/newsfirstlive-kannada/media/post_attachments/wp-content/uploads/2025/07/FAMILY_AI.jpg)
ಭಾರತದ ಮಧ್ಯಮ ವರ್ಗ ಸಂಕಷ್ಟಕ್ಕೆ ಸಿಲುಕಿರೋದು ಹಣದುಬ್ಬರ, ಬೆಲೆ ಏರಿಕೆ, ತೆರಿಗೆಯ ಹೊರೆಯಿಂದ ಅಲ್ಲವೇ ಅಲ್ಲ. ಇದೆಲ್ಲಕ್ಕಿಂತ ಹೆಚ್ಚಿನ ಹೊರೆಯಾಗಿರೋದು ಇಎಂಐಗಳು.
ಇಎಂಐ, ಮಧ್ಯಮ ವರ್ಗದ ಪಾಲಿಗೆ ದೊಡ್ಡ ಟ್ರ್ಯಾಪ್. ಬೆಲೆ ಏರಿಕೆಯೂ ಅಲ್ಲ, ತೆರಿಗೆಯೂ ಅಲ್ಲ ಎಂದು ಸಂಪತ್ತು ಸಲಹೆಗಾರ ತಪಸ್ ಚಕ್ರವರ್ತಿ ಹೇಳಿದ್ದಾರೆ. ಈ ಬಗ್ಗೆ ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ತಪಸ್ ಚಕ್ರವರ್ತಿ ವಿಸ್ತೃತ ಪೋಸ್ಟ್ ಒಂದನ್ನು ಮಾಡಿದ್ದಾರೆ. ಗಳಿಸಿ, ಸಾಲ ಮಾಡಿ, ಮರುಪಾವತಿ ಮಾಡಿ- ಪುನರಾವರ್ತಿಸಿ- ಉಳಿತಾಯ ಇಲ್ಲ- ಮತ್ತೆ ಕಾರ್ಡ್ ಸ್ವೈಪ್ ಮಾಡಿ. ಇದು ಮಧ್ಯಮ ವರ್ಗ ಮಾಡುತ್ತಿರುವ ಕೆಲಸ. ದೇಶದಲ್ಲಿ ಮಧ್ಯಮ ವರ್ಗದ ಕುಟುಂಬಗಳು ತಮಗೆ ಗೊತ್ತಿಲ್ಲದೇ, ಇಎಂಐ ಟ್ರ್ಯಾಪ್​​ಗೆ ಸಿಲುಕಿದ್ದಾರೆ.
/newsfirstlive-kannada/media/post_attachments/wp-content/uploads/2024/01/Money-11.jpg)
EMI ಜನರ ಜೀವನ ವಿಧಾನ
ಜೀವನದ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹಣಕಾಸಿನ ಸಹಾಯದ ಟೂಲ್ ಆಗಿದ್ದ ಇಎಂಐ, ಈಗ ಜನರ ಜೀವನ ವಿಧಾನವೇ ಆಗಿಬಿಟ್ಟಿದೆ. ಪೋನ್ ಖರೀದಿಸಲು ಇಎಂಐ ಅನ್ನು ಜನರು ಬಳಸುತ್ತಿದ್ದಾರೆ. ಫ್ರಿಡ್ಜ್, ಸೋಫಾ, ಎಸಿ, ಪ್ಲೈಟ್ ಟಿಕೆಟ್ ಖರೀದಿಗೂ ಇಎಂಐ ಆಯ್ಕೆಯ ಮೊರೆ ಹೋಗುತ್ತಿದ್ದಾರೆ. ಮನೆಗೆ ಬೇಕಾದ ದವಸ ಧಾನ್ಯ ಖರೀದಿಗೂ ಇಎಂಐ ಆಯ್ಕೆ ಮಾಡುತ್ತಿದ್ದಾರೆ. ಯಾವುದೇ ಪೇಪರ್ ವರ್ಕ್ ಇಲ್ಲ. ಬರೀ ಕ್ರೆಡಿಟ್ ಕಾರ್ಡ್​ನಲ್ಲಿ ಸ್ವೈಪ್ ಮಾಡೋದು ಇಎಂಐ ಆಗಿ ಪರಿವರ್ತಿಸುವುದೇ ಆಗಿದೆ. ಕ್ರೆಡಿಟ್ ಕಾರ್ಡ್ ಸಾಲ, ಇಎಂಐ ಅನ್ನು ನಾವು ಈಗ ಸಾಮಾನ್ಯದಂತೆ ಬಳಸುತ್ತಿದ್ದೇವೆ.
ಅಂಕಿಅಂಶಗಳ ಪ್ರಕಾರ, ಸಮಸ್ಯೆ ತೀವ್ರ ಅಳವಾಗಿದೆ. ಭಾರತದಲ್ಲಿ ಗೃಹ ಬಳಕೆಯ ಸಾಲ ಜಿಡಿಪಿಯ ಶೇ.42ಕ್ಕೆ ಏರಿಕೆಯಾಗಿದೆ. ಇದರ ಪೈಕಿ ಶೇ.32 ರಷ್ಟು ಭದ್ರತೆ ಇಲ್ಲದ ಸಾಲ ಅಂದರೇ, ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲದ ಮೂಲಕ ಪಡೆದಿದ್ದು. ಇನ್ನೂ ಕೆಲವೆಡೆ ಈಗ ಖರೀದಿಸಿ, ನಂತರ ಪಾವತಿಸಿ (ಬೈ ನೌ, ಪೇ ಲ್ಯಾಟರ್ ಸರ್ವೀಸ್) ಪದ್ಧತಿ ಜಾರಿಗೆ ಬಂದಿದೆ. ಹೇಗಾದರೂ ಮಾಡಿ ಜನರು ಉತ್ಪನ್ನಗಳನ್ನು ಖರೀದಿಸುವಂತೆ ಮಾಡಲು ಈಗ ಖರೀದಿಸಿ, ನಂತರ ಪಾವತಿಸಿ ಸಿಸ್ಟಮ್ ಜಾರಿಗೆ ತಂದಿದ್ದಾರೆ. ಇನ್ನೂ ಭಾರತದಲ್ಲಿ ಐಪೋನ್ ಖರೀದಿದಾರರ ಪೈಕಿ ಶೇ.70 ರಷ್ಟು ಮಂದಿ ಇಎಂಐ ಮೂಲಕವೇ ಐ ಪೋನ್ ಖರೀದಿಸಿದ್ದಾರೆ. ಶೇ.11 ರಷ್ಟು ಸಣ್ಣ ಸಾಲಗಾರರು ಈಗಾಗಲೇ ಸಾಲ ಕಟ್ಟದೇ ಸುಸ್ತಿದಾರರೂ ಆಗಿದ್ದಾರೆ. ಐದು ಮಂದಿಯ ಪೈಕಿ ಮೂರು ಮಂದಿ ಮೂರು ಅಥವಾ ಅದಕ್ಕೂ ಹೆಚ್ಚಿನ ಸಾಲವನ್ನು ಏಕ ಕಾಲಕ್ಕೆ ಪಡೆದಿದ್ದಾರೆ.
ಪರ್ಸ್​ನಲ್ಲಿನ ಹಣ ಹೇಗೆ ಖಾಲಿ ಆಗುತ್ತಿದೆ
ನಾವು ಬರೀ ಖರ್ಚು ಮಾಡುತ್ತಿಲ್ಲ, ನಾವು ಸಾಲದ ಪದರಗಳನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಹಣಕಾಸು, ಸಂಪತ್ತು ಸಲಹೆಗಾರ ತಪಸ್ ಚಕ್ರವರ್ತಿ ಹೇಳಿದ್ದಾರೆ.
ಪ್ರತಿಯೊಂದು ಇಎಂಐ ಕೂಡ ಮ್ಯಾನೇಜ್ ಮಾಡಬಹುದು ಎಂದು ಅನ್ನಿಸುತ್ತೆ. ಆದರೇ, ಬೇಗ ಹೆಚ್ಚಾಗುತ್ತಾ ಹೋಗುತ್ತೆ. ಪೋನ್​ಗೆ 2,400 ರೂಪಾಯಿ, ಲ್ಯಾಪ್ ಟಾಪ್​ಗೆ 3 ಸಾವಿರ, ಬೈಕ್​​ಗೆ 4 ಸಾವಿರ ರೂಪಾಯಿ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ 6,500 ರೂಪಾಯಿಯಾದರೇ, ತಿಂಗಳ ಮಧ್ಯಭಾಗದಲ್ಲೇ 25 ಸಾವಿರ ರೂಪಾಯಿ ಖಾಲಿಯಾಗುತ್ತೆ. ಯಾವುದೇ ಉಳಿತಾಯ ಇರಲ್ಲ. ಒಂದು ಹೆಲ್ತ್ ಎಮರ್ಜೆನ್ಸಿ ಬಂದರೇ, ಕಥೆ ಮುಗಿಯಿತು.
ಈ ವಿಷಯ, ಗೃಹ ಬಳಕೆಯಿಂದ ಆಚೆಗೆ ಹೋಗಿದೆ. ಇದು ಈಗ ಕೇವಲ ವೈಯಕ್ತಿಕ ಸಮಸ್ಯೆಯಾಗಿ ಉಳಿದಿಲ್ಲ. ಕಡಿಮೆ ಉಳಿತಾಯ ಅಂದರೇ, ಹೂಡಿಕೆಯ ಕುಸಿತ. ಹೆಚ್ಚಿನ ಸಾಲ, ಹೆಚ್ಚಿನ ಸುಸ್ತಿಗೆ ಕಾರಣವಾಗುತ್ತೆ. ಸಾಲದ ಒತ್ತಡ ಹೆಚ್ಚಾದಷ್ಟು ಕೆಲಸದ ಸ್ಥಳದಲ್ಲಿ ಉದ್ಯೋಗಿಯ ಮೇಲೆ ಪರಿಣಾಮ ಭಾರಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತೆ. ಮಧ್ಯಮ ವರ್ಗದ ಒತ್ತಡದಿಂದ ದೇಶವೇ ನಿಧಾನವಾಗುತ್ತೆ. ಇದು ಒಬ್ಬರನ್ನಲ್ಲ, ಒಂದು ಕುಟುಂಬವನ್ನಲ್ಲ, ಎಲ್ಲರ ಮೇಲೆ ಪರಿಣಾಮ ಬೀರುತ್ತೆ.
ಹೀಗಾಗಿ ಈ ಇಎಂಐ ಟ್ರ್ಯಾಪ್​ಗೆ ಒಳಗಾಗಬೇಡಿ ಎಂದು ತಪಸ್ ಚಕ್ರವರ್ತಿ ಹೇಳಿದ್ದಾರೆ. ತಕ್ಷಣವೇ ಮಾಡಬೇಕಾದ ನಾಲ್ಕು ಕೆಲಸಗಳ ಬಗ್ಗೆ ತಪಸ್ ಚಕ್ರವರ್ತಿ ಸಲಹೆ ನೀಡಿದ್ದಾರೆ. ನಿಮ್ಮ ಒಟ್ಟಾರೆ ಇಎಂಐ ಮೊತ್ತವನ್ನು ಪರಿಶೀಲಿಸಿ. ಅದು ನಿಮ್ಮ ತಿಂಗಳ ಸಂಬಳದ ಶೇ.40 ರಷ್ಟು ಅನ್ನು ದಾಟಿದ್ದರೇ, ನಿಲ್ಲಿಸಿ, ಅದನ್ನು ಮರು ಮೌಲ್ಯಮಾಪನ ಮಾಡಿ. ಬೇಸಿಕ್ ಎಮರ್ಜೆನ್ಸಿ ಫಂಡ್ ಅನ್ನು ಇಟ್ಟುಕೊಳ್ಳಿ. ಎಮರ್ಜೆನ್ಸಿ ಫಂಡ್​ಗಾಗಿ ಪ್ರತಿ ತಿಂಗಳು ಕನಿಷ್ಠ 500 ರೂಪಾಯಿ ಅಂತೆ ಕೂಡಿಡಿ. ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದೇವೆ ಎಂದು ತೋರಿಸಿಕೊಳ್ಳಲು ಸಾಲ ಪಡೆಯಬೇಡಿ. ನಿಮ್ಮ ಜೀವನದಲ್ಲಿ 20-25ರ ವಯಸ್ಸಿನ ಹಂತದಲ್ಲೇ ಹೂಡಿಕೆ ಆರಂಭಿಸಿ. ಮೊತ್ತ ಚಿಕ್ಕದಾಗಿದ್ದರೂ, ಪರವಾಗಿಲ್ಲ, ಜೀವನದಲ್ಲಿ ಬೇಗನೇ ಹೂಡಿಕೆ ಆರಂಭಿಸಿ ಎಂದು ತಪಸ್ ಚಕ್ರವರ್ತಿ ಮಧ್ಯಮ ವರ್ಗದ ಜನರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಗಂಡನ ಮನೆಯವ್ರೇ ಹುಷಾರ್..! ಮಶ್ರೂಮ್​​ನಿಂದ ಅತ್ತೆ, ಮಾವ, ನಾದಿನಿಯ ಜೀವ ತೆಗೆದ ಸೊಸೆ!
/newsfirstlive-kannada/media/post_attachments/wp-content/uploads/2025/04/PF_MONEYA.jpg)
ಎಲ್ಲ ಕಡೆ ಬಡ್ಡಿ ಇದ್ದೇ ಇರುತ್ತೆ
ಒತ್ತಡದೊಂದಿಗೆ ಜೀವನ ನಡೆಸುವುದು ಸಾಮಾನ್ಯವಲ್ಲ. ನೀವು ಪಾವತಿಸದೇ ಇರೋದರ ಮಾಲೀಕರಾಗುವುದು ಯಶಸ್ಸು ಅಲ್ಲ. ಉತ್ತಮ ಜೀವನದ ಕನಸು ಸಾಲದ ಸುಳಿಗೆ ಸಿಲುಕಲು ಕಾರಣವಾಗಬಾರದು. ಹೆಚ್ಚಿಗೆ ಗಳಿಸುವುದು ಸ್ವಾತಂತ್ರ್ಯ ಅಲ್ಲ. ಕಡಿಮೆ ಹೊಂದುವುದು ಸ್ವಾತಂತ್ರ್ಯ ಎಂದು ತಪಸ್ ಚಕ್ರವರ್ತಿ ಲಿಂಕ್ಡ್ ಇನ್ ಪೋಸ್ಟ್ ಅಲ್ಲಿ ಹೇಳಿದ್ದಾರೆ.
ತಪಸ್ ಚಕ್ರವರ್ತಿ ಅವರು ಹೇಳಿರೋದು ಸರಿಯಾಗಿಯೇ ಇದೆ. ಇಂದು ಎಲ್ಲ ಮಧ್ಯಮ ವರ್ಗದ ಕುಟುಂಬಗಳು ಒಂದಲ್ಲ, ಒಂದು ಇಎಂಐ ಪಾವತಿಸುತ್ತಿವೆ. ಬಡ್ಡಿ ರಹಿತ ಇಎಂಐ ಎಂದು ಷೋರೂಮುಗಳು ಹೇಳಿದರೂ, ಅಲ್ಲಿಯೂ ಹಿಡನ್ ಬಡ್ಡಿ ಇದ್ದೇ ಇರುತ್ತೆ. ಬಡ್ಡಿ ಇಲ್ಲದೇ ಹಣದ ಸಾಲ, ಇಎಂಐ ಸಿಗಲ್ಲ. ಜನರನ್ನು ಹಣಕಾಸು ಸಂಸ್ಥೆಗಳು, ಉತ್ಪನ್ನಗಳನ್ನು ಮಾರುವ ಷೋರೂಮು ಎಕ್ಸಿಕ್ಯುಟೀವ್​​ಗಳು ಯಾಮಾರಿಸುತ್ತಿದ್ದಾರೆ.
ಇಎಂಐ ಸಾಲ ತೆಗೆದುಕೊಂಡು ಬಳಿಕವೇ ಬಡ್ಡಿದರ ಎಷ್ಟು, ಬಡ್ಡಿಗೆ ಎಷ್ಟು ಹಣ ಕಟ್ ಆಗುತ್ತಿದೆ ಅನ್ನೋದು ಗ್ರಾಹಕರಿಗೆ ಗೊತ್ತಾಗುತ್ತೆ. ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಕಂಡಿದ್ದನ್ನೆಲ್ಲಾ ಕೊಳ್ಳುವ ಜನರ ಮನಸ್ಥಿತಿಯಿಂದಾಗಿ ಜನರು ಇಎಂಐ, ಕೆಡ್ರಿಟ್ ಕಾರ್ಡ್ ಸಾಲದ ಇಎಂಐ, ಉತ್ಪನ್ನಗಳ ಖರೀದಿ ಇಎಂಐ ಟ್ರ್ಯಾಪ್​ಗೆ ಒಳಗಾಗಿದ್ದಾರೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us