/newsfirstlive-kannada/media/post_attachments/wp-content/uploads/2023/06/Egg.jpg)
ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡ್ತಾರೆ. ಆದ್ರೆ, ಮೊಟ್ಟೆ ವಿತರಣೆ ವಿಚಾರದಲ್ಲಿ ಮಂಡ್ಯದ ಆಲಕೆರೆ ಗ್ರಾಮಸ್ಥರ ನಡುವೆಯೇ ಕಿರಿಕ್ ಸೃಷ್ಟಿಸಿದೆ. ಅಷ್ಟಕ್ಕೂ ಏನಿದು ಒಂದು ಮೊಟ್ಟೆಯ ಕಿರಿಕ್ ಕಥೆ ಎಂಬುವುದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ
ಮಂಡ್ಯದ ಆಲಕೆರೆ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳು ಮೊಟ್ಟೆ ಬೇಡ ಅಂತಿದ್ದಾರೆ. ಪೋಷಕರು ಕೂಡ ಮೊಟ್ಟೆ ವಿತರಣೆಗೆ ವಿರೋಧಿಸಿದ್ದು, ಮೊಟ್ಟೆ ಕೊಟ್ರೆ ನಮ್ಮ ಮಕ್ಕಳಿಗೆ ಟಿ.ಸಿ ಕೊಟ್ಬಿಡಿ ಬೇರೆ ಶಾಲೆಗೆ ಸೇರಿಸ್ತೀವಿ ಅನ್ನೋ ಹಠಕ್ಕೆ ಬಿದ್ದಿದ್ದಾರೆ.
ಅಂದಾಗೇ ಇವರು ಹೀಗೆ ಹೇಳಲು ಕಾರಣ ಶಾಲೆ ಸಮೀಪದಲ್ಲೇ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವಿದೆ. ಗ್ರಾಮಸ್ಥರು ದೇವರಿಗೆ ಕಟ್ಟುನಿಟ್ಟಾದ ಭಕ್ತಿ ಸಮರ್ಪಣೆ ಮಾಡ್ತಾರೆ. ಹಿಂದಿನಿಂದಲೂ ದೇವಾಲಯ ಸುತ್ತಮುತ್ತ ಮಾಂಸಾಹಾರ ನಿಷೇಧಿಸಲಾಗಿದೆ. 3 ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ವಿತರಿಸಲು ನಿರ್ಧರಿಸಿದಾಗಲೂ ಮೊಟ್ಟೆ ಬದಲಿಗೆ ಬಾಳೆಹಣ್ಣು, ಕಡಲೆ ಚಿಕ್ಕಿ ನೀಡಲು ಶಾಲೆಯ ಎಸ್‌ಡಿಎಂಸಿ ನಿರ್ಧರಿಸಿತ್ತು. ಅಂದಿನಿಂದ ಇಲ್ಲಿವರೆಗೂ ಈ ನಿಯಮ ಪಾಲಿಸಿಕೊಂಡು ಬರಲಾಗ್ತಿದೆ. ಹೀಗಾಗಿ ಶಾಲೆಯಲ್ಲಿ ಮೊಟ್ಟೆ ನೀಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬೇಡಿ. ಹಾಗೆಯೇ ತಿನ್ನುವ ಮಕ್ಕಳಿಗೆ ಅವರ ಮನೆಗಳಿಗೇ ತಲುಪಿಸಿ ಅಂತಿದ್ದಾರೆ.
ಇನ್ನು, ಗ್ರಾಮದ ಕೆಲ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ದೃಷ್ಟಿಯಿಂದ ಮೊಟ್ಟೆ ವಿತರಿಸಲಾಗ್ತಿದೆ. ಶಿಕ್ಷಣ ಇಲಾಖೆ ಕೂಡ ಸರ್ಕಾರದ ನಿಯಮದಂತೆ ಮೊಟ್ಟೆ ಕೊಡಲು ಮುಂದಾಗಿದೆ. ಅತ್ತ ಕೆಲವರು ಮೊಟ್ಟೆ ಬೇಡ ಅಂದ್ರೆ ಇನ್ನೂ ಕೆಲವರು ಮೊಟ್ಟೆಗಾಗಿ ಪಟ್ಟು ಹಿಡಿದಿದ್ದಾರೆ. ಈ ಕುರಿತು ನ್ಯೂಸ್ ಫಸ್ಟ್ ವರದಿ ಬಿತ್ತರಿಸಿದ್ದೆ ತಡ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಈ ವಿಚಾರವನ್ನ ಡಿಸಿ ನನ್ನ ಗಮನಕ್ಕೆ ತಂದಿದ್ದಾರೆ. ಎರಡೂ ಗುಂಪಿನವರ ಜೊತೆ ಮಾತನಾಡಲು ಸೂಚಿಸಿದ್ದೇನೆ. ಒಂದು ಕಡೆ ಪದ್ದತಿ, ಇನ್ನೊಂದು ಕಡೆ ಪೌಷ್ಟಿಕ ಆಹಾರ ಕೊಡಬೇಕು. ಕೊಡದಿದ್ರೆ ತಪ್ಪು. ಯಾರು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದೆಂದು ಸಲಹೆ ನೀಡಿದ್ದಾರೆ.
‘‘ಎರಡೂ ಕಡೆಯವರ ಜೊತೆ ಮಾತನಾಡುವಂತೆ ಸೂಚನೆ ಕೊಟ್ಟಿದ್ದೇನೆ. ಒಂದು ಕಡೆ ಅವರ ಪದ್ದತಿ, ಇನ್ನೊಂದು ಕಡೆ ಪೌಷ್ಟಿಕ ಆಹಾರ ಕೊಡಬೇಕು. ಕೊಡದಿದರೆ ತಪ್ಪು. ಯಾರು ಪ್ರತಿಷ್ಠೆಯಾಗಿ ತೆಗೆಕೊಳ್ಳಬಾರದು. ಅವರು ಬೇಡ ಅಂದ್ರೆ ಏನು ಮಾಡೋದಕ್ಕೆ ಆಗೋದಿಲ್ಲ. ಬೇಕು ಅಂದ್ರೆ ಕೊಡಲ್ಲ ಅಂತ ಹೇಳಕ್ಕಾಗುತ್ತಾ? ಈ ಸಮಸ್ಯೆ ಬಗೆಹರಿಸುತ್ತೇವೆ.’’
ಚಲುವರಾಯಸ್ವಾಮಿ, ಸಚಿವ
ಒಟ್ಟಾರೆ ಆಲಕೆರೆ ಗ್ರಾಮದ ಮೊಟ್ಟೆ ವಿವಾದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ. ಮೊಟ್ಟೆ ಕೊಟ್ಟರೇ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ ಒಂದೆಡೆಯಾದರೆ ಕೊಡದಿದ್ರೆ ಸರ್ಕಾರದ ಪೌಷ್ಟಿಕಾಹಾರ ಪೂರೈಕೆ ನಿಯಮ ಉಲ್ಲಂಘನೆಯಾಗುವ ಭಯ ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ