ಭಾರತದ ಗೆಲುವಿಗೆ ಬೇಕು 10 ವಿಕೆಟ್.. ರೋಚಕ ತಿರುವಿನತ್ತ ಮೊದಲ ಟೆಸ್ಟ್​..!

author-image
Ganesh
Updated On
ಭಾರತದ ಗೆಲುವಿಗೆ ಬೇಕು 10 ವಿಕೆಟ್.. ರೋಚಕ ತಿರುವಿನತ್ತ ಮೊದಲ ಟೆಸ್ಟ್​..!
Advertisment
  • ಲೀಡ್ಸ್​​ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ಪಾರಮ್ಯ
  • ಆಂಗ್ಲರ ನಾಡಲ್ಲಿ ಘರ್ಜಿಸಿದ ಕನ್ನಡಿಗ KL ರಾಹುಲ್​​
  • ಲೀಡ್ಸ್​ನಲ್ಲಿ ಶತಕ ಸಿಡಿಸಿ ಮಿಂಚಿದ ಕನ್ನಡಿಗ ರಾಹುಲ್

ಲೀಡ್ಸ್​​ ಟೆಸ್ಟ್​​ನ 4ನೇ ದಿನದಾಟದಲ್ಲಿ ಟೀಮ್​ ಇಂಡಿಯಾದ ಅಬ್ಬರ ಜೋರಾಗಿತ್ತು. ಕರುನಾಡ ಕಲಿ ಕೆ.ಎಲ್​ ರಾಹುಲ್​, ಡೇರ್​​ ಡೆವಿಲ್​ ರಿಷಭ್​ ಪಂತ್​ ಆಟಕ್ಕೆ ಇಂಗ್ಲೆಂಡ್​ ತಂಡ ಬೆಚ್ಚಿ ಬೀಳ್ತು. ಬೊಂಬಾಟ್​​ ಬ್ಯಾಟಿಂಗ್​ ನಡೆಸಿದ ಟೀಮ್ ಇಂಡಿಯಾ ಇಂಗ್ಲೆಂಡ್​ ಬಿಗ್​ ಟಾರ್ಗೆಟ್​ ನೀಡುವಲ್ಲಿ ಯಶಸ್ವಿಯಾಗಿದೆ.

ಸೆಷನ್​-1: ರಾಹುಲ್​ ರಾಕ್ಸ್​​​​, ಪಂತ್​ ಫೆಂಟಾಸ್ಟಿಕ್​​

1 ವಿಕೆಟ್​ ನಷ್ಟಕ್ಕೆ 90 ರನ್​ಗಳೊಂದಿಗೆ ದಿನದ ಆಟ ಆರಂಭಿಸಿದ ಟೀಮ್​ ಇಂಡಿಯಾಗೆ ಆರಂಭದಲ್ಲೇ ಶಾಕ್​ ಎದುರಾಯ್ತು. ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಕ್ಯಾಪ್ಟನ್​ ಶುಭ್​ಮನ್​ ಗಿಲ್​ 2ನೇ ಇನ್ನಿಂಗ್ಸ್​ನಲ್ಲಿ ವೈಫಲ್ಯ ಅನುಭವಿಸಿದ್ರು. ಕೇವಲ 8 ರನ್​​ಗಳಿಸಿ ಗಿಲ್​​ ನಿರ್ಗಮಿಸಿದ್ರು.

ಇದನ್ನೂ ಓದಿ: 202 ಎಸೆತ, 100 ರನ್​ ಬಾರಿಸಿದ KL ರಾಹುಲ್​.. ಕನ್ನಡಿಗನ ಬ್ಯಾಟಿಂಗ್​ಗೆ ಇಂಗ್ಲೆಂಡ್​ ಫುಲ್ ಡಲ್!

ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಕೆ.ಎಲ್.ರಾಹುಲ್​, ರಿಷಭ್​ ಪಂತ್​ ದಿಟ್ಟ ಹೋರಾಟ ನಡೆಸಿದ್ರು. ಕ್ಲಾಸ್​​ ಆಟವನ್ನ ಮುಂದುವರೆಸಿದ ಕನ್ನಡಿಗ ರಾಹುಲ್ ಫೈನ್​​ ಹಾಫ್​ ಸೆಂಚುರಿ ಪೂರೈಸಿದ್ರು. ರಾಹುಲ್​, ಪಂತ್​ ಪರ್ಫೆಕ್ಟ್​ ಸಾಥ್​​ ನೀಡಿದ್ರು. ಮೊದಲ ಸೆಷನ್​ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 153 ರನ್​ಗಳಿಸಿತು.

ಸೆಷನ್​-2: ರಾಹುಲ್​, ಪಂತ್​ ಶತಕ ಸಿಂಚನ

ಲಂಚ್​ ಬ್ರೇಕ್​​ನ ಬಳಿಕವೂ ರಿಷಭ್​ ಪಂತ್​, ಕೆ.ಎಲ್.ರಾಹುಲ್​ ಆರ್ಭಟ ಮುಂದುವರೆಯಿತು. ಇವರಿಬ್ಬರ ಆಟಕ್ಕೆ ಇಂಗ್ಲೆಂಡ್​ ಬೌಲರ್​​ಗಳನ್ನ ಬಾಡಿ ಬಸವಳಿದ್ರು. ಎಚ್ಚರಿಕೆಯ ಆಟದ ಜೊತೆ ಜೊತೆಗೆ ಅಗ್ರೆಸ್ಸಿವ್​ ಶಾಟ್​​ಗಳನ್ನೂ ಬಾರಿಸಿ ಆಂಗ್ಲರನ್ನ ಕಾಡಿದ್ರು. 4ನೇ ದಿನದಾಟದಲ್ಲೂ ಅದ್ಭುತ ಬ್ಯಾಟಿಂಗ್​ ಮುಂದುವರೆಸಿದ ಕನ್ನಡಿಗ ರಾಹುಲ್​ ಶತಕ ಸಿಡಿಸಿ ಸಂಭ್ರಮಿಸಿದ್ರು. 202 ಎಸೆತಗಳಲ್ಲಿ ಲೀಡ್ಸ್​ ಟೆಸ್ಟ್​ನಲ್ಲಿ ಶತಕ ಪೂರೈಸಿದ್ರು.

ಇದನ್ನೂ ಓದಿ: ಬ್ಯಾಕ್​ ಟು ಬ್ಯಾಕ್​ ಸೆಂಚುರಿ.. ಕನ್ನಡಿಗ ಕೆ.ಎಲ್ ರಾಹುಲ್ ಬೆನ್ನಲ್ಲೇ ರಿಷಭ್ ಪಂತ್​ ಶತಕ

ಫಸ್ಟ್​ ಇನ್ನಿಂಗ್ಸ್​ನಲ್ಲಿ ಆಡಿದಂತೆ 2ನೇ ಇನ್ನಿಂಗ್ಸ್​ನಲ್ಲೂ ಪಂತ್​ ಪವರ್​​ಫುಲ್​​​ ಇನ್ನಿಂಗ್ಸ್​​ ಕಟ್ಟಿದ್ರು. ಇಂಗ್ಲೆಂಡ್​ ಬೌಲರ್​ಗಳನ್ನ ನಿರ್ಧಯವಾಗಿ ದಂಡಿಸಿದ ರಿಷಭ್​ ಪಂತ್​ ಮತ್ತೊಂದು ಫೆಂಟಾಸ್ಟಿಕ್ ಶತಕ ಸಿಡಿಸಿದ್ರು. ಶತಕದ ಬೆನ್ನಲ್ಲೇ ರಿಷಭ್​ ಪಂತ್​ ಔಟಾದ್ರು. 2ನೇ ಸೆಷನ್​ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 298 ರನ್​​ಗಳಿಸಿತು.

ಸೆಷನ್​-3: ಇಂಗ್ಲೆಂಡ್​​ಗೆ 372 ರನ್​ಗಳ ಟಾರ್ಗೆಟ್​

ಟೀ ಬ್ರೇಕ್​ನ ಬಳಿಕ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದ್ರು. ಶತಕ ಸಿಡಿಸಿ ಮಿಂಚಿದ ರಾಹುಲ್​ 137 ರನ್​​​ಗಳಿಸಿ ಔಟಾದ್ರು. ಮತ್ತೊಬ್ಬ ಕನ್ನಡಿಗ ಕರುಣ್​ ನಾಯರ್​ 2ನೇ ಇನ್ನಿಂಗ್ಸ್​ನಲ್ಲೂ ಬಿಗ್​ ಸ್ಕೋರ್​​ ಕಲೆ ಹಾಕಲಿಲ್ಲ. 20 ರನ್​ಗಳಿಸಿ ಆಟ ಮುಗಿಸಿದ್ರು. ಶಾರ್ದೂಲ್​ ಠಾಕೂರ್​ 4 ರನ್​ಗಳಿಸಿದ್ರೆ, ಸಿರಾಜ್​, ಬೂಮ್ರಾ, ಪ್ರಸಿದ್ಧ್​​ ಕೃಷ್ಣ ಡಕೌಟ್​ ಆದ್ರು. ಕೊನೆಯ ಹಂತದವರೆಗೂ ಹೋರಾಡಿದ ಜಡೇಜಾ 25 ರನ್​ಗಳಿಸಿದ್ರು. ಅಂತಿಮವಾಗಿ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 364 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. ಮೊದಲ ಇನ್ನಿಂಗ್ಸ್​ನ 6 ರನ್​ ಸೇರಿ ಇಂಗ್ಲೆಂಡ್​ಗೆ 371 ರನ್​​ಗಳ ಟಾರ್ಗೆಟ್​ ನೀಡ್ತು.

ಟಾರ್ಗೆಟ್​ ಬೆನ್ನತ್ತಿರೋ ಇಂಗ್ಲೆಂಡ್​ ಎಚ್ಚರಿಕೆಯ ಆರಂಭ ಪಡೆದಿದೆ. ಜಾಕ್​ ಕ್ರಾವ್ಲಿ, ಬೆನ್​ ಡಕೆಟ್​​ ತಾಳ್ಮೆಯ ಆಟವಾಡ್ತಿದ್ದು 4ನೇ ದಿನದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೇ ಇಂಗ್ಲೆಂಡ್​ 21 ರನ್​ಗಳಿಸಿದೆ. ಇಂದಿನ ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 10 ವಿಕೆಟ್​ ಬೇಕಿದ್ರೆ, ಇಂಗ್ಲೆಂಡ್​ ಗೆಲುವಿಗೆ 350 ರನ್​ಗಳು ಬೇಕಿವೆ. ಟೀಮ್​ ಇಂಡಿಯಾ ಬೌಲಿಂಗ್​ VS ಇಂಗ್ಲೆಂಡ್​ ಬ್ಯಾಟರ್ಸ್​​ ನಡುವಿನ ಬ್ಯಾಟಲ್​ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: KL ರಾಹುಲ್​, ಪಂತ್ ಶತಕ ಬಾರಿಸಿದರೂ ಸಂಕಷ್ಟ.. ಕುತೂಹಲದಲ್ಲಿ ಟೆಸ್ಟ್​ನ ಕೊನೆಯ ದಿನ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment