/newsfirstlive-kannada/media/post_attachments/wp-content/uploads/2024/12/RUSSIAN-DOG.jpg)
ಜಗತ್ತಿನಲ್ಲಿ ಮನುಷ್ಯನ ಅದ್ಭುತ ಸ್ನೇಹಿತ ಅಂದ್ರೆ ಅದು ಪ್ರಾಣಿಗಳು. ಪ್ರಾಣಿಗಳು ಮನುಷ್ಯನೊಂದಿಗೆ ಕಂಡುಕೊಳ್ಳುವ ಭಾವನಾತ್ಮಕ ನಂಟು ಮನುಷ್ಯ ಮನುಷ್ಯರ ನಡುವೆಯೇ ಕಾಣ ಸಿಗುವುದು ಅನುಮಾನ. ಅದರಲ್ಲೂ ಶ್ವಾನ ಹಾಗೂ ಮಾನವರ ನಡುವೆ ಇರುವ ಒಂದು ಬಾಂಧವ್ಯ ಇದೆಯಲ್ಲಾ ಅದು ಬೇರೆಯದ್ದೇ ಹಂತದ್ದು. ಒಂದು ಬಾರಿ ತುಂಡು ರೊಟ್ಟಿ ಹಾಕಿದರೆ ಸಾಕು, ಕಟ್ಟ ಕಡೆಯ ಉಸಿರು ಇರುವವರೆಗೂ ಅದು ತನ್ನ ನಿಯತ್ತನ್ನು ಬದಲಿಸುವುದಿಲ್ಲ. ಅದಕ್ಕೆ ಜಗತ್ತಿನಲ್ಲಿ ಹಲವಾರು ಕಥನಗಳನ್ನು ನಾವು ನೋಡಿದ್ದೇವೆ. ನಾಯಿಯ ನಿಯತ್ತಿನ ಬಗ್ಗೆ ಹಲವು ಸಿನಿಮಾಗಳೇ ಆಗಿವೆ. ಈಗ ರಷ್ಯಾದಲ್ಲಿ ಒಂದು ಶ್ವಾನ ಜಗತ್ತಿನ ಗಮನ ಸೆಳೆದಿದೆ. ಅಯ್ಯೋ, ಸಾಕು ಮಾರಾಯ್ತಿ ಕಾಯ್ದಿದ್ದು ಮನೆಗೆ ಹೋಗು ಅವನಿನ್ನು ಬರುವುದಿಲ್ಲ ಮನೆಗೆ ಹೋಗು ಎಂದು ಜನರು ಅದಕ್ಕೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಆದರೂ ಕೂಡ ಆ ಶ್ವಾನ ತಾನು ಕುಳಿತ ಜಾಗದಿಂದ ಒಂದಿಂಚೂ ಕೂಡ ಕದಲುತ್ತಿಲ್ಲ.
ಇದನ್ನೂ ಓದಿ:ನೀವು ಕುಡಿದ ಅತ್ಯಂತ ದುಬಾರಿ ಟೀ ಯಾವುದು? 1 ಲಕ್ಷ ರೂಪಾಯಿ ‘ಗೋಲ್ಡ್ ಚಹಾ’ ವಿಶೇಷತೆ ಏನು ಗೊತ್ತಾ?
ರಷ್ಯಾದಲ್ಲಿ ಈಗ ಭೀಕರ ಚಳಿಗಾಲ, ನದಿಗಳು ಮೇಲ್ಮೈ ಹೆಪ್ಪುಗಟ್ಟಿಕೊಂಡಿರುತ್ತದೆ ಒಳಗೆ ನದಿ ವೇಗವಾಗಿ ಹರಿಯುತ್ತಿರುತ್ತದೆ. ಅದೇ ರೀತಿ ರಷ್ಯಾದ ಉಫಾ ನದಿಯೂ ಕೂಡ ಈಗ ಹೆಪ್ಪುಗಟ್ಟಿದೆ. 59 ವರ್ಷದ ವ್ಯಕ್ತಿ ತನ್ನ ನಾಯಿಯೊಂದಿಗೆ ಅಲ್ಲಿಗೆ ಬಂದು ಸೈಕಲ್ ಸವಾರಿ ಮಾಡುವಾಗ ಹೆಪ್ಪುಗಟ್ಟಿದ ನದಿಯ ಮೇಲ್ಮೈ ಒಡೆದು, ಆ ವ್ಯಕ್ತಿ ನದಿಯೊಳಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಅವನ ರಕ್ಷಣೆಗಾಗಿ ರಕ್ಷಣಾ ತಂಡ ಹರಸಾಹಸ ಪಟ್ಟಿದೆ. ಶೋಧಕಾರ್ಯವನ್ನು ತೀವ್ರಗೊಳಿಸಿ ನೋಡಿದಾಗ ನದಿಯ ಆಳದಲ್ಲಿ 59 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನಿಜಕ್ಕೂ ಇದು ಹೃದಯವಿದ್ರಾವಕ ಘಟನೆ. ಆದ್ರೆ ಅದಕ್ಕಿಂತ ಜನರ ಮನಸ್ಸಿಗೆ ನಾಟಿದ್ದು ಬೆಲ್ಕಾ ಎಂಬ ನಾಯಿಯ ಆ ನಿಯತ್ತು.
ಇದನ್ನೂ ಓದಿ:ಬ್ಯಾಗ್ನಲ್ಲಿ ಸತ್ತ ಜಿರಳೆ, ನೊಣ, ಕೂದಲುಗಳ ರಾಶಿ! 63 ಹೋಟೆಲ್ಗಳಿಗೆ ಪಂಗನಾಮ.. ಈತ ಸಿಕ್ಕಿ ಬಿದ್ದಿದ್ದೇ ರೋಚಕ!
ಈ ಘಟನೆ ನಡೆದು ಈಗಾಗಲೇ ನಾಲ್ಕು ದಿನಗಳು ಕಳೆದಿವೆ. ಆದ್ರೆ ಬೆಲ್ಕಾ ಮಾತ್ರ ಮಾಲೀಕ ಕಳೆದು ಹೋದ ಜಾಗದಿಂದ ಕದಲಿಲ್ಲ. ಅದೇ ನದಿಯ ದಂಡೆಯ ಮೇಲೆ ಅವನು ಮತ್ತೆ ಬರುತ್ತಾನೆ ಎಂದು ಕಾಯುತ್ತಾ ಕುಳಿತಿದೆ. ಕುಟುಂಬದವರು ಅದನ್ನು ಒತ್ತಾಯ ಮಾಡಿ ಕರೆದುಕೊಂಡು ಹೋದರು ಕೂಡ ಅದು ಮತ್ತೆ ಓಡೋಡಿ ಅದೇ ಜಾಗದಲ್ಲಿ ಬಂದು ಕೂರುತ್ತಿದೆ. ಈ ಒಂದು ದೃಶ್ಯ ಎಂತವರ ಕಣ್ಣಂಚನ್ನು ಕೂಡ ತೇವಗೊಳಿಸುತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಬೆಲ್ಕಾ ತನ್ನ ಮಾಲೀಕನಿಗಾಗಿ ಕಾಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಬ್ರುಟ್ಅಮೆರಿಕಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಒಂದು ವಿಡಿಯೋ ಪೋಸ್ಟ್ ಆಗಿದ್ದು ಇದು ಸಖತ್ ವೈರಲ್ ಆಗಿದೆ. ನಾಯಿಯ ಪ್ರಾಮಾಣಿಕತೆಗೆ ಎಲ್ಲರೂ ಶರಣು ಅನ್ನುತ್ತಿದ್ದಾರೆ. 8 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
View this post on Instagram
ಇದೇ ರೀತಿಯ ಒಂದು ಘಟನೆ ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿಯೂ ನಡೆದಿತ್ತು. ಮಹಿಳೆಯೊಬ್ಬಳು ಸೇತುವೆಯ ಮೇಲಿಂದ ಗೋದಾವರಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಅವಳಿಗಾಗಿ ಸೇತುವೆಯ ಮೇಲೆಯೇ ಕಾದು ಕುಳಿತಿತ್ತು ಶ್ವಾನ. ಈ ಎಲ್ಲಾ ಹೃದಯ ಕಲಕುವು ವಿಡಿಯೋಗಳು ಜಪಾನ್ನ ಹಚಿಕೋ ಶ್ವಾನವನ್ನು ನೆನಪಿಸುತ್ತಿವೆ. ಜಪಾನ್ನಲ್ಲಿ ಈ ನಾಯಿ ಮೃತಪಟ್ಟ ತನ್ನ ಮಾಲೀಕ ವಾಪಸ್ ಬರುತ್ತಾನೆ ಎಂದು ಸತತ 9 ವರ್ಷಗಳ ಕಾಲ ರೇಲ್ವೆ ಸ್ಟೇಷನ್ನಲ್ಲಿ ಅವನಿಗಾಗಿಯೇ ಕಾದು, ಅಲ್ಲಿಯೇ ಮೃತಪಟ್ಟಿತ್ತು. ಈ ವಿಡಿಯೋ ನೋಡಿದ ಜನರು. ಇದು ಎರಡನೇ ಹಚಿಕೋ ಸ್ಟೋರಿ ಎಂದೆ ಮಮ್ಮಲ ಮರುಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ