/newsfirstlive-kannada/media/post_attachments/wp-content/uploads/2024/06/darshan45.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಜೈಲುವಾಸ ಫಿಕ್ಸ್ ಆಗಿದೆ. ಕಳೆದ 13 ವರ್ಷಗಳ ಹಿಂದೆ ಕೌಟುಂಬಿಕ ಕಲಹದಿಂದ ಸೆರೆ ಹಿಂದೆ ಸೇರಿದ್ದ ನಟನೀಗ ಮತ್ತೊಮ್ಮೆ ಜೈಲುವಾಸಕ್ಕೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ಬಂಧನದ ಬಳಿಕ ನಟ ದರ್ಶನ್ ಮೊದಲ ರಿಯಾಕ್ಷನ್; ಫ್ಯಾನ್ಸ್‌ಗೆ ಧೈರ್ಯ ತುಂಬಿದ ದಾಸ; VIDEO
‘ಡೆವಿಲ್ ಗ್ಯಾಂಗ್’ಗೆ 14 ದಿನಗಳ ನ್ಯಾಯಾಂಗ ಬಂಧನ
ಮತ್ತೊಮ್ಮೆ ಸ್ಯಾಂಡಲ್‌ವುಡ್ ನಟನಿಗೆ ಜೈಲು ‘ದರ್ಶನ’
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನ 2 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಭೀಕರ ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯಗಳ ಬಗ್ಗೆ ನಾಲ್ವರು ಆರೋಪಿಗಳ ವಿಚಾರಣೆಯನ್ನೂ ನಡೆಸಿದ್ದರು. ಇವತ್ತು ದರ್ಶನ್, ಪ್ರದೂಶ್, ಧನರಾಜ್, ವಿನಯ್‌ನ ಕಸ್ಟಡಿ ಅಂತ್ಯಗೊಳ್ತಿದ್ದಂತೆ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯದಲ್ಲಿ ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ 24ನೇ ಎಸಿಎಂಎಂ ಕೋರ್ಟ್ ಆರೋಪಿಗಳನ್ನ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಮೂಲಕ ದರ್ಶನ್ ಅಂಡ್ ಗ್ಯಾಂಗ್‌ಗೆ 14 ದಿನ ಜೈಲು ಪಾಲಾಗಿದೆ.
ಡೆವಿಲ್ ಗ್ಯಾಂಗ್‌ಗೆ ಜೈಲು!
ಜಡ್ಜ್: ನಿಮಗೆ ಕಸ್ಟಡಿಯಲ್ಲಿ ಏನಾದ್ರೂ ತೊಂದರೆ ಆಯ್ತಾ.?
ದರ್ಶನ್: ಇಲ್ಲ ಸ್ವಾಮಿ ಯಾವುದೇ ತೊಂದರೆ ಆಗಿಲ್ಲ
ಜಡ್ಜ್: ವೈದ್ಯಕೀಯ ಪರೀಕ್ಷೆಯನ್ನ ಮಾಡಿಸಿದ್ರಾ?
ದರ್ಶನ್: ಹೌದು ಬೆಳಗ್ಗೆ ಸ್ಟೇಷನ್‌ನಲ್ಲಿ ಮಾಡಿಸಿದ್ರು
ಜಡ್ಜ್: ನಿಮಗೆ ಏನಾದ್ರೂ ಮೆಡಿಕಲ್ ಟ್ರೀಟ್‌ಮೆಂಟ್ ಅವಶ್ಯಕತೆ ಇದೆಯಾ.?
ದರ್ಶನ್: ಇಲ್ಲ ಸ್ವಾಮಿ
ಎಸ್‌ಪಿಪಿ ಪ್ರಸನ್ನ ಕುಮಾರ್: ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರೋದಕ್ಕೆ ಸೂಕ್ತ ಸಾಕ್ಷಿಗಳಿವೆ. ಈ ನಾಲ್ಕು ಮಂದಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ತೀರಾ ಅಮಾನುಷವಾಗಿ ರೇಣುಕಾಸ್ವಾಮಿಯ ಕೊಲೆ ಮಾಡಿದ್ದಾರೆ. ಅಲ್ಲದೇ ಇವರಿಗೆ ಈ ನೆಲದ ಕಾನೂನಿನ ಮೇಲೆ ಕಿಂಚಿತ್ತು ಗೌರವ ಇಲ್ಲ. ಅಲ್ಲದೇ ಎ1 ಕೊಟ್ಟಿರೋ ಪ್ರಚೋದನೆಗೆ ದರ್ಶನ್ ಅಂಡ್ ಟೀಂ ಒಳಗಾಗಿ ಈ ಕೃತ್ಯ ಮಾಡಿದೆ. ಎಲ್ಲರಿಗೂ ಕೊಲ್ಲುವ ಸಮಾನ ಉದ್ದೇಶವೂ ಕಂಡು ಬಂದಿದೆ. ಇದಷ್ಟೇ ಅಲ್ಲ ಸಾಕ್ಷಿ ನಾಶ ಮಾಡಲು ಯತ್ನಿಸಿರೋದೂ ತನಿಖೆಯಲ್ಲಿ ದೃಢವಾಗಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿನ್ನು ಬಳಕೆ ಮಾಡಿದ್ದಾರೆ. ಅದು ಸಹ ನಮ್ಮ ತನಿಖೆಯಲ್ಲಿ ಕನ್ಫರ್ಮ್ ಆಗಿದೆ. ಅಲ್ಲದೇ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ತಾಂತ್ರಿಕ, ಭೌತಿಕ ಹಾಗೂ ವೈಜ್ಞಾನಿಕ ಸಾಕ್ಷಿ ಇದೆ. ಹೀಗಾಗಿ ನಾಲ್ವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಬೇಕು.
ಹೀಗೆ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಅವರ ವಾದ ಆಲಿಸಿದ ನ್ಯಾಯಾಲಯ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಡೆವಿಲ್ ಗ್ಯಾಂಗ್ ಅನ್ನು ನ್ಯಾಯಾಂಗ ಬಂಧನಕ್ಕೆ ನೀಡ್ತಿದ್ದಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮತ್ತೊಂದು ಮನವಿಯನ್ನ ಮಾಡಿದರು. ಕೊಲೆ ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಮತ್ತೆ ಒಂದೇ ಜೈಲಿನಲ್ಲಿ ಇದ್ದರೆ ಸಂಚು ರೂಪಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಷ್ಟದ ಕಾಲದಲ್ಲೂ ಸೆಲೆಬ್ರಿಟಿಗಳಿಗೆ ಕೈ ಮುಗಿದ ಕಾಟೇರ.. ದರ್ಶನ್ ಆಡಿದ ಒಂದು ಮಾತಿಗೆ ಫ್ಯಾನ್ಸ್ ಹವಾ ಶುರು!
ಹೀಗಾಗಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಕೆಲವರನ್ನ ಪರಪ್ಪನ ಅಗ್ರಹಾರ ಬಿಟ್ಟು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ರು. ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರು ಸೋಮವಾರ ಮತ್ತೆ ವಿಚಾರಣೆ ಮಾಡಲಿದ್ದು, ಆವತ್ತು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಿರ್ಧರಿಸುವ ಬಗ್ಗೆ ತಿಳಿಸಿದ್ದಾರೆ. ತುಮಕೂರು ಜೈಲಿಗೆ ದರ್ಶನ್ ಅಥವಾ ಅವರೊಂದಿಗಿನ ಸಹ ಆರೋಪಿಗಳನ್ನ ಶಿಫ್ಟ್ ಮಾಡುವಂತೆಯೂ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದಾರೆ.
ಅಭಿಮಾನಿಗಳಿಂದ ಬೆದರಿಕೆ
- ಪ್ರಕರಣದಲ್ಲಿ ಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿಗಳಿದ್ದಾರೆ
- ಸಾಕ್ಷಿಗಳ ಹೆಸರು ಮತ್ತು ಗುರುತನ್ನು ಗೋಪ್ಯವಾಗಿರಿಸಲಾಗಿದೆ
- ಜೀವಕ್ಕೆ ಆಪತ್ತು ಬರುತ್ತೆ ಅಂತ ಕಾರಣ ಕೊಟ್ಟಿರುವ ಪೊಲೀಸರು
- ದರ್ಶನ್ ಸಹಚರರಿಂದ ಓರ್ವ ಸಾಕ್ಷಿಗೆ ಈಗಾಗಲೇ ಬೆದರಿಕೆ
- ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ದಾಖಲಿಸಿರುವ ಸಾಕ್ಷಿದಾರ
- ಕೆಲ ಆರೋಪಿಗಳನ್ನ ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಮನವಿ
- ದರ್ಶನ್ ವಿರುದ್ಧ ಹೇಳಿಕೆ ನೀಡಿರುವ ಆರೋಪಿಗೆ ತೊಂದರೆ ಸಾಧ್ಯತೆ
- ಓರ್ವ ಆರೋಪಿ ಮೇಲೆ ಹಲ್ಲೆ ಸಾಧ್ಯತೆ ಇದೆ ಎಂದಿರುವ ಪೊಲೀಸರು
- ಆರೋಪಿಗಳು ಌಪ್ ಬಳಸಿ ಮೊಬೈಲ್ ಡಾಟಾ ನಾಶಪಡಿಸಿದ್ದಾರೆ
ದರ್ಶನ್ ಜೈಲು ಡೈರಿ!
- 2011ರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್
- 13 ವರ್ಷದ ಹಿಂದೆ ಪತ್ನಿಗೆ ಹಲ್ಲೆ ಮಾಡಿ ಜೈಲು ವಾಸ
- ವಿಜಯಲಕ್ಷ್ಮೀ ನೀಡಿದ್ದ ದೂರಿನಲ್ಲಿ ದರ್ಶನ್ ಬಂಧನ
- ಮೊದಲ ಬಾರಿಗೆ ಸೆರೆವಾಸ ಅನುಭವಿಸಿದ್ದ ‘ಸಾರಥಿ’
- 28 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾಸ
- ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ರಾಜಿ ಸಂಧಾನ
- ಪತಿ ಬಿಡುಗಡೆಗೆ ಅಫಿಡವಿಟ್ ಸಲ್ಲಿಸಿದ್ದ ವಿಜಯಲಕ್ಷ್ಮೀ
- ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ ನಟ ದರ್ಶನ್
- ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ