/newsfirstlive-kannada/media/post_attachments/wp-content/uploads/2024/11/MP_Flies.jpg)
ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನೊಣವನ್ನೇ ಹೀರೋ ಮಾಡಿ ಸಿನಿಮಾ ನಿರ್ಮಿಸಿದ್ದರು. ಸುದೀಪ್ ಅಭಿನಯದ ‘ಈಗ’ ಸಿನಿಮಾದಲ್ಲಿ ನೊಣದ ಸಾಮರ್ಥ್ಯ ಏನೆಂದು ಎಲ್ಲ ಅನಾವರಣ ಆಗಿತ್ತು. ತನ್ನ ನೆರೆಹೊರೆಯವರಾದ ಬಿಂದುವನ್ನು ಪ್ರೀತಿಸುತ್ತಿರುವ ನಾನಿಯನ್ನು, ಸುದೀಪ್ ಎಂಬ ಶ್ರೀಮಂತ ಉದ್ಯಮಿ ಮುಗಿಸಿ ಬಿಂದುಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕೊಲೆಯಾದ ನಾನಿ ನೊಣವಾಗಿ ಪುನರ್ಜನ್ಮ ಪಡೆದು ತನ್ನ ಸಾವಿಗೆ ಸೇಡು ತೀರಿಸಿಕೊಳ್ಳುತ್ತಾನೆ.
ಕೊನೆಗೆ ನೊಣದ ಜನ್ಮದಲ್ಲಿದ್ದ ನಾನಿ ತನ್ನನ್ನು ಕೊಂದದ್ದು ಉದ್ಯಮಿ ಸುದೀಪ್ ಎಂದು ಸಾಬೀತು ಮಾಡುತ್ತಾನೆ. ಇದು ಸಿನಿಮಾವಾದರೆ ಇಲ್ಲೊಂದು ಕೊಲೆಯ ರಹಸ್ಯವನ್ನು ನೊಣಗಳೇ ಭೇದಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ರುದ್ರಣ್ಣ ಯಡವಣ್ಣ ಕೇಸ್; ಸಚಿವೆ ಆಪ್ತ ಸೇರಿ ಮೂವರ ವಿರುದ್ಧ FIR.. ಆರೋಪಿಗಳು ಎಸ್ಕೇಪ್
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ
ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಕೊಲೆಯ ರಹಸ್ಯ ಭೇದಿಸುವಲ್ಲಿ ನೊಣಗಳು ಪ್ರಮುಖ ಪಾತ್ರ ವಹಿಸಿವೆ. ಪೊಲೀಸರ ತೀವ್ರ ತನಿಖೆಯಿಂದಾಗಿ ನೊಣಗಳಿಂದ ಸಿಕ್ಕ ಸಾಕ್ಷಿಯಿಂದ ಕೊಲೆಗಾರನನ್ನು ಬಂಧಿಸಿದ್ದಾರೆ. ಅಕ್ಟೋಬರ್ 31ರಂದು ಜಬಲ್ಪುರ ಜಿಲ್ಲೆಯ ದಿಯೋರಿ ತಪಾರಿಯದ ಹೊಲವೊಂದರಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮನೋಜ್ ಠಾಕೂರ್ ಅಲಿಯಾಸ್ ಮನ್ನು ಎಂದು ಗೊತ್ತಾಗಿದೆ. ಅ.30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದ ಮನೋಜ್ಕುಮಾರ್ ರಾತ್ರಿ ಹಿಂದಿರುಗಿರಲಿಲ್ಲ. ಅವನು ಕೊನೆಯದಾಗಿ ತನ್ನ ಸೋದರಳಿಯನೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಎಂಬ ಮಾಹಿತಿ ಅಷ್ಟೇ ಲಭ್ಯವಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಂತಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಲು ಆರಂಭಿಸಿದ್ದಾರೆ. ಕೊಲೆ ನಡೆದ ಜಾಗದಲ್ಲಿ ಜನಸಾಗರವೇ ಬಂದಿದೆ. ಅದೇ ಜನಸಂದಣಿಯಲ್ಲಿ ಚಾರ್ಗವಾನ್ ಪೊಲೀಸ್ ಠಾಣೆಯ ಪ್ರಭಾರಿ ಅಭಿಷೇಕ್, ಒಬ್ಬ ವ್ಯಕ್ತಿಯನ್ನು ಗಮನಿಸಿದ್ದಾರೆ. ಆತನ ಕಣ್ಣು ಕೆಂಪಾಗಿದ್ದು, ಕೆಲವು ನೊಣಗಳು ಆತನ ಬಟ್ಟೆಗಳ ಮೇಲೆ ಕೂತಿರುವುದು ಕಂಡು ಬಂದಿದೆ. ತಕ್ಷಣ ಅನುಮಾನದಿಂದ ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: IPLನಲ್ಲಿ ಕನ್ನಡಿಗನ ಸಾಧನೆಗಳೇನು.. KL ರಾಹುಲ್ ಯಾವ ಟೀಮ್ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ?
ನಿರಪರಾಧಿ ಅಂತಲೇ ಹೇಳುತ್ತಿದ್ದ ಆರೋಪಿ ಧರ್ಮ
ಆತನನ್ನು ಬಂಧಿಸಿದ ಪೊಲೀಸರು ಅನುಮಾನದ ಮೇಲೆ ಅವನ ಬಟ್ಟೆಗಳನ್ನು ಫ್ಲೊರೆನ್ಸಿಕ್ ತನಿಖೆಗೆ ನೀಡಿದ್ದಾರೆ. ತನಿಖೆಯ ಸಮಯದಲ್ಲಿ, ಅವನ ಬಟ್ಟೆಗಳ ಮೇಲೆ ರಕ್ತದ ಕಲೆಗಳಿದ್ದು, ಅದರ ಮೇಲೆ ನೊಣಗಳು ಅಂಟಿಕೊಂಡಿದ್ದು ಕಂಡುಬಂದಿದೆ. ಆರಂಭದಲ್ಲಿ ತಾನು ನಿರಪರಾಧಿ ಅಂತಲೇ ಹೇಳುತ್ತಿದ್ದ ಆರೋಪಿ ಧರ್ಮ ಠಾಕೂರ್ನನ್ನು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಕೊಲೆಯ ರಹಸ್ಯ ಪತ್ತೆಯಾಗಿದೆ. ದೀಪಾವಳಿ ಮುನ್ನಾದಿನ ಆರೋಪಿ ಧರ್ಮ, ತನ್ನ ಚಿಕ್ಕಪ್ಪ ಮನೋಜ್ ಜೊತೆ ಚಾರ್ಗವಾನ್ ಮಾರುಕಟ್ಟೆಗೆ ಬಂದಿದ್ದಾನೆ. ಇಬ್ಬರೂ ಸೇರಿ ಮದ್ಯ ಮತ್ತು ಕೋಳಿಯನ್ನು ಖರೀದಿಸಿದ್ದಾರೆ. ಮದ್ಯ, ಕೋಳಿ ಖರೀದಿ ಬಳಿಕ ಪಾರ್ಟಿ ಮಾಡಲು ತಮ್ಮ ಹಳ್ಳಿಯತ್ತ ಹೋಗಿದ್ದಾರೆ. ಆದರೆ ದಾರಿಯಲ್ಲಿ ಇಬ್ಬರ ನಡುವೆ ಖರ್ಚು ಮಾಡಿದ ಹಣದ ವಿಚಾರಕ್ಕೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ತನ್ನ ಚಿಕ್ಕಪ್ಪ ಮನೋಜ್ ಮೇಲೆ ಧರ್ಮ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಮನೋಜ್ ಮೃತಪಟ್ಟಿದ್ದಾನೆ ಅಂತ ಆರೋಪಿ ಧರ್ಮ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.
ವಿಶೇಷ ವರದಿ-ವಿಶ್ವನಾಥ್ ಜಿ. ನ್ಯೂಸ್ಫಸ್ಟ್, ಸೀನಿಯರ್ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ