/newsfirstlive-kannada/media/post_attachments/wp-content/uploads/2024/07/Donald-Trump.jpg)
ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣಾ ಪೈಪೋಟಿಗೆ ರೋಚಕ ತಿರುವು ಸಿಕ್ಕಿದೆ. ರಿಪಬ್ಲಿಕನ್ ಪಕ್ಷದಿಂದ ಎರಡನೇ ಬಾರಿಗೆ ಆಯ್ಕೆ ಬಯಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ವಿಫಲ ಯತ್ನ ನಡೆದಿದೆ. ದಾಳಿಕೋರ ಹಾರಿಸಿದ ಗುಂಡು ಅವರ ಬಲಗಿವಿಯನ್ನು ತೂರಿಕೊಂಡು ಹೋಗಿದ್ದು, ಟ್ರಂಪ್ ಜಸ್ಟ್ ಮಿಸ್ ಆಗಿದ್ದಾರೆ.
ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಹತ್ಯೆಗೆ ಯತ್ನ
ಪ್ರಚಾರದ ವೇಳೆ ಗುಂಡಿನ ದಾಳಿ.. ಟ್ರಂಪ್ ಜಸ್ಟ್ ಮಿಸ್!
ಎಲ್ಲೋ ನಡೀತಿದ್ದ ಭಾಷಣ.. ಇನ್ನೆಲ್ಲೋ ಅವಿತು ಕುಳಿತಿದ್ದ ಆಗಂತುಕ. ಕಟ್ಟಡದ ಮೇಲಿಂದ ಸಿನಿಮೀಯ ಶೈಲಿಯಲ್ಲಿ ಇಟ್ಟಿದ್ದ ಗುರಿ. ಜಸ್ಟ್ ಮಿಸ್ ಆಗಿದೆ. ಒಂದಲ್ಲ.. ಎರಡಲ್ಲ.. 8 ಸುತ್ತು ಗುಂಡು ಹಾರಿಸಿದ್ರೂ ವಿಶ್ವದ ಮಾಜಿ ದೊಡ್ಡಣ್ಣ ಪ್ರಾಣಾಪಾಯದಿಂದ ಬಚಾವಾಗಿದ್ದೇ ರೋಚಕ.
ಹತ್ಯೆಯ ಯತ್ನ.. ವಿಶ್ವದ ದೊಡ್ಡಣ್ಣ ಅಮೆರಿಕದ ಮಾಜಿ ಅಧ್ಯಕ್ಷರ ಹತ್ಯೆಗೆ ಬಹುದೊಡ್ಡ ಯತ್ನ ನಡೆದಿದೆ. ಸಾವಿನ ದವಡೆಯಿಂದ ವಿಶ್ವದ ಪ್ರಖ್ಯಾತ ಉದ್ಯಮಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಸ್ಟ್ ಮಿಸ್ ಆಗಿದ್ದಾರೆ. ಹಾಡಹಗಲೇ, ನಟ್ಟನಡು ರಸ್ತೆಯಲ್ಲಿ ವಿಶ್ವದ ಪವರ್ಫುಲ್ ವ್ಯಕ್ತಿಯನ್ನ ಕೊಲ್ಲುವ ಪ್ರಯತ್ನ ನಡೆದಿದೆ. ಡೊನಾಲ್ಡ್ ಟ್ರಂಪ್ ಹತ್ಯೆಗೆ ನಡೆದ ಯತ್ನದ ದೃಶ್ಯಗಳನ್ನ ನೋಡಿ ವಿಶ್ವವೇ ಬೆಚ್ಚಿ ಬಿದ್ದಿದೆ. ಡೊನಾಲ್ಡ್ ಟ್ರಂಪ್, ರಕ್ತಸಿಕ್ತ ದೇಹದಲ್ಲೇ ಪ್ರಾಣಾಪಾಯದಿಂದ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: Watch: ಟ್ರಂಪ್ ಕಿವಿಗೆ ಬಡಿದ ಬುಲೆಟ್; ಮಾಜಿ ಅಧ್ಯಕ್ಷರು ಆ ಕ್ಷಣದಲ್ಲಿ ಮಾಡಿದ್ದೇನು.. ಭಯಾನಕ ದಾಳಿಯ ವಿಡಿಯೋ
ಟ್ರಂಪ್ ಹತ್ಯೆಗೆ ಯತ್ನ.. ಜಸ್ಟ್ ಮಿಸ್!
ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ಹಮ್ಮಿಕೊಂಡಿದ್ದ ಱಲಿ
ಶನಿವಾರ ಸಂಜೆ 6 ಗಂಟೆ 03 ನಿಮಿಷಕ್ಕೆ ಟ್ರಂಪ್ ಎಂಟ್ರಿ
ಅಕ್ರಮ ವಲಸಿಗರ ಬಗ್ಗೆ ಆಕ್ರೋಶ ಹೊರಹಾಕ್ತಿದ್ದ ಟ್ರಂಪ್
ಭಾಷಣ ಮಾಡುತ್ತಿದ್ದಂತೆಯೇ 6 ಗಂಟೆ 11 ನಿಮಿಷಕ್ಕೆ ಶೂಟ್
ಒಂದರ ಹಿಂದೊಂದರಂತೆ ಗುಂಡಿನ ಮಳೆಗೈದ ಹಂತಕ
ಅದರಲ್ಲಿ ಒಂದು ಗುಂಡು ಟ್ರಂಪ್ ಕಿವಿಗೆ ತಾಗಿ ಗಾಯ
ಗೆಟ್ ಡೌನ್ ಅಂತಾ ಓಡಿ ಬಂದ ಸೀಕ್ರೆಟ್ ಸರ್ವಿಸ್ ಏಜೆಂಟ್ಸ್
ಟ್ರಂಪ್ನ ಬಚಾವ್ ಮಾಡಿ ಕರೆದೊಯ್ದ ಸೆಕ್ಯೂರಿಟಿ ಏಜೆಂಟ್ಸ್
ಟ್ರಂಪ್ ಮೇಲಿನ ದಾಳಿಗೆ ವಿಶ್ವ ನಾಯಕರ ತೀವ್ರ ಖಂಡನೆ
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ನಡೆದಿರುವ ಹತ್ಯೆ ಪ್ರಯತ್ನಕ್ಕೆ ಪ್ರಧಾನಿ ಮೋದಿ ಸೇರಿದಂತೆ ವಿಶ್ವ ನಾಯಕರು ಖಂಡನೆ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರನ್ನು ತಮ್ಮ ಸ್ನೇಹಿತ ಎಂದು ಉಲ್ಲೇಖಿಸಿರುವ ಪ್ರಧಾನಿ ಮೋದಿ, ರಾಜಕೀಯ ಹಾಗೂ ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಜಾಗವಿಲ್ಲ ಎಂದು ಹತ್ಯಾ ಪ್ರಯತ್ನದ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಹಾಗೂ ಟ್ರಂಪ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ರತ್ನ ಭಂಡಾರದ ರಹಸ್ಯ.. 46 ವರ್ಷದ ಬಳಿಕ ಬಾಗಿಲು ತೆರೆದಾಗ ನಿಗೂಢ ಶಬ್ಧ, ವಿಸ್ಮಯ; ಆಗಿದ್ದೇನು?
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಟ್ರಂಪ್ ಜತೆ ಬೈಡನ್ ಫೋನ್ ಮೂಲಕ ಮಾತನಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆ. ತಮ್ಮ ಮೇಲಿನ ದಾಳಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಟ್ರಂಪ್, ಗುಂಡಿನ ದಾಳಿ ಬಳಿಕ ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದಾರೆ.
ಟ್ರಂಪ್ ಹತ್ಯೆಗೆ ಯತ್ನಿಸಿದ ಯುವಕ ಯಾರು?
ಟ್ರಂಪ್ ಮೇಲೆ ಗುಂಡಿನ ದಾಳಿ ಬಳಿಕ ಮತ್ತೊಂದು ಸ್ಫೋಟಕ ವಿಚಾರ ಹೊರ ಬಿದ್ದಿದೆ. ಅಮೆರಿಕಾದ ಮಾಜಿ ಅಧ್ಯಕ್ಷರನ್ನ ಕೊಲ್ಲೋಕೆ ಬಂದವನು ಜಸ್ಟ್ 20 ವರ್ಷದ ಯುವಕ ಅನ್ನೋದು ಗೊತ್ತಾಗಿದೆ. ಮ್ಯಾಥಿವ್ ಕ್ರೂಕ್ಸ್ ಎಂಬಾತ ಟ್ರಂಪ್ ಭಾಷಣ ಮಾಡ್ತಿದ್ದ ಜಾಗದಿಂದ ಸರಿಯಾಗಿ ಸುಮಾರು 130 ಯಾರ್ಡ್ಸ್ ದೂರದಲ್ಲಿದ್ದ ಕಟ್ಟಡದ ಮೇಲೆ ನಿಂತು ಗುಂಡಿನ ದಾಳಿ ನಡೆಸಿದ್ನಂತೆ. ಗುಂಡು ಎಲ್ಲಿಂದ ಬರ್ತಿದೆ ಅನ್ನೋದನ್ನ ಸೂಕ್ಷ್ಮವಾಗಿ ಗ್ರಹಿಸಿದ ಸ್ನೈಪರ್ಗಳ ತಂಡ ಮ್ಯಾಥಿವ್ ಕ್ರೂಕ್ಸ್ ಇದ್ದ ಜಾಗಕ್ಕೇ ಟಾರ್ಗೆಟ್ ಮಾಡಿ ಅವನನ್ನ ಹೊಡೆದುರುಳಿಸಿದ್ದಾರೆ. ಈತನಿಗೆ ಸಾಥ್ ನೀಡಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ.
ವಿಶ್ವದ ದಿಗ್ಗಜ ನಾಯಕನೊಬ್ಬನನ್ನ 20 ವರ್ಷದ ಹುಡುಗನೊಬ್ಬ ಹತ್ಯೆ ಮಾಡೋಕೆ ಬಂದಿದ್ದ ಅನ್ನೋದು ಕಳವಳ ಸೃಷ್ಟಿಸಿದೆ. ಟ್ರಂಪ್ ಹೇಳಿ ಕೇಳಿ ಒಬ್ಬ ಅಪ್ಪಟ ರಾಷ್ಟ್ರೀಯವಾದಿ, ಹಾಗಾಗಿ ಈ ಘಟನೆ ಹಿಂದೆ ಯಾವುದಾದ್ರೂ ಉಗ್ರ ಗುಂಪು ಕೆಲಸ ಮಾಡ್ತಿದ್ಯಾ. ಅಮೆರಿಕಾದ ಎಲೆಕ್ಷನ್ಸ್ ಹತ್ತಿರವಾಗ್ತಿರೋದ್ರಿಂದ ಇದು ರಾಜಕೀಯ ಪ್ರೇರಿತವಾ ಅನ್ನೋ ಅನುಮಾನವೂ ಮೂಡಿದ್ದು, ಇದಕ್ಕೆಲ್ಲ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ