/newsfirstlive-kannada/media/post_attachments/wp-content/uploads/2024/12/MEDITATION-1.jpg)
ಸದ್ಯದ ಜನಾಂಗ ಈಗ ಅವ್ಯವಸ್ಥೆಯ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಯಾಕೆ ನಾವು ಯಾವಾಗಲೂ ಉದ್ವೇಗದಲ್ಲಿ, ಒತ್ತಡದಲ್ಲಿ, ಹತಾಶೆಗೊಂಡ ಮನಸ್ಥಿತಿಯಲ್ಲಿ ಇರುತ್ತೇವೆ. ಅದಕ್ಕೆ ಕಾರಣ ನಮ್ಮ ಮನಸ್ಸು, ಮನಸ್ಸು ಅಂದರೆ ಏನು. ಇದೊಂದು ಸದಾ ದುಃಖ, ತಿರಸ್ಕಾರ, ಋಣಾತ್ಮಕ ಚಿಂತನೆ ಹಾಗೂ ನೂರಾರು ಬಯಕೆಗಳು ತುಂಬಿರುವ ಆಗರ. ಅನೇಕ ವಿಚಿತ್ರ ಚಿಂತೆಗಳಿಂದ ನಮ್ಮ ಮನಸ್ಸು ತುಂಬಿ ಹೋಗಿದೆ. ಅದರಲ್ಲೂ ಋಣಾತ್ಮಕ ಯೋಚನೆಗಳು ನಮ್ಮನ್ನು ಹೈರಾಣು ಮಾಡಿ ಹಾಕುತ್ತವೆ. ನಮ್ಮ ಮನಸ್ಸು ಒಂದು ನಿಮಿಷಕ್ಕೆ ಸುಮಾರು 50 ಯೋಚನೆಗಳನ್ನು ನಮ್ಮಲ್ಲಿ ದೂಡುತ್ತದೆ. ಒಂದು ದಿನಕ್ಕೆ 50 ಸಾವಿರ ಯೋಚನೆಗಳಿಂದ ನಾವು ಹೈರಾಣಾಗಿ ಹೋಗುತ್ತೇವೆ ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಒಂದು ಯೋಚನೆಯಿಂದ ಮತ್ತೊಂದು ಯೋಚನೆಗೆ ನಮ್ಮ ಮನಸ್ಸು ಮಂಗ ಟೊಂಗೆಯಿಂದ ಟೊಂಗೆಗೆ ಜಿಗಿದಂತೆ ಜಿಗಿಯುತ್ತಲೇ ಇರುತ್ತದೆ. ನಾಳೆ ಮತ್ತು ನಿನ್ನೆಯ ನಡುವಿ ಸಂಘರ್ಷದಲ್ಲಿಯೇ ಅದು ನರಳುತ್ತಿರುತ್ತದೆ. ಇಂತಹ ಮನಸ್ಸನ್ನು ಹತೋಟಿಗೆ ತರುವುದು ಅಷ್ಟು ಸುಲಭವಲ್ಲ. ಅದು ಸದಾ ಮಂಗನಂತೆಯೇ ಇರಲು ಬಿಟ್ಟು ನಾವು ಅದನ್ನು ಇನ್ನಷ್ಟು ಹಾಳು ಮಾಡಿದ್ದೇವೆ. ಹಾಗಿದ್ರೆ ಈ ಮನಸ್ಸಿನ ವೈಪರಿತ್ಯಗಳನ್ನು ಕಟ್ಟಿಹಾಕುವುದು ಹೇಗೆ? ನಾವು ಸುಮ್ಮನೆ ಕೂರುವುದನ್ನು ಗಂಟೆಗಟ್ಟಲೇ ಕೂರುವುದನ್ನು ಕಲಿಯಬೇಕು. ಧ್ಯಾನಕ್ಕೆ ಕೂಡಲು ಕಲಿಯಬೇಕು. ಧ್ಯಾನ ಮನಸ್ಸನ್ನು ಪ್ರಶಾಂತವಾಗಿಡುವಂತಹ ಏಕೈಕ ಸಾಧನ.
ಧ್ಯಾನ ಎಂದರೆ ಪದ್ಮಾಸನ ಹಾಕಿ ಮ್ಯಾಟ್ ಒಂದರ ಮೇಲೆ ಗಂಟೆಗಟ್ಟಲೇ ಸುಮ್ಮನೇ ಕೂರುವುದಲ್ಲ. ದೇಹವನ್ನು ಮನಸ್ಸನ್ನು ಒಂದೇ ತರ ಇಟ್ಟುಕೊಂಡು ಇರುವುದೂ ಅಲ್ಲ. ನಾವು ನಮ್ಮ ಮನಸ್ಸಿನ ತೊಳಲಾಟವನ್ನು ಗಮನಿಸಬೇಕು. ನಮ್ಮ ಯೋಚನೆಗಳನ್ನು ಗಮನಿಸಬೇಕು. ಸಮುದ್ರದಲ್ಲಿ ಮೀನು ಈಜಿದಂತೆ ನಮ್ಮ ಮನಸ್ಸು ಹಾಗೂ ಯೋಚನೆಗಳ ವೇಗ ಒಂದೇ ಇರಬೇಕು. ಆವಾಗ ನಮ್ಮ ಮನಸ್ಸು ಒಂದು ಪ್ರಜ್ಞಾಸ್ಥಿತಿಗೆ ಬರುತ್ತದೆ. ಧ್ಯಾನ ಮಾಡಲು ನಾವು ಮೊದಲು ಒಂದು ಸ್ಥಿತಿಗೆ ತಲುಪಬೇಕು. ಅದಕ್ಕೆ ಐದು ಮಾರ್ಗಗಳು ಇವೆ. ಧ್ಯಾನದಲ್ಲಿ 5 ಬಗೆಯ ಧ್ಯಾನಗಳು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತವೆ. ಕದಡಿದ ನೀರಿನಂತೆ ಆಗಿರುವ ನಮ್ಮ ಮನಸ್ಸು ಪರಿಶುದ್ಧ ತೊರೆಯಂತಾಗುತ್ತದೆ. ಹಾಗಿದ್ರೆ ಯಾವುವು ಆ ಐದು ಬಗೆಯ ಧ್ಯಾನಗಳು ಅಂತ ನೋಡುವುದಾದ್ರೆ.
1. ಸಾವಧಾನ ಧ್ಯಾನ: ಸವಾಧಾನ ಧ್ಯಾನ ಅಥವಾ ಮೈಂಡ್ಫುಲ್ನೆಸ್ ಮೆಡಿಟೇಷನ್ ಇದು ಒಂದು ರೀತಿಯ ಮಾನಸಿಕ ಥೆರಪಿ ಇದ್ದಂತೆ. ಇದನ್ನು ಮಾಡುವ ಮೂಲಕ ನಾವು ನಮ್ಮ ಮನಸ್ಸು ಹಾಗೂ ಮೆದುಳನ್ನು ಪ್ರಶಾಂತವಾಗಿಟ್ಟುಕೊಳ್ಳಬಹುದು. ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳನ್ನು ಗಮನಿಸುವ ಮೂಲಕ ಈ ಧ್ಯಾನವನ್ನು ಮಾಡಬೇಕು. ದಿನಕ್ಕೆ ಒಂದು ಸರಿ ಪ್ರತ್ಯೇಕವಾಗಿ ಧ್ಯಾನ ಮಾಡದೆ, ವರ್ತಮಾನದ ಹಾಗೂ ನಮ್ಮ ಯೋಚನೆಗಳ ಮೇಲೆ ನಮ್ಮ ಸಂಪೂರ್ಣ ಲಕ್ಷ್ಯವಿರಬೇಕು. ಇದು ಕೂಡ ಒಂದು ಬಗೆಯ ಧ್ಯಾನ ಎಂದು ಹೇಳಲಾಗುತ್ತದೆ
2. ಆಧ್ಯಾತ್ಮಿಕ ಧ್ಯಾನ: ಇದು ಒಂದು ರೀತಿಯ ಪ್ರಾರ್ಥನೆ ಇದ್ದಂತೆ. ಒಂದು ಕಡೆ ದೃಢವಾಗಿ ಕುಳಿತುಕೊಂಡು ಕಣ್ಮುಚ್ಚಿ ಶಾಂತರೀತಿಯಿಂದ ನಿಮ್ಮ ಸಂಪೂರ್ಣ ಗಮನ ನಿಮ್ಮ ಉಸಿರಿನ ಮೇಲೆಯೇ ಕೇಂದ್ರೀಕೃತಗೊಳ್ಳುವಂತೆ ನೋಡಿಕೊಳ್ಳಬೇಕು. ಹೀಗೆ ನಿರಂತರವಾಗಿ ಗಂಟೆಗಳವರೆಗೂ ಈ ಧ್ಯಾನ ಮಾಡುವುದರಿಂದ ಮನಸ್ಸನ್ನು ಹಾಗೂ ಅದರ ಯೋಚನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯ. ಇದು ದಿಢೀರನೇ ಒಂದೆರಡು ದಿನಗಳಲ್ಲಿ ಆಗುವಂತದ್ದಲ್ಲ. ಅದು ಒಂದು ಹಿಡಿತಕ್ಕೆ ಸಿಕ್ಕು, ನಿಮಗೆ ಸಂಪೂರ್ಣ ಉಸಿರಿನ ಮೇಲೆ ಗಮನ ಕೇಂದ್ರಿಕರಣಗೊಂಡು ಏನೋ ಒಂದು ಪಡೆದಂತಹ ಭಾವ ಬರುವವರೆಗೂ ನಾವು ಅದನ್ನು ನಿರಂತರವಾಗಿ ನಡೆಸುತ್ತ ಇರಬೇಕು
3. ಗಮನದ ಧ್ಯಾನ: ಇದನ್ನು ಫೋಕಸ್ ಮೆಡಿಟೇಷನ್ ಎಂದು ಇಂಗ್ಲಿಷ್ನಲ್ಲಿ ಕರೆಯುತ್ತಾರೆ. ಇದು ಕೂಡ ಪ್ರಾಣಯಾಮದ ಮತ್ತೊಂದು ಮಾದರಿ. ಈ ಧ್ಯಾನದಿಂದ ನಿಮ್ಮೊಳಗೆ ಒಂದು ಜಾಗೃತಿಯ ಕಣ್ಣು ತೆರೆದುಕೊಳ್ಳುತ್ತದೆ. ಈ ಒಂದು ಧ್ಯಾನವನ್ನು ಒಂದು ವಸ್ತು ಅಥವಾ ನಿಮ್ಮ ಉಸಿರಿನ ಮೇಲೆ ನಿರಂತರ ಗಮನವಿಟ್ಟುಕೊಂಡು ಒಂದು ಜಾಗದಲ್ಲಿ ಕುಳಿತುಕೊಂಡು ಮಾಡವಂತಹದ್ದು.
4. ಚಲನವಲನೆಯ ಧ್ಯಾನ: ಇದನ್ನು ಮೂವ್ಮೆಂಟ್ ಮೆಡಿಟೇಷನ್ ಎಂದು ಕರೆಯುತ್ತಾರೆ. ಇದು ಒಂದು ಕಡೆ ಕುಳಿತುಕೊಂಡು ಮಾಡುವ ಧ್ಯಾನದ ಪ್ರಕಾರವಲ್ಲ. ನಿಮಗೆ ಆ ರೀತಿಯ ಧ್ಯಾನಗಳು ಒಲಿಯದೇ ಇದ್ದಲ್ಲಿ ಅಥವಾ ಸಾಧ್ಯವಾಗದೇ ಹೋದಲ್ಲಿ ನೀವು ಈ ಧ್ಯಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಇದನ್ನು ಯಾವುದೇ ಕೆಲಸ ಮಾಡುವಾಗ, ವಾಕ್ ಮಾಡುವಾಗಲೂ ಕೂಡ ಮಾಡಬಹುದು. ನೀವು ನಿಮ್ಮ ಸಂಪೂರ್ಣ ಗಮನವನ್ನು ನೀವು ಮಾಡುವ ಕೆಲಸ ಮೇಲೆ ಕೇಂದ್ರಿಕರಿಸಿಕೊಂಡು ಮಾಡುವುದೇ ಚಲನವಲನ ಧ್ಯಾನ ಎಂದು ಕರೆಯುತ್ತಾರೆ. ಇದು ಮನಸ್ಸು ಹಾಗೂ ಮೆದುಳು ಶಾಂತಗೊಳ್ಳುತ್ತವೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತದೆ .
5. ಮಂತ್ರದೊಂದಿಗೆ ಧ್ಯಾನ: ಸಾಧಾರಣವಾಗಿ ಧ್ಯಾನ ಮಾಡುವಾಗ ಓಂ ಇಲ್ಲವೇ ಬೇರೆ ಮಂತ್ರಗಳನ್ನು ಹೇಳುತ್ತಾ ಮಾಡುವುದು. ಈ ಧ್ಯಾನ ಮಾಡುವುದರಿಂದ ಪ್ರಶಾಂತವಾದ ಮನಸ್ಸು ನಮ್ಮದಾಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ