/newsfirstlive-kannada/media/post_attachments/wp-content/uploads/2024/07/Chahal_RCB.jpg)
ಒಂದೆಡೆ ಸಿಡ್ನಿ ಟೆಸ್ಟ್ನ ಫೀವರ್, ಇನ್ನೊಂದೆಡೆ ರಿಟೈರ್ಮೆಂಟ್ನ ಬಾಂಬ್. ಇದ್ರ ಮಧ್ಯೆ ಕಾಂಟ್ರವರ್ಸಿಗಳು. ಈ ಸುದ್ದಿಗಳೇ ಸದ್ಯ ಭಾರತೀಯ ಕ್ರಿಕೆಟ್ ಲೋಕದಲ್ಲಿ ಹಲ್ಚಲ್ ಎಬ್ಬಿಸಿದೆ. ಇಡೀ ಕ್ರಿಕೆಟ್ ಲೋಕ ಈ ಚರ್ಚೆಯಲ್ಲಿ ಮುಳುಗಿರೋವಾಗಲೇ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಜೀವನದಲ್ಲಿ ಸುನಾಮಿ ಎದ್ದಿದೆ. ನಮ್ಮ ಸಂಸಾರ ಆನಂದ ಸಾಗರ ಅಂತಿದ್ದ ಕುಟುಂಬದಲ್ಲೀಗ ಬಿರುಗಾಳಿ ಬೀಸಿದೆ. ಜೀವನದ ಹಳಿ ತಪ್ಪಿದೆ.
ಟೀಮ್ ಇಂಡಿಯಾ ಕ್ರಿಕೆಟಿಗರ ಜೀವನವೇ ಸರಿಯಿಲ್ವೋ.. ಗ್ರಹಚಾರವೇ ಸರಿಯಿಲ್ವೋ ಗೊತ್ತಾಗ್ತಿಲ್ಲ. ಒಬ್ಬರಾದ ಮೇಲೆ ಒಬ್ರ ದಾಂಪತ್ಯ ಜೀವನ ಸೂತ್ರ ಹರಿದ ಗಾಳಿಪಟವಾದಂತೆ ಆಗ್ತಿದೆ. ಮೊಹಮ್ಮದ್ ಶಮಿ, ಶಿಖರ್ ಧವನ್, ಅಷ್ಟೇ ಏಕೆ ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ವಿಚ್ಚೇದನ ಪಡೆದುಕೊಂಡ್ರು. ಈ ಹಿಂದಿನ ಸೂಪರ್ ಸ್ಟಾರ್ಗಳಾದ ವಿನೋದ್ ಕಾಂಬ್ಳಿ, ರವಿ ಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್ ಅವ್ರ ಕಥೆನೂ ಇದೆ. ಇದೀಗ ಈ ಲಿಸ್ಟ್ಗೆ ಸ್ಪಿನ್ನರ್ ಯುಜುವೇಂದ್ರ ಚಹಲ್ ಸೇರಿದ್ದಾರೆ.
ಯುಜ್ವೇಂದ್ರ ಚಹಾಲ್ ಸಂಸಾರದಲ್ಲಿ ಬಿರುಗಾಳಿ!
ಯುಜ್ವೇಂದ್ರ ಚಹಾಲ್- ಧನಶ್ರೀ ವರ್ಮಾ.. ಭಾರತೀಯ ಕ್ರಿಕೆಟ್ ಹಾಗೂ ಬಾಲಿವುಡ್ ನಡುವೆ ಬೆಸುಗೆ ಬೆಸೆದಿದ್ದ ಕ್ಯೂಟ್ ಕಪಲ್.! ಸದಾ ಪರಸ್ಪರ ಕಾಲೆಳೆದು ಕೊಳ್ತಾ, ತುಂಟಾಟ ಮಾಡ್ತಾ ನಗು ಮೊಗದಿಂದಲೇ ಜನರ ಮನ ಗೆದ್ದಿದ್ದ ಸ್ಪೆಷಲ್ ಜೋಡಿಯ ಜೀವನದಲ್ಲೀಗ ನಗು ಮಾಯವಾಗಿದೆ. ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ವೈವಾಹಿಕ ಜೀವನದ ಬಂಡಿ ಹಳಿ ತಪ್ಪಿದೆ.
ಚಹಾಲ್-ಧನಶ್ರೀ ದೂರ.. ದೂರ..!
ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲಾ ಅನ್ನೋ ಸುದ್ದಿ ಕಳೆದ ಕೆಲ ವರ್ಷಗಳಿಂದಲೇ ಸದ್ದು ಮಾಡಿತ್ತು. ಕಳೆದ ತಿಂಗಳಿನಿಂದಂತೂ ಪದೇ ಪದೇ ಗಾಸಿಪ್ ಹಬ್ಬಿತ್ತು. ಇದೀಗ ಆ ಗಾಸಿಪ್ ನಿಜವಾಗಿದೆ. ಯುಜುವೇಂದ್ರ ಚಹಾಲ್ ಕುಟುಂಬದ ಆಪ್ತ ವಲಯವೇ ದಂಪತಿಗಳು ದೂರಾಗಿದ್ದು, ಡಿವೊರ್ಸ್ ಮೋರೆ ಹೋಗಿದ್ದಾರೆ ಅನ್ನೋ ಸುದ್ದಿಯನ್ನ ಕನ್ಫರ್ಮ್ ಮಾಡಿದೆ.
ಧನಶ್ರೀ ಜೊತೆಗಿದ್ದ ಫೋಟೋಸ್ ಡಿಲೀಟ್ ಮಾಡಿದ ಚಹಾಲ್
ಚಹಾಲ್-ಧನಶ್ರೀ ದೂರಾಗ್ತಿರೋದಕ್ಕೆ ಕಾರಣ ಏನು ಅನ್ನೋದಕ್ಕೆ ಸ್ಪಷ್ಟ ಉತ್ತರ ಹೊರಬಿದ್ದಿಲ್ಲ. ಜೀವನ ಹಲವು ವಿಚಾರಗಳಲ್ಲಿದ್ದ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಮೊರೆ ಹೋಗಿದ್ದಾರೆ ಎನ್ನಾಲಾಗಿದೆ. ಕಳೆದ ಕೆಲ ತಿಂಗಳಿಂದಲೇ ಇಬ್ಬರೂ ದೂರಾಗಿ ಪ್ರತ್ಯೇಕವಾಗಿ ವಾಸ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರೋ ಚಹಾಲ್ ಇನ್ಸ್ಸ್ಟಾದಲ್ಲಿ, ಧನಶ್ರೀ ಜೊತೆಗಿದ್ದ ಎಲ್ಲಾ ಫೋಟೋ-ವಿಡಿಯೋಸ್ನ ಡಿಲೀಟ್ ಮಾಡಿದ್ದಾರೆ.
ಅಸಲಿಗೆ ಚಹಾಲ್-ಧನಶ್ರೀ ದೂರಾಗಿದ್ದಾರೆ ಅನ್ನೋ ಸುದ್ದಿ 2023ರಲ್ಲೇ ಹೊರಬಿದ್ದಿತ್ತು. ಚಹಾಲ್ ಕಳೆದ ವರ್ಷ ಒಮ್ಮೆ ಇನ್ಸ್ಸ್ಟಾದಲ್ಲಿ New life loading ಎಂದು ಪೋಸ್ಟ್ ಹಾಕಿದ್ರು. ಇದಾದ ಮರುದಿನವೇ ಸೋಷಿಯಲ್ ಮೀಡಿಯಾದಲ್ಲಿ ಧನಶ್ರೀ ವರ್ಮಾ, ತಮ್ಮ ಹೆಸರಿನೊಂದಿಗಿದ್ದ ಚಹಾಲ್ ಎಂಬ ಪದವನ್ನ ತೆಗೆದು ಹಾಕಿದ್ರು. ಅದಾದ ಬಳಿಕ ಪದೇ ಪದೇ ಡಿವೋರ್ಸ್ ಸುದ್ದಿ ಸದ್ದು ಮಾಡಿತ್ತು.
ಲಾಕ್ಡೌನ್ ವೇಳೆ ಶುರುವಾಗಿತ್ತು ಪ್ರೇಮ-ಪಯಣ.!
ಕೊರೊನಾ ಲಾಕ್ಡೌನ್ನಲ್ಲಿ ಇಡೀ ದೇಶವೇ ಬಂದಿಯಾಗಿದ್ದ ಕಾಲವದು. ಆ ಸಮಯದಲ್ಲಿ ಶುರುವಾಗಿದ್ದು ಇವರಿಬ್ಬರ ಪ್ರೇಮ ಪಯಣ. ಲಾಕ್ಡೌನ್ ವೇಳೆ ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದ ಚಹಾಲ್ಗೆ ಡಾನ್ಸ್ ಕಲಿಯೋ ಆಸೆ ಹುಟ್ಟಿತ್ತು. ಸೋಷಿಯಲ್ ಮೀಡಿಯಾದಲ್ಲಿ ಧನಶ್ರೀ ವರ್ಮಾ ಡಾನ್ಸ್ನ ವಿಡಿಯೋಗಳನ್ನ ನೋಡಿದ್ದ ಚಹಾಲ್, ಡಾನ್ಸ್ ಕಲಿಸುವಂತೆ ಕೇಳಿಕೊಂಡಿದ್ರು. ಇದಕ್ಕೆ ಧನಶ್ರೀ ಯೆಸ್ ಅಂದಿದ್ರು.
ಟೀಚರ್-ಸ್ಟೂಡೆಂಟ್ ಆಗಿ ಶುರುವಾದ ಇಬ್ಬರ ಪಯಣ ಪ್ರೀತಿಗೆ ತಿರುಗಲು ತುಂಬಾ ಟೈಮ್ ತೆಗೆದುಕೊಳ್ಳಲೇ ಇಲ್ಲ. ಡೇಟಿಂಗ್ ನಡೆಸಿದ್ರು. ಕೆಲವೇ ದಿನಗಳಲ್ಲಿ ಪ್ರೇಮಿಗಳಾದ್ರು. ಪರಸ್ಪರ ಒಪ್ಪಿ ಸಪ್ತಪದಿ ತುಳಿದ್ರು. ಡಿಸೆಂಬರ್ 11, 2020ರಂದು ಚಹಾಲ್-ಧನಶ್ರೀ ಹಸೆಮೆಣೆ ಏರಿದ್ರು.
2020ರ ಅಂತ್ಯದಲ್ಲಿ ಶುರುವಾದ ಇಬ್ಬರ ದಾಂಪತ್ಯ ಪಯಣ, 2025ರ ಆರಂಭದ ಹೊತ್ತಿಗೆ ಅಂತ್ಯದ ಹತ್ತಿರ ಬಂದು ನಿಂತಿದೆ. ಕೇವಲ 4 ವರ್ಷಗಳಲ್ಲೇ ಅನ್ಯೋನ್ಯವಾಗಿದ್ದ ಸಂಬಂಧ ಹಳಸಿದೆ. ನನಗೆ ನೀನು ನಿನಗೆ ನಾನು ಅಂತಿದ್ದ ಜೋಡಿಯ ಮನಸ್ಸು ದೂರಾಗಿ, ಮನೆ ಬದಲಾಗಿ.. ಕನಿಷ್ಟ ಜಗಳವನ್ನೂ ಆಡಲಾರದಷ್ಟು ದೂರಕ್ಕೆ ಬಂದಾಗಿದೆ. ಆರಂಭದಲ್ಲಿ ಇವ್ರಿಬ್ಬರ ನಡುವೆಯಿದ್ದ ಆತ್ಮೀಯತೆ, ಈಗಿರುವ ಸುದೀರ್ಘ ಮೌನವನ್ನ ನೋಡಿದ್ರೆ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ ಅನ್ನೋ ಹಾಡು ನೆನಪಾಗದೇ ಇರಲ್ಲ.
ಇದನ್ನೂ ಓದಿ:ಆಡುವ ಹನ್ನೊಂದರಲ್ಲಿ ಅಯ್ಯರ್ ಇರಲೇ ಇಲ್ಲ.. ಈ ಆಟಗಾರನಿಂದ ಅವಕಾಶ ಸಿಕ್ಕಿತು ಎಂದ ಶ್ರೇಯಸ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ