/newsfirstlive-kannada/media/post_attachments/wp-content/uploads/2025/01/Satish-Jarkiholi-Dk-Shivakumar.jpg)
ರಾಜಕೀಯ ಅನ್ನೋದು ಹರಿಯೋ ನೀರು ಇದ್ದಂತೆ. ಅಲ್ಲಿ ಸಮಯ ಸಂದರ್ಭಕ್ಕೆ ತಕ್ಕ ಹಾಗೇ ತಮ್ಮ ಗೇಮ್ ಪ್ಲಾನ್‌ಗಳನ್ನು ಚೇಂಜ್ ಮಾಡಬೇಕು. ಹುದ್ದೆಗಳು ಸಿಗ್ತಾವೋ ಅಲ್ವೋ? ಆದ್ರೆ ದಾಳ ಎಸೀಬೇಕು. ಡಿಸಿಎಂ ಡಿ.ಕೆ ಶಿವಕುಮಾರ್ ಬತ್ತಳಿಕೆಯಲ್ಲಿರೋ ಕೆಪಿಸಿಸಿ ಸಾರಥ್ಯಕ್ಕೆ ಸಾಹುಕಾರ್ ಹೈ ಬಾಣ ಬಿಟ್ಟಿದ್ದಾರೆ. ಇನ್ನೊಂದ್ ಕಡೆ ಕ್ಲೋಸ್‌ಡೋರ್ ಮೀಟಿಂಗ್‌ನಲ್ಲಿ ಸಿದ್ದು ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.
2 ಹುದ್ದೆ, 2 ಟೀಮ್ಗಳ ರಣತಂತ್ರ.. ಡಿಕೆಗೆ ಚಕ್ರವ್ಯೂಹ!
ಮುಯ್ಯಿಗೆ ಮುಯ್ಯಿಗೆ ಅನ್ನೋ ಜಿದ್ದಿಗೆ ಬಿದ್ರಾ ಮಿನಿಸ್ಟರ್‌ಗಳು?
ರಾಜಕೀಯ ಅನ್ನೋ ತೊಟ್ಟಿಲಲ್ಲಿರೋ ಮಗು ಅಳದೇ ಇದ್ರೆ, ಹಠ ಮಾಡದೇ ಇದ್ರೆ ಯಾರೂ ತೊಟ್ಟಿಲು ತೂಗಲ್ಲ, ಬಾಳೆ ಹಣ್ಣನ್ನು ನೀಡೋದಿಲ್ಲ. ವಿಶೇಷ ಅಂದ್ರೆ, ಕೆಲವು ಬಾರಿ ಪರಿಸ್ಥಿತಿ ಅರ್ಥ ಮಾಡ್ಕೊಂಡ್ ಮಗು ಅಳುತ್ತೆ, ಇನ್ನು ಕೆಲವು ಬಾರಿ ಬೇರೆಯವರು ಚಿವುಟಿ ಮಗು ಅಳುವಂತೆ ಮಾಡ್ತಾರೆ. ಇದೆಲ್ಲ ರಾಜಕೀಯದಲ್ಲಿ ಕಾಮನ್. ಸದ್ಯ ರಾಜ್ಯ ರಾಜಕೀಯದಲ್ಲಿ ಮಗುನೇ ಅಳ್ತಾ ಇದೆಯೋ? ಇಲ್ಲವೇ ಬೇರೆಯವ್ರು ಚಿವುಟಿ ಅಳಿಸ್ತಾ ಇದ್ದಾರೋ ಅನ್ನೋದ್ ಈ ಸ್ಟೋರಿಯನ್ನು ಕೊನೆಯವರೆಗೂ ಓದಿದ್ರೆ ನಿಮಗೆ ಅರ್ಥವಾಗಿ ಬಿಡುತ್ತೆ.
ಬಹುಮಖ್ಯವಾಗಿ ಆ ಎರಡು ಹುದ್ದೆಗಾಗಿ, ಎರಡು ಟೀಮ್‌ನವ್ರು ಜಿದ್ದಾಜಿದ್ದಿನ ಫೈಟ್‌ಗೆ ಇಳಿದಿದ್ದಾರೆ. ಮುಯ್ಯಿಗೆ ಮುಯ್ಯಿ ಅಂತಾ ರಣತಂತ್ರಗಳನ್ನ ಮಾಡ್ತಿದ್ದಾರೆ. ಹೈಕಮಾಂಡ್ ಮೇಲೆ ಬಾಣಗಳನ್ನು ಎಸೀತ್ತಿದ್ದಾರೆ. ಅಷ್ಟಕ್ಕೂ ಆ ಎರಡು ಹುದ್ದೆ ಯಾವುದು ಅಂದ್ರೆ ಒಂದು ಕೆಪಿಸಿಸಿ ಸಾರಥ್ಯ, ಇನ್ನೊಂದ್ ಮುಖ್ಯಮಂತ್ರಿ ಕುರ್ಚಿ. ಈ ಎರಡು ಸೀಟ್‌ಗಳ ಸುತ್ತ ಯಾರು? ಯಾಕಾಗಿ? ಹೇಗೆ ರಣತಂತ್ರಗಳನ್ನು ಮಾಡ್ತಿದ್ದಾರೆ? ಅನ್ನೋದನ್ನು ನಾವು ಒಂದೊಂದಾಗಿಯೇ ಹೇಳ್ತಾ ಹೋಗ್ತೀವಿ ನೋಡಿ.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅದೆಷ್ಟು ಶಕ್ತಿ ಸಾಮರ್ಥ್ಯ ಇರುತ್ತೋ? ಸೇಮ್ ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಕೆಪಿಸಿಸಿ ಸಾರಥ್ಯಕ್ಕೂ ಪವರ್ ಇರುತ್ತೆ. ಇದೊಂದ್ ಹುದ್ದೆ ಮೇಲೆ ಕುಳಿತ್ಕೊಂಡ್ರೆ ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಬಹುದು. ಸರ್ಕಾರವನ್ನು ಅಲ್ಲಾಡಿಸಬಹುದು. ಭವಿಷ್ಯದಲ್ಲಿ ಸಿಎಂ ಸ್ಥಾನಕ್ಕೇರೋದಕ್ಕೂ ಸಲೀಸು. ಸದ್ಯ ಈ ಸೀಟ್ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಇದೆ. ಇದೀಗ ಅದು ಹೇಗಾದ್ರೂ ಮಾಡಿ ಡಿಕೆಶಿ ಬಳಿ ಇರೋ ಕೆಪಿಸಿಸಿ ಸಾರ್ಥ್ಯವನ್ನು ಕಸಿಬೇಕು ಅಂತಾ ಸಿಎಂ ಸಿದ್ದರಾಮಯ್ಯ ಆಪ್ತರು ಪಣತೊಟ್ಟಿದ್ದಾರೆ. ಅದ್ಕೆ ಅವ್ರು ತಮ್ಮದೇ ಆದ ದಾಳ ಉರುಳಿಸುತ್ತಿದ್ದಾರೆ.
ಕೆಪಿಸಿಸಿ ಸಾರಥ್ಯದ ಮೇಲೆ ಕಣ್ಣು... ಸಾಹುಕಾರ್ 'ಹೈ'ಬಾಣ!
ಮೀಟಿಂಗ್‌ನಲ್ಲಿ ವಾಗ್ವಾದ, ಬೆನ್ನಲ್ಲೇ ಸಿಡಿದೆದ್ದ ಸಾಹುಕಾರ್!
ರಾಜ್ಯದಲ್ಲಿ ಸಿದ್ದು ಆಪ್ತರಾಗಿರೋ ಸಚಿವ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್, ಮಹಾದೇವಪ್ಪ... ಇವ್ರೆಲ್ಲ ಡಿನ್ನರ್ ಹೆಸರಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದ್ರು. ಇತ್ತೀಚೆಗೆ ಡಿಕೆಶಿ ವಿದೇಶಕ್ಕೆ ಹೋಗಿದ್ದ ಟೈಮ್‌ನಲ್ಲೂ ಸತೀಶ್ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆದಿತ್ತು.
ಆ ಡಿನ್ನರ್ ಮೀಟಿಂಗ್‌ನಲ್ಲಿ 6 ಸಚಿವರು, 35 ಶಾಸಕರು ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ರು. ಅವ್ರನ್ನು ಕೇಳಿದ್ರೆ ಊಟಕ್ಕೆ ಸೇರೋದು ತಪ್ಪಾ ಅಂತಾ ಪ್ರಶ್ನಿಸಿದ್ರು. ಆದ್ರೆ, ವಿದೇಶದಲ್ಲಿಯೇ ಕುಳಿತು ಮಾಹಿತಿ ಪಡ್ಕೊಂಡ ಡಿ.ಕೆ ಶಿವಕುಮಾರ್ ಬೆಂಗಳೂರಿಗೆ ಬರೋದನ್ನು ಬಿಟ್ಟು ನೇರವಾಗಿ ದೆಹಲಿಯಲ್ಲಿಯೇ ಲ್ಯಾಂಡ್ ಆಗಿ ಡಿನ್ನರ್ ಮೀಟಿಂಗ್‌ಗಳಿಗೆ ಬ್ರೇಕ್ ಹಾಕಿಸಿದ್ರು ಅಂತಾ ಹೇಳಲಾಗ್ತಿದೆ. ಅದ್ರಿಂದ ಸಿದ್ದು ಆಪ್ತರು ಕ್ರುದ್ಧರಾಗಿದ್ದಾರೆ.
ಈ ನಡುವೆ ಈ ಭಿನ್ನಾಭಿಪ್ರಾಯ ಸದ್ಯಕ್ಕೆ ತಣ್ಣಗಾಗೋ ಲಕ್ಷಣ ಕಾಣಿಸ್ತಿಲ್ಲ ಅನ್ನೋದನ್ನು ಅರ್ಥ ಮಾಡ್ಕೊಂಡ ಹೈಕಮಾಂಡ್ ನಾಯಕರು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ರಾಜ್ಯಕ್ಕೆ ಕಳುಹಿಸಿದ್ರು. ದೆಹಲಿಯಿಂದ ರಾಜ್ಯಕ್ಕೆ ಬಂದ ಸುರ್ಜೇವಾಲ ಸಭೆ ನಡ್ಸಿದ್ರು. ಆ ಸಭೆಯಲ್ಲಿ ಡಿಕೆ ಶಿವಕುಮಾರ್‌ಗೂ? ಸತೀಶ್ ಜಾರಕಿಹೊಳಿಗೂ? ವಾಗ್ವಾದವಾಗಿತ್ತು ಅಂತಾ ಹೇಳಲಾಗ್ತಿದೆ. ಈ ನಡುವೆ ಸೈಲೆಂಟ್ ಆಗಿ ಇರ್ತಾ ಇದ್ದ ಸತೀಶ್ ಜಾರಕಿಹೊಳಿ ವೈಲೆಂಟ್ ಆಗಿದ್ದಾರೆ. ನೇರವಾಗಿ ಕೆಪಿಸಿಸಿ ಕುರ್ಚಿಗೆ ಬಾಣ ಬಿಟ್ಟಿದ್ದಾರೆ.
ಸತೀಶ್ ಕೆಪಿಸಿಸಿ ಬಾಣ ರಹಸ್ಯ-01
ಡಿಕೆಶಿ ನಾಗಾಲೋಟಕ್ಕೆ ಬ್ರೇಕ್ ಹಾಕ್ಬೇಕು!
ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಯಾಕೆ ಪವರ್‌ಫುಲ್ ಅಂದ್ರೆ ಅವರ ಬತ್ತಳಿಕೆಯಲ್ಲಿ ಪ್ರಭಾವಿ ಖಾತೆಗಳಿವೆ, ಡಿಸಿಎಂ ಸ್ಥಾನವಿದೆ. ಅದರ ಜೊತೆ ಕೆಪಿಸಿಸಿ ಸಾರಥ್ಯವಿದೆ. ಹೀಗಾಗಿ ಸಿದ್ದು ಬಣದವ್ರು ಯಾವುದೇ ಬಾಣ ಬಿಟ್ರು ಅದನ್ನು ಸಂಹಾರ ಮಾಡೋ ಸಾಮರ್ಥ್ಯ ಡಿಕೆ ಬಳಿ ಇದೆ. ಎಕ್ಸಾಂಪಲ್ ಆಗಿ ಹೇಳ್ಬೇಕು ಅಂದ್ರೆ ಹಾಸನದಲ್ಲಿ ಸಿದ್ದರಾಮೋತ್ಸವ ರೀತಿಯಲ್ಲಿ ಸಭೆ ಮಾಡ್ಬೇಕು ಅಂತಾ ಸಿದ್ದು ಆಪ್ತರು ತೀರ್ಮಾನಿಸಿದ್ರು. ಅದಕ್ಕೆ ಚೆಕ್‌ಮೇಟ್ ಇಟ್ಟು, ಸಭೆ ಪಕ್ಷದ ವತಿಯಿಂದ ನಡೆಯುವಂತೆ ನಡ್ಕೊಂಡ್ರು. ಇದೆಲ್ಲ ಸಾಧ್ಯವಾಗಿದ್ದು ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ. ಹೀಗಾಗಿಯೇ ಡಿಕೆ ನಾಗಾಲೋಟಕ್ಕೆ ಬ್ರೇಕ್ ಹಾಕ್ಬೇಕು ಅನ್ನೋ ಹಿನ್ನೆಲೆಯಲ್ಲಿ ಸಾಹುಕಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗೇ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂಪಿ ಚುನಾವಣೆ ಬಳಿಕ ಬದಲಾವಣೆ ಮಾಡ್ತೀನಿ ಅಂತಾ ಹೇಳಿರೋ ನೋಟ್ ಇದೆ ಅಂತಾನೂ ಉಲ್ಲೇಖ ಮಾಡಿದ್ದಾರೆ.
ಸತೀಶ್ ಕೆಪಿಸಿಸಿ ಬಾಣ ರಹಸ್ಯ-02
ಸಿಎಂ ಕುರ್ಚಿಯಿಂದ ಸಿದ್ದು ಇಳಿಸದಂತೆ ಮಾಡೋದು!
ರಾಜ್ಯ ರಾಜಕೀಯದಲ್ಲಿ ದಿನ ನಿತ್ಯದ ರಾಮಾಯಣ ನಡೀತಿರೋದೇ ಸಿಎಂ ಕುರ್ಚಿ ವಿಚಾರದಲ್ಲಿ. ಹೌದು, ಡಿಕೆಶಿ ಮತ್ತು ಅವ್ರ ಆಪ್ತರು ಪವರ್ ಶೇರಿಂಗ್ ಇದೆ ಅಂತಾ ಹೇಳ್ತಿದ್ದಾರೆ. ಹಾಗೇ ಸಿಎಂ ಸ್ಥಾನಕ್ಕೇರೋದಕ್ಕೆ ಏನ್ ಮಾಡ್ಬೇಕೋ ಅದೆಲ್ಲವನ್ನು ಡಿಕೆಶಿ ಸೈಲೆಂಟ್ ಆಗಿಯೇ ಮಾಡ್ತಿದ್ದಾರೆ. ಬಟ್, ಸತೀಶ್ ಜಾರಕಿಹೊಳಿ, ಮಹಾದೇವಪ್ಪ, ರಾಜಣ್ಣ ಈ ಅಹಿಂದ ವರ್ಗದ ಸಚಿವ್ರ ಉದ್ದೇಶ ಏನು ಅಂದ್ರೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವ್ರನ್ನು ಸಿಎಂ ಸ್ಥಾನದಿಂದ ಇಳಿಸ್ಬಾರದು ಅನ್ನೋದು. ಈಗಾಗಲೇ ಹೈಕಮಾಂಡ್‌ಗೆ ಏನ್ ಮೆಸೇಜ್ ಪಾಸ್ ಮಾಡಲು ಸಾಧ್ಯನೋ ಅದೆಲ್ಲವನ್ನು ಮಾಡಿ ಆಗಿದೆ. ಆದ್ರೆ, ಡಿಕೆ ಶಿವಕುಮಾರ್ ಬಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಇರೋದ್ರಿಂದ ಯಾವಾಗ ಏನ್ ಬೇಕಾದ್ರೂ ಆಗ್ಬಹುದು ಅನ್ನೋ ವಾತಾವಾರಣ ಇದೆ. ಹೀಗಾಗಿ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿ ಬಿಟ್ರೆ ಸಿದ್ದು ಸಿಎಂ ಸ್ಥಾನದಲ್ಲಿ ಮುಂದುವರಿಯಲು ಅನುಕೂಲವಾಗುತ್ತೆ ಅನ್ನೋ ಲೆಕ್ಕಾಚಾರ ಸಾಹುಕಾರ್‌ಗೆ ಇದ್ದರೂ ಇರ್ಬಹುದು.
ಇದನ್ನೂ ಓದಿ: ಒಂದು ಸೀಟಿನ ಸುತ್ತ ನಾಯಕರ ಮ್ಯೂಸಿಕಲ್ ರೌಂಡ್ಸ್; ಸತೀಶ್ ಜಾರಕಿಹೊಳಿ ಇಟ್ಟ ಡಿಮ್ಯಾಂಡ್ ಏನು?
ಸತೀಶ್ ಕೆಪಿಸಿಸಿ ಬಾಣ ರಹಸ್ಯ-03
2028ರಲ್ಲಿ ತಾವೇ ಸಿಎಂ ಆಗೋ ಕನಸು!
ಸತೀಶ್ ಜಾರಕಿಹೊಳಿ ಬಹಳಷ್ಟು ಬಾರಿ ಹೇಳ್ಕೊಂಡಿದ್ದಾರೆ. ನಾನು ಈ ಬಾರಿ ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ, ನನ್ನದು ಏನಿದ್ರೂ 2028 ಅಂದಿದ್ದಾರೆ. ಆದ್ರೆ, ಈ ಬಾರಿ ಸಿಎಂ ಸ್ಥಾನದಿಂದ ಯಾವುದೇ ಕಾರಣಕ್ಕೂ ಸಿದ್ದು ಅನ್ನು ಇಳಿಸ್ಬಾರದು ಅನ್ನೋದ್ ಸತೀಶ್ ನಿಲುವು, ಹಾಗೊಂದ್ ವೇಳೆ ಇಳಿಸೋ ಪ್ರಸಂಗ ಬಂದ್ರೆ ಅಹಿಂದ ಸಚಿವ್ರಲ್ಲಿ ಒಬ್ಬರಿಗೆ ಸಿಎಂ ಸ್ಥಾನ ಕೊಡ್ಬೇಕು ಅನ್ನೋದು. ಆದ್ರೆ, 2028 ರಲ್ಲಿ ಸತೀಶ್ ಸಿಎಂ ಸ್ಥಾನಕ್ಕೆ ಏರ್ಬೇಕು ಅಂತಾದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೀಬೇಕು. ಮುಂದಿನ ಚುನಾವಣೆಯ ನೇತೃತ್ವವಹಿಸಿ ಪಕ್ಷ ಬಹುಮತ ಪಡೆದ್ರೆ, ಸಿಎಂ ಗದ್ದುಗೆ ಏರೋದಕ್ಕೂ ಮಾರ್ಗಗಳು ಸುಲಭವಾಗ್ತಾವೆ. ಅಪ್ಪ ತಪ್ಪಿ ಏನಾದ್ರೂ ಡಿಕೆ ಶಿವಕುಮಾರ್ ಅವ್ರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದ್ರೆ ತಾವು ಸಿಎಂ ಸ್ಥಾನಕ್ಕೇರೋದು ಕಷ್ಟ ಅನ್ನೋದ್ ಸತೀಶ್‌ಗೆ ಪಕ್ಕಾ ಗೊತ್ತು.
ತಮಗೆ 50 ಶಾಸಕರ ಒತ್ತಡ ಇದೆ ಅಂದ್ರಾ ಜಾರಕಿಹೊಳಿ?
ಸಿಎಂ ಸ್ಥಾನಕ್ಕೇರೋವರೆಗೂ ಪಟ್ಟ ಬಿಡದಿರಲು ಡಿಕೆ ಪಟ್ಟು!
ಬೆಂಗಳೂರಿಗೆ ಬಂದಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಸಾಲು ಸಾಲು ಸಭೆಗಳನ್ನು ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಕೂಡ ಸುರ್ಜೇವಾಲ ಅವ್ರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರಂತೆ. ತಮಗೆ ಕೆಪಿಸಿಸಿ ಅಧ್ಯಕ್ಷರಾಗುವಂತೆ 50 ಶಾಸಕರ ಒತ್ತಡವಿದೆ ಅಂತಾ ತಿಳಿಸಿದ್ದಾರೆ. ಹಾಗೇ ಮನವಿ ಪತ್ರವನ್ನು ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ