/newsfirstlive-kannada/media/post_attachments/wp-content/uploads/2025/02/elephants.jpg)
ಹೈದರಾಬಾದ್: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಅರಣ್ಯ ರಸ್ತೆಯಲ್ಲಿ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಆನೆಗಳ ಹಿಂಡು ದಾಳಿ ಮಾಡಿದ್ದರಿಂದ ಮೂವರು ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಮೂವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿರುವ ತಲಕೋಣ ಸಿದ್ಧೇಶ್ವರ ಸ್ವಾಮಿ (ಶಿವ) ದೇವಸ್ಥಾನಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಜಾಗರಣೆಗೆ ಎಂದು 30 ಭಕ್ತರ ಗುಂಪು ಮಧ್ಯರಾತ್ರಿ ತೆರಳುತ್ತಿದ್ದರು. ಈ ವೇಳೆ ವೈ ಕೋಟದಿಂದ ಗುಂಡಲಕೋಣಕ್ಕೆ ಹೋಗುವ ಅರಣ್ಯ ರಸ್ತೆಯಲ್ಲಿ 15 ಆನೆಗಳು ಇರುವ ಹಿಂಡು ಪ್ರತ್ಯಕ್ಷವಾಗಿದೆ. ಆಗ ಏಕಾಏಕಿ ಭಕ್ತರ ಮೇಲೆ ದಾಳಿ ಮಾಡಿವೆ. ಕತ್ತಲು ಇದ್ದಿದ್ದರಿಂದ ಭಕ್ತರು ಯಾವ ಕಡೆ ಹೋಗಬೇಕು ಎಂದು ಗೊತ್ತಗಿಲ್ಲ. ಹೀಗಾಗಿ ಆನೆಗಳ ದಾಳಿಯಲ್ಲಿ ಮೂವರು ಭಕ್ತರು ಮೃತಪಟ್ಟಿದ್ದಾರೆ.
ಮೃತರನ್ನು ಆಂಧ್ರದ ರೈಲ್ವೆ ಕೋಡೂರು, ಉರ್ಲಗಡ್ಡ ಪೋಡು ಹಾಗೂ ಅರುಂಧತಿ ನಗರದ ವಂಕಾಯಲ ದಿನೇಶ್, ತುಪಾಕುಲ ಮಣಮ್ಮ ಹಾಗೂ ಚಂಗಲ ರಾಯುಡು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲವು ಉದ್ಯೋಗ.. ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ
ಮಾಹಿತಿ ತಿಳಿಯುತ್ತಿದ್ದಂತೆ ಓಬುಲಂವಾರಿಪಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಮಾಹಿತಿ ತಿಳಿದು ಡಿಸಿಎಂ ಹಾಗೂ ಅರಣ್ಯ ಇಲಾಖೆ ಸಚಿವ ನಟ ಪವನ್ ಕಲ್ಯಾಣ್ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಹಾಸನದಲ್ಲೂ ಕಾಡಾನೆಗೆ ಯುವಕ ಬಲಿ
ಕರ್ನಾಟದ ಹಾಸನ ಜಿಲ್ಲೆಯಲ್ಲೂ ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷ ಮುಂದುವರೆದಿದೆ. ಬ್ಯಾದನೆ ಗ್ರಾಮದಲ್ಲಿ ಕಾಡಾನೆ ಒಂದು ದಾಳಿ ಮಾಡಿದ ಹಿನ್ನೆಲೆಯಲ್ಲಿ ಯುವಕ ಅನಿಲ್ (28) ಎನ್ನುವರು ಜೀವ ಕಳೆದುಕೊಂಡಿದ್ದಾರೆ. ಗುಜನಹಳ್ಳಿ ಗ್ರಾಮದ ಅನಿಲ್, ತೋಟದ ಕೆಲಸಕ್ಕೆ ಎಂದು ಹೋಗಿದ್ದರು. ಸಂಜೆ ಹೊತ್ತಿಗೆ ಕೆಲಸ ಮುಗಿಸಿ ವಾಪಸ್ ಮನೆಗೆ ನಡೆದುಕೊಂಡು ಬರುವಾಗ ಕಾಡಾನೆ ದಾಳಿ ಮಾಡಿ ಕಾಲಿನಿಂದ ತುಳಿದು ಬಲಿ ಪಡೆದಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ