/newsfirstlive-kannada/media/post_attachments/wp-content/uploads/2024/12/Actor-Dharma-Gold-Case.jpg)
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಅವರ ತಂಗಿ ಎಂದು ನಂಬಿಸಿ 9 ಕೋಟಿ 82 ಲಕ್ಷ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನ ಖರೀದಿಸಿ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಆರ್.ಆರ್ ನಗರದ ಐಶ್ವರ್ಯ ಗೌಡ @ ನವ್ಯಶ್ರೀ ಅವರ ಮೇಲೆ ಈ ವಂಚನೆ ಆರೋಪ ಕೇಳಿ ಬಂದಿದ್ದು, ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಆರೋಪಿ ಐಶ್ವರ್ಯ ಗೌಡ ಅವರು ಚಂದ್ರ ಲೇಔಟ್‌ನಲ್ಲಿರುವ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್‌ನಲ್ಲಿ ತಾನು ಡಿ.ಕೆ ಸುರೇಶ್ ತಂಗಿ ಎಂದು ನಂಬಿಸಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಚಿನ್ನದ ವ್ಯಾಪಾರಿ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿ ಮಾಲೀಕರಾದ ವನಿತಾ ಐತಾಳ್ ದೂರು ದಾಖಲಿಸಿದ್ದಾರೆ.
ಡಿ.ಕೆ ಸುರೇಶ್ ಹೆಸರು.. ಧರ್ಮೇಂದ್ರ ಧ್ವನಿ?
ಕಳೆದ 2023 ಅಕ್ಟೋಬರ್‌ನಿಂದ 2024 ಏಪ್ರಿಲ್‌ನವರೆಗೆ ಐಶ್ವರ್ಯ ಗೌಡ ಅವರು ಹಂತ ಹಂತವಾಗಿ ಚಿನ್ನವನ್ನು ಪಡೆದಿದ್ದಾರೆ. ಹಣ ಕೇಳಿದಾಗ ಡಿ.ಕೆ ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲ ಸ್ಯಾಂಡಲ್‌ವುಡ್ ನಟ ಧರ್ಮ ಎಂಬುವವರಿಂದ ಕರೆ ಮಾಡಿಸಿ ಕೊಲೆ ಮಾಡಿಸೋದಾಗಿ ಬೆದರಿಕೆ ಹಾಕಿರೋ ಆರೋಪ ಕೂಡ ಮಾಡಲಾಗಿದೆ. ಡಿ.ಕೆ ಸುರೇಶ್ ವಾಯ್ಸ್ನಲ್ಲಿ ನಟ ಧರ್ಮೇಂದ್ರ ಅವರು ಕರೆ ಮಾಡಿ ಮಾತನಾಡಿದ್ದಾರೆ ಎಂದು ವನಿತಾ ಐತಾಳ್ ದೂರಿನಲ್ಲಿ ತಿಳಿಸಿದ್ದಾರೆ.
9 ಕೋಟಿ ಮೌಲ್ಯದ ಚಿನ್ನ ಖರೀದಿಸಿ ವಂಚಿಸಿರೋ ಈ ಪ್ರಕರಣದಲ್ಲಿ ಮೂವರ ಮೇಲೆ FIR ದಾಖಲಾಗಿದೆ. ಐಶ್ವರ್ಯ ಗೌಡ, ಅವರ ಪತಿ ಹರೀಶ್ ಕೆ.ಎನ್. ಹಾಗೂ ಸಿನಿಮಾ ನಟ ಧರ್ಮೇಂದ್ರ ವಿರುದ್ಧ ದೂರು ನೀಡಲಾಗಿದೆ.
ಆರೋಪಿ ಐಶ್ವರ್ಯ ಗೌಡ ಅವರು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್‌ನಲ್ಲಿ ನಾನು ಡಿ.ಕೆ ಸುರೇಶ್ ತಂಗಿ. ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದು ಮಾಲೀಕರಾದ ವನಿತಾರನ್ನ ನಂಬಿಸಿದ್ದರಂತೆ. ಚಂದ್ರ ಲೇಔಟ್‌ನಲ್ಲಿರುವ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್‌ನಲ್ಲಿ ಸಿನಿಮಾ ನಟನ ಜೊತೆ ಸೇರಿ ಕೋಟಿ, ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಬಂಧನದ ಭೀತಿಯಲ್ಲಿ ವರ್ತೂರ್ ಪ್ರಕಾಶ್; ಕೊನೆಗೂ ವಿಚಾರಣೆಗೆ ಹಾಜರಾದ ಮಾಜಿ ಸಚಿವ
ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್ ಹೈತಾಲ್ ಅವರು ಐಶ್ವರ್ಯ ಗೌಡ @ ನವ್ಯಶ್ರೀ ಹಾಗೂ ಹರೀಶ್ ಕೆ ಎಂಬ ದಂಪತಿಯಿಂದ ನಮಗೆ ವಂಚನೆಯಾಗಿದೆ. ಹಂತ ಹಂತವಾಗಿ 14kg 600ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಣ ಕೊಡದೆ ಆಟ ಆಡಿಸಿದಾಗ ಆರೋಪಿಗಳ ಮೇಲೆ ಚಿನ್ನದ ಅಂಗಡಿಯವರಿಗೆ ಅನುಮಾನ ಬಂದಿದೆ. ನಂತರ ಮೋಸ ಹೋಗಿರೋದು ಗೊತ್ತಾಗಿ ಚಂದ್ರಾ ಲೇಔಟ್ ಠಾಣೆಗೆ ವನಿತಾ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ