/newsfirstlive-kannada/media/post_attachments/wp-content/uploads/2025/05/PM_MODI.jpg)
ಭೋಪಾಲ್: ಇಡೀ ದೇಶ, ದೇಶದ ಸೇನೆ ಹಾಗೂ ಪ್ರತಿಯೊಬ್ಬ ಸೈನಿಕನೂ ಪ್ರಧಾನಿ ಮೋದಿ ಅವರ ಕಾಲುಗಳಿಗೆ ನಮಸ್ಕರಿಸುತ್ತಾರೆ ಎಂದು ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯ ಇದು ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸುತ್ತಿದ್ದು ಕಾಂಗ್ರೆಸ್ ನಾಯಕರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ನಾಗರಿಕ ರಕ್ಷಣಾ ಸ್ವಯಂಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಜಗದೀಶ್ ದೇವ್ಡಾ, ಪಾಕಿಸ್ತಾನ ವಿರುದ್ಧದ ಸೇನೆಯ ಕಾರ್ಯಾಚರಣೆಯಿಂದ ಭಯೋತ್ಪಾದಕರನ್ನು ಹೊಡೆದು ಓಡಿಸಲಾಗುತ್ತಿದೆ. ಇದರ ಎಲ್ಲ ಕ್ರೆಡಿಟ್ ಪ್ರಧಾನಿ ಮೋದಿಗೆ ಕೊಡಬೇಕು. ಇಡೀ ದೇಶ, ದೇಶದ ಸೇನೆ ಮತ್ತು ಸೈನಿಕರು ಪ್ರಧಾನಿ ನರೇಂದ್ರ ಮೋದಿ ಅವರ ಕಾಲುಗಳಿಗೆ ನಮಸ್ಕಾರ ಮಾಡುತ್ತಾರೆ ಎಂದು ನಾಲಗೆ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ:ಟ್ರ್ಯಾಕ್ಟರ್ಗೆ ಭಯಾನಕವಾಗಿ ಕಾರು ಡಿಕ್ಕಿ.. 11 ತಿಂಗಳ ಗಂಡು ಮಗು ಸೇರಿ ಜೀವ ಬಿಟ್ಟ ನಾಲ್ವರು
ಮೊನ್ನೆ ಮೊನ್ನೆಯಷ್ಟೇ ಇದೇ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು, ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೋಫಿಯಾ ಖುರೇಷಿ, ಭಯೋತ್ಪಾದಕರ ಸಹೋದರಿ ಎಂದಿದ್ದರು. ಇದರ ಬೆನ್ನಲ್ಲೇ ಇಗೀಗ ಡಿಸಿಎಂ ಜಗದೀಶ್ ದೇವ್ಡಾ, ಇಡೀ ದೇಶವೇ ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸುತ್ತದೆ ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಆಪರೇಷನ್ ಸಿಂಧೂರ ಬಗ್ಗೆ ಮತ್ತೊಂದು ರಾಜಕೀಯ ವಿವಾದ ಎದ್ದ ಕೆಲವೇ ದಿನಗಳ ಅಂತರದಲ್ಲಿ ಡಿಸಿಎಂ ಅವರ ಈ ಹೇಳಿಕೆ ಬಂದಿರುವುದು ನಾಚಿಕೆಗೇಡಿತನ. ಇದು ಭಾರತ ಸೇನೆಯ ಶೌರ್ಯ, ಧೈರ್ಯಕ್ಕೆ ಮಾಡಿದ ಅವಮಾನ. ಸೇನೆಯ ಬಗ್ಗೆ ಬಿಜೆಪಿ ನಾಯಕರು ಕೀಳು ಭಾವನೆ ಹೊಂದಿದ್ದಾರೆ. ಈ ಕೂಡಲೇ ಜಗದೀಶ್ ದೇವ್ಡಾ ಕ್ಷಮೆಯಾಚಿಸಬೇಕು. ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ