/newsfirstlive-kannada/media/post_attachments/wp-content/uploads/2024/07/car-wash.jpg)
ಇತ್ತೀಚೆಗೆ ಬೇಸಿಗೆಯಲ್ಲಿ ಬೆಂಗಳೂರಿನ ಜನ ಅನುಭವಿಸಿದ ನೀರಿನ ಕಷ್ಟ ಅಷ್ಟಿಷ್ಟಲ್ಲ. ಕುಡಿಯೋ ನೀರಿಗೆ ರಾಜಧಾನಿಯ ಜನ ಅಕ್ಷರಶಃ ಪರದಾಡಿ ಹೋಗಿ ಬಿಟ್ಟಿದ್ರು. ನೀರನ್ನ ಟ್ಯಾಂಕ್ಗಳಲ್ಲಿ ಸ್ಟಾಕ್ ಮಾಡ್ಕೊಂಡು, ಅದಕ್ಕೆ ಬೀಗ ಹಾಕೋ ಪರಿಸ್ಥಿತಿ ಎದುರಾಗಿತ್ತು. ಇನ್ನು ಪಾಲಿಕೆಯಂತೂ ಸುಖಾ ಸುಮ್ಮನೆ ನೀರು ವೇಸ್ಟ್ ಮಾಡಂಗಿಲ್ಲ. ಗಾಡಿ ವಾಷ್ ಮಾಡಂಗಿಲ್ಲ ಅಂತ ಫರ್ಮಾನು ಹೊರಡಿಸಿತ್ತು. ಅತ್ಯಮೂಲ್ಯವಾದ ನೀರನ್ನ ಪೋಲು ಮಾಡಿದ್ರೆ ದಂಡ ಕೂಡ ಹಾಕ್ತೀನಿ ಅಂತ ಎಚ್ಚರಿಸಿತ್ತು. ಈ ಬೇಸಿಗೆಯಲ್ಲಿ ಇದು ಜಸ್ಟ್ ಬೆಂಗಳೂರಿನ ಕಥೆ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ಆಯಾ ರಾಜ್ಯಗಳ ಬಹುತೇಕ ನಗರ, ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ. ಇನ್ನು, ನಮ್ಮ ಕರ್ನಾಟಕದಲ್ಲೂ ಹಲವು ಕಡೆಗಳಲ್ಲಿ ಭೂಮಿ ಒಣಗಿ, ಸೊರಗಿ ಹೋಗಿತ್ತು. ಅಂಥದ್ರಲ್ಲಿ ಕಾರ್ ವಾಶಿಂಗ್, ಬೈಕ್ ವಾಶಿಂಗ್ ಅಂತ ನೂರಾರು ಲೀಟರ್ ನೀರನ್ನ ವೇಸ್ಟ್ ಮಾಡಿದ್ರೆ ಕಥೆ ಏನು?
ವಾಟರ್ ಲೆಸ್ ಕಾರ್ ವಾಶಿಂಗ್ ಮಾಡ್ಬೋದು ನೋಡಿ!
ಕಾರ್ ವಾಶಿಂಗ್ ಸಮಸ್ಯೆಗೆ ಪರಿಹಾರವೇ ವಾಟರ್ ಲೆಸ್ ಕಾರ್ ವಾಶಿಂಗ್. ಈ ವಾಟರ್ ಲೆಸ್ ಕಾರ್ ವಾಶಿಂಗ್ ಅನ್ನೋ ಕಾನ್ಸೆಪ್ಟ್ ಏನೂ ಯಾರಿಗೂ ಗೊತ್ತಿಲ್ಲದಿರೋದೇನೂ ಅಲ್ಲ. ಫಾರಿನ್ನಲ್ಲಂತೂ ಇದು ಸಾಕಷ್ಟು ಬಳಕೆಯಲ್ಲಿದೆ. ಆದರೆ, ಇಂಡಿಯಾದಲ್ಲಿ ವಾಟರ್ ಲೆಸ್ ಕಾರ್ ವಾಶಿಂಗ್ನ ಜನ ಬಳಸೋದು ತೀರಾ ಕಮ್ಮಿ. ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಲ್ಲಿ ಕಾರ್ನ ವಾಟರ್ ವಾಷ್ಗೆ ಕೊಡ್ತಾರೆ. ಆದ್ರೆ ಇತರೆ ನಗರಗಳಲ್ಲಿ, ಪಟ್ಟಣಗಳಲ್ಲೆಲ್ಲಾ, ಬೆಳ್ ಬೆಳಗ್ಗೆ ಎದ್ದು ಬಕೆಟ್ನಲ್ಲಿ ನೀರು ತಗೊಂಡು, ತಮ್ಮಿಷ್ಟ ಹಾಡು ಕೇಳ್ತಾನೋ? ಗುನುಗ್ತಾನೋ ಶಾಂಪೂ ಹಾಕಿ ತಾವೇ ಕಾರ್ ವಾಷ್ ಮಾಡ್ತಿದ್ರೆ, ಭಾರತೀಯರಿಗೆ ಅದೊಂದ್ ರೀತಿ ಧ್ಯಾನ ಇದ್ದಂತೆ. ಅಂತಹ ಭಾರತದಲ್ಲಿ ವಾಟರ್ ಲೆಸ್ ಕಾರ್ ವಾಷಿಂಗ್ ಅನ್ನೋ ವಿಚಾರ ಯಾರಿಗೆ ಹೊಳೆಯುತ್ತೆ? ತಲೆಯಲ್ಲಿ ಈ ವಿಚಾರ ಬಂದ್ರೂ ವರ್ಕೌಟ್ ಆಗುತ್ತಾ? ಇಂಥದ್ದೊಂದು ಪ್ರಶ್ನೆ ನಿಮಗೀಗಾಗಲೇ ಮೂಡಿರಬಹುದು. ಇದು ವರ್ಕೌಟ್ ಆಗಿರೋದಷ್ಟೇ ಅಲ್ಲ, ಸಕ್ಸಸ್ ಕೂಡ ಆಗಿದೆ. ಇದನ್ನ ಸಾಕಾರಗೊಳಿಸಿರೋದು ನಿತಿನ್ ಶರ್ಮಾ.
ನಿತಿನ್ ಶರ್ಮಾ ಯಾರು?
ಎಂಬಿಎ ಡ್ರಾಪ್ ಔಟ್ ನಿತಿನ್ ಶರ್ಮಾ, ಬಿಬಿಎ ಮುಗಿಸಿದ ಮೇಲೆ ತಮ್ಮ ತಂದೆಯ ಬ್ಯುಸಿನೆಸ್ನ ನೋಡಿಕೊಳ್ತಿದ್ರು. ಚಿತ್ತೀಸ್ಗಢದಲ್ಲಿ ತಮ್ಮ ಆಟೋಮೊಬೈಲ್ ಬ್ಯುಸಿನೆಸ್ ನೋಡಿಕೊಳ್ತಿದ್ದ ನಿತಿನ್ಗೆ ಅದರಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗುತ್ತಿದ್ವು. ಮೆಕಾನಿಕ್ ವರ್ಕ್ಶಾಪ್, ಬ್ಯಾಟರಿ ಡೀಲರ್ಶಿಪ್, ಟೈರ್ ಮತ್ತು ಇತರೆ ಕಾರ್ ಸರ್ವೀಸ್ನ ನೋಡಿಕೊಳ್ತಿದ್ದಾಗ, ಎದುರಾಗುತ್ತಿದ್ದ ಸಮಸ್ಯೆ ನೀರಿನದ್ದು. ಒಂದೊಂದು ಕಾರ್ನ ವಾಶ್ ಮಾಡೋಕೆ ನೂರಾರು ಲೀಟರ್ ನೀರು ಬೇಕಾಗುತ್ತೆ. ಆದ್ರೆ ಬೇಸಿಗೆಯಲ್ಲಿ ನೀರಿನ ಅಭಾವ. ಈ ಸಮಸ್ಯೆಗೆ ಪರಿಹಾರ, ಪರ್ಯಾಯ ಏನು ಅಂತ ನಿತಿನ್ ಹುಡುಕ್ತಿದ್ದಾಗ, ಅವರ ಸಂಬಂಧಿಕರೊಬ್ಬರು, ವಿದೇಶಗಳಲ್ಲಿ ಪಾಫ್ಯುಲರ್ ಇರುವ ವಾಟರ್ಲೆಸ್ ಕಾರ್ ವಾಶಿಂಗ್ ಬಗ್ಗೆ ಐಡಿಯಾ ಕೊಡ್ತಾರೆ.
ಲೂಬ್ರಿಕ್ಯಾಂಟ್ ಕ್ಲೀನಿಂಗ್ ಸ್ಪ್ರೇ
ವಿದೇಶಗಳಲ್ಲಿ ಹಲವು ವರ್ಷಗಳಿಂದ ವಾಟರ್ ಲೆಸ್ ಕಾರ್ ವಾಶಿಂಗ್ ನಡೀತಿದೆ. ಅಲ್ಲಿ ನೀರಿನ ಬದಲಿಗೆ ಸ್ಪ್ರೇಗಳನ್ನ ಬಳಸಿ ಕಾರ್ ವಾಶ್ ಮಾಡ್ತಾರೆ. ಆದ್ರೆ ಈ ಸ್ಪ್ರೇಗಳಿಗೆ ಅತೀ ಹೆಚ್ಚು ಕೆಮಿಕಲ್ ಬಳಕೆ ಆಗುತ್ತೆ. ಇದು ಕೂಡ ನಿತಿನ್ಗೆ ಇಷ್ಟವಿರಲಿಲ್ಲ. ನೀರು ಉಳಿಸೋ ಉದ್ದೇಶಕ್ಕಾಗಿ ಪ್ರಕೃತಿಗೆ ಹಾನಿ ಮಾಡೋದು ಬೇಡ ಅನ್ನೋ ಕಾರಣಕ್ಕೆ, ಇನ್ನೇನಾದ್ರೂ ಮಾರ್ಗ ಇದೆಯಾ ಅಂತ ಆಲೋಚಿಸುತ್ತಿದ್ರು. ಆಗ ಅವ್ರಿಗೆ ಹೊಳೆದಿದ್ದೇ ಪ್ಲಾಂಟ್ ಬೇಸ್ಡ್ ಆರ್ಗಾನಿಕ್ ಸ್ಪ್ರೇ ಕಾರ್ ಕ್ಲೀನರ್. 2017ರಲ್ಲಿ ಈ ನಿರ್ಧಾರ ಮಾಡಿ, ಹಲವು ತಿಂಗಳುಗಳ ಕಾಲ ಕೆಲ ಕೆಮಿಕಲ್ ಇಂಜಿನಿಯರ್ಗಳ ಜೊತೆ ಸೇರಿ ಸಂಶೋಧನೆ ಮಾಡಿದ ಬಳಿಕ ತಮ್ಮದೇ ಗಿಡಗಳ ಆಧಾರಿತ ಲೂಬ್ರಿಕ್ಯಾಂಟ್ ಕ್ಲೀನಿಂಗ್ ಸ್ಪ್ರೇ ಕಂಡು ಹಿಡಿದ್ರು. ನಂತರ ಹಲವು ಹಂತಗಳಲ್ಲಿ ಅದರ ಪ್ರಯೋಗ, ಟ್ರಯಲ್ಗಳನ್ನೆಲ್ಲಾ ಮಾಡಿ ಸಕ್ಸಸ್ ಆದ ಬಳಿಕ ಮಾರುಕಟ್ಟೆಗೂ ಪರಿಚಯಿಸಿದ್ರು ನಿತಿನ್.
ನೀರೇ ಇಲ್ಲದೆ ಕಾರ್ ವಾಶ್
2 ವರ್ಷಗಳ ಸತತ ಶ್ರಮದ ಬಳಿಕ ತಮ್ಮ ಕುಟುಂಬ ಹಾಗೂ ಪತ್ನಿಯಿಂದ ಒಟ್ಟು 10 ಲಕ್ಷ ರೂಪಾಯಿಗಳನ್ನ ಪಡೆದು ತಮ್ಮ ಪತ್ನಿಯ ಜೊತೆ ಸೇರಿಯೇ 2019ರಲ್ಲಿ ತಮ್ಮ ಗೋ ವಾಟರ್ಲೆಸ್ ಸ್ಟಾರ್ಟಪ್ನ ಶುರು ಮಾಡಿದ್ರು. ಮನೆಯಲ್ಲಿ ಬಕೆಟ್ನಲ್ಲಿ ನೀರು ತಗೊಂಡು ಕಾರು ತೊಳೆದ್ರೂ ಸುಮಾರು 40 ಲೀಟರ್ ನೀರು ಬೇಕು. ಸರ್ವೀಸ್ ಸ್ಟೇಷನ್ನಲ್ಲಿ ಕನಿಷ್ಠ ಅಂದ್ರೂ 100 ರಿಂದ 300 ಲೀಟರ್ ನೀರು ಖರ್ಚಾಗುತ್ತೆ. ಇಷ್ಟು ನೀರನ್ನ ಉಳಿಸೋದು ಅಂದ್ರೆ ಸುಮ್ಮನೆ ಮಾತಲ್ಲ. ಒಂದು ಸರ್ವೀಸ್ ಸ್ಟೇಷನ್ನಲ್ಲಿ ಒಂದೇ ಕಾರಿಗೆ ಇಷ್ಟು ನೀರು ಉಳಿಯುತ್ತೆ ಅಂದ್ರೆ, ಇಡೀ ದೇಶದಲ್ಲಿರೋ ಸಾವಿರಾರು ಸರ್ವೀಸ್ ಸ್ಟೇಷನ್ಗಳಲ್ಲಿ ಅದೆಷ್ಟು ಲಕ್ಷ, ಕೋಟಿ ಲೀಟರ್ಗಳ ನೀರು ಉಳಿಸಬಹುದು ಅನ್ನೋದನ್ನ ಯೋಚಿಸಿ. ಇದರ ಅಂದಾಜು ಇದ್ದ ನಿತಿನ್ ಈಗ ನಿತ್ಯವೂ ಹಲವು ಲಕ್ಷ ಲೀಟರ್ಗಳಷ್ಟ ನೀರನ್ನ ಉಳಿಸೋ ಕೆಲಸ ಮಾಡ್ತಿದ್ದಾರೆ.
ನ್ಯಾನೋ ತಂತ್ರಜ್ಞಾನ ಬಳಕೆ
ಕೆಮಿಕಲ್ ಸ್ಪ್ರೇಗಳನ್ನ ಬಳಸಿ ಕಾರ್ ವಾಶ್ ಮಾಡಿದ್ರೆ, ಕಾರ್ ಸ್ಕ್ರಾಚ್ ಆಗೋ ಸಾಧ್ಯತೆಗಳೂ ಇರುತ್ತೆ. ಇದಕ್ಕೂ ಪರಿಹಾರ ಕಂಡುಕೊಂಡಿರುವ ನಿತಿನ್, ತಮ್ಮ ಸ್ಪ್ರೇ ತಯಾರಿಕೆಯಲ್ಲಿ ನ್ಯಾನೋ ತಂತ್ರಜ್ಞಾನವನ್ನ ಬಳಕೆ ಮಾಡಿದ್ದಾರೆ. ಇದರಿಂದಾಗಿ, ನೀವು ಸ್ಪ್ರೇ ಮಾಡಿದಾಗ, ಕಾರ್ ಮೇಲಿನ ಡಸ್ಟ್ ಪಾರ್ಟಿಕಲ್ಸ್, ಅದರಲ್ಲಿ ಪ್ರತ್ಯೇಕವಾಗುತ್ತೆ. ಹೀಗಾಗಿ ಕಾರ್ಗೆ ಸ್ಪ್ರೇ ಮಾಡಿ, ಅದನ್ನ ಒರೆಸಿ, ವ್ಯಾಕ್ಯೂಮ್ ಮಾಡಿ, ಪಾಲಿಷ್ ಮಾಡಿದ್ರೆ ಮುಗೀತು. ನಿಮ್ಮ ಕಾರು ಹೊಸದರಂತೆ ಪಳ ಪಳ ಹೊಳೆಯುತ್ತೆ. ನೀರಿನಲ್ಲಿ ವಾಶ್ ಮಾಡಿದ ನಂತರ ಒಣಗಿಸುವ ತಾಪತ್ರಯವೂ ಇದರಲ್ಲಿ ಇಲ್ಲ. ಎಲ್ಲಾದ್ರೂ ಮೂಲೆಗಳಲ್ಲಿ ನೀರು ಸಿಲುಕಿದೆಯಾ ಅನ್ನೋ ಟೆನ್ಷನ್ ಇಲ್ಲ. ಇಲ್ಲಿ ಇನ್ನೊಂದು ಖುಷಿ ವಿಚಾರ ಅಂದ್ರೆ, ನಿಮ್ಮ ಮನೆಗೇ ಬಂದು ಕಾರ್ ವಾಶ್ ಸರ್ವೀಸ್ನ ಗೋ ವಾಟರ್ಲೆಸ್ ಸಂಸ್ಥೆ ನೀಡುತ್ತೆ. ಅದೂ ಕೂಡ ನಿಮ್ಮ ಜೇಬಿಗೆ ಭಾರವಾಗದಂತೆ.
22 ರಾಜ್ಯ 200ಕ್ಕೂ ಹೆಚ್ಚು ಫ್ರಾಂಚೈಸಿ
ಆರಂಭದಲ್ಲಿ ಕಷ್ಟಗಳು, ಸವಾಲುಗಳು ಎದುರಾದ್ರೂ ನಿತಿನ್ರ ಪರಿಶ್ರಮ ಇವತ್ತು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇವರ ಉದ್ದೇಶವನ್ನ ಅರಿತಿರುವ ಅದೆಷ್ಟೋ ಜನ ಈಗ ಇವ್ರ ಸಂಸ್ಥೆಯ ಸೇವೆಯನ್ನೂ ಪಡೆಯುತ್ತಿದ್ದಾರೆ. ಹೀಗಾಗಿಯೇ ಜಸ್ಟ್ ಒಂದು ಕೇಂದ್ರದಿಂದ ಆರಂಭವಾದ ಗೋ ವಾಟರ್ಲೆಸ್ ಈಗ ದೇಶದ 22 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಫ್ರಾಂಚೈಸಿಯನ್ನ ಹೊಂದಿದೆ. ಇತ್ತೀಚಿಗೆ ಇಂಡಿಯನ್ ಆಯಿಲ್ ಸಂಸ್ಥೆಯ ಜೊತೆಯೂ ಪಾರ್ಟ್ನರ್ ಆಗಿದ್ದು, ಪಂಪ್ ಸ್ಟೇಷನ್ಗಳಲ್ಲಿ ಕಿಯಾಸ್ಕ್ಗಳ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. 2019ರಲ್ಲಿ ಸಂಸ್ಥೆ ಆರಂಭಿಸಿದಾಗಿನಿಂದ ಈವರೆಗೆ ನಿತಿನ್ರ ಸಂಸ್ಥೆಯ 10 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನೂ ಸಹ ಗಳಿಸಿದೆ.
ಇದನ್ನೂ ಓದಿ:ಆರ್ಸಿಬಿ ತಂಡಕ್ಕೆ ಡೇಂಜರಸ್ ಬೌಲರ್ ಎಂಟ್ರಿ; ಬೆಂಗಳೂರಿಗೆ ಬಂತು ಆನೆ ಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ