/newsfirstlive-kannada/media/post_attachments/wp-content/uploads/2025/05/Sonu-nigam-kannada.jpg)
ಬೆಂಗಳೂರು: ಕನ್ನಡ, ಕನ್ನಡ ಎಂದಿದ್ದಕ್ಕೆ ಕೋಪಿಸಿಕೊಂಡ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಸ್ಯಾಂಡಲ್‌ವುಡ್‌ನಿಂದ ತಾತ್ಕಾಲಿಕವಾಗಿ ಬ್ಯಾನ್ ಆಗಿದ್ದಾರೆ. ಕನ್ನಡದ ಹಾಡು ಕೇಳಿದ್ದಕ್ಕೆ ಪಹಲ್ಗಾಮ್‌ಗೆ ಹೋಲಿಸಿದ್ದನ್ನು ಖಂಡಿಸಿ ಸೋನು ನಿಗಮ್ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದರು. ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಫಿಲ್ಮ್ ಚೇಂಬರ್, ಸ್ಯಾಂಡಲ್‌ವುಡ್ ನಿರ್ಮಾಪಕರ ಸಂಘ ಈ ನಿರ್ಧಾರಕ್ಕೆ ಬಂದಿದೆ.
ಸೋನು ನಿಗಮ್ ಬ್ಯಾನ್ ವಿಚಾರವಾಗಿ ಇಂದು ಫಿಲ್ಮ್ ಚೇಂಬರ್ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು, ಸಂಗೀತ ನಿರ್ದೇಶಕರು, ಗಾಯಕರು, ನಿರ್ಮಾಪಕರ ಸಂಘದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸೋನು ನಿಗಮ್‌ಗೆ ತಾತ್ಕಾಲಿಕ ನಿರ್ಬಂಧ ಏರಲು ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ. ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡುವ ತೀರ್ಮಾನ ಕೈಗೊಳ್ಳಲಾಗಿದೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಮಾತನಾಡಿ, ಇಂದಿನ ಸಭೆ ಮಾಡೋದು ತಡವಾಯಿತು. ಕ್ಷಮೆ ಇರಲಿ. ಸೋನು ನಿಗಮ್ ಅವರನ್ನ ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಬರೀ ಸಿನಿಮಾದಿಂದ ಅಷ್ಟೇ ಅಲ್ಲ, ಕರ್ನಾಟಕದ ಯಾವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗದಂತೆ ಮಾಡಬೇಕು.
ಕನ್ನಡದ ಆಡಿಯೋ ಕಂಪನಿಗಳು ಕೂಡ ಬ್ಯಾನ್ ನಿರ್ಧಾರ ತೆಗೆದುಕೊಳ್ಳಬೇಕು. ಈಗಾಗಲೇ ಲಹರಿ ಸಂಸ್ಥೆ ಗಾಯಕ ಸೋನು ನಿಗಮ್ ಅವರನ್ನ ದೂರವಿಡಲು ನಿರ್ಧರಿಸಿದೆ. ಉಳಿದವರು ಇದೇ ರೀತಿ ಮಾಡಬೇಕಿದೆ ಎಂದು ಹೇಳಿದರು.
ಇದೇ ವೇಳೆ ಮಾರ್ಟಿನ್ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಅವರು ತಮ್ಮ ಸಿನಿಮಾಗಳಿಂದ ಸೋನು ನಿಗಮ್ ಅವರನ್ನು ಬ್ಯಾನ್ ಮಾಡುವ ಘೋಷಣೆ ಮಾಡಿದರು. ಕನ್ನಡಕ್ಕೆ ಅಪಮಾನ ಮಾಡಿದೋರು ನಮಗೆ ಬೇಡ. ಯಾರ ನಿರ್ಧಾರ ಏನಿದ್ರು ನನ್ನ ನಿರ್ಧಾರ ಒಂದೇ. ನನಗೆ ಸೋನು ನಿಗಮ್ ಬೇಡ. ನನ್ನ ಸಿನಿಮಾಗಳಲ್ಲಿ ಇನ್ಮುಂದೆ ಸೋನು ನಿಗಮ್ ಹಾಡಿಸಲ್ಲ. ಇದು ನಮ್ಮ ಭಾಷೆಗೆ ಆಗಿರೋ ಅಪಮಾನ. ನಾನು ಸ್ವಾಭಿಮಾನಿ ಕನ್ನಡಿಗ, ಸ್ವಾಭಿಮಾನ ಇಲ್ಲದವರು ಬೇಕಿದ್ರೆ ಕರೆದು ಹಾಡಿಸಲಿ. ಹಾಡಿಸಿದವ್ರಿಗೆ ಸ್ವಾಭಿಮಾನ ಇಲ್ಲ ಎಂದು ಅರ್ಥವಾಗುತ್ತದೆ. ಸೋನು ನಿಗಮ್ ವಾಯ್ಸೇ ದೊಡ್ಡದು ಅನ್ನೋರು ಕರೆದು ಹಾಡಿಸಿಕೊಳ್ಳಿ ಎಂದಿದ್ದಾರೆ.
ಇದನ್ನೂ ಓದಿ: ಸೋನು ನಿಗಮ್‌ಗೆ ಬಿಗ್ ಶಾಕ್.. ಸ್ಯಾಂಡಲ್‌ವುಡ್‌ನಿಂದ ಮಹತ್ವದ ನಿರ್ಧಾರ; ಕನ್ನಡಿಗರ ಹೋರಾಟಕ್ಕೆ ಜಯ!
ಕನ್ನಡ ಚಿತ್ರರಂಗಕ್ಕೆ ಸೋನು ನಿಗಮ್ ಅನಿವಾರ್ಯ ಇಲ್ಲ ಅನ್ನೋ ನಿರ್ಧಾರಕ್ಕೆ ಕನ್ನಡ ಫಿಲ್ಮ್ ಚೇಂಬರ್ ಬಂದಿದೆ. ನಮಗೆ ಸೋನು ನಿಗಮ್ ಉಳಿಸಿಕೊಳ್ಳುವ ಉದ್ದೇಶವಿಲ್ಲ. ಅವರಿಗೆ ಅಸಹಕಾರ ತೋರಿಸ್ತೀವಿ ಎನ್ನಲಾಗಿದೆ. ನಾಳೆ ಈ ಬಗ್ಗೆ ಮತ್ತೊಂದು ಹಂತದ ಸಭೆ ನಡೆಯಲಿದ್ದು, ಕಲಾವಿದರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಸಂಗೀತ ನಿರ್ದೇಶಕರ ಸಂಘ ಕೂಡ ಭಾಗಿಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ