/newsfirstlive-kannada/media/post_attachments/wp-content/uploads/2024/12/FRAUD-SON.jpg)
ಕೆಲವು ದಿನಗಳ ಹಿಂದೆ ನ್ಯೂಸ್ಫಸ್ಟ್ನ ವೆಬ್ಸೈಟ್ನಲ್ಲಿ ಘಾಜಿಯಾಬಾದ್ನಲ್ಲಿ ನಡೆದ ಒಂದು ಭಾವನಾತ್ಮಕ ಘಟನೆಯ ಬಗ್ಗೆ ಹೇಳಿತ್ತು. 1993ರಲ್ಲಿ ಕಳೆದು ಹೋದ ಮಗ ಮತ್ತೆ 30 ವರ್ಷದ ಬಳಿಕ ಕುಟುಂಬವನ್ನು ಮತ್ತೆ ಸೇರಿದ ಎಂದು. ಅಸಲಿಗೆ ಆ ಮಗ ಮಗನೇ ಅಲ್ಲ ಮಹಾಚೋರ ಎಂಬ ಸತ್ಯ ತಿಳಿದು ಬಂದಿದೆ. ಮಗನೆಂದು ಹೇಳಿ ಮನೆಯನ್ನು ಸೇರಿಕೊಂಡವನು ಕೊನೆಗೆ ವಂಚಕನಾಗಿ ಗುರುತಿಸಿಕೊಂಡಿದ್ದಾನೆ.
ಇಂದ್ರರಾಜ್ ಅಲಿಯಾಸ್ ರಾಜು ಅಲಿಯಾಸ್ ಭೀಮ್ಸಿಂಗ್ನನ್ನು ಯಾವ ಘಾಜಿಯಾಬಾದ್ ಪೊಲೀಸರು ಅವನನ್ನು ಕುಟುಂಬದೊಂದಿಗೆ ಸೇರಿಸಲು ಹರಸಾಹಸ ಪಟ್ಟಿದ್ದರೋ ಅವರೇ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ.
ಈ ರಾಜು ಎಂಬ ಹೆಸರಿನ ಈತ ಮೂಲತಃ ರಾಜಸ್ಥಾನದವನು. ಅವನು ತನ್ನನ್ನು ತಾನು 1993ರಲ್ಲಿ ಕಿಡ್ನಾಪ್ ಆಗಿದ್ದೆ. ನನಗೆ ಆವಾಗ ಕೇವಲ 7 ವರ್ಷ ವಯಸ್ಸು ಇತ್ತು. ನಾನು ಇಂತಹ ಕುಟುಂಬಕ್ಕೆ ಸೇರಿದವನು ಎಂದೆಲ್ಲಾ ನಾಟಕವಾಡಿದ್ದ. ನಾನು 30 ವರ್ಷಗಳ ಬಳಿಕ ವಾಪಸ್ ಬಂದಿದ್ದೇನೆ ಎಂದೆಲ್ಲಾ ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾಗಳ ಗಮನ ಸೆಳೆದಿದ್ದ. ಅವನನ್ನು ಠಾಣೆಯಲ್ಲಿಯೇ ಇರಿಸಿಕೊಂಡ ಪೊಲೀಸರು ಒಂದು ವಾರ ಅನ್ನ, ನೀರು, ಬಟ್ಟೆ ಕೊಟ್ಟು ಕಾಪಾಡಿದ್ದರು. ಕೊನೆಗೆ ಅದೇ ರೀತಿಯ ಪ್ರಕರಣವೊಂದನ್ನು ಅವರ ಕಣ್ಣಿಗೆ ಬಿದ್ದು ಅವರ ಮಗನೇ ಇರಬೇಕು ಎಂದು ಆ ಕುಟುಂಬವನ್ನು ಸಂಪರ್ಕಿಸಿದ್ದರು. ಅವರು ಕೂಡ ಇವನು ನಮ್ಮ ಮಗನೇ ಎಂದಿದ್ದರು. ಪ್ರಕರಣ ಸುಖಾಂತ್ಯ ಕಂಡಿತೆಂದು ಪೊಲೀಸರು ಕೂಡ ಖುಷಿಯಾಗಿದ್ದರು.
ಇದನ್ನೂ ಓದಿ:1993ರಲ್ಲಿ ಕಳೆದು ಹೋದ ಬಾಲಕ 2024ರಲ್ಲಿ ಸಿಕ್ಕಿದ.. 30 ವರ್ಷದ ಬಳಿಕ ಪತ್ತೆಯಾದ ಸ್ಟೋರಿ ರೋಚಕ!
ಆದ್ರೆ ಆತ ಮನೆಗೆ ಬಂದ ಕೆಲವೇ ದಿನಗಳಲ್ಲಿ ಕುಟುಂಬದವರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಡಿಎನ್ಎ ಟೆಸ್ಟ್ ಮಾಡಿಸಿದ ಮೇಲೆ ಗೊತ್ತಾಗಿದೆ ಇವನ ಅಸಲಿ ಬಣ್ಣ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈತನ ಕದ್ದು ಮಾರುವ ಕೆಟ್ಟ ಚಾಳಿಯನ್ನು ತಡೆಯಲಾಗದೇ ಒದ್ದು ಮನೆಯಿಂದ ಆಚೆ ಹಾಕಿದ್ದರಂತೆ. ಈತ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿನ ವಸ್ತುಗಳನ್ನು ಕದ್ದು ಮಾರುತ್ತಿದ್ದನ್ನು ಕಂಡು ರೋಸಿ ಹೋದ ಕುಟುಂಬ ಇವನನ್ನು 2005ರಲ್ಲಿಯೇ ಕತ್ತು ಹಿಡಿದು ಆಚೆ ಹಾಕಿತ್ತಂತೆ.
ಇದನ್ನೂ ಓದಿ:100 ಜನರೊಂದಿಗೆ ಮೆರವಣಿಗೆಯಲ್ಲಿ ಮದುವೆಗೆ ಹೋದವನಿಗೆ ಬಿಗ್ ಶಾಕ್.. ಮದುಮಗಳ ಮೇಲೆ ಕೇಸ್ ದಾಖಲು!
ಮನೆಯಿಂದ ಆಚೆ ದಬ್ಬಿಸಿಕೊಂಡ ಬಳಿಕ ಈತ ತನ್ನ ಗುರುತನ್ನು ಬದಲಾಯಿಸಿಕೊಂಡು ಒಟ್ಟು 9 ವಿಭಿನ್ನ ಕುಟುಂಬಗಳಿಗೆ ನಾನು ನಿಮ್ಮವ ಎಂದು ನಂಬಿಸಿ ಅವರ ಮನೆಯಲ್ಲಿಯೇ ಉಳಿದುಕೊಂಡು ಮನೆಯಲ್ಲಿದ್ದ ವಸ್ತುಗಳನ್ನು ಕದ್ದು ಹೇಳದೇ ಕೇಳದೇ ಪರಾರಿಯಾಗುತ್ತಿದ್ದನಂತೆ. ಇದೇ ರೀತಿ ನಿಮ್ಮ ಮಗ ಎಂದು ಹೇಳಿಕೊಂಡು ಈತ ಪಂಜಾಬ್, ಜೈಸಲ್ಮೇರ್, ರಾಜಸ್ಥಾನ, ಹಿಸ್ಸಾರ್ ಮತ್ತು ಸಿರ್ಸಾಗಳಲ್ಲಿ ಬೇರೆ ಬೇರೆಯವರ ಮನೆಗಳಲ್ಲಿ ಇದ್ದನಂತೆ. ಈತ ಮನೆಗೆ ನಿಮ್ಮ ಮಗನೆಂದು ಹೋದಾಗಲೆಲ್ಲಾ ಮೊದಲು ಮಾತನಾಡುತ್ತಿದ್ದದ್ದು ಆಸ್ತಿಯ ಬಗ್ಗೆಯೇ ಅಂತೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು. ಅವನು ವಾಸವಿದ್ದ ಮನೆಯನ್ನೆಲ್ಲಾ ಪತ್ತೆ ಹಚ್ಚಿ ಏನೆಲ್ಲಾ ಮಾಡಿದ್ದಾನೆ ಎಂಬ ಮಾಹಿತಿಯನ್ನು ಪಡೆಯಲು ತಂಡ ರಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ