/newsfirstlive-kannada/media/post_attachments/wp-content/uploads/2024/11/DK_SHIVAKUMAR_NEW.jpg)
ಕಾಂಗ್ರೆಸ್ ಮನೆಯೊಂದು ಹತ್ತಾರು ಬಾಗಿಲು ಅನ್ನುವಂತಾಗಿದೆ. ಇದು ಆಗಾಗ್ಗೆ ಸಾಬೀತಾಗುವಂತೆ ಕಾಂಗ್ರೆಸ್ ನಾಯಕರು ಹೇಳಿಕೆ ಕೊಡುತ್ತಾರೆ. ಮೊನ್ನೆಯಷ್ಟೇ ಗ್ಯಾರಂಟಿ ಯೋಜನೆ ಬಗ್ಗೆ ಮಾತಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಈ ಹೇಳಿಕೆ ಕೊಟ್ಟಿದ್ದಾರೆ ಅಂತ ಕಾಂಗ್ರೆಸ್ನ ಅಧ್ಯಕ್ಷರು ಹೇಳಿದ್ದರು.
ಕಾಂಗ್ರೆಸ್ ಸರ್ಕಾರದಲ್ಲಿ ಮೇಲಿಂದ ಮೇಲೆ ಅಪಸವ್ಯಗಳು ನಡೆಯುತ್ತಲೇ ಇವೆ.. ಅದರಲ್ಲೂ ಸಿಎಂ ಹುದ್ದೆ ಬದಲಾವಣೆ ಆಗಾಗ್ಗೆ ಹಸ್ತ ಪಾಳಯದಲ್ಲಿ ಕಿಚ್ಚು ಹಬ್ಬಿಸುತ್ತ ಇದೆ. ಈಗಾಗಲೇ ಡಿ.ಕೆ ಶಿವಕುಮಾರ್ ಸಿಎಂ ಸೀಟ್ ಮೇಲೆ ಟವೆಲ್ ಹಾಕಿದ್ದು ಎಲ್ಲರಿಗೂ ಗೊತ್ತೇ ಇದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಹಲವು ಬಾರಿ ನಾನು ಸಿಎಂ ಆಗಿದ್ದಿದ್ರೆ.. ಅಂತ ಹೇಳಿಕೆ ಕೊಡ್ತಾನೇ ಬಂದಿದ್ದಾರೆ. ಇತ್ತೀಚೆಗಷ್ಟೇ ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ ಅಂತ ಸಂಚಲನ ಸೃಷ್ಟಿಸಿದ್ರು. ಈ ಬೆನ್ನಲ್ಲೇ ಈಗ ಮತ್ತೆ ಸಿಎಂ ಸ್ಥಾನದ ಆಸೆಯನ್ನು ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ.
ಹಾವೇರಿ ಸವಣೂರಿನಲ್ಲಿ ಡಿ.ಕೆ ಶಿವಕುಮಾರ್ ಸಂಚಲನ
ಹಾವೇರಿಯ ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾಂಗ್ರೆಸ್ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ಡಿಸಿಎಂ ಡಿ.ಕೆ ಶಿವಕುಮಾರ್ ಸವಣೂರಲ್ಲಿ ರೋಡ್ ಶೋ ನಡೆಸಿ ಯಾಸೀರ್ ಖಾನ್ ಪಠಾಣ್ ಪರ ಪ್ರಚಾರ ನಡೆಸಿದರು. ಈ ವೇಳೆ ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬೊಮ್ಮಾಯಿ ವಿರುದ್ಧ ನಿಗಿ ನಿಗಿ ಕಿಡಿಕಾರಿದರು. ಸವಣೂರಿನಲ್ಲಿನ ಮನೆಗಳನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಬಡವರಿಗೆ ಮನೆ ಕಟ್ಟಿಸಿಕೊಡಲೂ ಬೊಮ್ಮಾಯಿಗೆ ಆಗಿಲ್ಲ. ಕೊಟ್ಟ ಕುದುರೆ ಏರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನು ಅಲ್ಲ, ಧೀರನು ಅಲ್ಲ. ನಾನು ಸಿಎಂ ಆಗಿದ್ದರೆ ಎಲ್ಲ ಬಡವರಿಗೆ ಮನೆ ಕಟ್ಟಿಸಿಕೊಡುತ್ತಿದ್ದೆ ಅಂತ ಕೆಂಡಕಾರಿದ್ದಾರೆ. ಇದು ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ವಕ್ಫ್ನಿಂದ ರೈತರ ಆಸ್ತಿ ಮೇಲೆ ಹಕ್ಕು, ಇದು ವಿಷಾದಕರ.. ಬಾಳೆಹೊನ್ನೂರು ಶ್ರೀ ಇನ್ನೇನು ಹೇಳಿದ್ರು?
ಜನರಿಗಾಗಿ ಏನಾದರೂ ಮಾಡಬೇಕು ಅಲ್ವಾ ಬಸವರಾಜ್ ಬೊಮ್ಮಾಯಿ. ಈ ಮನೆಗಳನ್ನೆಲ್ಲ ನೋಡಿದರೆ ನನಗೆ ನಾಚಿಕೆ ಆಗುತ್ತದೆ. ನಾನು ಸಿಎಂ ಆಗಿದ್ದರೇ ಸರ್ಕಾರದ ವಿಶೇಷ ಯೋಜನೆಯಡಿ ಈ ಕ್ಷೇತ್ರದಲ್ಲಿ ಎಲ್ಲ ಬಡವರಿಗೆ ಉಚಿತ ಮನೆ ನಿರ್ಮಿಸಿಕೊಡುತ್ತಿದ್ದೆ.
ಡಿ.ಕೆ ಶಿವಕುಮಾರ್, ಡಿಸಿಎಂ
ಉಪಚುನಾವಣೆ ಹಿನ್ನೆಲೆ ಭರ್ಜರಿ ಪ್ರಚಾರ ನಡೆಸಲಾಗ್ತಿದೆ. ಈ ನಡುವೆಯೇ ಡಿಕೆಶಿ ಹೇಳಿಕೆ ಕೂಡ ಭಾರೀ ಪ್ರಚಾರ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ