/newsfirstlive-kannada/media/post_attachments/wp-content/uploads/2023/12/ISHAN_KISHAN.jpg)
ವಿಶ್ವಕಪ್ನಲ್ಲಿ ಎಡವಿದ್ರೂ ಟೀಮ್ ಇಂಡಿಯಾ ಮಾತ್ರ ಪಾಠ ಕಲಿತಿಲ್ಲ. ಆಸಿಸ್ ವಿರುದ್ಧದ ಸರಣಿಯಲ್ಲೂ ಟೀಮ್ ಮ್ಯಾನೇಜ್ಮೆಂಟ್ ಹಳೆ ತಪ್ಪನ್ನೇ ಮತ್ತೆ ಮಾಡಿದೆ. ಇದನ್ನು ನೋಡಿರೋ ಮಾಜಿ ಕ್ಯಾಪ್ಟನ್ ತಂಡದ ವಿರುದ್ಧ ಕೆಂಡ ಕಾರ್ತಿದ್ದಾರೆ.
ಇಂಡೋ-ಆಸಿಸ್ ಟಿ20 ಸರಣಿ ಈಗ ಮುಗಿದ ಅಧ್ಯಾಯ. ಸರಣಿ ಮುಗಿದಿದ್ದೂ ಆಯ್ತು. 4-1 ಅಂತರದಲ್ಲಿ ಸೂರ್ಯಕುಮಾರ್ ಯಾದವ್ ಸೈನ್ಯ ಸರಣಿ ಜಯಿಸಿದ್ದೂ ಆಯ್ತು. ಟೀಮ್ ಮ್ಯಾನೇಜ್ಮೆಂಟ್ ಮಾಡಿದ ಒಂದು ಮಿಸ್ಟೇಕ್ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ವಿಚಾರದಲ್ಲಿ ಮ್ಯಾನೇಜ್ಮೆಂಟ್ನ ನಡೆ ಸದ್ಯ ಟೀಕೆಗೆ ಗುರಿಯಾಗಿದೆ.
ಮೊದಲ 3 ಪಂದ್ಯದಲ್ಲಿ ಅವಕಾಶ.. ಕೊನೆ 2 ರಿಂದ ವಿಶ್ರಾಂತಿ
ಇಂಡೋ-ಆಸಿಸ್ ಸರಣಿಯ ಮೊದಲ 2 ಪಂದ್ಯದಲ್ಲಿ ಇಶಾನ್ ಕಿಶನ್ ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. ಕಾಂಗರೂಗಳ ಬೆವರಿಳಿಸಿದ ಕಿಶನ್, ಸತತ 2 ಹಾಫ್ ಸೆಂಚುರಿ ಇನ್ನಿಂಗ್ಸ್ ಕಟ್ಟಿದ್ರು. ದುರಾದೃಷ್ಟವಶಾತ್, 3ನೇ ಪಂದ್ಯದಲ್ಲಿ ಡಕೌಟ್ ಆಗಿ ನಿರ್ಗಮಿಸಿದ್ರು. ನಂತರದ 2 ಪಂದ್ಯಗಳಿಂದ ಕಿಶನ್ಗೆ ಗೇಟ್ ಪಾಸ್ ನೀಡಲಾಯ್ತು. ಇದಕ್ಕೆ ನೀಡಿದ ಉತ್ತರ ಮಾತ್ರ ರೆಸ್ಟ್.
ವಿಶ್ವಕಪ್ನಲ್ಲಿ ಆಡಿದ್ದು ಎರಡೇ ಎರಡು ಪಂದ್ಯ ಮಾತ್ರ
ಬ್ಯಾಟ್ಸ್ಮನ್ ಇಶಾನ್ ಕಿಶನ್ ಈ ಬಾರಿಯ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ರು. ಆಡಿದ್ದು ಮಾತ್ರ 2 ಪಂದ್ಯಗಳಲ್ಲಿ ಮಾತ್ರ. ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಆಡಿದ ಕಿಶನ್ ನಂತರದ 9 ಪಂದ್ಯಗಳಲ್ಲಿ ಬೆಂಚ್ ಕಾದರು. ಆ ಬಳಿಕ ಆಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊದಲ 3 ಪಂದ್ಯಗಳನ್ನು ಮಾತ್ರ. ಇಷ್ಟಕ್ಕೆ ಇಶಾನ್ ಕಿಶನ್ ಸುಸ್ತಾದ್ರಾ? ಅಥವಾ ಮ್ಯಾನೇಜ್ಮೆಂಟ್ ಬಲವಂತವಾಗಿ ಕಿಶನ್ಗೆ ರೆಸ್ಟ್ ನೀಡಿತಾ ಅನ್ನೋದು ಸದ್ಯ ಹುಟ್ಟಿರುವ ಪ್ರಶ್ನೆ.
ಇಶಾನ್ ಕಿಶನ್.. ನಾನು ಮೊದಲೇ ಹೇಳಿದ್ದೆ ನನಗೆ ಆ ಯುವ ಆಟಗಾರ ತುಂಬಾ ಚನ್ನಾಗಿ ಅನ್ನಿಸುತ್ತಾನೆ. ಒಬ್ಬೊಬ್ಬರಿಗೆ ಒಬ್ಬರು ಇಷ್ಟ ಆಗ್ತಾರೆ. ಆತನನ್ನು 3 ಪಂದ್ಯಗಳಲ್ಲಿ ನೀವು ಆಡಿಸಿದ್ರಿ. ಆ 3 ಪಂದ್ಯಗಳ ಬಳಿಕ ಆತ ತಂಡದಿಂದ ಡ್ರಾಪ್ ಮಾಡುವಷ್ಟು ಸುಸ್ತಾದ್ರಾ? ಆತ ವಿಶ್ವಕಪ್ನಲ್ಲೂ ಆಡಿಲ್ಲ. ಮೊದಲ 2 ಪಂದ್ಯದಲ್ಲಿ ಚಾನ್ಸ್ ಸಿಕ್ಕಿತ್ತು. ಅದೇನು ಫ್ರಿ ಆಗಿ ಸಿಕ್ಕ ಅವಕಾಶವಲ್ಲ. ಭಾರತ ತಂಡದಲ್ಲಿ ಎಷ್ಟು ಜನ ಇದ್ದಾರೆ. ಏಕದಿನ ಮಾದರಿಯಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಉತ್ತಮ ದಿನದಲ್ಲಿ ಆತ 200 ರನ್ ಹೊಡೆದಿದ್ದಾನೆ. ಆತ ಯಾವಾಗ ರೆಡಿಯಾಗ್ತಾನೆ-ಅಜಯ್ ಜಡೇಜಾ, ಮಾಜಿ ಕ್ರಿಕೆಟಿಗ
ಆಟಗಾರರ ವಿಚಾರದಲ್ಲಿ ‘ಆಟ’ ಆಡ್ತಿದ್ಯಾ ಮ್ಯಾನೇಜ್ಮೆಂಟ್?
ಇಶಾನ್ ಕಿಶನ್ಗೆ ರೆಸ್ಟ್ ನೀಡಿದ ವಿಚಾರದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅಜಯ್ ಜಡೇಜಾ ನೀಡಿರುವ ಹೇಳಿಕೆ ಸದ್ಯ ಬಿರುಗಾಳಿ ಎಬ್ಬಿಸಿದೆ. ಇಶಾನ್ ಕಿಶನ್ ವಿಚಾರದಲ್ಲಿ ಮಾತ್ರವಲ್ಲ.. ಕಳೆದ 2 ವರ್ಷಗಳಿಂದ ಟೀಮ್ ಇಂಡಿಯಾ ಬಹುತೇಕ ಪ್ರಯೋಗಶಾಲೆಯಾಗಿ ಬದಲಾಗಿದೆ. ಸಾಲು-ಸಾಲು ಆಟಗಾರರು ತಂಡಕ್ಕೆ ಬಂದು ಬಂದು ಹೋಗಿದ್ದಾರೆ. ಯಾರಿಗೂ ಸ್ಥಾನ ಸೇಫ್ ಅನ್ನೋ ಫೀಲ್ ಮಾತ್ರ ಸಿಕ್ಕಿಲ್ಲ.
ನೀವು ಕೇವಲ ಟ್ರಯಲ್ ತೆಗೆದುಕೊಳ್ತಾ ಇರ್ತಿರಾ? ಕಳೆದ 2 ವರ್ಷದಿಂದಲೂ ಇದೆ ಆಗಿದೆ. ಕಳೆದ 2 ವರ್ಷದಿಂದ ಎಷ್ಟು ಜನ ಆಡಿದ್ರು. ಭಾರತೀಯ ಕ್ರಿಕೆಟ್ನ ಸಮಸ್ಯೆ ಈಗಿನದಲ್ಲ. ತುಂಬಾ ಹಿಂದಿನದ್ದು. ಇಲ್ಲಿ ಸೆಲೆಕ್ಷನ್ ಮಾಡಲ್ಲ-ಅಜಯ್ ಜಡೇಜಾ, ಮಾಜಿ ಕ್ರಿಕೆಟಿಗ
ಆಟಗಾರರಿಗೆ ಐಪಿಎಲ್ ಟೂರ್ನಿ ವೇಳೆ ರೆಸ್ಟ್ ಯಾಕೆ ಬೇಡ?
ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಬಹುತೇಕ ಸೀನಿಯರ್ ಆಟಗಾರರು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಆಡಿದ 10 ಪಂದ್ಯಗಳಿಗೆ ರೆಸ್ಟ್ ಬಯಸಿರೋ ಇವರು ಐಪಿಎಲ್ ಆಡುವಾಗ ಮಾತ್ರ ವಿಶ್ರಾಂತಿಯ ಬಗ್ಗೆ ತುಟಿ ಬಿಚ್ಚಲ್ಲ. ಐಪಿಎಲ್ ಟೂರ್ನಿಯಲ್ಲಿ 2-3 ದಿನ ಅಂತರದಲ್ಲಿ ಪಂದ್ಯಗಳಿರುತ್ತೆ. ಹಾಗಿದ್ರೂ ಸತತ 14 ಪಂದ್ಯಗಳನ್ನ ಆಡ್ತಾರೆ. ಟೀಮ್ ಇಂಡಿಯಾ ಪರ ಆಡೋವಾಗ ಮಾತ್ರ ಪದೇಪದೆ ವಿಶ್ರಾಂತಿ ಕೇಳೋದು ಇತ್ತೀಚೆಗಂತೂ ಮಾಮೂಲಿಯಾಗಿದೆ.
T20 ವಿಶ್ವಕಪ್ಗೂ ಮುನ್ನ ಎಚ್ಚೆತ್ತುಕೊಳ್ಳುತ್ತಾ ತಂಡ?
ಈ ಬಾರಿಯ ಏಕದಿನ ವಿಶ್ವಕಪ್ನಲ್ಲೂ ಟೀಮ್ ಇಂಡಿಯಾ ಟ್ರೋಪಿ ಗೆಲ್ಲುವಲ್ಲಿ ಯಡವಿದೆ. ಸಾಲು ಸಾಲು ಐಸಿಸಿ ಟೂರ್ನಿಗಳಲ್ಲಿ ಮುಗ್ಗರಿಸಿರುವ ಟೀಮ್ ಇಂಡಿಯಾ, ಮುಂಬರುವ ಟಿ20 ವಿಶ್ವಕಪ್ನಲ್ಲಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕುತ್ತೆ ಅನ್ನೋದು ಫ್ಯಾನ್ಸ್ ಮಹದಾಸೆಯಾಗಿದೆ. ಟೀಮ್ ಮ್ಯಾನೇಜ್ಮೆಂಟ್ ಇಂತದ್ದೇ ನಡೆಯನ್ನ ಮುಂದುವರೆಸಿ, ಸಮರ್ಥ ತಂಡವನ್ನ ಕಟ್ಟದಿದ್ರೆ ಫ್ಯಾನ್ಸ್ಗೆ ಮತ್ತೆ ನಿರಾಸೆಯಾಗೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್