Advertisment

ಮಹಾತ್ಮ ಗಾಂಧೀಜಿಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದ SM ಕೃಷ್ಣ.. ಇವರ ಕುಟುಂಬ, ರಾಜಕೀಯ ಜೀವನ ಹೇಗಿತ್ತು?

author-image
Bheemappa
Updated On
ಮಹಾತ್ಮ ಗಾಂಧೀಜಿಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದ SM ಕೃಷ್ಣ.. ಇವರ ಕುಟುಂಬ, ರಾಜಕೀಯ ಜೀವನ ಹೇಗಿತ್ತು?
Advertisment
  • SM ಕೃಷ್ಣ ಅವರು ಪ್ರೇಮ ಅವರನ್ನು 1966ರಲ್ಲಿ ಮದುವೆ ಆಗಿದ್ದರು
  • ಮಾಜಿ ವಿದೇಶಾಂಗ ಸಚಿವರಾಗಿ ಎಸ್​.ಎಂ ಕೃಷ್ಣ ಕೆಲಸ ಮಾಡಿದ್ರು
  • ಬೆಂಗಳೂರಿಗೆ ಐಟಿ-ಬಿಟಿ ಎಂದು ಹೆಸರು ತಂದವರು ಎಸ್​.ಎಂ ಕೃಷ್ಣ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ನಿಧನ ಹೊಂದಿದ್ದಾರೆ. 92 ವರ್ಷ ಆಗಿದ್ದ ಇವರು ವಯೋಸಹಸ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎಸ್.ಎಂ ಕೃಷ್ಣ ಅವರು ನಿಧನ ಹೊಂದಿದ್ದಾರೆ.

Advertisment

ಎಸ್.ಎಂ ಕೃಷ್ಣ ಅವರ ಪೂರ್ಣ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಆದರೆ ರಾಜಕೀಯ ಸೇರಿದಂತೆ ತಮ್ಮ ಜೀವನದಲ್ಲಿ ಎಸ್.ಎಂ ಕೃಷ್ಣ ಎಂದೇ ಎಲ್ಲರಿಗೂ ಗೊತ್ತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932 ಮೇ 1 ರಂದು ಜನಿಸಿದರು. ಹುಟ್ಟುತ್ತಲೇ ಕೃಷ್ಣ ಅವರು ಆಗರ್ಭ ಶ್ರೀಮಂತರು. ಅವರ ತಂದೆ ಮಲ್ಲಯ್ಯ ಅವರು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 40 ವರ್ಷಕ್ಕೂ ಅಧಿಕ ಕಾಲ ಪ್ರಜಾಪ್ರತಿನಿಧಿ ಸಭೆ ಹಾಗೂ ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ, ಮಂಡ್ಯ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ, ಮೈಸೂರು ವಿವಿ ಸೆನೆಟ್ ಸದಸ್ಯರಾಗಿ, ರಾಜ್ಯ ಆರ್ಥಿಕ ಸುಧಾರಣ ಸಮಿತಿ ಸದಸ್ಯರಾಗಿ, ರಾಷ್ಟ್ರ ಹಾಗೂ ರಾಜ್ಯ ಒಕ್ಕಲಿಗ ಸಂಘದ ಮಹಾಕಾರ್ಯದರ್ಶಿಯಾಗಿ ಮಲ್ಲಯ್ಯ ಅವರು ಸೇವೆ ಸಲ್ಲಿಸಿದ್ದರೆ.

publive-image

ಕೃಷ್ಣ ಅವರ ತಂದೆ ತಾಯಿಗೆ ಒಟ್ಟು 10 ಮಂದಿ ಮಕ್ಕಳು. ಕೃಷ್ಣ ಅವರು 6 ನೇ ಮಗ. ಇವರ ಹಿಂದೆ ಐದು ಮಂದಿ ಹೆಣ್ಣು ಮಕ್ಕಳು ಹಾಗೂ ಇವರ ಬಳಿಕ ಒಂದು ಗಂಡು ಹಾಗೂ ಮೂರು ಮಂದಿ ಹೆಣ್ಣು ಮಕ್ಕಳು ಜನಿಸಿದ್ದರು. ಕೃಷ್ಣ ಅವರು ಜನನಕ್ಕೂ ಮುನ್ನ ಎರಡು ಗಂಡು ಮಕ್ಕಳು ಸಾವನ್ನಪ್ಪಿದ್ದರು. ಬಳಿಕ ಕೃಷ್ಣ ಅವರ ತಂದೆ ತಾಯಿ ಮಲೆಮಹದೇಶ್ವರನಿಗೆ ಹರಕೆ ಹೊತ್ತ ಫಲವಾಗಿ ಎಸ್.ಎಂ.ಕೃಷ್ಣ ಅವರ ಜನನವಾಗಿ ಆರೋಗ್ಯವಾಗಿ ಬೆಳೆದು ನಿಂತರು. 1934 ರಂದು ಮಹಾತ್ಮ ಗಾಂಧೀಜಿ ಅವರು ಸೋಮನಹಳ್ಳಿಗೆ ಬಂದ ವೇಳೆ ಮೂರು ವರ್ಷದ ಪುಟ್ಟ ಕೃಷ್ಣ ಅವರು ಗಾಂಧೀಜಿ ಅವರಿಗೆ ಹೂವಿನ ಮಾಲೆ ಹಾಕಿದ್ದರು.

ವೈವಾಹಿಕ ಜೀವನ

1966 ಏಪ್ರಿಲ್ 29 ರಂದು ಎಸ್.ಕೃಷ್ಣ ಅವರು ಪ್ರೇಮ ಅವರನ್ನು ವಿವಾಹವಾಗುತ್ತಾರೆ. ಇವರಿಗೆ ಮಾಳವಿಕ ಹಾಗೂ ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಳಾವಿಕ ಅವರನ್ನು ಕಾಫಿ ಡೇ ಸಂಸ್ಥಾಪಕ ದಿ.ಸಿದ್ದಾರ್ಥ್​​ ಅವರೊಡನೆ ವಿವಾಹ ಮಾಡಿಕೊಡಲಾಗಿತ್ತು. ಇನ್ನೂ ಶಾಂಭವಿ ಅವರನ್ನು ವಿದೇಶದಲ್ಲಿರುವ ಉಮೇಶ್ ಅವರೊಡನೆ ವಿವಾಹ ಮಾಡಲಾಗಿದೆ.

Advertisment

ಕೃಷ್ಣರವರ ಆಸಕ್ತಿ

ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ಹೊರತು ಪಡಿಸಿ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಸಭ್ಯ ಉಡುಗೆ ಎಂದರೆ ಕೃಷ್ಣ ಅವರಿಗೆ ತುಂಬಾ ಪ್ರೀತಿ. ಖಾದಿ, ಉಣ್ಣೆ, ರೇಷ್ಮೆ ರೀತಿಯ ವಸ್ತುಗಳನ್ನು ಧರಿಸುತ್ತಿದ್ದರು. ಅದರಲ್ಲಿಯೂ ಕೋಟು ಹಾಗೂ ಜುಬ್ಬಾ ಕೃಷ್ಣ ಅವರ ನೆಚ್ಚಿನ ಉಡುಗೆಗಳು. ಬಾಲ್ಯದಲ್ಲಿ ಕೃಷ್ಣ ಅವರು ಪುಟ್‌ಬಾಲ್, ವಾಲಿಬಾಲ್‌ನ್ನು ಹೆಚ್ಚಾಗಿ ಆಡುತ್ತಿದ್ದರು. ಬಳಿಕ ಮಹಾರಾಜ ಕಾಲೇಜು ಸೇರಿದ ಬಳಿಕ ಟೆನ್ನಿಸ್ ಕಡೆಗೆ ಹೆಚ್ಚು ಒತ್ತನ್ನು ಕೃಷ್ಣ ಅವರು ನೀಡಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಟೆನ್ನಿಸ್ ಆಡುತ್ತಿದ್ದರು. ರಾಜಕೀಯ ರಂಗಕ್ಕೆ ಧುಮುಕಿದ ವೇಳೆಯೂ ಬಿಡುವಿನಲ್ಲಿ ಟೆನ್ನಿಸ್ ಆಡುವುದು ಹಾಗೂ ನೋಡುವುದನ್ನು ಮಾಡ್ತಾ ಇದ್ದರು. ಇನ್ನೂ ಊಟದ ವಿಚಾರಕ್ಕೆ ಬಂದ್ರೆ ಸಿಹಿ ಪದಾರ್ಥ ಇಷ್ಟ ಪಡುತ್ತಿದ್ದರು, ಅಲ್ಲದೇ ಮಾಂಸಹಾರದಲ್ಲಿ ನಾಟಿ ಶೈಲಿಯನ್ನು ಇಷ್ಟಪಟ್ಟು ಸೇವನೆ ಮಾಡ್ತಾ ಇದ್ದರು. ವಿದೇಶದಲ್ಲಿ ಕೃಷ್ಣ ಅವರು ವ್ಯಾಸಾಂಗ ಮಾಡಿದ ಕಾರಣ ವಿದೇಶಿ ತಿನಿಸುಗಳನ್ನು ಸಹ ತಿನ್ನುತ್ತಿದ್ದರು.

ಶಿಕ್ಷಣ

ಎಸ್.ಎಂ.ಕೃಷ್ಣ ಅವರು 1937 ರಂದು ಸೋಮನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮದ್ದೂರಿನಲ್ಲಿ ವಿದ್ಯಾರಂಭ ಮಾಡಿದರು. ಬಳಿಕ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ಮಹಾಜನ ಮಾಧ್ಯಮಿಕ ಶಾಲೆಯಲ್ಲಿ ಮೂರನೇ ತರಗತಿಯಿಂದ ಓದು ಮುಂದುವರಿಸಿದರು. 1948 ರಲ್ಲಿ ಮಹಾಜನ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದರು. ಬಳಿಕ ಮೈಸೂರಿನ ಫಸ್ಟ್ ಗ್ರೇಡ್ (ಇಂದಿನ ಯುವರಾಜ ಕಾಲೇಜು) ತರಗತಿಗೆ ಸೇರಿದರು. 1950 ರಂದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ವ್ಯಾಸಂಗಕ್ಕೆ ಸೇರ್ಪಡೆಯಾದರು. 1955 ರಲ್ಲಿ ಬೆಂಗಳೂರಿನ ಲಾ ಕಾಲೇಜಿನಲ್ಲಿ ಬಿ.ಎಲ್ ಪದವಿ ಪಡೆದರು.

publive-image

ಬಳಿಕ ಆಗಿನ ಕಾಲದ ಹೆಸರಾಂತ ವಕೀಲರಾದ ಗಣೇಶರಾಯರ ಬಳಿ ಜೂನಿಯರ್ ಆಗಿ ಸೇರಿದ್ದರು. 1958 ರಂದು ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಗೆ ತೆರಳುತ್ತಾರೆ. ಅಲ್ಲಿನ ಟೆಕ್ಸಾಸ್‌ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ಬಳಿಕ ವಾಷಿಂಗ್‌ಟನ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿಗೆ ಸೇರಿದರು ಸಹ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇದೇ ವೇಳೆ ಜಾನ್.ಎಫ್.ಕೆನಡಿ ಅವರ ಪ್ರಭಾವಕ್ಕೆ ಸಹ ಕೃಷ್ಣ ಅವರು ಮಣಿದರು. ಆ ವೇಳೆ ಕೆನಡಿ ಅವರು ಅಮೇರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷತೆಗೆ ಸ್ಪರ್ಧಿಸಿದ್ದರು. ಆಗ ಕೃಷ್ಣ ಅವರು ಕೆನಡಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದು ಕೃಷ್ಣ ಅವರು ರಾಜಕೀಯಕ್ಕೆ ಕಾಲಿಡುವಂತೆ ಪ್ರೇರೇಪಣೆ ಮಾಡಿದೆ. 1961 ರಂದು ಕೃಷ್ಣ ಅವರು ಅಮೆರಕಾದಿಂದ ಉನ್ನತ ವ್ಯಾಸಂಗ ಮುಗಿಸಿ ವಾಪಸ್ಸು ಬಂದರು.

Advertisment

ಎಸ್.ಎಂ.ಕೆ ರಾಜಕೀಯ ಜೀವನ

ರಾಜಕೀಯ ಪಕ್ಷಗಳು - ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಕಾಂಗ್ರೆಸ್, ಬಿಜೆಪಿ.

ಎದುರಿಸಿದ ಚುನಾವಣೆಗಳ ಸಂಖ್ಯೆ - 10 ಚುನಾವಣೆಗಳು

ಎಂಎಲ್‌ಎ ಚುನಾವಣೆಗಳು - 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲಾಗಿದೆ.

ಎಂಪಿ ಚುನಾವಣೆಗಳು - 4 ಲೋಕಸಭಾ ಚುನಾವಣೆಗಳನ್ನು ಎದುರಿದ್ದು ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಶಾಸಕ - ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದರು.

Advertisment

ಸಂಸದ - ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು.

ವಿಧಾನ ಪರಿಷತ್ ಸದಸ್ಯ - 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.

ರಾಜ್ಯಸಭಾ ಸದಸ್ಯ - 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.

publive-image

ರಾಜ್ಯದಲ್ಲಿ ಹುದ್ದೆಗಳು - ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ.

ಕೇಂದ್ರದ ಹುದ್ದೆಗಳು - ವಿದೇಶಾಂಗ ವ್ಯವಹಾರಗಳ ಸಚಿವ, ಕೈಗಾರಿಕಾ ಹಾಗೂ ಹಣಕಾಸು ಖಾತೆಯ ಸಚಿವ, ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಭಾರತದ ಸದಸ್ಯ, ರಾಜ್ಯಪಾಲ.

ಎಸ್.ಎಂ.ಕೃಷ್ಣ ಅವರು 1962 ರಲ್ಲಿ ಪ್ರಥಮ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಮದ್ದೂರು ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದರು.

Advertisment

1967 ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣ ಅವರು ಮದ್ದೂರು ಕ್ಷೇತ್ರದಲ್ಲಿ ಸೋತರು.

1968 ರ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರ್ಜರಿ ಗೆಲುವು ಪಡೆಯುವ ಮೂಲಕ ಮೊದಲ ಬಾರಿಗೆ ಸಂಸತ್ ಸದಸ್ಯನಾಗಿ ಆಯ್ಕೆಯಾದರು.

1970 ರಲ್ಲಿ ಕೃಷ್ಣರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

1971 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಸತತ ಎರಡನೇ ಬಾರಿಗೆ ಸಂಸತ್ ಸದಸ್ಯರಾದರು.

ಬಳಿಕ 1972 ರಲ್ಲಿ ಎಂಪಿ ಸ್ಥಾನಕ್ಕೆ ರಾಜಕೀನಾಮೆ ನೀಡಿ ಆಗಿನ ಸಿಎಂ ದೇವರಾಜ್ ಅರಸ್ ಅವರ ಸರ್ಕಾರದಲ್ಲಿ ಎಂಎಲ್‌ಸಿಯಾಗಿ ಬಳಿಕ ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದಾರೆ.

1980 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಎಸ್.ಎಂ.ಕೃಷ್ಣ ಅವರು ಸ್ಪರ್ಧೆ ಮಾಡಿ ಗೆಲುವು ಪಡೆಯುವ ಮೂಲಕ ಮೂರನೇ ಬಾರಿಗೆ ಎಂಪಿ ಆದರು. ಆಗ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಕೇಂದ್ರ ಕೈಗಾರಿಕಾ ಹಾಗೂ ಹಣಕಾಸು ಖಾತೆಯ ಸಚಿವರಾಗಿ ಕೆಲಸ ಮಾಡಿದರು.

1982 ರಲ್ಲಿ ಭಾರತೀಯ ನಿಯೋಗದ ಸದಸ್ಯರಾಗಿ ಯುರೋಪ್, ಅಮೆರಿಕ, ಜಪಾನ್, ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ರಾಷ್ಟ್ರಗಳನ್ನು ಕೃಷ್ಣ ಅವರು ಪ್ರವಾಸ ಮಾಡಿದ್ದರು.

1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಕೃಷ್ಣ ರವರನ್ನು ನಿತ್ಯ ಸಚಿವ ಬಿರುದಾಂಕಿತ ಕೆ.ವಿ.ಶಂಕರೇಗೌಡರು ಸೋಲಿಸಿದರು.

1989 ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಪಡೆಯುವ ಮೂಲಕ ಎಸ್.ಎಂ.ಕೃಷ್ಣ ಅವರು ಎರಡನೇ ಬಾರಿಗೆ ಶಾಸಕರಾಗಿದ್ದರು. ಈ ವೇಳೆ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

1990 ರ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ವಿಚಾರಗೋಷ್ಠಿಯಲ್ಲಿ ಭಾರತ ನಿಯೋಗದ ಸದಸ್ಯರಾಗಿ ಭಾಗವಹಿಸಿದ್ದರು.

1993 ರಿಂದ 1994 ರ ವರಗೆ ರಾಜ್ಯದ ಮೊದಲ ಉಪಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಅವರು ಸೇವೆ ಸಲ್ಲಿಸಿದ್ದರು.

1995 ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್.ಎಂ.ಕೃಷ್ಣ ಅವರು ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಉತನ್ನತ್ತ ಮಟ್ಟದಲ್ಲಿದ್ದ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೆ ಸಹ ಕಾರಣವಾಯಿತು.

ಇನ್ನೂ 1996 ರಲ್ಲಿ ಕೃಷ್ಣ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಬಳಿಕ 1999 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.

1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಎಸ್.ಎಂ.ಕೃಷ್ಣ ಅವರು ಮುನ್ನೆಡಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು.

ಈ ವೇಳೆ ಮದ್ದೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಈ ಮೂಲಕ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮೊದಲ ನಾಯಕ ಸಿಎಂ ಆಗಿರುವ ಹೆಗ್ಗಳಿಕೆಗೆ ಕೃಷ್ಣ ಅವರು ಪಾತ್ರರಾಗಿದ್ದರು.

ಇವರು ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎರಡು ಘಟನೆಗಳು ದೊಡ್ಡ ಮಟ್ಟದ ಚರ್ಚೆ ಉಂಟಾಯಿತು. ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ 3 ತಿಂಗಳ ಕಾಲ ಅಪಹರಣ ಮಾಡಿದ್ದು. ಆಗ ರಾಜ್ಯದ್ಯಾಂತ ಸರ್ಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜಯಲಲಿತ ಅವರೊಂದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್‌ಕುಮಾರ್ ಅವರನ್ನು ಕ್ಷೇಮವಾಗಿ ಕರೆತರಲಾಯಿತು.

ಇವರ ಆಡಳಿತದ ವೇಳೆ ರಾಜ್ಯಕ್ಕೆ ಬರಗಾಲವು ಸಹ ಬಂದೊದಗಿತ್ತು. ಆ ವೇಳೆ ರಾಜ್ಯ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಪ್ಲಾನ್ ಕೈಕೊಟ್ಟಿತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆಯಿತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಸಹ ಜರುಗಿದವು.

ಇಷ್ಟೇಲ್ಲಾ ಸಮಸ್ಯೆಗಳ ನಡುವೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳು ಇಂದಿಗೂ ಸ್ಮರಿಸಬೇಕಾಗಿದೆ.

ಇದನ್ನೂ ಓದಿ: Breaking: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ

publive-image

2004 ರಲ್ಲಿ ಕೃಷ್ಣ ಅವರು ತಮ್ಮ ಸ್ವಕ್ಷೇತ್ರ ಮದ್ದೂರು ಕ್ಷೇತ್ರವನ್ನು ಡಿ.ಸಿ.ತಮ್ಮಣ್ಣಗೆ ಬಿಟ್ಟುಕೊಟ್ಟು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಿಧಾಸಭಾ ಚುನಾವಣೆಯನ್ನು ಎದುರಿಸುತ್ತಾರೆ. ಚಾಮರಾಜಪೇಟೆಯಲ್ಲೂ ಸಹ ಕೃಷ್ಣ ಅವರು ಗೆಲುವು ಸಾಧಿಸುತ್ತಾರೆ.

ಆದರೇ ಕಾಂಗ್ರೆಸ್ ಗೆ ಪೂರ್ಣ ಬಹುಮತ ಬಾರದ ಕಾರಣ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಕೂಡ ಕೃಷ್ಣಗೆ ಕೈ ತಪ್ಪುತ್ತೆ.

ಬಳಿಕ ಚಾಮರಾಜಪೇಟೆಯ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ 2004 ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಎಸ್.ಎಂ.ಕೃಷ್ಣ ನೇಮಕವಾಗಿದ್ದರು.

2008 ರಲ್ಲಿ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಪ್ರವೇಶಿಸುತ್ತಾರೆ. ನಂತರ 2009 ರಲ್ಲಿ ಮನಮೋಹನ ಸಿಂಗ್ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. 2012 ರಂದು ವಿದೇಶಾಂಗ ಸಚಿವ ಸ್ಥಾನಕ್ಕೂ ಕೃಷ್ಣ ಅವರು ರಾಜಿನಾಮೆ ನೀಡುತ್ತಾರೆ.

2017 ರಂದು ಕಾಂಗ್ರೆಸ್ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುತ್ತಾರೆ.

2017 ರಲ್ಲೇ ಬಿಜೆಪಿ ಪಕ್ಷಕ್ಕೆ ಎಸ್.ಎಂ.ಕೃಷ್ಣ ಅವರು ಸೇರ್ಪಡೆಯಾಗಿದ್ದರು.

2023 ಜನವರಿ 7 ರಂದು ಎಸ್.ಎಂ.ಕೃಷ್ಣ ಅವರು ತಮ್ಮ 60 ವರ್ಷಗಳ ಸುರ್ಧೀಘ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment