/newsfirstlive-kannada/media/post_attachments/wp-content/uploads/2025/04/CHINNASWAMY_Stadium_NEW.jpg)
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇನ್ನೇನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವವಿನ ಹೈವೋಲ್ಟೇಜ್ ಪಂದ್ಯ ಆರಂಭವಾಗಬೇಕಿತ್ತು. ಬೌಂಡರಿ, ಸಿಕ್ಸರ್ಗಳನ್ನ ನೋಡಿ ಅಭಿಮಾನಿಗಳು ಶಿಳ್ಳೆ, ಕೇಕೆ ಹಾಕಬೇಕಿತ್ತು. ಆದರೆ ವರುಣನ ಎಂಟ್ರಿಯಿಂದ ಪಂದ್ಯ ಇನ್ನು ಆರಂಭವಾಗಿಲ್ಲ. ತವರಲ್ಲಿ 2 ಸೋಲು ಕಂಡ ಆರ್ಸಿಬಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಮಳೆರಾಯನಿಂದ ಎಲ್ಲದಕ್ಕೂ ಸಮಸ್ಯೆ ಆದಂತೆ ಆಗಿದೆ.
ಸಿಲಿಕಾನ್ ಸಿಟಿಯಲ್ಲಿ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಹಲವೆಡೆ ಜೋರಾಗಿ ವರುಣಾರ್ಭಟ ಇದೆ. ಇದರಿಂದ ಈಗಾಗಲೇ ಆರಂಭವಾಗಬೇಕಿದ್ದ ಬೆಂಗಳೂರು- ಪಂಜಾಬ್ ನಡುವಿನ ಪಂದ್ಯವನ್ನು ನಿಲ್ಲಿಸಲಾಗಿದೆ. ಮಳೆ ಬಂದು ಈಗಲೇ ನಿಂತು ಹೋದರೆ ಯಾವುದೇ ಸಮಸ್ಯೆ ಇಲ್ಲ. ಮಳೆ ನಿಂತ ಕೇವಲ 15 ರಿಂದ 30 ನಿಮಿಷದಲ್ಲಿ ಪಂದ್ಯ ಆರಂಭ ಮಾಡುವ ತಾಕತ್ತು ಎಂ.ಚಿನ್ನಸ್ವಾಮಿ ಮೈದಾನಕ್ಕಿದೆ. ಅಂದರೆ ಚಿನ್ನಸ್ವಾಮಿ ಮೈದಾನ ಅಷ್ಟೊಂದು ಅಪ್ಡೇಟ್ ಆಗಿದೆ.
ಚಿನ್ನಸ್ವಾಮಿಯಲ್ಲಿ ಸಬ್ ಏರ್ ಸಿಸ್ಟಮ್
ಮಳೆ ಬಂದ್ರೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅವಕಾಶ ಇದ್ದೇ ಇದೆ. ಆರ್ಸಿಬಿಯ ಈ ಪಂದ್ಯಕ್ಕೆ ಸಬ್ ಏರ್ ಸಿಸ್ಟಮ್ ವರದಾನವಾಗುತ್ತಾ ಎಂದು ಕಾದು ನೋಡಬೇಕು ಅಷ್ಟೇ. ಮಳೆ ನಿಂತರೆ 15 ರಿಂದ 30 ನಿಮಿಷಗಳಲ್ಲಿ ಮ್ಯಾಚ್ ಸ್ಟಾರ್ಟ್ ಆಗುತ್ತದೆ. ಇಡೀ ದೇಶದಲ್ಲೇ ಸಬ್ ಏರ್ ಸಿಸ್ಟಮ್ ಹೊಂದಿರುವ ಏಕೈಕ ಕ್ರೀಡಾಂಗಣ ಎಂದರೆ ಅದು ಬೆಂಗಳೂರಿನ ಕ್ರಿಕೆಟ್ ಸ್ಟೇಡಿಯಂ.
ಮೈದಾನದಲ್ಲಿ ಅರ್ಧದಿಂದ ಒಂದು ಅಡಿ ಆಳದಲ್ಲಿ ಕೊಳವೆಗಳನ್ನು ಅಳವಡಿಸಲಾಗಿದೆ. ಮಳೆ ಬಂದು ನಿಂತ ತಕ್ಷಣ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಕ್ರೀಡಾಂಗಣಕ್ಕೆ, ಪಿಚ್ಗೆ ರವಾನಿಸಬಹುದು. ಇದರಿಂದ ಮೈದಾನ ಕೆಲವೇ ಕೆಲವು ನಿಮಿಷಗಳಲ್ಲಿ ಒಣಗಲಿದೆ. ಹೀಗಾಗಿ ಐಪಿಎಲ್ ಪಂದ್ಯವನ್ನು ಸುಲಭವಾಗಿ ಆಡಬಹುದು.
ಇದನ್ನೂ ಓದಿ:RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್ ಗೆದ್ದವರು ಯಾರು?
ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡ ಈಗಾಗಲೇ 6 ಪಂದ್ಯಗಳನ್ನ ಆಡಿದ್ದು ಇದರಲ್ಲಿ 4 ಗೆಲುವು ಸಾಧಿಸಿ ತವರಲ್ಲಿ ನಡೆದ 2 ಪಂದ್ಯಗಳನ್ನು ಸೋತಿದೆ. ಇನ್ನೂ ಪಂಜಾಬ್ ಕೂಡ 6 ಪಂದ್ಯಗಳನ್ನು ಆಡಿದ್ದು 4 ಗೆಲುವು ಪಡೆದು ಎರಡರಲ್ಲಿ ಸೋಲುಂಡಿದೆ. ಹೀಗಾಗಿ ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿ 3ನೇ ಸ್ಥಾನದಲ್ಲಿದ್ದರೇ, ಪಂಜಾಬ್ ಕಡಿಮೆ ರನ್ರೇಟ್ನಿಂದ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಆರಂಭವಾಗಿ ಫಲಿತಾಂಶ ಬಂದ್ರೆ ಟೇಬಲ್ನಲ್ಲಿ ಗಣನೀಯ ಬದಲಾವಣೆ ಆಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ