/newsfirstlive-kannada/media/post_attachments/wp-content/uploads/2025/06/dr-rathinam-pillai.jpg)
ಬಡವರ ಡಾಕ್ಟರ್ ಎಂದೇ ಖ್ಯಾತಿ ಪಡೆದಿದ್ದ 10 ರೂಪಾಯಿ ವೈದ್ಯ ರಥಿನಂ ಪಿಳ್ಳೈ ನಿಧನರಾಗಿದ್ದಾರೆ. 96 ವರ್ಷದ ರಥಿನಂ ಪಿಳ್ಳೈ ಅವರು, ಬಡವರಿಗೆ ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. 65,000ಕ್ಕೂ ಹೆಚ್ಚು ಯಶಸ್ವಿ ಹೆರಿಗೆಗಳನ್ನು ಮಾಡಿರೋ ಖ್ಯಾತಿ ಇವರಿಗಿತ್ತು.
1929ರಲ್ಲಿ ಜನಿಸಿದ ರಥಿನಂ ಪಿಳ್ಳೈ ಅವರು 1959ರಲ್ಲಿ ವೈದ್ಯರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 60 ವರ್ಷಗಳ ಹಿಂದೆ ರಥಿನಂ ಪಿಳ್ಳೈ ಅವರು ವೈದ್ಯಕೀಯ ಚಿಕಿತ್ಸೆಗೆ ಕೇವಲ 2 ರೂಪಾಯಿಗಳನ್ನು ಮಾತ್ರ ಪಡೆಯುತ್ತಿದ್ದರು.
ರಥಿನಂ ಪಿಳ್ಳೈ ಅವರು ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈ ಪಟ್ಟಣದಲ್ಲಿ ಬಡವರಿಗೆ ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡಿ ಬಡವರ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದರು. ತಮ್ಮ ಕೊನೆಗಾಲದವರೆಗೂ ಕೇವಲ 10 ರೂಪಾಯಿಗಳನ್ನು ಮಾತ್ರ ಪಡೆಯುತ್ತಿದ್ದ ರಥಿನಂ ಪಿಳ್ಳೈ ಅವರನ್ನು ಮಾನವತಾವಾದಿ ಎಂದು ಕರೆಯುತ್ತಾರೆ.
ಇದನ್ನೂ ಓದಿ: ಅವರ ಮಕ್ಕಳಿಗೆ ಹೀಗಾಗಿದ್ರೆ ಫೋಟೋ ತೆಗೆಸಿಕೊಳ್ತಿದ್ರಾ? CM, DCM ವಿರುದ್ಧ ಭೂಮಿಕ್ ತಂದೆ ಆಕ್ರೋಶ
ಡಾ. ರಥಿನಂ ಪಿಳ್ಳೈ ಒಬ್ಬ ನುರಿತ ವೈದ್ಯರಾಗಿದ್ದರು. 50 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ವೈದ್ಯಕೀಯ ಸೌಲಭ್ಯಗಳು ವಿರಳವಾಗಿದ್ದ ಆ ದಿನಗಳಲ್ಲಿ ಅತ್ಯಂತ ಗಂಭೀರ ಕಾಯಿಲೆಗಳನ್ನು ಸಹ ಕಡಿಮೆ ವೆಚ್ಚದಲ್ಲಿ ಗುಣಪಡಿಸಲು ಇವರು ಮುಂದಾಗಿದ್ದರು.
ಹೆರಿಗೆಗೆ ಯಾವುದೇ ಶಸ್ತ್ರಚಿಕಿತ್ಸೆಯನ್ನು ಮಾಡದೆ ಪ್ರಸೂತಿ ಆರೈಕೆಯನ್ನು ರಥಿನಂ ಪಿಳ್ಳೈ ಅವರು ಮಾಡಿದ್ದಾರೆ. ಬಡ ಜನರಿಗೆ ಕೇವಲ ಹತ್ತು ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಿದ್ದಕ್ಕಾಗಿ ಇವರನ್ನು ಅನೇಕರು ಪೂಜಿಸುತ್ತಾರೆ.
ಭಾರತ ಸರ್ಕಾರಕ್ಕೆ ಸಹಾಯ ಮಾಡಿದ್ದ ಡಾಕ್ಟರ್!
ಭಾರತ-ಚೀನಾ ಯುದ್ಧ ಪ್ರಾರಂಭವಾದಾಗ ಕೇಂದ್ರ ಸರ್ಕಾರದ ಬಳಿ ಮಿಲಿಟರಿ ಉಪಕರಣ ಖರೀದಿಸಲು ಸಾಕಷ್ಟು ಹಣವಿರಲಿಲ್ಲ. ಆಗ ಜನರು ತಮ್ಮ ಹಣ ಮತ್ತು ಆಭರಣಗಳನ್ನು ಸರ್ಕಾರಕ್ಕೆ ನೀಡುವ ಮೂಲಕ ಸಹಾಯ ಮಾಡುವಂತೆ ಕೇಳಲಾಯಿತು. ಆ ಸಮಯದಲ್ಲಿ ಡಾ. ರಥಿನಂ ಪಿಳ್ಳೈ ಅವರು ತಮ್ಮ ಹೆಣ್ಣುಮಕ್ಕಳ ಮದುವೆಗಾಗಿ ಉಳಿಸಿದ್ದ ಚಿನ್ನಾಭರಣಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದರು.
ಕೊರೊನಾ ಅವಧಿಯಲ್ಲಿ ಬಡವರ ಡಾಕ್ಟರ್ ತಮ್ಮ ಕಟ್ಟಡದಲ್ಲಿರುವ ಅಂಗಡಿಗಳಿಗೆ 3 ತಿಂಗಳ ಬಾಡಿಗೆಯನ್ನು ವಿಧಿಸದೆ ಮಾನವೀಯತೆಯನ್ನು ಪ್ರದರ್ಶಿಸಿದರು. ಇವರ ಸಮಾಜ ಸೇವೆಯನ್ನು ಮೆಚ್ಚಿ, ವಿವಿಧ ಸಮಾಜ ಕಲ್ಯಾಣ ಸಂಸ್ಥೆಗಳು ಅವರಿಗೆ ಡಾಕ್ಟರ್ ಆಫ್ ಹ್ಯುಮಾನಿಟಿ ಎಂಬ ಬಿರುದನ್ನು ನೀಡಿ ಗೌರವಿಸಿದೆ.
ಡಾ. ರಥಿನಂ ಪಿಳ್ಳೈ ಇಂದು ವೃದ್ಧಾಪ್ಯದಿಂದ ನಿಧನರಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರಥಿನಂ ಪಿಳ್ಳೈ ಅವರ ಅಂತ್ಯಕ್ರಿಯೆ ಜೂನ್ 8ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಶ್ರೀನಿವಾಸಪುರಂನಲ್ಲಿರುವ ಅವರ ನಿವಾಸದ ಬಳಿ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ