/newsfirstlive-kannada/media/post_attachments/wp-content/uploads/2025/07/SHRISHANTH_PBKS.jpg)
ಮಿಲಿಯನ್ ಡಾಲರ್ ಟೂರ್ನಿ IPL ಆಟದಿಂದ ಎಷ್ಟು ಮನರಂಜನೆ ನೀಡಿದ್ಯೋ, ಅಷ್ಟೇ ವಿವಾದಗಳಿಂಲೂ ಸುದ್ದಿಯಾಗಿದ್ದಿದೆ. ಹರ್ಭಜನ್ ಸಿಂಗ್ VS ಶ್ರೀಶಾಂತ್ ಕಪಾಳಮೋಕ್ಷ ಪ್ರಕರಣವಂತೂ ಇಂದಿಗೂ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಕರಾಳ ಘಟನೆ ನಡೆದು 18 ಸೀಸನ್ ಕಳೆದ್ರೂ ಹರ್ಭಜನ್ ಸಿಂಗ್ಗೆ ಕೊರಗು ಕಾಡ್ತಿದ್ಯಂತೆ. ಶ್ರೀಶಾಂತ್ ಮಗಳು ಮಾತು ನೆನೆದಾಗೆಲ್ಲಾ ಹೃದಯ ಛಿದ್ರವಾಗುತ್ತಂತೆ. ಭಜ್ಜಿಯ ಪಶ್ಚಾತಾಪದ ಕಥೆ ಇಲ್ಲಿದೆ ನೋಡಿ.
2008, ಮೊಹಾಲಿ- ಮುಂಬೈ VS ಪಂಜಾಬ್ ನಡುವಿನ 10ನೇ ಪಂದ್ಯ
ಕಲರ್ಫುಲ್ ಟೂರ್ನಿ ಐಪಿಎಲ್ನ ಮೊದಲ ಸೀಸನ್ ಅದು. ಹೊಸದಾಗಿ ಪರಿಚಯಿಸಲಾಗಿದ್ದ ಟಿ20 ಕ್ರಿಕೆಟ್‌ನ ರಂಗುರಂಗಿನ ಫ್ಯಾನ್ಸ್ಗೆ ಸಖತ್ ಕಿಕ್ ಕೊಡ್ತಾ ಇತ್ತು. ಟೂರ್ನಿಯ 10ನೇ ಪಂದ್ಯ ಮುಗಿದ ಬೆನ್ನಲ್ಲೇ ಮಿಲಿಯನ್ ಡಾಲರ್ ಟೂರ್ನಿ ಎಂದು ಮರೆಯಲಾಗದ ಕಹಿ ಘಟನೆ ನಡೆದು ಬಿಡ್ತು. ಐಪಿಎಲ್ನ ಮೊಟ್ಟ ಮೊದಲ ಕಾಂಟ್ರವರ್ಸಿ ಇಂದಿಗೂ ಕಪ್ಪುಚುಕ್ಕೆಯಾಗಿ ಉಳಿದಿದೆ.
ಕೆರಳಿದ ಭಜ್ಜಿ, ಪಂದ್ಯದ ಬಳಿಕ ಕಪಾಳಮೋಕ್ಷ.!
ಮುಂಬೈ ಎದುರಿನ ಪಂದ್ಯದಲ್ಲಿ ಪಂಜಾಬ್ ತಂಡ ಗೆದ್ದರೂ ವೇಗಿ ಶ್ರೀಶಾಂತ್ ಮುಖದಲ್ಲಿ ನಗುವಿರಲಿಲ್ಲ. ಬಿಕ್ಕಿ ಬಿಕ್ಕಿ ಅಳ್ತಿದ್ರು. ಆ ಅಳುವಿಗೆ ಕಾರಣ ಕಪಾಳಮೋಕ್ಷ. ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ ಶ್ರೀಶಾಂತ್ ಅಗ್ರೆಸ್ಸಿವ್ ಆಗಿ ವರ್ತಿಸ್ತಾ ಇದ್ರು. ರಾಬಿನ್ ಉತ್ತಪ್ಪನ ಸ್ಲೆಡ್ಜ್ ಮಾಡಿದ್ದಲ್ಲದೇ, ಶಾನ್ ಪೊಲಾಕ್ ವಿಕೆಟ್ ಕಬಳಿಸಿದ ಬಳಿಕ ಅತಿರೇಕದ ಸೆಲಬ್ರೇಷನ್ ಮಾಡಿದ್ದರು. ಇದು ಮುಂಬೈ ನಾಯಕ ಹರ್ಭಜನ್ರನ್ನ ಕೆರಳಿಸಿತ್ತು. ಪಂದ್ಯ ಮುಗಿದ ಬಳಿಕ ಹ್ಯಾಂಡ್ಶೇಕ್ ಮಾಡೋ ಸಮಯದಲ್ಲಿ ಶ್ರೀಶಾಂತ್, ಭಜ್ಜಿ ಏನೋ ಹೇಳಿದ್ದಾರೆ. ಇದು ಹರ್ಭಜನ್ ಹೇಗೆ ಕೇಳಿಸ್ತೋ ಗೊತ್ತಿಲ್ಲ, ಮೈದಾನದಲ್ಲೇ ಕಪಾಳಮೋಕ್ಷ ಮಾಡಿಬಿಟ್ಟಿದ್ದರು.
ಪಶ್ಚಾತಾಪದ ಮಾತುಗಳನ್ನಾಡಿದ ಹರ್ಭಜನ್ ಸಿಂಗ್.!
ನನ್ನ ಜೀವನದಲ್ಲಿ ಒಂದು ವಿಚಾರವನ್ನ ಬದಲಾಯಿಸಬೇಕಂದ್ರೆ, ಅದು ಶ್ರೀಶಾಂತ್ ಜೊತೆಗೆ ನಡೆದ ಘಟನೆ. ನನ್ನ ಜೀವನದಿಂದಲೇ ಅದನ್ನ ತೆಗೆದು ಹಾಕಬೇಕು.
ಈ ಘಟನೆ ನಡೆದ 18 ವರ್ಷಗಳೇ ಉರುಳಿವೆ. 18 ಸೀಸನ್ ಐಪಿಎಲ್ ನಡೆದಿದೆ. ಹಲವಾಲು ಪಂದ್ಯಗಳು ನಡೆದಿದೆ. ಬೌಂಡರಿ, ಸಿಕ್ಸರ್ ಹೊಳೆಯೇ ಹರಿದಿದೆ. ಹಳೆ ನೀರು ಕಾಲಿಯಾಗಿ ಹೊಸ ನೀರು ಬಂದಿದೆ. ಕ್ರಿಕೆಟ್ನಿಂದ ದೂರಾಗಿ ಹರ್ಭಜನ್ ಸಿಂಗ್, ಶ್ರೀಶಾಂತ್ ಕಾಮೆಂಟರಿ ಪ್ಯಾನಲ್ ಸೇರಿದ್ದೂ ಆಗಿದೆ. ಆದ್ರೆ, ಇಂದಿಗೂ ಹರ್ಭಜನ್ಗೆ ಆ ದುರ್ಘಟನೆಯ ಕಹಿ ನೆನಪು ಕಾಡ್ತಿದೆ.
ನಾನು 200 ಬಾರಿ ಕ್ಷಮೆ ಕೇಳಿದ್ದೇನೆ. ಯಾವುದು ನನಗೆ ಬೇಸರ ಅನಿಸುತ್ತದೆ ಅಂದ್ರೆ, ಘಟನೆ ನಡೆದು ವರ್ಷಗಳೇ ಕಳೆದ್ರೂ ಪ್ರತಿ ಅವಕಾಶ ಸಿಕ್ಕಾಗಲೂ, ಪ್ರತಿ ವೇದಿಕೆಯಲ್ಲೂ ನಾನು ಕ್ಷಮೆ ಕೇಳ್ತಿದ್ದೀನಿ. ಅದೊಂದು ತಪ್ಪು. ನಾವೆಲ್ಲರೂ ತಪ್ಪು ಮಾಡ್ತೀವಿ. ಮತ್ತು ಆ ತಪ್ಪನ್ನ ಮತ್ತೆ ಮಾಡದಿರಲು ಪ್ರಯತ್ನಿಸ್ತೀವಿ. ಆತ ನನ್ನ ಟೀಮ್ಮೇಟ್ ಆಗಿದ್ದ. ನಾವಿಬ್ಬರೂ ಒಟ್ಟಿಗೆ ಆಡಿದ್ವಿ. ಆ ಪಂದ್ಯದಲ್ಲಿ ನಾವು ಎದುರಾಳಿಗಳಾಗಿದ್ವಿ. ಆದ್ರೆ, ಅದು ಆ ಮಟ್ಟಕ್ಕೆ ಹೋಗಬಾರದಿತ್ತು. ಅದು ನನ್ನ ತಪ್ಪು. ಆತನ ತಪ್ಪೇನಂದ್ರೆ, ನನ್ನನ್ನ ಕೆರಳಿಸಿದ್ದು. ಏನೇ ಇದ್ರೂ ನಾನು ಮಾಡಿದ್ದು ಒಪ್ಪಿಕೊಳ್ಳುವಂತದ್ದಲ್ಲ. ಸ್ವಾರಿ.!
ಶ್ರೀಶಾಂತ್ ಮಗಳ ಮಾತಿನಿಂದ ಭಜ್ಜಿ ಹೃದಯ ಛಿದ್ರ.!
ಹರ್ಭಜನ್ ಸಿಂಗ್ಗೆ ಇಂದಿಗೂ ಆ ಕಹಿ ಘಟನೆ ಕೊರಗು ಕಾಡ್ತಿರೋದಕ್ಕೆ ಮತ್ತೊಂದು ರೀಸನ್ ಶ್ರೀಶಾಂತ್ರ ಮಗಳು ಶ್ರೀಸಾನ್ವಿಕಾ. ಘಟನೆ ನಡೆದು ಎಷ್ಟೋ ವರ್ಷಗಳಾದ ಬಳಿಕ ಶ್ರೀಸಾನ್ವಿಕಾನ ಹರ್ಭಜನ್ ಭೇಟಿಯಾಗಿದ್ರಂತೆ. ಆಗ ಶ್ರೀಸಾನ್ವಿಕಾ ಹೇಳಿದ ಮಾತು ಕೇಳಿ ಹರ್ಭಜನ್ ಹೃದಯವೇ ಛಿದ್ರವಾಯ್ತಂತೆ.
ಘಟನೆ ನಡೆದ ಹಲವು ವರ್ಷಗಳ ಬಳಿಕ ನಾನು ಶ್ರೀಶಾಂತ್ ಮಗಳನ್ನ ಭೇಟಿಯಾದೆ. ನಾನು ಪ್ರೀತಿಯಿಂದ ಅವಳ ಜೊತೆ ಮಾತನಾಡುತ್ತಿದ್ದೆ. ಆದ್ರೆ, ಆಕೆ ನಾನು ನಿಮ್ಮ ಜೊತೆ ಮಾತನಾಡಲ್ಲ. ನೀವು ನನ್ನ ತಂದೆಗೆ ಹೊಡೆದವರು ಎಂದು ಹೇಳಿದ್ದಳು. ನನ್ನ ಹೃದಯವೇ ಒಡೆದು ಹೋಯ್ತು. ಕಣ್ಣಂಚಲ್ಲಿ ನೀರು ಬಂದು ಬಿಡ್ತು.
ಇದನ್ನೂ ಓದಿ:BCCI ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ರೋಜರ್ ಬಿನ್ನಿ ಗುಡ್ಬೈ.. ಹೊಸ ಬಾಸ್ ಯಾರ್ ಆಗ್ತಾರೆ?
ಶ್ರೀಶಾಂತ್ ಮಗಳು ಕೇಳಿದ ಪ್ರಶ್ನೆ ಈಗಲೂ ಕೂಡ ಹರ್ಭಜನ್ ಮನದಲ್ಲಿದೆ. ಹರ್ಭಜನ್ ಸಿಂಗ್ನ ಪದೇ ಪದೇ ಈ ವಿಚಾರ ಕಾಡ್ತಿದೆ. ಇದನ್ನ ಪರಿಹರಿಸಿಕೊಳ್ಳೋಕೆ ಹರ್ಭಜನ್, ಇದೀಗ ಒಂದು ಮನವಿಯನ್ನೂ ಶ್ರೀಶಾಂತ್ ಪುತ್ರಿಗೆ ಮಾಡಿದ್ದಾರೆ.
ನಾನು ಆಕೆಯನ್ನ ಕೇಳುತ್ತಲೇ ಇದ್ದೇನೆ. ನಿನಗೆ ಸರಿ ಅನ್ನಿಸಲು ನಾನು ಏನನ್ನಾದರೂ ಮಾಡಬಹುದೆ. ನಾನು ಆ ರೀತಿಯ ವ್ಯಕ್ತಿಯಲ್ಲ ಅಂತ ನಿನಗೆ ಅನ್ನಿಸಲು ಏನನ್ನ ಮಾಡಬೇಕು ದಯವಿಟ್ಟು ನನಗೆ ಹೇಳು. ಆಕೆ ದೊಡ್ಡವಳಾದ ಬಳಿಕ ನನ್ನ ಆ ರೀತಿ ನೋಡಲ್ಲ ಅಂದುಕೊಳ್ತಿನಿ. ಈ ಅಂಕಲ್ ಸದಾ ನಿನ್ನ ಜೊತೆಗಿರ್ತಾರೆ. ಯಾವುದೇ ರೀತಿಯಲ್ಲಾಗಲಿ ಸಾಧ್ಯವಾದ ಸಹಾಯ ಮಾಡಲು ಸಿದ್ಧನಾಗಿರ್ತಾನೆ. ಈ ರೂಪದಲ್ಲಿ ಆ ಚಾಪ್ಟರ್ನ ಮುಗಿಸಬೇಕು ಅಂದುಕೊಂಡಿದ್ದೇನೆ.
ಹರ್ಭಜನ್ ಸಿಂಗ್, ಮಾಜಿ ಕ್ರಿಕೆಟರ್
ಕೋಪದ ಕೈಗೆ ಬುದ್ಧಿ ಕೊಟ್ಟ ಹರ್ಭಜನ್ ಸಿಂಗ್ ಇದೀಗ ಪಶ್ಚಾತಾಪ ಪಡ್ತಿದ್ದಾರೆ. ಕಪಾಳಮೋಕ್ಷ ಮಾಡೋಕೆ ಮುನ್ನ ಒಂದು ಕ್ಷಣ ಯೋಚಿಸಿದ್ರೂ, ಹೀಗೆ ವರ್ಷಾನುಗಟ್ಟಲೇ ಕೊರಗು ಅನುಭವಿಸಬೇಕಾದ ಪರಿಸ್ಥಿತಿ ಬರ್ತಾ ಇರಲಿಲ್ಲ. ಅಂದ್ಹಾಗೆ ಈ ಕೊರಗು ಇಲ್ಲಿಗೆ ನಿಲ್ಲೋದು ಇಲ್ಲ. ಜೀವನ ಪರ್ಯಂತ ಒಂದಾಲ್ಲ ಒಂದು ರೀತಿ ಕಹಿ ಘಟನೆ ಹರ್ಭಜನ್ನ ಕಾಡೇ ಕಾಡುತ್ತೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ