/newsfirstlive-kannada/media/post_attachments/wp-content/uploads/2024/07/Flood.jpg)
ಮಳೆ ಬಂದ್ರೆ ಇಳೆಗೆ ಜೀವ ಕಳೆ.. ರಾಜ್ಯದಲ್ಲಿ ಧೋ ಅಂತ ಸುರಿಯುತ್ತಿರೋ ವರುಣಾ ಮಲೆನಾಡನ್ನ ಮಳೆನಾಡಾಗಿ ಮಾಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಗೆ ಜುಲೈ 7ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅತ್ತ ಅಸ್ಸಾಂಲ್ಲಿ ಸುರಿಯುತ್ತಿರೋ ಮಳೆ 38 ಮಂದಿ ಬಲಿ ಪಡೆದಿದೆ. 11 ಲಕ್ಷ ಜನರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ರಾಜ್ಯದ ಬರಗಾಲದ ಬೇಗೆಗೆ ತಂಪೆರೆದ ಮಳೆರಾಯ ರೌದ್ರನರ್ತನ ಮೆರೆಯುತ್ತಿದ್ದಾನೆ. ಕರ್ನಾಟಕದ ಕಿರೀಟ ಬೀದರ್ನಿಂದ ಹಿಡಿದು ಗಡಿ ಜಿಲ್ಲೆ ಚಾಮರಾಜನಗರದವರೆಗೂ ಜಲಪಾಶ ಬೀಸಿರೋ ವರುಣ ಅಬ್ಬರಿಸುತ್ತಾ ಅಲ್ಲಲ್ಲಿ ಅವಾಂತರಗಳನ್ನು ಸೃಷ್ಟಿಸಿದ್ದಾರೆ. ಒಂದ್ಕಡೆ ಮಳೆರಾಯನ ಮಾಸ್ ಎಂಟ್ರಿ ಜನತೆಗೆ ಸಂತಸ ತಂದ್ರೆ ಮತ್ತೊಂದು ಕಡೆ ಕೆಲ ಸಂಕಷ್ಟಗಳಿಂದ ಜನರನ್ನ ಸಂಕಟಕ್ಕೆ ಸಿಲುಕಿಸಿದೆ.
ಶಾಲೆ ಕಾಂಪೌಂಡ್, ಮನೆ ಗೋಡೆ ಕುಸಿತಗೊಂಡು ಪಜೀತಿ
ಭಾರೀ ಮಳೆಯಿಂದ ಯಲ್ಲಾಪುರ ತಾಲೂಕಿನ ಮಾಗೋಡು ರಸ್ತೆಯ ಕಾಳಿಮನೆ ಪ್ರದೇಶ ಜಲಾವೃತವಾಗಿದೆ. ಶಿರಸಿಯ ಶಿವಳ್ಳಿಯ ಸರ್ಕಾರಿ ಶಾಲೆಯ ಮುಂಭಾಗದ ಕಾಂಪೌಂಡ್ ಕುಸಿತವಾಗಿದೆ.. ಇನ್ನು ಹನುಮಂತಿ ಗ್ರಾಮದ ಅಹ್ಮದ್ ಖಾನ್ ಎಂಬುವವರ ಮನೆ ಗೋಡೆ ಕುಸಿತವಾಗಿದೆ.
ಧರೆಗುರುಳಿದ ಬೃಹತ್ ಮರ.. ವಾಹನ ಸಂಚಾರ ಅಸ್ತವ್ಯಸ್ತ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗ್ತಿದೆ ಧಾರಾಕಾರ ಮಳೆಗೆ ಕಳಸ ತಾಲೂಕಿನ ಹಳುವಳ್ಳಿ ಸಮೀಪ ಬೃಹತ್ ಮರ ರಸ್ತೆಗುರುಳಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ತಕ್ಷಣ ಅಲರ್ಟ್ ಆದ ಸ್ಥಳೀಯರು ಮರವನ್ನ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.
ಮಳೆ ಅಬ್ಬರಕ್ಕೆ ಮುಳುಗಿದ ಕಿರು ಸೇತುವೆ.. ಜನರ ಪರದಾಟ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಾದ್ಯಂತ ಭಾರೀ ಮಳೆಯಾಗ್ತಿದ್ದು ಬಿಳ್ಳೂರುನಿಂದ ಮುಲ್ಲರಹಳ್ಳಿಗೆ ಸಂಪರ್ಕಿಸುವ ಕಿರುಸೇತುವೆ ಮುಳುಗಡೆಯಾಗಿದೆ. ಹಳ್ಳದ ನೀರು ಕಿರುಸೇತುವೆ ಮೇಲೆ ಹರಿಯುತ್ತಿರೋದ್ರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಲೆನಾಡಿನ ಹಲವು ಜಲಪಾತಗಳಿಗೆ ನಿರ್ಬಂಧ
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗ್ತಿರೋ ಹಿನ್ನೆಲೆ ಜಲಪಾತಗಳು ಮೈದುಂಬಿ ಹರಿಯುತ್ತಿವೆ.. ಈ ಹಿನ್ನೆಲೆ ಜಲಪಾತಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳ್ತಿದ್ದಾರೆ. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಪಾಯದಿಂದಕೂಡಿರುವ ಉತ್ತರಕನ್ನಡ ಜಿಲ್ಲೆಯ ಕೆಲ ಜಲಪಾತಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಸಿದ್ದಾಪುರ ತಾಲೂಕಿನ ಉಂಚಳ್ಳಿ ಜಲಪಾತ, ಬುರುಡೆ ಜಲಪಾತ.. ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ರಾಜ್ಯದಲ್ಲಿ ಮುಂದಿನ 3 ದಿನ ಅಬ್ಬರಿಸಲಿದ್ದಾನೆ ವರುಣ
ರಾಜ್ಯದಲ್ಲಿ ಮುಂದಿನ 3 ದಿನ ಕಾಲ ಮಳೆರಾಯ ಅಬ್ಬರಿಸಲಿದ್ದಾನೆ ಅಂತ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜುಲೈ 7ರವೆರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು ಜಿಲ್ಲೆಗೆ ಜುಲೈ 7ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಜುಲೈ 7ರ ವರೆಗೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಅಸ್ಸಾಂನ 19 ಜಿಲ್ಲೆಗಳಲ್ಲಿ 6 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಸ್ಸಾಂ ರಣಭೀಕರ ಪ್ರವಾಹಕ್ಕೆ 38 ಮಂದಿ ಬಲಿ
ಅಸ್ಸಾಂನಲ್ಲಿ ವರುಣಾರ್ಭಟಕ್ಕೆ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.. ರಣಮಳೆಯಿಂದ ಅಸ್ಸಾಂನಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಭೀಕರ ಪ್ರವಾಹಕ್ಕೆ ಈವರೆಗೂ 38 ಮಂದಿ ಬಲಿಯಾಗಿದ್ದಾರೆ.. ಪ್ರವಾಹದಿಂದ ಅಸ್ಸಾಂನ 28 ಜಿಲ್ಲೆಗಳಲ್ಲಿ 11 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ.. ಪ್ರವಾಹದ ನೀರಲ್ಲಿ 42,476 ಹೆಕ್ಟೇರ್ ಕೃಷಿ ಭೂಮಿ ಮುಳುಗಿದೆ.. ಸುಬಾನ್ಸಿರಿ ನದಿ ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕ್ಷಣ ಕ್ಷಣಕ್ಕೂ ನದಿ ಪಾತ್ರದ ಜನರ ಆತಂಕ ಹೆಚ್ಚಿಸುತ್ತಿದೆ.. ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸರ್ಕಾರ 489 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಇವುಗಳಲ್ಲಿ 2.87 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಮಾಸ್ ಎಂಟ್ರಿ ಪಡೆದಿರೋ ವರುಣಾ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ರೌದ್ರನರ್ತನ ಮೆರೆಯುತ್ತಿದ್ದಾನೆ. ಮಳೆಯಿಂದ ಯಾವುದೇ ದುರ್ಘಟನೆ ಸಂಭವಿಸದೇ ಸಕಲ ಜೀವರಾಶಿಗಳೂ ಸೇಫ್ ಆಗಿರಲಿ ಅಂತ ಇಡೀ ದೇಶವೇ ಪ್ರಾರ್ಥಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ