/newsfirstlive-kannada/media/post_attachments/wp-content/uploads/2024/10/S-JAISHANKAR.jpg)
ಮುಂದೆ ಹಸ್ತಲಾಘವ ಮಾಡಿಕೊಂಡು ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿಕೊಂಡು ಬಂದಿರುವ ಪಾಕ್ ಅದೆಷ್ಟೇ ಪೆಟ್ಟು ಬಿದ್ರೂ ಬುದ್ಧಿ ಬಂದಿಲ್ಲ. ಸದಾ ಭಾರತದೊಳಕ್ಕೆ ಅಶಾಂತಿ ಸೃಷ್ಟಿಸಲು ಹವನಿಸತೊಡಗಿರುತ್ತದೆ. ಈ ನಡುವೆ ಭಾರತ-ಪಾಕ್ ಸಂಬಂಧ ಸರಿಯಾಗುವ ಲಕ್ಷಣ ಸಣ್ಣದಾಗಿ ಕಾಣಿಸಿಕೊಂಡಿದೆ. ಬರೋಬ್ಬರಿ 9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕ್ಗೆ ಭೇಟಿ ನೀಡ್ತಿರೋದು ಮಹತ್ವ ಪಡೆದಿದೆ.
ಇದನ್ನೂ ಓದಿ:ಆಪ್ತ ದೇಶಗಳ ಆಪ್ತಮಿತ್ರ, ಯುದ್ಧ ತಂತ್ರಗಳಲ್ಲಿ ಪಳಗಿದ ಪ್ರವೀಣ.. ಪ್ರಧಾನಿ ನೆತನ್ಯಾಹು ಓದಿದ್ದು ಏನು..?
ಒಂದಲ್ಲ, ಎರಡಲ್ಲ, ಬರೋಬ್ಬರಿ 9 ವರ್ಷ. ಭಾರತಕ್ಕೆ ಮಗ್ಗಲು ಮುಳ್ಳಾಗಿರುವ ಪಾಕಿಸ್ತಾನ ಆರ್ಥಿಕವಾಗಿ ತತ್ತರಿಸಿ ಹೋಗಿದೆ. ಇಷ್ಟಾದ್ರೂ ಗಡಿಯಲ್ಲಿ ಉಗ್ರರ ಮೂಲಕ ಶಾಂತಿ ಕದಡುವ ಕೆಲಸ ಮಾಡ್ತಾನೇ ಬಂದಿದೆ. ಇದರಿಂದ ಭಾರತ-ಪಾಕಿಸ್ತಾನ ಸಂಬಂಧ ತೀರಾ ಹಳಸಿದ್ದು ಮಾತ್ರವಲ್ಲದೇ ಸರಿಯಾಗುವ ಲಕ್ಷಣಗಳೇ ಇಲ್ಲ. ಈ ನಡುವೆ ಕೇಂದ್ರ ಸರ್ಕಾರ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ.
9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತದ ಸಚಿವರ ಪ್ರಯಾಣ
ಭಾರತ ಮತ್ತು ಪಾಕ್ ನಡುವಿನ ಸಂಬಂಧ ಹದಗೆಟ್ಟಿರುವಾಗಲೇ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆನ್ನುವ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರು ಪ್ರಯಾಣಿಸುತ್ತಿದ್ದಾರೆ. ಇದೇ ಅಕ್ಟೋಬರ್ 15 ಮತ್ತು 16 ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಜೈ ಶಂಕರ್ ಪ್ರಯಾಣ ಬೆಳೆಸಲಿದ್ದಾರಂತೆ. ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಜೈ ಶಂಕರ್ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಈ ವೇಳೆ SCO ಸದಸ್ಯ ರಾಷ್ಟ್ರಗಳ ನಡುವೆ ಹಣಕಾಸು, ಆರ್ಥಿಕ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಮಾನವೀಯ ಸಹಕಾರ ಸಂಬಂಧ ಸಭೆಗಳು ನಡೆಯಲಿವೆ ಎನ್ನಲಾಗಿದೆ.
ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಭಾರೀ ಪ್ರತಿಭಟನೆ
ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಪಿಟಿಐ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭಾರೀ ದೊಡ್ಡ ಪ್ರತಿಭಟನೆ ನಡೆಸಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ಇಸ್ಲಾಮಾಬಾದ್‌ಗೆ ಮೆರವಣಿಗೆ ನಡೆಸಿದ್ದಾರೆ. ಆದ್ರೆ ಈ ಱಲಿ ನಗರದೊಳಗೆ ಪ್ರವೇಶಿಸದಂತೆ ತಡೆಯಲು ರಸ್ತೆಯನ್ನು ಕಂಟೈನರ್‌ಗಳನ್ನು ಇರಿಸಿ ಬ್ಲಾಕ್ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಇಸ್ಲಾಮಾಬಾದ್ ಮತ್ತು ಹತ್ತಿರದ ರಾವಲ್ಪಿಂಡಿ ನಗರದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಈಗಾಗಲೇ ಪಾಕ್ ಸರ್ಕಾರ ಇಮ್ರಾನ್ ಸಹೋದರಿ ಅಲೀಮಾ ಖಾನ್ ಸೇರಿದಂತೆ ಹಲವರನ್ನು ಬಂಧಿಸಿದೆ.
ಇದನ್ನೂ ಓದಿ:ಲೆಬನಾನ್ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?
ಸದ್ಯ ಇಸ್ಲಾಮಾಬಾದ್ ಇಮ್ರಾನ್ ಖಾನ್ ವಿಚಾರಕ್ಕೆ ಮತ್ತೆ ರಣಭೂಮಿಯಾಗಿದೆ. ಈ ನಡುವೆ ಭಾರತದ ವಿದೇಶಾಂಗ ಸಚಿವರ ಭೇಟಿ ಚರ್ಚೆಗೆ ಗ್ರಾಸವಾಗಿದೆ. ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 2015ರಲ್ಲಿ ಅಫ್ಘಾನಿಸ್ತಾನದ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದೇ ಕೊನೆ, ಅದಾದ ಮೇಲೆ ಯಾರು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಹೀಗಾಗಿ ಈ ಭೇಟಿಯು ಭಾರೀ ಮಹತ್ವ ಪಡೆದುಕೊಂಡಿದ್ದು ಪರ-ವಿರೋಧದ ಚರ್ಚೆಗೂ ಗ್ರಾಸವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ