕ್ಕಿಯಾಗಿರುತ್ತದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯವರು ರಕ್ಷಿಸಿ ಪೋಷಿಸುತ್ತಿದ್ದು ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದು ಪ್ರತಿ ವರ್ಷ ಇದು ಎಲ್ಲೆಲ್ಲಿ ವಲಸೆ ಹೋಗುತ್ತದೆ ಎಂದು ಕಾಲೋಚಿತ ಚಲನೆಯನ್ನು ಅಧ್ಯಯನ ಮಾಡಲು ಹಾಗೂ ನಿಗಾ ವಹಿಸಲು ಜಿಪಿಎಸ್ ಅಳವಡಿಸಿರುತ್ತಾರೆ. ಈ ರಣಹದ್ದು ಯಾವುದೇ ರೀತಿಯ ಗೂಢಾಚರ್ಯಕ್ಕೆ ಅಥವಾ ಇನ್ಯಾವುದೇ ಕುಕೃತ್ಯ ಕೆಲಸಕ್ಕೆ ಬಳಸಿದ್ದು ಕಂಡುಬಂದಿರುವುದಿಲ್ಲ. ರಣಹದ್ದಿನ ಮೇಲೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಪೊಲೀಸ್ ಇಲಾಖೆ ವಿನಂತಿಸಿದೆ.
ಇದನ್ನೂ ಓದಿ:ನೀವು ಗರ್ಭಿಣಿ ಎಂಬ ಸಂದೇಶ.. ಮದುವೆ ಆಗದ 35ಕ್ಕೂ ಹೆಚ್ಚು ಹುಡುಗಿಯರಿಗೆ ಬಿಗ್ ಶಾಕ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ