/newsfirstlive-kannada/media/post_attachments/wp-content/uploads/2025/07/Trekking1.jpg)
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವಕ ಯುವತಿಯರು ಟ್ರೆಕ್ಕಿಂಗ್ ಹೋಗೋದಕ್ಕೆ ಶುರು ಮಾಡಿದ್ದಾರೆ. ಗುಡ್ಡ, ಬೆಟ್ಟ ಹಾಗೂ ಕಾಡು ಪ್ರದೇಶ ಅಂತ ಸುತ್ತಾಡುತ್ತಾ ಒತ್ತಡವನ್ನು ದೂರ ಮಾಡಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಟ್ರೆಕ್ಕಿಂಗ್ ಮಾಡುವ ಅನುಭವ ಪಡೆಯುವುದು ಹಲವರಿಗೆ ಇಷ್ಟವಾಗುತ್ತದೆ. ಅದರಲ್ಲೂ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಮಾಡಿದರೆ, ಆ ಖುಷಿಯೇ ಬೇರೆ.
ಇದನ್ನೂ ಓದಿ:ಮತ್ತೆ ಇಬ್ಬರ ಜೀವ ಕಸಿದ ಹೃದಯ.. ಎದೆಬಡಿತದ ಕ್ರೂರ ಆಟಕ್ಕೆ ಮದ್ದು ಎಲ್ಲಿ..?
ಹೌದು, ಕರ್ನಾಟಕದಲ್ಲಿ ಟ್ರೆಕ್ಕಿಂಗ್ ಮಾಡಲು ಅನೇಕ ಸುಂದರವಾದ ಸ್ಥಳಗಳಿವೆ. ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆಯಲು ಬಯಸುವವರು, ನೀವು ಏನಾದ್ರೂ ಒನ್​ ಡೇ ಟಿಪ್​ ಹೋಗಬೇಕು ಅಂತ ಅಂದುಕೊಂಡಿದ್ದರೆ, ಮೊದಲು ಕರ್ನಾಟಕದ ಈ 7 ಸ್ಥಳಕ್ಕೆ ಭೇಟಿ ಕೊಡಿ. ಬೆಂಗಳೂರಿನಿಂದ ನೀವು ಸುಲಭವಾಗಿ ಟ್ರೆಕ್ಕಿಂಗ್ ಮಾಡಬಹುದಾಗಿದೆ. ಹಾಗಾದರೆ ಆ ಟ್ರೆಕ್ಕಿಂಗ್ ತಾಣಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.
1. ಕುದುರೆಮುಖ ಶಿಖರ: ಕುದುರೆಮುಖ ಶಿಖರವು ಸಮುದ್ರಮಟ್ಟದಿಂದ ಸುಮಾರು 1894 ಮೀ ಎತ್ತರದಲ್ಲಿ ನೆಲೆಸಿದೆ. ಚಾರಣ ಮಾಡಲು ಬಯಸುವ ಮಂದಿಗೆ ಇದು ಸ್ವರ್ಗವೇ ಸರಿ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇದರ ಆಕಾರ ಕುದುರೆಯ ಮುಖದಂತೆ ಕಾಣುವುದರಿಂದ ಇದಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ.
2. ಬಾಬಾ ಬುಡನ್ ಗಿರಿ: ಬಾಬಾ ಬುಡನ್ ಗಿರಿ ಚಿಕ್ಕಮಗಳೂರಿನಲ್ಲಿರುವ ಮನೋಹರವಾದ ಟ್ರೆಕ್ಕಿಂಗ್ ತಾಣವಾಗಿದೆ. ಪಶ್ಚಿಮ ಘಟ್ಟಗಳ ಸುಂದರ ದೃಶ್ಯಾವಳಿಗಳು ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುತ್ತದೆ. 1930 ಮೀಟರ್ ಎತ್ತರ ಹೊಂದಿರುವ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತ್ಯಂತ ಎತ್ತರದ ಶಿಖರವಾಗಿದೆ.
3. ಮುಳ್ಳಯ್ಯನಗಿರಿ: ಸಮುದ್ರಮಟ್ಟದಿಂದ 1930 ಮೀಟರ್ ಎತ್ತರದಲ್ಲಿರುವ ಮುಳ್ಳಯ್ಯನಗಿರಿಯ ಟ್ರೆಕ್ಕಿಂಗ್ ಮಾಡುವುದು ರೋಮಾಂಚಕವಾದ ಅನುಭವವನ್ನು ಉಂಟು ಮಾಡುತ್ತದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.
4. ಕುಂತಿ ಬೆಟ್ಟ : ಪಾಂಡವಪುರ ಪಟ್ಟಣದಲ್ಲಿ ಎರಡು ಬೆಟ್ಟಗಳ ನಡುವೆ ನೆಲೆಸಿರುವ ಕುಂತಿ ಬೆಟ್ಟವು ಕಬ್ಬಿನ ಗದ್ದೆಗಳು, ಭತ್ತದ ಗದ್ದೆಗಳು ಮತ್ತು ಎತ್ತರವಾದ ತೆಂಗಿನ ವೃಕ್ಷಗಳಿಂದ ಆವೃತವಾಗಿದೆ. ಈ ಕುಂತಿಬೆಟ್ಟ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಎರಡು ಬೆಟ್ಟಗಳ ನಡುವಿನ ಸುಂದರ ಬೆಟ್ಟ ಇದಾಗಿದ್ದು, ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಈ ಬೆಟ್ಟ ಏರಿ ನೋಡಿದಾಗ ಕಾಣುವ ಅದ್ಭುತ ದೃಶ್ಯ ಸಿರಿಗಳು ಕಣ್ಮನ ಸೆಳೆಯುವುದು ಖಂಡಿತ.
5. ಭೀಮೇಶ್ವರಿ: ಮಂಡ್ಯ ಜಿಲ್ಲೆಯ ಭೀಮೇಶ್ವರಿ ಬೆಂಗಳೂರಿಗರ ವಾರಾಂತ್ಯ ತಾಣವಾಗಿದೆ. ಟ್ರೆಕ್ಕಿಂಗ್ ಪ್ರಿಯರು ಈ ತಾಣವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಭೀಮೇಶ್ವರಿ ಪ್ರಕೃತಿ ಮತ್ತು ಸಾಹಸ ಶಿಬಿರವು ಪ್ರಕೃತಿ ಪ್ರಿಯರಿಗೆ ಭವ್ಯವಾದ ಸ್ಥಳವಾಗಿದೆ. ಕರ್ನಾಟಕದ ಸುಂದರವಾದ ಕಾಡುಗಳಲ್ಲಿ ಸಿಕ್ಕಿಕೊಂಡಿರುವ ಇದು ಸಾಹಸಿಗರಿಗೆ ಸಂಪೂರ್ಣ ಸ್ವರ್ಗವಾಗಿದೆ.
6. ಕೊಡಚಾದ್ರಿ ಟ್ರೆಕ್: ಕರ್ನಾಟಕದ ಜನಪ್ರಿಯ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಕೊಡಚಾದ್ರಿ ಮರೆಯುವಂತಿಲ್ಲ. ಪಶ್ಚಿಮಘಟ್ಟಗಳಲ್ಲಿ ನೆಲೆಸಿರುವ ಈ ಕೊಡಚಾದ್ರಿ ಸಮುದ್ರಮಟ್ಟದಿಂದ ಸುಮಾರು 4411 ಅಡಿ ಎತ್ತರದಲ್ಲಿದೆ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗೂ ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗವಾಗಿದೆ.
7. ಝಡ್ ಪಾಯಿಂಟ್: ಕೆಮ್ಮಣ್ಣುಗುಂಡಿಯ ಝಡ್ ಪಾಯಿಂಟ್ಟೆ 3 ಕಿ. ಮೀ ಟ್ರೆಕ್ಕಿಂಗ್ ಅನ್ನು ನೀವು ಆನಂದಿಸಬಹುದು. ಚಾರಣದ ಹಾದಿಯಲ್ಲಿ ಪ್ರಶಾಂತವಾಗಿ ಧುಮ್ಮಿಕ್ಕುತ್ತಿರುವ ಜಲಪಾತವನ್ನು ಕಾಣುತ್ತೀರಿ. ಇದು ಪಶ್ಚಿಮ ಘಟ್ಟಗಳ ಬೆಟ್ಟಗಳ ಮೇಲೆ ಇದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುಂದರ ನೋಟವನ್ನು ನೀಡುತ್ತದೆ. ಇದು ಟ್ರೆಕ್ಕಿಂಗ್ ಮತ್ತು ಪ್ರಕೃತಿ ಪ್ರಿಯರಿಗೆ ಒಂದು ಉತ್ತಮ ಸ್ಥಳವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ