/newsfirstlive-kannada/media/post_attachments/wp-content/uploads/2025/07/BIHAR_DOG_ADRESS_1.jpg)
ವ್ಯಕ್ತಿಯ ಹೆಸರು ಡಾಗ್ ಬಾಬು, ತಂದೆಯ ಹೆಸರು ಕುತ್ತಾ ಬಾಬು, ತಾಯಿಯ ಹೆಸರು ಕುಟಿಯಾ ದೇವಿ. ಇನ್ನೂ ವ್ಯಕ್ತಿಯ ಪೋಟೋದ ಜಾಗದಲ್ಲಿ ನಾಯಿಯ ಪೋಟೋ ಹಾಕಲಾಗಿದೆ. ಇದು ನಿಮಗೆ ಅಚ್ಚರಿ ಅನ್ನಿಸಬಹುದು. ಆದರೇ, ಇದು ಸತ್ಯ. ಬಿಹಾರದಲ್ಲಿ ರೆಸಿಡೆನ್ಸ್ ಸರ್ಟಿಫಿಕೇಟ್ ಒಂದರಲ್ಲಿ ವ್ಯಕ್ತಿಯ ಹೆಸರಿನ ಜಾಗದಲ್ಲಿ ಡಾಗ್ ಬಾಬು ಎಂದು ಬರೆಯಲಾಗಿದೆ. ತಂದೆಯ ಹೆಸರಿನ ಜಾಗದಲ್ಲಿ ಕುತ್ತಾ ಬಾಬು ಎಂದು ಬರೆಯಲಾಗಿದೆ. ಬಿಹಾರದ ರಾಜಧಾನಿ ಪಾಟ್ನಾದ ಬಳಿಯ ಮಸೌರಿ ಟೌನ್ನ ರೈಟ್ ಟು ಪಬ್ಲಿಕ್ ಸರ್ವೀಸಸ್ ಪೋರ್ಟಲ್ನಲ್ಲಿ ಈ ರೆಸಿಡೆನ್ಸ್ ಸರ್ಟಿಫಿಕೇಟ್ನಲ್ಲಿ ಈ ವಿವರ ಇದೆ. ಇನ್ನೂ ಅಡ್ರೆಸ್ ಅನ್ನು ಕೌಲಿಚಾಕ್, ವಾರ್ಡ್ 15, ಮಸೌರಿ ನಗರ ಪರಿಷತ್ ಎಂದು ಉಲ್ಲೇಖಿಸಲಾಗಿದೆ.
ಬಿಹಾರದಲ್ಲಿ ಈಗ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ರೆಸಿಡೆನ್ಸ್ ಸರ್ಟಿಫಿಕೇಟ್ ಇದ್ದವರ ಹೆಸರು ಅನ್ನು ಮಾತ್ರವೇ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗುತ್ತಿತ್ತು. ರೆಸಿಡೆನ್ಸ್ ಸರ್ಟಿಫಿಕೇಟ್ ಅನ್ನು ಐಡೆಂಟಿಟಿ ಪ್ರೂಫ್ ಆಗಿ ಬಳಕೆ ಮಾಡಲಾಗುತ್ತಿದೆ. ಜುಲೈ 27 ರಂದು ನೀಡಿರುವ ಸರ್ಟಿಫಿಕೇಟ್ನಲ್ಲಿ ಡಾಗ್ ಬಾಬು ಹೆಸರಿನವರಿಗೂ ಸರ್ಟಿಫಿಕೇಟ್ ನೀಡಲಾಗಿದೆ. ಇನ್ನೂ ವಿಶೇಷ ಅಂದರೇ, ರೆವಿನ್ಯೂ ಆಫೀಸರ್ ಮುರಾರಿ ಚೌಹಾಣ್ ಅವರ ಡಿಜಿಟಲ್ ಸಿಗ್ನೇಚರ್ ಈ ಸರ್ಟಿಫಿಕೇಟ್ ಮೇಲಿದೆ. ಹೀಗಾಗಿ ಇದು ಯಾವುದೇ ನಕಲಿ ಸರ್ಟಿಫಿಕೇಟ್ ಅಲ್ಲ, ಟ್ಯಾಂಪರ್ ಮಾಡಿದ ಸರ್ಟಿಫಿಕೇಟ್ ಕೂಡ ಅಲ್ಲ. ಇದು ಅಸಲಿ ಸರ್ಟಿಫಿಕೇಟ್. ಇದರ ಮೇಲೆ ನಂಬರ್ ಕೂಡ ಮುದ್ರಿತವಾಗಿದೆ.
ಇದನ್ನೂ ಓದಿ:ಯೂರಿಯಾ ಗೊಬ್ಬರ ಅಭಾವ; ಪ್ರಹ್ಲಾದ್ ಜೋಶಿ ನೇತೃತ್ವದ ರಾಜ್ಯ ಬಿಜೆಪಿ ನಿಯೋಗದಿಂದ JP ನಡ್ಡಾಗೆ ಮನವಿ
ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಡಾಗ್ ಬಾಬುವಿನ ಸರ್ಟಿಫಿಕೇಟ್ ವೈರಲ್ ಆಗುತ್ತಿದೆ. ರಾಜ್ಯ ಸರ್ಕಾರವನ್ನು ಟೀಕಿಸಲು ವಿರೋಧ ಪಕ್ಷಗಳಿಗೆ ಬಿಹಾರ ರಾಜ್ಯ ಸರ್ಕಾರವೇ ಅಸ್ತ್ರ ಕೊಟ್ಟಂತಾಗಿದೆ. ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯ, ಯಡವಟ್ಟು ಹೇಗೆಲ್ಲಾ ಇರುತ್ತೆ ಎನ್ನುವುದಕ್ಕೆ ಇದು ಪ್ರಮುಖ ಸಾಕ್ಷಿ.
ಇದೇ ರೆಸಿಡೆನ್ಸ್ ದಾಖಲೆ ಮತದಾರರ ಪಟ್ಟಿ ಪರಿಷ್ಕರಣೆಗೆ ಬಳಸಲಾಗುತ್ತೆ. ಆಧಾರ್, ರೇಷನ್ ಕಾರ್ಡ್ ಅನ್ನು ಫೇಕ್ ಎಂದು ಪರಿಗಣಿಸಲಾಗುತ್ತೆ ಎಂದು ಸ್ವರಾಜ್ ಇಂಡಿಯಾ ಸಂಘಟನೆಯ ಯೋಗೇಂದ್ರ ಯಾದವ್ ಸರ್ಟಿಫಿಕೇಟ್ ಸಮೇತ ಟ್ವೀಟ್ ಮಾಡಿದ್ದಾರೆ.
ಇನ್ನೂ ಕಾಂಗ್ರೆಸ್ ಪಕ್ಷವು ಈ ಡಾಗ್ ಬಾಬು ಪ್ರತ್ಯಕ್ಷವಾಗಿ ಬಿಜೆಪಿಗೆ ವೋಟ್ ಮಾಡಲಿದೆ. ಬಹುಶಃ ಡಾಗ್ ಬಾಬುವನ್ನು ಬಿಜೆಪಿ ಪಕ್ಷವೇ ತನ್ನ ಅಭ್ಯರ್ಥಿಯನ್ನಾಗಿ ಮಾಡಲಿದೆ. ಎಲ್ಲ ಬಿಜೆಪಿ ಕಾರ್ಯಕರ್ತರು ಈ ಡಾಗ್ ಬಾಬುಗೆ ವೋಟ್ ಮಾಡಲಿದ್ದಾರೆ. ಇದು ಬಿಜೆಪಿಯಿಂದ ನಡೆಯುತ್ತಿರುವ ಎಲೆಕ್ಟೋರಲ್ ವ್ಯವಸ್ಥೆಯ ನಗ್ನ ದುರುಪಯೋಗ. ಚುನಾವಣಾ ಆಯೋಗವು ಕ್ರಿಮಿನಲ್ ಸಿಂಡಿಕೇಟ್ ಆಗಿ ಕೆಲಸ ಮಾಡುತ್ತಿದೆ. ಕೋರ್ಟ್ಗಳು ಮೌನವಾಗಿ ನಿಂತುಕೊಂಡು ನೋಡುತ್ತಾ, ಆಶೀರ್ವಾದ ಮಾಡುತ್ತಿವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅಧಿಕಾರಿಗಳು ಹೇಳಿದ್ದೇನು?
ಇನ್ನೂ ಈ ವೈರಲ್ ಡಾಗ್ ಬಾಬು ರೆಸಿಡೆನ್ಸ್ ಸರ್ಟಿಫೇಕಟ್ ಬಗ್ಗೆ ತಾವು ತನಿಖೆ ನಡೆಸುತ್ತಿದ್ದು , ಇಂಥ ದಾಖಲೆ ಹೇಗೆ ಜನರೇಟ್ ಆಯಿತು, ಅಥೆಂಟಿಕೇಟ್ ಆಯಿತು ಎನ್ನುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಈ ದಾಖಲೆ ಈಗಾಗಲೇ ರದ್ದು ಮಾಡಿದ್ದೇವೆ. ಈ ದಾಖಲೆಗೆ ಅರ್ಜಿ ಸಲ್ಲಿಸಿದವರ ವಿರುದ್ಧ ಹಾಗೂ ಕಂಪ್ಯೂಟರ್ ಅಪರೇಟರ್ ಹಾಗೂ ಸರ್ಟಿಫಿಕೇಟ್ ನೀಡಿದವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 24 ಗಂಟೆಯಲ್ಲಿ ಈ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ