/newsfirstlive-kannada/media/post_attachments/wp-content/uploads/2024/12/Jog_Falls.jpg)
ಶಿವಮೊಗ್ಗ: ಪ್ರವಾಸಕ್ಕೆ ಹೊರಟಿರುವ ಪ್ರವಾಸಿಗರು ಒಮ್ಮೆ ಈ ಕಡೆ ಗಮನಕೊಡಿ. ಅದರಲ್ಲಿ ಜೋಗ ಜಲಪಾತದ ಕಡೆ ಹೋಗುವವರಿಗೆ ಇದು ಅತ್ಯಂತ ಮುಖ್ಯವಾದ ಮಾಹಿತಿ ಆಗಿದೆ. ಏಕೆಂದರೆ ಜೋಗ ಜಲಪಾತದ ಪ್ರವೇಶಕ್ಕೆ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಯವರು ನಿರ್ಬಂಧ ಹಾಕಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬರುವ ಮನಮೋಹಕ, ಕಣ್ಮನ ಸೆಳೆಯುವ ಜೋಗ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈಗ ಚಳಿಗಾಲ ಆಗಿದ್ದರಿಂದ ನೋಡಲು ಇನ್ನಷ್ಟು ಖುಷಿ ಕೊಡುತ್ತದೆ. ಹೀಗಾಗಿ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೋಗ ಜಲಪಾತಕ್ಕೆ ಬರುವುದು ಸಾಮಾನ್ಯ.
ಆದರೆ ಈಗ ಜಲಪಾತದ ಮುಖ್ಯದ್ವಾರದ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಬೇಕಾದಂತ ಮೂಲ ಸೌಕರ್ಯದ ಕೆಲಸಗಳನ್ನು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನವರಿ 1ರಿಂದ ಮಾರ್ಚ್ 15ರವರೆಗೆ ಅಂದರೆ ಒಟ್ಟು 74 ದಿನಗಳವರೆಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ಬಂದ್ ಮಾಡಲಾಗಿರುತ್ತದೆ.
ಶಿವಮೊಗ್ಗ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದಾರೆ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಪ್ರವೇಶ ನಿರ್ಬಂಧ ಮಾಡಲಾಗಿದೆ. ಇದಕ್ಕೆ ಜನರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ