ವಿಜಯಪುರದಲ್ಲಿ ಕೊಳವೆ ಬಾವಿ ದುರಂತ ಇದೇ ಮೊದಲಲ್ಲ.. ಈ ಹಿಂದಿನ ಘಟನೆಗಳು ರಾಜ್ಯವನ್ನೇ ಕಣ್ಣೀರಲ್ಲಿ ತೇಲಿಸಿದ್ವು

author-image
Bheemappa
Updated On
ವಿಜಯಪುರದಲ್ಲಿ ಕೊಳವೆ ಬಾವಿ ದುರಂತ ಇದೇ ಮೊದಲಲ್ಲ..  ಈ ಹಿಂದಿನ ಘಟನೆಗಳು ರಾಜ್ಯವನ್ನೇ ಕಣ್ಣೀರಲ್ಲಿ ತೇಲಿಸಿದ್ವು
Advertisment
  • ಮುಂದುವರಿದ ಸಾತ್ವಿಕ್ ಮುಜುಗೊಂಡ ರಕ್ಷಣಾ ಕಾರ್ಯಾಚರಣೆ
  • ಇಂದಿನ ಪ್ರಕರಣಕ್ಕೂ ಮುಂಚೆ ಇಂತಹ ಎಷ್ಟು ಪ್ರಕರಣ ನಡೆದಿದ್ದವು?
  • 2008ರಲ್ಲಿ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದ್ದ ದೊಡ್ಡ ದುರಂತ

ವಿಜಯಪುರ: ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಂದ ಕೊಳವೆ ಬಾವಿಗೆ ಬಿದ್ದಿದೆ. 2 ವರ್ಷದ ಸಾತ್ವಿಕ್​ನನ್ನು ರಕ್ಷಣೆ ಮಾಡಲು ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆಯವರು ಕಾರ್ಯಾಚರಣೆ ವೇಗವಾಗಿ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಜನರು, ಮಗು ಬದುಕಿ ಬರಲೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಅಂದ್ಹಾಂಗೆ ವಿಜಯಪುರ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಮಕ್ಕಳು ಬೀಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ 2 ಘಟನೆಗಳು ನಡೆದಿದ್ದು ಆ ಬಗ್ಗೆ ಮಾಹಿತಿ ಇಲ್ಲಿದೆ.

publive-image

ಲಚ್ಯಾನ ಗ್ರಾಮದ ತೋಟದಲ್ಲಿ ಸಾತ್ವಿಕ್​ನನ್ನು ರಕ್ಷಣೆ ಮಾಡಲು ಭಾರೀ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಕರಣಕ್ಕೂ ಮೊದಲು ಅಂದರೆ 2008ರಲ್ಲಿ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಕಾಂಚನ ಉರ್ಪ್ ಏಗವ್ವ ಎನ್ನುವ ಬಾಲಕಿ ಬಿದ್ದಿತ್ತು. ಹೀಗಾಗಿ ರಕ್ಷಣೆ ಮಾಡಲು ಭಾರೀ ಯಂತ್ರಗಳ ಮೂಲಕ ಭೂಮಿಯನ್ನು ಅಗೆಯಲಾಗಿತ್ತು. ಜೆಸಿಬಿಗಳ ಮೂಲಕ ಭೂಮಿಯನ್ನು ತೋಡಿ ಭಾರೀ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ದೊಡ್ಡ ಮಟ್ಟದಲ್ಲಿ ರಕ್ಷಣಾ ಕಾರ್ಯ ನಡೆದರು ಬಾಲಕಿಯನ್ನು ಜೀವಂತವಾಗಿ ಪಡೆಯಲು ಆಗಲಿಲ್ಲ. ಏಕೆಂದರೆ ಭೂಮಿಯನ್ನು ತೋಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಬಾಲಕಿ ಮೃತಪಟ್ಟಿದ್ದಳು. ಇದಕ್ಕೆ ಇಡೀ ರಾಜ್ಯದ ಜನ ಅಯ್ಯೋ.. ಎಂದು ತಲೆ ಮೇಲೆ ಕೈ ಹೊತ್ತುಕೊಂಡಿದ್ದರು.

2008ರ ಕೊಳವೆ ಪ್ರಕರಣ ಆದ ಮೇಲೆ 7 ವರ್ಷ ತುಂಬುವಷ್ಟರಲ್ಲಿ ಅಂದರೆ 2014ರಲ್ಲಿ ಮತ್ತೊಂದು 3 ವರ್ಷದ ಮಗು ಅಕ್ಷತಾ ಹನುಮಂತ ಪಾಟೀಲ್ ಕೊಳವೆ ಬಾವಿಗೆ ಬಿದ್ದಿತ್ತು. ಈ ಮನಮಿಡಿಯುವ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿತ್ತು. ಅಕ್ಷತಾಳನ್ನು ಕಾಪಾಡಲು ಸಾಕಷ್ಟು ಕಾರ್ಯಾಚರಣೆ ಮಾಡಿದರು ಯವುದೇ ಪ್ರಯೋಜನ ಆಗಿರಲಿಲ್ಲ. ಏಕೆಂದರೆ ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆದಾಗ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಭೂ ದೇವಿ ಮಗು ಜೀವವನ್ನು ತೆಗೆದುಕೊಂಡಿದ್ದರಿಂದ ಹೆತ್ತ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.

publive-image

ಇದನ್ನೂ ಓದಿ:ಬದುಕಿ ಬಾ ಕಂದ.. ಕಾಲು ಅಲ್ಲಾಡಿಸ್ತಿರುವ ಸಂಕಟ ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ: Video

2014ರ ನಂತರ ಇದೀಗ 2024ರ ಏಪ್ರಿಲ್​ 3 ರಂದು ಸಾತ್ವಿಕ್ ಎನ್ನುವ 2 ವರ್ಷದ ಮುದ್ದಾದ ಕಂದ ಕೊಳವೆ ಬಾವಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಒಳಗೆ ಅವನಿಗಾಗುವ ನೋವು, ನರಳಾಟ, ಹಸಿವು ಮತ್ತು ದಾಹ ಎಲ್ಲವೂ ಆ ದೇವರೇ ಬಲ್ಲನು. ಏಕೆಂದರೆ ಮಗು ಒಂದು ದಿನ ಹಸಿವಿನಿಂದ ಇರಬೇಕು ಎಂದರೆ ದೊಡ್ಡ ಪವಾಡವೇ ನಡೆಯಬೇಕು. ಅಂತಹದ್ದರಲ್ಲಿ ಸಾತ್ವಿಕ್​ ಕೊಳವೆ ಬಾವಿಯಲ್ಲಿ ಬೀಳುವುದಕ್ಕೂ ಮೊದಲು ಯಾವಾಗ ಊಟ ಮಾಡಿದ್ದನು ಎನ್ನುವುದು ಗೊತ್ತಿಲ್ಲ. ಆವಾಗಿನಿಂದ ಈ ಕ್ಷಣದವರೆಗೆ ಉಪವಾಸದಲ್ಲಿದ್ದಾನೆ. ಸದ್ಯ ರಕ್ಷಣಾ ಕಾರ್ಯವಂತೂ ವೇಗವಾಗಿ ನಡೆದಿದ್ದು ಆದಷ್ಟು ಬೇಗ ಬದಕಿ ಬರಲಿ ಎನ್ನುವುದು ಎಲ್ಲದ ಹೃದಯದ ಮಾತು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment