/newsfirstlive-kannada/media/post_attachments/wp-content/uploads/2024/10/Fake-court-Fake-judge-arrest-2.jpg)
ನಕಲಿ ಕೋರ್ಟ್, ನಕಲಿ ಜಡ್ಜ್, ನಕಲಿ ಸಿಬ್ಬಂದಿ.. ಒಂದಲ್ಲ ಎರಡಲ್ಲ ಬರೋಬ್ಬರಿ 5 ವರ್ಷ ಈ ಕೋರ್ಟ್ ಕಲಾಪ ನಡೆದಿದೆ. ಗುಜರಾತ್ನ ಅಹಮದಾಬಾದ್‌ನಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅನ್ಯಾಯವನ್ನ ಸರಿಪಡಿಸಲು ಇರೋ ಉನ್ನತ ಮಾರ್ಗ ನ್ಯಾಯಾಂಗ. ಅಂಥ ವ್ಯವಸ್ಥೆಯನ್ನೇ ಇಲ್ಲೊಬ್ಬ ಭೂಪ ಬುಡಮೇಲಾಗಿಸಿಬಿಟ್ಟಿದ್ದಾನೆ. ಕಳೆದ ಐದು ವರ್ಷದಿಂದ ನಕಲಿ ಕೋರ್ಟ್ ನಡೆಸುತ್ತಿದ್ದವನ ಮುಖವಾಡ ಬಯಲಾಗಿ ಆತನಿಂದ ಮೋಸಹೋದವರು ಕಂಗಾಲಾಗಿದ್ದಾರೆ. ನಕಲಿ ನಾಟಕದ ಮೂಲಕವೇ 100 ಎಕರೆ ಭೂಮಿಯನ್ನ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದ ನಕಲಿ ನ್ಯಾಯಾಧೀಶ ಸದ್ಯ ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: VIDEO: ತಿರುಗೋ ಫ್ಯಾನ್ ನಿಲ್ಲಿಸೋ ಪವಾಡ.. ಲಡ್ಡು ಮುತ್ಯಾರನ್ನೇ ಅಣಕಿಸಿದ ಶಿಖರ್ ಧವನ್!
ಅಹಮದಾಬಾದ್‌ನಲ್ಲಿ ನಕಲಿ ನ್ಯಾಯಾಲಯ ಪತ್ತೆಯಾಗಿದ್ದು ಜಡ್ಜ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿ ತನ್ನನ್ನು ಕೋರ್ಟ್ ನೇಮಿಸಿದೆ ಎಂದು ನ್ಯಾಯಾಲಯದ ಮಧ್ಯಸ್ಥಗಾರನಂತೆ ಪೋಸ್ ಕೊಡುತ್ತಿದ್ದರಂತೆ. ಕಳೆದ 5 ವರ್ಷಗಳಿಂದ ಈ ನಕಲಿ ಕೋರ್ಟ್ ಕಾರ್ಯ ನಿರ್ವಹಿಸುತ್ತಿತ್ತು ಎಂಬ ವಿಚಾರ ಬಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿ ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಎಂಬುವನನ್ನು ಹೆಡೆಮುರಿ ಕಟ್ಟಿದ್ದಾರೆ.
ಪೊಲೀಸರ ಪ್ರಕಾರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದ ಬಾಕಿ ಪ್ರಕರಣ ಕಲೆ ಹಾಕುತ್ತಿದ್ದ ಆರೋಪಿ, ಸಂಬಂಧಿಸಿದವರಿಗೆ ಬಲೆ ಹಾಕುತ್ತಿದ್ದರು. ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಧಿಕೃತ ಮಧ್ಯಸ್ಥಗಾರ ಎಂದು ಹೇಳಿಕೊಳ್ಳುತ್ತಿದ್ದರು. ಅವರನ್ನು ಗಾಂಧಿನಗರ ತನ್ನ ಕಚೇರಿಗೆ ಕರೆಸುತ್ತಿದ್ದರಂತೆ. ಅಲ್ಲದೇ ತನ್ನ ಕಚೇರಿಯನ್ನು ಕೋರ್ಟ್ನ ಕೊಠಡಿಯಂತೆ ವಿನ್ಯಾಸಗೊಳಿಸಿದ್ದ. ನ್ಯಾಯಾಧೀಶನಂತೆ ಪೋಸ್ ಕೊಡ್ತಿದ್ದ ಸ್ಯಾಮ್ಯುಯಲ್ ಕ್ರಿಶ್ಚಿಯನ್, ಅಲ್ಲಿ ಸಿಬ್ಬಂದಿ, ನಕಲಿ ವಕೀಲರನ್ನೂ ಇಟ್ಟುಕೊಂಡಿದ್ದು ಅವರ ಮೂಲಕ ಜನರನ್ನು ಯಾಮಾರಿಸುತ್ತಿದ್ದರು. ಒಂದೊಂದು ಪ್ರಕರಣಗಳಿಗೆ ನಿಗದಿತ ಶುಲ್ಕ ಕೂಡ ಪಡೆಯುತ್ತಿದ್ದರು. ದುಡ್ಡು ಹೆಚ್ಚು ಕೊಟ್ಟವರ ಪರ ಆದೇಶ ನೀಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಅಲಕ್ ಪಾಂಡೆ, ಭಾರತ ಕಂಡ ಅತ್ಯಂತ ಶ್ರೀಮಂತ ಶಿಕ್ಷಕ! ಇವರ ಬಳಿ ಇರೋ ಆಸ್ತಿ ಎಷ್ಟು ಸಾವಿರ ಕೋಟಿ?
ನಕಲಿ ಜಡ್ಜ್ ಸಿಕ್ಕಿಬಿದ್ದಿದ್ದು ಹೇಗೆ?
2019ರ ಪ್ರಕರಣವೊಂದರಲ್ಲಿ ಸ್ಯಾಮ್ಯುಯಲ್ ಕ್ರಿಶ್ಚಿಯಾನ್ ಹೀಗೆ ಯಾಮಾರಿಸಿಬಿಟ್ಟಿದ್ದರು. ಜಿಲ್ಲಾಧಿಕಾರಿ ಅಧೀನದಲ್ಲಿದ್ದ ಸರ್ಕಾರಿ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಕ್ಷಿದಾರನ ಪರವಾಗಿ ನಕಲಿ ಆದೇಶ ನೀಡಿದ್ದರು. ಇದು ಪಾಲ್ಡಿ ಪ್ರದೇಶದಲ್ಲಿರುವ ಪ್ಲಾಟ್ನ ದಾಖಲೆಗಳಲ್ಲಿ ವ್ಯಕ್ತಿಯೊಬ್ಬರು ಅವರ ಹೆಸರು ಸೇರಿಸಲು ನಿರ್ಧರಿಸಿದ್ದರು. ಈ ನಕಲಿ ಜಡ್ಜ್ ಕ್ರಿಶ್ಚಿಯಾನ್ ತನ್ನ ಬೋಗಸ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ ದಾಖಲೆಗಳಲ್ಲಿ ಕಕ್ಷಿದಾರನ ಹೆಸರು ಸೇರಿಸುವಂತೆ ಜಿಲ್ಲಾಧಿಕಾರಿಗೇ ಸೂಚನೆ ಕೊಟ್ಟು ಬಿಟ್ಟಿದ್ದರು.
ಪ್ರಕರಣ ಇತ್ಯರ್ಥವಾಗಿದೆ ಎಂದು ಸುಮ್ಮನೆ ಕುಳಿತಿದ್ದ ಕಕ್ಷಿದಾರನೊಬ್ಬನಿಗೆ ಅಹ್ಮದಾಬಾದ್ನ ಸಿಟಿ ಸಿವಿಲ್ ಕೋರ್ಟ್ನಿಂದ ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ಬಂದಿತ್ತು. ಮುಗಿದ ಪ್ರಕರಣದಲ್ಲಿ ಮತ್ತೆ ನೋಟಿಸ್ ಬಂದಿದ್ದಕ್ಕೆ ಅನುಮಾನಗೊಂಡ ವ್ಯಕ್ತಿ, ನಕಲಿ ಕೋರ್ಟ್ ಆದೇಶ ಪ್ರತಿ ಹಿಡಿದು ಸಿಟಿ ಸಿವಿಲ್ ಕೋರ್ಟ್ಗೆ ತೆರಳಿದ್ದಾಗಲೇ ಮೋಸ ಹೋಗಿದ್ದು ಗೊತ್ತಾಗಿದೆ. ಕೂಡಲೇ ಕಾನರಾಜ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಕಾನರಾಜ್ ಪೊಲೀಸರು ನಕಲಿ ಜಡ್ಜ್ ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇಂತಹ 11 ಪ್ರಕರಣಗಳಲ್ಲಿ ಆದೇಶ ನೀಡಿದ್ದ ಎಂಬ ಮಾಹಿತಿ ಪತ್ತೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ